ಗೀತಾಮೃತ - 40
*ಅಧ್ಯಾಯ ೧೧*
*ಸಂಜಯ ಉವಾಚ*
*ಏವಮುಕ್ತ್ವಾ ತತೋ ರಾಜನ್ಮಹಾಯೋಗೇಶ್ವರೋ ಹರಿ:/*
*ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್//೯//*
ಸಂಜಯನು ಹೇಳಿದನು _ ಹೇ ರಾಜಾ! ಮಹಾ ಯೋಗೇಶ್ವರನಾದ ಮತ್ತು ಎಲ್ಲ ಪಾಪಗಳನ್ನು ನಾಶಪಡಿಸುವ ಭಗವಂತನು ಈ ಪ್ರಕಾರವಾಗಿ ಹೇಳಿ,ಅನಂತರ ಅರ್ಜುನನಿಗೆ ಪರಮ ಐಶ್ವರ್ಯದಿಂದ ಕೂಡಿದ ತನ್ನ ದಿವ್ಯ ಸ್ವರೂಪವನ್ನು ತೋರಿಸಿದನು.
*ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್/*
*ಅನೇಕ ದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್//೧೦//*
ಅನೇಕ ಮುಖ ಮತ್ತು ನೇತ್ರಗಳಿಂದ ಯುಕ್ತನಾದ ಅನೇಕ ಅದ್ಭುತವಾದ ದರ್ಶನಗಳುಳ್ಳ , ಅನೇಕ ವಿಧವಾದ ದಿವ್ಯವಾದ ಭೂಷಣಗಳಿಂದ ಅಲಂಕೃತ ನಾದ,ಅನೇಕ ವಿಧವಾದ ದಿವ್ಯ ಶಸ್ತ್ರ ಗಳನ್ನು ಕೈಗಳಲ್ಲಿ ಎತ್ತಿ ಹಿಡಿದಿರುವ ಪರಮೇಶ್ವರ ..
***
*ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್/*
*ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಮ್//೧೧//*
ದಿವ್ಯವಾದ ಮಾಲೆ ಮತ್ತು ವಸ್ತ್ರಗಳನ್ನು ಧರಿಸಿರುವಂತಹ ಮತ್ತು ದಿವ್ಯವಾದ ಪರಿಮಳ ಗಂಧವನ್ನು ಲೇಪಿಸಿಕೊಂಡಿರುವ ,ಎಲ್ಲ ಪ್ರಕಾರದ ಆಶ್ಚರ್ಯಗಳಿಂದೊಡಗೂಡಿದ,ಸೀಮಾತೀತನಾದ ಮತ್ತು ಎಲ್ಲ ಕಡೆ ಮುಖಗಳುಳ್ಳ ವಿರಾಟ್ ಸ್ವರೂಪಿಯಾದ ಪರಮದೇವ ಪರಮೇಶ್ವರನನ್ನು ಅರ್ಜುನನು ನೋಡಿದನು.
*ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ/*
*ಯದಿ ಭಾ: ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನ://೧೨//*
ಆಕಾಶದಲ್ಲಿ ಸಾವಿರಾರು ಸೂರ್ಯರು ಒಮ್ಮೆಲೇ ಉದಯಿಸುವುದರಿಂದ ಉಂಟಾಗುವ ಯಾವ ಪ್ರಕಾಶವಿದೆಯೋ ಅದೂ ಕೂಡ ಆ ವಿಶ್ವರೂಪಿಯಾದ ಪರಮಾತ್ಮನ ಪ್ರಕಾಶಕ್ಕೆ ಎಂದಾದರೂ ಸಮವಾಗಬಹುದೇ ಅರ್ಥಾತ್ ಸಮವಾಗಲಾರದು.
***
*ತತ್ರೈಕಸ್ಥಂ ಜಗತ್ಕೃತ್ಸ್ನಂ ಪ್ರವಿಭಕ್ತಮನೇಕಥಾ/*
*ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ//೧೩//*
ಪಾಂಡುಪುತ್ರನಾದ ಅರ್ಜುನನು ಆ ಸಮಯದಲ್ಲಿ ಅನೇಕ ಪ್ರಕಾರದಿಂದ ವಿಭಕ್ತವಾದ ಅರ್ಥಾತ್ ಬಿಡಿ _ ಬಿಡಿಯಾಗಿ ಸಂಪೂರ್ಣವಾದ ಜಗತ್ತನ್ನು ದೇವರ ದೇವನಾದ ಭಗವಾನ್ ಶ್ರೀ ಕೃಷ್ಣನ ಆ ಶರೀರದಲ್ಲಿ ಒಂದೆಡೆ ಸ್ಥಿತವಾಗಿರುವುದನ್ನು ನೋಡಿದನು.
*ತತ: ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯ:/*
*ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ//೧೪//*
ಇದಾದನಂತರ ಆಶ್ಚರ್ಯಚಕಿತನಾದ ಮತ್ತು ಪುಲಕಿತ ಶರೀರಿಯಾದ ಆ ಅರ್ಜುನನು,ಪ್ರಕಾಶಮಯನೂ,ವಿಶ್ವರೂಪಿಯೂ ಆದ ಪರಮಾತ್ಮನಿಗೆ,ಶ್ರದ್ಧಾ ಮತ್ತು ಭಕ್ತಿಸಹಿತವಾಗಿ ಶಿರಬಾಗಿ ನಮಸ್ಕರಿಸಿ ಕೈಜೋಡಿಸಿಕೊಂಡು ಸ್ತುತಿಸತೊಡಗಿದನು
***
*ಅರ್ಜುನ ಉವಾಚ*
*ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್/*
*ಬ್ರಹ್ಮಾಣಮೀಶಂ ಕಮಲಾಸನಸ್ಥಮೃಷೀಶ್ಚ ಸರ್ವಾನುರಗಾಂಶ್ಚ ದಿವ್ಯಾನ್//೧೫//*
ಅರ್ಜುನನು ಹೇಳಿದನು _ ಹೇ ದೇವಾ! ನಾನು ನಿನ್ನ ಶರೀರದಲ್ಲಿ ಸಂಪೂರ್ಣ ದೇವತೆಗಳನ್ನು ಹಾಗೂ ಜೀವಿಗಳ ಸಮುದಾಯಗಳನ್ನು ಕಮಲಾಸನದ ಮೇಲೆ ವಿರಾಜಮಾನನಾಗಿರುವ ಬ್ರಹ್ಮನನ್ನು ,ಮಹಾದೇವನನ್ನು ಮತ್ತು ಸಮಸ್ತ ಋಷಿಗಳನ್ನು ಹಾಗೂ ದಿವ್ಯವಾದ ಸರ್ಪಗಳನ್ನು ನೋಡುತ್ತಿದ್ದೇನೆ.
*ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋನಂತರೂಪಮ್/*
*ನಾಂತಂ ನ ಮಧ್ಯಂ ನ ಪುನಸ್ತವಾದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ//೧೬//*
ಹೇ ಸಂಪೂರ್ಣ ವಿಶ್ವದ ಒಡೆಯನೇ! ನಿನ್ನನ್ನು ಅನೇಕ ಭುಜಗಳು,ಉದರಗಳು,ಮುಖ ಮತ್ತು ನೇತ್ರಗಳುಳ್ಳವನಾಗಿಯೂ ಮತ್ತು ಎಲ್ಲಕಡೆಗಳಿಂದ ಅನಂತರೂಪವುಳ್ಳವನಾಗಿಯೂ ನೋಡುತ್ತೇನೆ. ಹೇ ವಿಶ್ವರೂಪಿಯೇ ! ನಿನ್ನ ಅಂತ್ಯವನ್ನಾಗಲೀ ,ಮದ್ಯವನ್ನಾಗಲೀ,ಆದಿಯನ್ನಾಗಲೀ ನೋಡಲಾಗುವುದಿಲ್ಲ.
***
(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ