ಗೀತಾಮೃತ- 43

ಗೀತಾಮೃತ- 43

ಅಧ್ಯಾಯ- ೧೧

      *ಸಂಜಯ ಉವಾಚ*

*ಏತಚ್ಛ್ರುತ್ವಾವಚನಂ ಕೇಶವಸ್ಯ ಕೃತಾಂಜಲಿರ್ವೇಮಾನ; ಕಿರೀಟೀ/*

*ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತ: ಪ್ರಣಮ್ಯ//೩೫/*

   ಸಂಜಯನು ಹೇಳಿದನು_

ಭಗವಾನ್ ಕೇಶವನ ಈ ವಚನವನ್ನು ಕೇಳಿ ಕಿರೀಟಿ ಅರ್ಜುನನು ಕೈಜೋಡಿಸಿದವನಾಗಿ ನಡುಗುತ್ತಾ ,ನಮಸ್ಕರಿಸಿ ಇನ್ನೊಮ್ಮೆ ಅತ್ಯಂತ ಭಯಭೀತನಾಗಿ ನಮಸ್ಕಾರಮಾಡಿ ಭಗವಾನ್ ಶ್ರೀ ಕೃಷ್ಣನಿಗೆ ಗದ್ಗದ ವಾಣಿಯಿಂದ ಹೇಳಿದನು.ಅರ್ಥಾತ್ ಸ್ತುತಿಸತೊಡಗಿದನು.

*ಅರ್ಜುನ ಉವಾಚ*

*ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಜ್ಯತೇ/*

*ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಗರ್ವೇ ನಮಸ್ಯತಿ ಚ ಸಿದ್ಧಸಂಘಾ://೩೬//*

ಅರ್ಜುನನು ಹೇಳಿದನು_

ಹೇ ಅಂತರ್ಯಾಮಿ ! ನಿನ್ನ ನಾಮ ,ಗುಣ ಮತ್ತು ಪ್ರಭಾವದ ಕೀರ್ತನೆಯಿಂದ ಜಗತ್ತು ಅತಿಹರ್ಷಪಡುತ್ತಿದೆ ಮತ್ತು ಅನುರಾಗವನ್ನು ಪಡೆಯುತ್ತಿದೆ.ಅರ್ಥಾತ್ ಪ್ರೇಮವಿಹ್ವಲವಾಗುತ್ತಿದೆ.ಭಯಭೀತರಾದ ರಾಕ್ಷಸಜನರು ದಶದಿಕ್ಕುಗಳಲ್ಲಿ ಧಾವಿಸುತ್ತಿದ್ದಾರೆ.ಮತ್ತು ಎಲ್ಲ ಸಿದ್ಧಗಣಗಳ ಸಮುದಾಯವು ನಮಸ್ಕರಿಸುತ್ತಿರುವುದು ಯೋಗ್ಯವೇ ಆಗಿದೆ.

***

 *ಕಸ್ಮಾಚ್ಚ ತೇ ನ ನಮೇರನ್ಮಹಾತ್ಮನ್ ಗರೀಯಸೇ ಬ್ರಹ್ಮಣೋಪ್ಯಾದಿಕರ್ತ್ರೇ /*

*ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ತತ್ಪರಂ ಯತ್//೩೭//*

ಹೇ ಮಹಾತ್ಮನೇ! ಚತುರ್ಮುಖ ಬ್ರಹ್ಮನಿಗೂ ಸಹ ಆದಿಕರ್ತನಾದ ಮತ್ತು  ಎಲ್ಲರಿಗೂ  ಹಿರಿಯವನಾದ ನಿನಗಾಗಿ ಇವರು ಹೇಗೆ ನಮಸ್ಕಾರಮಾಡದಿರುವರು! ಏಕೆಂದರೆ ಹೇ ಅನಂತನೇ ! ಹೇ ದವೇಶನೇ! ಹೇ ಜಗನ್ನಿವಾಸನೇ! ಯಾರು ಸತ್,ಅಸತ್ ಮತ್ತು ಅದಕ್ಕಿಂತ ಶ್ರೇಷ್ಠ ವಾದ ಅಕ್ಷರ ಅರ್ಥಾತ್ ಸಚ್ಚಿದಾನಂದಘನ ಬ್ರಹ್ಮನಿದ್ದಾನೋ ಅವನು ನೀನೇ ಆಗಿದ್ದೀಯೆ.

*ತ್ವಮಾದಿದೇವ ಪುರುಷ: ಪುರಾಣಸ್ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್/*

*ವೇತ್ತಾಸಿವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ//೩೮//*

   ನೀನು ಆದಿದೇವನೂ ಮತ್ತು ಸನಾತನ ಪುರುಷನೂ ಆಗಿರುವೆ,ನೀನು ಈ ಜಗತ್ತಿನ ಪರಮ ಆಶ್ರಯ ಮತ್ತು ಅರಿಯುವವನೂ,ತಿಳಿಯಲು ಯೋಗ್ಯನೂ ಮತ್ತು ಪರಮಧಾಮವಾಗಿರುವೆ.ಹೇ ಅನಂತರೂಪನೆ! ನಿನ್ನಿಂದ ಈ ಎಲ್ಲಾ ಜಗತ್ತು ವ್ಯಾಪ್ತ ಅರ್ಥಾತ್ ಪರಿಪೂರ್ಣವಾಗಿದೆ.

***

*ವಾಯುರ್ಯಮೋಗ್ನಿರ್ವರುಣ: ಶಶಾಂಕ: ಪ್ರಜಾಪತಿಸ್ತ್ವಂ  ಪ್ರಪಿತಾಮಹಶ್ಚ/* *

*ನಮೋ ನಮಸ್ತೇಸ್ತು ಸಹಸ್ರಕೃತ್ವ:  ಪುನಶ್ಚಭೂಯೋಪಿ ನಮೋ ನಮಸ್ತೇ//೩೯//*

 ನೀನೇ ವಾಯು,ಅಗ್ನಿ,ಯಮ,ವರುಣ ಮತ್ತು ಚಂದ್ರ,ಪ್ರಜೆಗಳ ಒಡೆಯನಾದ ಬ್ರಹ್ಮ ಮತ್ತು ಬ್ರಹ್ಮನಿಗೂ ತಂದೆಯಾಗಿದ್ದೀಯೆ.ನಿನಗೆ ಸಾವಿರಬಾರಿ ನಮಸ್ಕಾರ! ನಮಸ್ಕಾರಗಳು!! ನಿನಗೆ ಮತ್ತೂ ಪದೇ ಪದೇ ನಮಸ್ಕಾರ! ನಮಸ್ಕಾರಗಳು.

*ನಮ: ಪುರಸ್ತಾದಥ ಪೃಷ್ಠತಸ್ತೇ ನಮೋಸ್ತುತೇ ಸರ್ವತ ಏವ ಸರ್ವ/*

*ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಸಿ ಸರ್ವ://೪೦//*

ಹೇ ಅನಂತ ಸಾಮರ್ಥ್ಯ ವುಳ್ಳವನೇ! ನಿನಗೆ ಮುಂದುಗಡೆಯಿಂದ ಮತ್ತು ಹಿಂದುಗಡೆಯಿಂದಲೂ ನಮಸ್ಕಾರಗಳು. ಹೇ ಸರ್ವಾತ್ಮನೇ ! ನಿನಗೆ ಎಲ್ಲಕಡೆಗಳಿಂದಲೂ ನಮಸ್ಕಾರಗಳು.ಹೇ ಸರ್ವಾತ್ಮನೇ! ನಿನಗೆ ಎಲ್ಲಕಡೆಗಳಿಂದಲೂ ನಮಸ್ಕಾರವಿರಲಿ.ಏಕೆಂದರೆ ಅನಂತ ಪರಾಕ್ರಮ ಶಾಲಿಯಾದ ನೀನು ಎಲ್ಲ ಜಗತ್ತನ್ನು ವ್ಯಾಪಿಸಿಕೊಂಡಿರುವೆ.ಆದ್ದರಿಂದ ನೀನೇ ಸರ್ವರೂಪನಾಗಿರುವೆ.

***

*ಸಖೇತಿ ಮತ್ವಾ ಪ್ರಸಭಂ ಯಮಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ/*

*ಅಚಾನತಾ ಮಹಿಮಾನಂ ತವೇದಂ  ಮಯಾ ಪ್ರಮಾದಾತ್ಪ್ರಣಯೇನ ವಾಪಿ//೪೧//*

ಹೇ ಪರಮೇಶ್ವರನೆ! ನಿನ್ನ ಪ್ರಭಾವವನ್ನು ತಿಳಿಯದೆ ನೀನು ನನ್ನ ಸಖನಾಗಿದ್ದೀಯೆ ಎಂಬುದಾಗಿ ತಿಳಿದು ಪ್ರೇಮದಿಂದಲೂ ಅಥವಾ ಪ್ರಮಾದದಿಂದಲೂಕೂಡ ನಾನು  'ಹೇ ಕೃಷ್ಣ'! ,'ಹೇ ಯಾದವ'! ,'ಹೇ ಸಖಾ' ಈ ಪ್ರಕಾರವಾಗಿ ಯಾವುದನ್ನೂ ತಿಳಿಯದೆ _ ಯೋಚಿಸದೆ ಹಠಾತ್ತಾಗಿ ಹೇಳಿರುವೆನೋ

     *ಯಚ್ಚಾವಹಾಸಾರ್ಥ ಮಸತ್ಕೃ ತೋಸಿ ವಿಹಾರಶಯ್ಯಾಸನಭೋಜನೇಷು/* *ಏಕೋಥವಾಪ್ಯಚ್ಯುತ ತತ್ಸಮಕ್ಣಂ  ತತ್ಕ್ಷಾಮಯೇ  ತ್ವಾಮಹಮಹಮಪ್ರಮೇಯಮ್//೪೨//*  ಹೇ ಅಚ್ಯುತಾ! ಯಾವ ನೀನು ನನ್ನ ಮೂಲಕ ವಿನೋದಕ್ಕಾಗಿ ವಿಹಾರ,ಶಯ್ಯೆ,ಆಸನ ಮತ್ತು ಭೋಜನಾದಿಗಳಲ್ಲಿ ಒಬ್ಬನಿದ್ದಾಗ ಅಥವಾ ಆ ಮಿತ್ರರ ಸಮ್ಮುಖದಲ್ಲಿಯೂ ಕೂಡ ಅವಮಾನಿಸಲ್ಪಟ್ಟಿರುವೆಯೋ, ಆ ಎಲ್ಲ ಅಪರಾಧಗಳಿಗಾಗಿ ಅಪ್ರಮೇಯ ಸ್ವರೂಪೀ ಅರ್ಥಾತ್ ಅಚಿಂತ್ಯ ಪ್ರಭಾವಶಾಲಿಯಾದ ನಿನ್ನಲ್ಲಿ ನಾನು ಕ್ಷಮೆಯನ್ನು ಬೇಡುತ್ತೇನೆ.

***

(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ