ಗೀತಾಮೃತ - 42

*ಅಧ್ಯಾಯ ೧೧*
*ವಕ್ತ್ರಾಣೀ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಹಾನಿ/*
*ಕೇಚಿದ್ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈ//೨೭//*
ಎಲ್ಲರೂ ನಿನ್ನ ಕೋರೆದಾಡೆಗಳ ಕಾರಣದಿಂದ ವಿಕರಾಳವಾದ ಭಯಾನಕವಾದ ಮುಖಗಳಲ್ಲಿ ಅತಿವೇಗದಿಂದ ಧಾವಿಸುತ್ತಾ ಪ್ರವೇಶ ಮಾಡುತ್ತಿದ್ದಾರೆ ಮತ್ತು ಕೆಲವರಾದರೋ ಪುಡಿಪುಡಿಯಾದ ತಲೆಗಳ ಸಹಿತ ನಿನ್ನ ಹಲ್ಲುಗಳ ನಡುವೆ ಸಿಕ್ಕಿಕೊಂಡವರಾಗಿ ಕಾಣುತ್ತಿದ್ದಾರೆ.
*ಯಥಾ ನದೀನಾಂ ಬಹವೋಂಬುವೇಗಾ: ಸಮುದ್ರಮೇವಾಭಿಮುಖಾ ದ್ರವಂತಿ/*
*ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ//೨೮//*
ಹೇಗೆ ನದಿಗಳ ಅನೇಕವಾದ ಜಲ ಪ್ರವಾಹಗಳು ಸ್ವಾಭಾವಿಕವಾಗಿಯೇ ಸಮುದ್ರಕ್ಕೆ ಸಮ್ಮುಖವಾಗಿ ಧಾವಿಸುತ್ತವೆಯೋ ಅರ್ಥಾತ್ ಸಮುದ್ರದಲ್ಲಿ ಪ್ರವೇಶಿಸುತ್ತದೆಯೋ ಹಾಗೆಯೇ ಈ ನರಲೋಕದ ಶ್ರೇಷ್ಠ ವೀರರೂ ಸಹ ಪ್ರಜ್ವಲಿತವಾದ ನಿನ್ನ ಮುಖಗಳಲ್ಲಿ ಪ್ರವೇಶಮಾಡುತ್ತಿದ್ದಾರೆ.
***
*ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ ಸಮೃದ್ಧವೇಗಾ:/*
*ತಥೈವ ನಾಶಾಯ ವಿಶಂತಿ ಲೋಕಾಸ್ತವಾಪಿ ವಕ್ತ್ರಾಣಿ ಸಮೃದ್ಧವೇಗಾ:/*
ಹೇಗೆ ಪತಂಗಗಳು ಮೋಹವಶವಾಗಿ ನಾಶವಾಗುವುದಕ್ಕೆ ನಾಶವಾಗುವುದಕ್ಕೆ ಪ್ರಜ್ವಲಿತವಾದ ಅಗ್ನಿಯಲ್ಲಿ ಅತಿವೇಗದಿಂದ ಧಾವಿಸುತ್ತಾ ಪ್ರವೇಶಿಸುತ್ತದೆಯೋ ಹಾಗೆಯೇ ಈ ಎಲ್ಲಾ ಜನರೂ ಕೂಡ ತಮ್ಮ ನಾಶಕ್ಕಾಗಿ ನಿನ್ನ ಮುಖಗಳಲ್ಲಿ ಅತಿವೇಗದಿಂದ ಧಾವಿಸುತ್ತಾ ಪ್ರವೇಶಮಾಡುತ್ತಿದ್ದಾರೆ.
*ಲೇಲಿಹ್ಯಸೇ ಗ್ರಸಮಾನ: ಸಮಂತಾಲ್ಲೋಕಾನ್ಸಮಗ್ರಾನ್ವದನೈರ್ಜ್ವಲದ್ಭಿ/*
*ತೇಜೋಭಿರಾಪೂರ್ಯ ಜಗತ್ಸಮಗ್ರಂ ಭಾಸಸ್ತವೋಗ್ರಾ: ಪ್ರತಪಂತಿ ವಿಷ್ಣೋ//೩೦//*
ನೀನು ಆ ಸಮಸ್ತ ಲೋಕಗಳನ್ನು ಪ್ರಜ್ವಲಿತವಾದ ಮುಖಗಳ ಮೂಲಕ ಮಹಾಕಾಲನಂತೆ ನುಂಗಿಹಾಕುತ್ತಾ ಎಲ್ಲಾ ಕಡೆಯಿಂದ ಪದೇ ಪದೇ ಚಪ್ಪರಿಸುತ್ತಿರುತ್ತಿರುವೆ.ಹೇ ವಿಷ್ಣುವೇ ! ನಿನ್ನ ಉಗ್ರವಾದ ಪ್ರಕಾಶವು ಸಂಪೂರ್ಣ ಜಗತ್ತನ್ನು ತೇಜಸ್ಸಿನ ಮೂಲಕ ಪರಿಪೂರ್ಣವಾಗಿ ಸಂತೃಪ್ತಗೊಳಿಸುತ್ತಿದ್ದೀಯೆ.
***
*ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋಸ್ತುತೇ ದೇವವರ ಪ್ರಸೀದ /*
*ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್//೩೧//*
ಉಗ್ರರೂಪಿಯಾದ ನೀನು ಯಾರು? ಎಂಬುದನ್ನು ಕೃಪೆಮಾಡಿ ನನಗೆ ತಿಳಿಸು,ಹೇ ದೇವ ಶ್ರೇಷ್ಠನೇ! ನಿನಗೆ ಪ್ರಣಾಮಗಳು.ನೀನು ಪ್ರಸನ್ನನಾಗು ! ಆದಿಪುರುಷನಾದ ನಿನ್ನನ್ನು ನಾನು ವಿಶೇಷರೂಪದಿಂದ ತಿಳಿಯಲು ಬಯಸುತ್ತೇನೆ.ಏಕೆಂದರೆ ನಾನು ನಿನ್ನ ಪ್ರವೃತ್ತಿಯನ್ನು ತಿಳಿಯಲಾರೆ.
*ಶ್ರೀ ಭಗವಾನುವಾಚ*
*ಕಾಲೋಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತ:/*
*ಋತೇಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇವಸ್ಥಿತಾ: ಪ್ರತ್ಯನೀಕೇಷು ಯೋಧಾ://೩೨//*
ಶ್ರೀ ಭಗವಂತನು ಹೇಳಿದನು _
ನಾನು ಲೋಕಗಳನ್ನು ನಾಶಮಾಡಲು ಬೆಳೆದಿರುವಂತಹ ಮಹಾಕಾಲನಾಗಿದ್ದೇನೆ.ಈ ಸಮಯದಲ್ಲಿ ಈ ಲೋಕಗಳನ್ನು ನಾಶಗೊಳಿಸುವುದಕ್ಕಾಗಿ ಪ್ರವೃತ್ತನಾಗಿದ್ದೇನೆ.ಅದಕ್ಕಾಗಿ ಯಾವ ಪ್ರತಿ ಪಕ್ಷದ ಸೇನೆಯಲ್ಲಿ ಸ್ಥಿತರಾದ ಯೋಧರುಗಳಿದ್ದಾರೆಯೋ ಅವರೆಲ್ಲರೂ ನೀನು ಯುದ್ಧಮಾಡದಿದ್ದರೂ ಉಳಿಯಲಾರರು ಅರ್ಥಾತ್ ಇವರೆಲ್ಲರೂ ನಾಶವಾಗುವರು.
***
*ತತ್ಮಾತ್ವ್ತಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್/*
*ಮಯೈದೈತೇ ನಿಹತಾ: ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್//೩೩//*
ಆದ್ದರಿಂದ ನೀನು ಎದ್ದು ನಿಲ್ಲು! ಯಶಸ್ಸನ್ನು ಗಳಿಸು ಮತ್ತು ಶತ್ರುಗಳನ್ನು ಜಯಿಸಿ,ಧನ ಧಾನ್ಯ ಸಂಪನ್ನವಾದ ರಾಜ್ಯವನ್ನು ಅನುಭವಿಸು.ಈ ಎಲ್ಲ ಶೂರವೀರರೂ ಮೊದಲೇ ನನ್ನ ಮೂಲಕ ಕೊಲ್ಲಲ್ಪಟ್ಟಿದ್ದಾರೆ.ಹೇ ಸವ್ಯಸಾಚಿಯೇ! ನೀನಾದರೋ ಕೇವಲ ನಿಮಿತ್ತ ಮಾತ್ರನಾಗು.
*ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನಪಿ ಯೋಧವೀರಾನ್/* *ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್//೩೪//*
ದ್ರೋಣಾಚಾರ್ಯರು,ಭೀಷ್ಮಾಚಾರ್ಯರು ಹಾಗೂ ಜಯದ್ರಥ ಮತ್ತು ಕರ್ಣ,ಹಾಗೆಯೇ ಇನ್ನೂ ಅನೇಕರು ನನ್ನ ಮೂಲಕ ಕೊಲ್ಲಲ್ಪಟ್ಟ ಶೂರವೀರ ಯೋಧರನ್ನು ನೀನು ಕೊಲ್ಲು.ನೀನು ಚಿಂತಿಸಬೇಡ,ನಿಸ್ಸಂದೇಹವಾಗಿ ನೀನು ಯುದ್ಧದಲ್ಲಿ ವೈರಿಗಳನ್ನು ಗೆಲ್ಲುವೆ.ಅದಕ್ಕಾಗಿ ಯುದ್ಧಮಾಡು.
***
(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ