ಗೀತಾಮೃತ - 44

ಗೀತಾಮೃತ - 44

*ಅಧ್ಯಾಯ ೧೧*

      *ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್/*

*ನ ತ್ವತ್ಸಮೋಸ್ತ್ಯಭ್ಯಧಿಕ: ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ//೪೩//*

   ನೀನು ಚರಾಚರ ಈ ಜಗತ್ತಿನ ತಂದೆಯಾಗಿರುವೆ ಮತ್ತು ಎಲ್ಲರಿಗೂ ಹಿರಿಯವನಾದ ಗುರು ಮತ್ತು ಅತಿ ಪೂಜನೀಯನಾಗಿರುವೆ.ಹೇ ಅನುಪಮ ಸ್ವಭಾವವುಳ್ಳವನೇ! ಮೂರೂ ಲೋಕಗಳಲ್ಲಿ ನಿನಗೆ ಸಮಾನರು ಕೂಡ ಬೇರೆ ಯಾರೂ ಇಲ್ಲ.ಇನ್ನು ಹೆಚ್ಚಿನವರಾದರೋ ಹೇಗಿರಲು ಸಾಧ್ಯ?

    *ತಸ್ತ್ರಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್/*

*ಪಿತೇವ ಪುತ್ರಸ್ಯ ಸಖೇವ ಸಖ್ಯ: ಪ್ರಯ: ಪ್ರಯಾಯಾರ್ಹಸಿ ದೇವ ಸೋಢುಮ್//೪೪//*

 ಆದುದರಿಂದ ಪ್ರಭುವೇ! ನಾನು ಶರೀರವನ್ನು ನಿನ್ನ ಚರಣಗಳಲ್ಲಿ ಪೂರ್ಣವಾಗಿ ನಿವೇದಿಸಿ,ನಮಸ್ಕಾರ ಮಾಡಿಸ್ತುತಿಸಲು ಯೋಗ್ಯನಾಗಿರುವ ಒಡೆಯನಾದ ನಿನ್ನನ್ನು ಪ್ರಸನ್ನನಾಗೆಂದು ಪ್ರಾರ್ಥಿಸುತ್ತೇನೆ.ಹೇ ದೇವಾ! ತಂದೆಯು ಹೇಗೆ ಮಗನ , ಸಖನು ಹೇಗೆ ಸ್ನೇಹಿತನ ಮತ್ತು ಪತಿಯು ಹೇಗೆ ಪ್ರಯತಮೆಯಾದ ಪತ್ನಿಯ ಅಪರಾಧಗಳನ್ನು ಸಹಿಸುತ್ತಾರೋ  ಹಾಗೆಯೇ ನೀನೂ ಸಹ ನನ್ನ ಅಪರಾಧಗಳನ್ನು ಸಹಿಸಲು ಯೋಗ್ಯನಾಗಿರುವೆ.

***

 *ಅಧೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ಯಾ ಭಯೇನ ಚ ಪ್ರವ್ಯಥಿತಂ ಮನೋ ಮೇ /*

*ತದೇವ ಮೇ ದರ್ಶಯ ದೇವರೂಪಂ ಪ್ರಸೀದ ದೇವೇಶ ಜಗನ್ನಿವಾಸ//೪೫//*

     ನಾನು ಮೊದಲು ಎಂದೂ ನೋಡದಿದ್ದ ನಿನ್ನ ಈ ಆಶ್ಚರ್ಯಮಯವಾದ ರೂಪವನ್ನು ನೋಡಿ ಹರ್ಷಿತನಾಗುತ್ತಿದ್ದೇನೆ ಮತ್ತು ನನ್ನ ಮನಸ್ಸು ಭಯದಿಂದ ಅತಿ ವ್ಯಾಕುಲವೂ ಆಗುತ್ತಿದೆ.ಅದಕ್ಕಾಗಿ ನೀನು ಆ ನಿನ್ನ ಚತುರ್ಭುಜ ವಿಷ್ಣು ರೂಪವನ್ನೇ ನನಗೆ ತೋರಿಸು.ಹೇ ದೇವೇಶನೇ! ಹೇ ಜಗನ್ನಿವಾಸನೇ! ಪ್ರಸನ್ನನಾಗು.

      *ಕಿರೀಟಿನಂ ಗದಿನಂ ಚಕ್ರಹಸ್ತ ಮಿಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ/*

*ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ//೪೬//*

       ಮುಕುಟವನ್ನು ಧರಿಸಿರುವ ಹಾಗೂ ಗದೆ ಮತ್ತು ಚಕ್ರವನ್ನು ಕೈಯಲ್ಲಿ ಧರಿಸಿರುವಂತೆಯೇ ನಿನ್ನ ರೂಪವನ್ನು ನೋಡಲು ನಾನು ಬಯಸುತ್ತೇನೆ.ಆದ್ದರಿಂದ ಹೇ ವಿಶ್ವಸ್ವರೂಪಿಯೇ! ಹೇ ಸಹಸ್ರಬಾಹುವೇ ! ನೀನು ಅದೇ ಚತುರ್ಭುಜ. ರೂಪದಿಂದ ಪ್ರಕಟನಾಗು.

***

 *ಶ್ರೀ ಭಗವಾನುವಾಚ*

*ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್/*

*ತೇಜೋಮಯಂ ವಿಶ್ವಮನಂತಮಾಧ್ಯಂ ಯನ್ಮೇ ತ್ವದನ್ಯೇನ ದೃಷ್ಟಪೂರ್ವಮ್//೪೭//*

ಭಗವಂತನು ಹೇಳಿದನು _ 

ಹೇ ಅರ್ಜುನಾ! ಅನುಗ್ರಹ ಪೂರ್ವಕವಾಗಿ ನಾನು ನನ್ನ ಯೋಗಶಕ್ತಿಯ ಪ್ರಭಾವದಿಂದ ಈ ನನ್ನ ಪರಮ ತೇಜೋಮಯವಾದ,ಎಲ್ಲರ ಆದಿಯೂ ಮತ್ತು ಅಸೀಮವಾದ ವಿರಾಟ್ ರೂಪವನ್ನು ನಿನಗೆ ತೋರಿಸಿದ್ದೇನೆ,ಅದನ್ನು ನೀನಲ್ಲದೆ ಬೇರಾರೂ ಮೊದಲು ನೋಡಿರಲಿಲ್ಲ.

*ನ ವೇದಯಜ್ಞಧ್ಯಯನೈರ್ನ ದಾನೈರ್ನ ಚ ಕ್ರಿಯಾಭಿರ್ನ ತಪೋಭಿರಗ್ರೈ:/*

*ಏವಂರೂಪ: ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ//೪೮//*

ಹೇ ಅರ್ಜುನಾ! ಮನುಷ್ಯಲೋಕದಲ್ಲಿ ಈ ಪ್ರಕಾರದ ವಿಶ್ವರೂಪವುಳ್ಳ ನಾನು ವೇದ ಮತ್ತು ಯಜ್ಞಗಳ ಅಧ್ಯಯನ ದಿಂದಾಗಲೀ ,ದಾನದಿಂದಾಗಲಿ,ಕ್ರಿಯೆಗಳಿಂದಾಗಲಿ ಮತ್ತು ಉಗ್ರವಾದ ತಪಸ್ಸುಗಳಿಂದಾಗಲೀ _ ನೀನಲ್ಲದೆ ಬೇರೆಯವರ ಮೂಲಕ ನೋಡಲು ಶಕ್ಯನಲ್ಲ.

***

 *ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾರೂಪಂ ಘೋರಮೀದೃಙ್ಮಮೇದಮ್/*

*ವ್ಯಪೇತಭೀ ಪ್ರೀತಮನಾ: ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ//೪೯//*

    ನನ್ನ ಪ್ರಕಾರವಾದ,ಈ ಭಯಂಕರವಾದ ರೂಪವನ್ನು ನೋಡಿ ನಿನಗೆ ವ್ಯಾಕಲತೆಯುಂಟಾಗಬಾರದು ಮತ್ತು ಮೂಢಭಾವವು ಸಹ ಆಗಬಾರದು.ನೀನು ಭಯರಹಿತ ಮತ್ತು ಪ್ರೀತಿಯುಕ್ತ ಮನಸ್ಸಿನವನಾಗಿ ಅದೇ ನನ್ನ ಈ ಶಂಖ,ಚಕ್ರ,ಗದಾ ಮತ್ತು ಪದ್ಮಯುಕ್ತವಾದ ಚತುರ್ಭುಜ ರೂಪವನ್ನು ಪುನ: ನೋಡು.

*ಸಂಜಯ ಉವಾಚ*

       *ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯ:/*

*ಅಶ್ವಾಸಯಾಮಾಸ ಚ ಭೀತಮೇನಂ ಭೂತ್ವಾಪುನ: ಸೌಮ್ಯವಪುರ್ವಹಾತ್ಮಾ//೫೦//*

     ಸಂಜಯನು ಹೇಳಿದನು _ ಭಗವಾನ್ ವಾಸುದೇವನು ಅರ್ಜುನನನ್ನು ಉದ್ದೇಶಿಸಿ ಈ ಪ್ರಕಾರವಾಗಿ ಹೇಳಿ ನಂತರ ತನ್ನ ಚತುರ್ಭುಜರೂಪವನ್ನು ತೋರಿಸಿದನು ಮತ್ತು ಪುನ: ಮಹಾತ್ಮನಾದ ಶ್ರೀ ಕೃಷ್ಣನು ಸೌಮ್ಯಮೂರ್ತಿಯಾಗಿ ಆ ಭಯಗ್ರಸ್ತನಾದ ಅರ್ಜುನನಿಗೆ ಧೈರ್ಯ ತುಂಬಿದನು.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ