ಗೀತಾಮೃತ - 50

ಗೀತಾಮೃತ - 50

*ಅಧ್ಯಾಯ ೧೩*

        *ಆಸಕ್ತಿರನಭಿಷ್ವಂಗ ಪುತ್ರದಾರಗೃಹಾದಿಷು/*

*ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೊಪಪತ್ತಿಷು//೯//*

ಪುತ್ರ,ಪತ್ನೀ,ಮನೆ ಮತ್ತು ಧನಾದಿಗಳಲ್ಲಿ ಆಸಕ್ತಿಯ ಅಭಾವ, ಮಮತೆಯಿಲ್ಲದಿರುವುದು ಹಾಗೂ ಪ್ರಿಯ ಮತ್ತು ಅಪ್ರಿಯಗಳ ಪ್ರಾಪ್ತಿಯಲ್ಲಿ ಸದಾಕಾಲವೂ ಚಿತ್ತವು ಸಮನಾಗಿರುವುದು.

*ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ/*

*ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ//೧೦//*

ಪರಮೇಶ್ವರನಾದ ನನ್ನಲ್ಲಿ ಅನನ್ಯಯೋಗದ ಮೂಲಕ ಅವ್ಯಭಿಚಾರಿಯಾದ ಭಕ್ತಿ ಹಾಗೂ ಏಕಾಂತ ಮತ್ತು ಶುದ್ಧ ಪ್ರದೇಶದಲ್ಲಿ ವಾಸಿಸುವ ಸ್ವಭಾವ ಮತ್ತು ವಿಷಯಾಸಕ್ತರಾದ ಮನುಷ್ಯರುಗಳ ಸಮುದಾಯದಲ್ಲಿ ಪ್ರೇಮವಿಲ್ಲದಿರುವಿಕೆ _

***

 *ಆಧ್ಯಾತ್ಮಜ್ಞಾನನಿತ್ಯತ್ವಂ ತತ್ವ್ತ ಜ್ಞಾನಾರ್ಥದರ್ಶನಮ್/*

*ಏತಜ್ಞ್ಜಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ//೧೧//* ಆಧ್ಯಾತ್ಮ ಜ್ಞಾನದಲ್ಲಿ ನಿತ್ಯವಾದ ಸ್ಥಿತಿ ಮತ್ತು ತ್ತ್ವಜ್ಞಾನದ ಅರ್ಥರೂಪೀ ಪರಮಾತ್ಮನನ್ನೇ ನೋಡುವುದು _ ಇದೆಲ್ಲವೂ ಜ್ಞಾನವಾಗಿದೆ ಮತ್ತು ಯಾವುದು ಇದಕ್ಕಿಂತ ವಿಪರೀತವಾಗಿದಯೋ ಅದು ಅಜ್ಞಾನವಾಗಿದೆ ಎಂದು ಹೇಳಿದೆ.

*ಜ್ಞೇಯಂ ಯತ್ತ್ವತ್ಪ್ರವಕ್ಷ್ಯಾಮಿ ಯಜ್ಞ್ಜಾತ್ವಾಮೃತಮಶ್ನುತೇ/*

*ಅನಾದಿಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ//೧೨//*

ಯಾವುದು ತಿಳಿಯಲು ಯೋಗ್ಯವಾಗಿದೆಯೋ ಹಾಗೂ ಯಾವುದನ್ನು ತಿಳಿದು ಮನುಷ್ಯನು ಪರಮಾನಂದವನ್ನು ಪಡೆಯುತ್ತಾನೋ ಅದನ್ನು ಚೆನ್ನಾಗಿ ಹೇಳುವೆನು.ಆ ಅನಾದಿಯಾಗಿರುವ ಪರಮಬ್ರಹ್ಮನು ಸತ್ತೆಂದಾಗಲೀ _ ಅಸತ್ತಂದಾಗಲೀ ಹೇಳಲಾಗುವುದಿಲ್ಲ.

***

 *ಸರ್ವತ:ಪಾಣಿಪಾದಂ ತತ್ಸರ್ವತೋಕ್ಷಿಶಿರೋಮುಖಮ್/* *ಸರ್ವತ:ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ//೧೩//*

ಅದು ಎಲ್ಲಾ ಕಡೆ ಕೈ ಮತ್ತು ಕಾಲುಗಳುಳ್ಳದ್ದೂ,ಎಲ್ಲಾ ಕಡೆ ಕಣ್ಣು ತಲೆ ಮತ್ತು ಮುಖಗಳುಳ್ಳದ್ದು ಹಾಗೂ ಎಲ್ಲಾ ಕಡೆ ಕಿವಿಗಳುಳ್ಳದ್ದೂ ಆಗಿದೆ.ಏಕೆಂದರೆ ಅದು ಜಗತ್ತಿನಲ್ಲಿ ಎಲ್ಲವನ್ನೂ ವ್ಯಾಪಿಸಿಕೊಂಡು ಸ್ಥಿತವಾಗಿದೆ.

*ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್/*

*ಆಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ//೧೪//*

ಅವನು ಸಂಪೂರ್ಣ ಇಂದ್ರಿಯಗಳ ವಿಷಯಗಳನ್ನು ಬಲ್ಲವನಾಗಿದ್ದಾನೆ.ಆದರೆ ವಾಸ್ತವವಾಗಿ ಎಲ್ಲಾ ಇಂದ್ರಿಯಗಳಿಂದ ರಹಿತನಾಗಿದ್ದಾನೆ ಹಾಗೆಯೇ ಆಸಕ್ತಿರಹಿತನಾದರೂ ಸಹ ಎಲ್ಲವನ್ನೂ ಧರಿಸಿ ಪೋಷಿಸುವವನು ಮತ್ತು ನಿರ್ಗುಣನಾಗಿದ್ದರೂ ಗುಣಗಳ ಭೋಕ್ತೃವಾಗಿದ್ದಾನೆ.

***

*ಬಹಿರಂತಶ್ಚ  ಭೂತಾನಾಮಚರಂ ಚರಮೇವ ಚ/*

*ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್//೧೫//*

ಅವನು ಎಲ್ಲಾ ಚರಾಚರ ಪ್ರಾಣಿಗಳ ಹೊರಗೊಳಗೆ ಪರಿಪೂರ್ಣನಾಗಿದ್ದಾನೆ ಮತ್ತು ಚರಾಚರರೂಪಿಯೂ ಸಹ ಅವನೇ ಆಗಿದ್ದಾನೆ ಮತ್ತು ಅವನು ಸೂಕ್ಷ್ಮನಾಗಿರುವುದರಿಂದ ಅವಿಜ್ಞೇಯನಾಗಿದ್ದಾನೆ ಹಾಗೂ ಅತಿ ಸಮೀಪದಲ್ಲಿ ಮತ್ತು ದೂರದಲ್ಲಿಯೂ ಇರುವವನು ಅವನೇ ಆಗಿದ್ದಾನೆ.

*ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್/*

*ಭೂತಭರ್ತೃ ಚ ತಜ್ಜ್ಞೇಯಂ ಗ್ರಸಿಷ್ಣುಪ್ರಭವಿಷ್ಣುಚ//೧೬//*

     ಆ ಪರಮಾತ್ಮನು ವಿಭಾಗರಹಿತನಾಗಿ,ಏಕರೂಪದಿಂದ ಆಕಾಶದಂತೆ ಪರಿಪೂರ್ಣನಾದರೂ ಕೂಡ,ಚರಾಚರ ಸಮಸ್ತ ಪ್ರಾಣಿಗಳಲ್ಲಿ ವಿಭಕ್ತನಾದಂತೆ ಸ್ಥಿತನಾಗಿ ತೋರುತ್ತಾನೆ ಹಾಗೂ ಆ ತಿಳಿಯಲು ಯೋಗ್ಯನಾದ ಪರಮಾತ್ಮನು ವಿಷ್ಣುರೂಪದಿಂದ ಪ್ರಾಣಿಗಳನ್ನು ಧಾರಣೆ ಪೋಷಣೆ ಮಾಡುವವನು,ಪೋಷಿಸುವವನು ಮತ್ತು ರುದ್ರರೂಪದಿಂದ ಸಂಹಾರ ಮಾಡುವವನೂ ಹಾಗೂ ಬ್ರಹ್ಮನ ರೂಪದಿಂದ ಎಲ್ಲರನ್ನು ಸೃಷ್ಠಿ ಮಾಡುವವನೂ ಆಗಿದ್ದಾನೆ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ