ಗೀತಾಮೃತ - 4

ಗೀತಾಮೃತ - 4

ಅಧ್ಯಾಯ ೨

   ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈ ಗುಣ್ಯೋ ಭವಾರ್ಜುನ/

ನಿರ್ದ್ವಂದೋ ನಿತ್ಯ ಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್//೪೫//

      ಹೇ ಅರ್ಜುನನೇ! ವೇದಗಳು ಮೇಲೆ ಹೇಳಿದ ಪ್ರಕಾರ ಮೂರೂ ಗುಣಗಳ ಕಾರ್ಯರೂಪವಾದ ಸಮಸ್ತ ಭೋಗಗಳನ್ನು ಮತ್ತು ಅವುಗಳ ಸಾಧನೆಗಳನ್ನು ಪ್ರತಿಪಾದಿಸುತ್ತವೆ; ಆದ್ದರಿಂದ ನೀನು ಆ ಭೋಗಗಳು ಮತ್ತು ಅವುಗಳ ಸಾಧನೆಗಳಲ್ಲಿ ಆಸಕ್ತಿಹೀನನಾಗಿ, ಹರ್ಷ-ಶೋಕಾದಿ ದ್ವಂದ್ವಗಳಿಂದ ರಹಿತನಾಗಿ, ನಿತ್ಯವಸ್ತುವಾದ ಪರಮಾತ್ಮನಲ್ಲಿ ಸ್ಥಿತನಾಗಿ ಯೋಗಕ್ಷೇಮವನ್ನು ಬಯಸದವನೂ ಮತ್ತು ಸ್ವಾಧೀನ ಅಂತ:ಕರಣವುಳ್ಳವನೂ ಆಗು.

   ಯಾವನಾರ್ಥ ಉದಪಾನೇ ಸರ್ವತ: ಸಂಪ್ಲುತೋದಕೇ /

ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತ://೪೬//

 ಎಲ್ಲ ಕಡೆಗಳಿಂದಲೂ ತುಂಬಿ ತುಳುಕುವ ಜಲಾಶಯವು ದೊರಕಿದಾಗ ಚಿಕ್ಕ ಜಲಾಶಯದಿಂದ  ಮನುಷ್ಯನಿಗೆ ಎಷ್ಟು ಪ್ರಯೋಜನವಿರುತ್ತದೆಯೋ, ಬ್ರಹ್ಮವನ್ನು ತತ್ವಶ: ತಿಳಿದಿರುವ ಬ್ರಾಹ್ಮಣನಿಗೆ ಸಮಸ್ತ ವೇದಗಳಲ್ಲಿ ಅಷ್ಟೇ ಪ್ರಯೋಜನವಿರುತ್ತದೆ. ಹೇಗೆಂದರೆ ಬ್ರಹ್ಮಾನಂದ ಪ್ರಾಪ್ತಿಯಾದ ಮೇಲೆ ಆನಂದಕ್ಕಾಗಿ ವೇದಗಳ ಅವಶ್ಯಕತೆ ಇರುವುದಿಲ್ಲ

***

 ಕರ್ಮಣ್ಯೇವಾಧಿಕಾರಸ್ತೇ  ಮಾ ಫಲೇಷು ಕದಾಚನ/

ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವ ಕರ್ಮಣಿ//೪೭//

     ನಿನಗೆ ಕರ್ಮ ಮಾಡುವುದರಲ್ಲಿಯೇ ಅಧಿಕಾರವಿದೆ, ಅದರ ಫಲಗಳಲ್ಲಿ ಎಂದಿಗೂ ಇಲ್ಲ. ಅದಕ್ಕಾಗಿ ನೀನು ಕರ್ಮಗಳ ಫಲಕ್ಕೆ ಕಾರಣನಾಗಬೇಡ. ಅರ್ಥಾತ್ ಫಲಾಪೇಕ್ಷೆ ಇಲ್ಲದೆ ಕರ್ತವ್ಯ ಬುದ್ಧಿಯಿಂದ ಕರ್ಮಗಳನ್ನು ಮಾಡು. ಹಾಗೂ, ನಿನಗೆ ಕರ್ಮಮಾಡದೇ ಇರುವುದರಲ್ಲಿ ಕೂಡ ಆಸಕ್ತಿಯಿಲ್ಲದಿರಲಿ.

      ಯೋಗಸ್ಥ: ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ/

ಸಿದ್ಧ್ಯಸಿದ್ಧ್ಯೋ ಸಮೋ ಭೂತ್ವಾ ಸಮತ್ವಂ ಯೋಗ ಯಚ್ಯತೇ//೪೮//

    ಹೇ ಧನಂಜಯನೇ ! ನೀನು ಆಸಕ್ತಿಯನ್ನು ತ್ಯಜಿಸಿ ಹಾಗೂ ಸಿದ್ಧಿ - ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ, ಯೋಗದಲ್ಲಿ ಸ್ಥಿತನಾಗಿದ್ದು ಕರ್ತವ್ಯ ಕರ್ಮಗಳನ್ನು ಮಾಡು. ಸಮತ್ವವೇ ಯೋಗವೆನಿಸಿಕೊಳ್ಳುತ್ತದೆ.

***

ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ಧನಂಜಯ/

ಬುದ್ಧೌ ಶರಣಮನ್ವಿಚ್ಛ ಕೃಪಣಾ: ಫಲಹೇತವ://೪೯//

      ಈ ಸಮತ್ವರೂಪವಾದ ಬುದ್ಧಿಯೋಗಕ್ಕಿಂತ ಸಕಾಮ ಕರ್ಮವು ಅತ್ಯಂತ ಕೆಳಮಟ್ಟದ್ದಾಗಿದೆ. ಅದಕ್ಕಾಗಿ ಹೇ ಧನಂಜಯನೇ ! ನೀನು ಸಮಬುದ್ಧಿಯಲ್ಲಿಯೇ ರಕ್ಷಣೆಯ ಉಪಾಯವನ್ನು ಹುಡುಕು ಅರ್ಥಾತ್ ಬುದ್ಧಿಯೋಗದ ಆಶ್ರಯವನ್ನೇ ಪಡೆ; ಏಕೆಂದರೆ, ಫಲಕ್ಕೆ ಕಾರಣರಾಗುವವರು ಅತ್ಯಂತ ದೀನರಾಗಿದ್ದಾರೆ.

   ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ/

ತಸ್ಮಾದ್ಯೋಗಾಯ ಯುಜ್ಯಸ್ವ ಯೋಗ: ಕರ್ಮಸು ಕೌಶಲಮ್//೫೦//

      ಸಮಬುದ್ಧಿಯುಳ್ಳ ಪುರುಷನು ಪುಣ್ಯ ಮತ್ತು ಪಾಪಗಳೆರಡನ್ನೂ ಇದೇ ಲೋಕದಲ್ಲಿ ತ್ಯಜಿಸುತ್ತಾನೆ ಅರ್ಥಾತ್ , ಅವುಗಳಿಂದ ಮುಕ್ತನಾಗುತ್ತಾನೆ. ಆದ್ದರಿಂದ ನೀನು ಸಮತ್ವರೂಪೀ ಯೋಗದಲ್ಲಿ ತೊಡಗು. ಈ ಸಮತ್ವರೂಪೀ ಯೋಗವೇ ಕರ್ಮಗಳಲ್ಲಿ ಕುಶಲತೆಯಾಗಿದೆ ಅರ್ಥಾತ್ ಕರ್ಮಬಂಧನದಿಂದ ಬಿಡುಗಡೆ ಹೊಂದುವ ಉಪಾಯವಾಗಿದೆ.

-ವಿಜಯಾ ಶೆಟ್ಟಿ, ಸಾಲೆತ್ತೂರು (ಸಾರ ಸಂಗ್ರಹ)