ಗೀತಾಮೃತ - 52

*ಅಧ್ಯಾಯ ೧೩*
*ಅನ್ಯೇ ತ್ವೇವಮಜಾನಂತ: ಶ್ರುತ್ವಾನ್ಯೇಭ್ಯ ಉಪಾಸತೇ/*
*ತೇಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾ://೨೫//*
ಆದರೆ ಇವರಿಗಿಂತ ಬೇರೆಯಾದ ಅರ್ಥಾತ್ ಯಾರು ಮಂದಬುದ್ಧಿಯುಳ್ಳ ಪುರುಷರಿದ್ದಾರೋ ಅವರು ಈ ಪ್ರಕಾರವಾಗಿ ತಿಳಿಯದವರಾಗಿ,ಇತರರಿಂದ ಅರ್ಥಾತ್ ತತ್ವವನ್ನು ಅರಿತಿರುವ ಪುರುಷರಿಂದ ಕೇಳಿಯೇ ಅದರಂತೆ ಉಪಾಸನೆ ಮಾಡುತ್ತಾರೆ,ಮತ್ತು ಆ ಶ್ರವಣ ಪರಾಯಣರಾದ ಪುರುಷರು ಸಹ ಮೃತ್ಯುರೂಪವಾದ ಸಂಸಾರ ಸಾಗರವನ್ನು ನಿ:ಸ್ಸಂದೇಹವಾಗಿ ದಾಟುತ್ತಾರೆ.
*ಯಾವತ್ಸಾಂಜಯತೇ ಕಿಂಚಿತ್ಸತ್ತ್ವಂ ಸ್ಥಾವರಜಂಗಮಮ್/*
*ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ತದ್ವಿದ್ಧಿ ಭರತರ್ಷಭ//೨೬//*
ಹೇ ಅರ್ಜುನಾ! ಸ್ಥಾವರ ಜಂಗಮ ಎಷ್ಟು ಪ್ರಾಣಿಗಳು ಹುಟ್ಟುತ್ತವೆಯೋ ಅವೆಲ್ಲವನ್ನು ನೀನು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದಲೇ ಅರ್ಥಾತ್ ಜಡ ಚೇತನದ ಸಂಯೋಗದಿಂದಲೆ ಹುಟ್ಟಿದವುಗಳೆಂದು ತಿಳಿ.
***
*ಸಮಂ ಸರ್ವೇಷು ಭೂತೇಷು ತಿಷ್ಮಂತಂ ಪರಮೇಶ್ವಮ್/*
*ವಿನಶ್ಯತ್ಸ್ವವಿನಶ್ಯಂತಂ ಯ: ಪಶ್ಯತಿ ಸ ಪಶ್ಯತಿ//೨೭//*
ಯಾವ ಪುರುಷನು ನಾಶವಾಗುತ್ತಿರುವ ಎಲ್ಲ ಚರಾಚರ ಪ್ರಾಣಿಗಳಲ್ಲಿ ಪರಮೇಶ್ವರನನ್ನು ನಾಶರಹಿನಾಗಿ ಮತ್ತು ಸಮಭಾವದಿಂದ,ಸ್ಥಿತನಾಗಿ ನೋಡುತ್ತಾನೋ ಅವನೇ ಯಥಾರ್ಥವಾಗಿ ನೋಡುತ್ತಾನೆ.
*ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್/*
*ನ ಹಿನಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಮ್//೨೮//*
ಏಕೆಂದರೆ ಯಾವ ಪುರುಷನು ಎಲ್ಲರಲ್ಲಿ ಸಮಭಾವದಿಂದ ಸ್ಥಿತನಾಗಿರುವ ಪರಮೇಶ್ವರನನ್ನು ಸಮಾನವಾಗಿ ನೋಡುತ್ತಾ ತನ್ನ ಮೂಲಕ ತನ್ನನ್ನು ನಾಶಗೊಳಿಸುವುವುದಿಲ್ಲವೋ ಅವನು ಇದರಿಂದ ಪರಮಗತಿಯನ್ನು ಪಡೆಯುತ್ತಾನೆ.
***
*ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶ:/*
*ಯ: ಪಶ್ಯತಿ ತಥಾತ್ಮಾನಮಕರ್ತಾರಂ ಸ ಪಶ್ಯತಿ//೨೯//*
ಮತ್ತು ಯಾವ ಪುರುಷನು ಸಂಪೂರ್ಣ ಕರ್ಮಗಳನ್ನು ಎಲ್ಲಾ ಪ್ರಕಾರದಿಂದ ಪ್ರಕೃತಿಯ ಮೂಲಕವೇ ಮಾಡಲ್ಪಡುತ್ತವೆ ಎಂದು ನೋಡುತ್ತಾನೋ ಮತ್ತು ಆತ್ಮನನ್ನು ಅಕರ್ತನೆಂದು ನೋಡುತ್ತಾನೋ ಅವನೇ ಯಥಾರ್ಥವಾಗಿ ನೋಡುಔನಾಗಿದ್ದಾನೆ.
*ಯದಾ ಭೂತಪೃಥಗ್ಭಾವಮೇಕಸ್ಥಮನುಪಶ್ಯತಿ/*
*ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ//೩೦//*
ಯಾವ ಕ್ಷಣದಲ್ಲಿ ಈ ಪುರುಷನು ಪ್ರಾಣಿಗಳ ಬೇರೆ ಬೇರೆ ಭಾವಗಳನ್ನು ಒಬ್ಬ ಪರಮಾತ್ಮನಲ್ಲೇ ಸ್ಥಿತನಿರುವುದಾಗಿ ಹಾಗೂ ಆ ಪರಮಾತ್ಮನಿಂದಲೇ ಸಮಸ್ತ ಭೂತಗಳ ವಿಸ್ತಾರವನ್ನು ನೋಡುತ್ತಾನೋ ಅದೇ ಕ್ಷಣ ಅವನು ಸಚ್ಚಿದಾನಂದಘನ ಬ್ರಹ್ಮನನ್ನು ಪಡೆಯುತ್ತಾನೆ.
***
*ಅನಾದಿತ್ವಾನ್ನಿರ್ಗುಣತ್ವಾತ್ಪರಮಾತ್ಮಾಯಮವ್ಯಯ:/*
*ಶರೀರಸ್ಥೋಪಿ ಕೌಂತೇಯ ನ ಕರೋತಿ ನ ಲಿಪ್ಯತೇ//೩೧//*
ಹೇ ಅರ್ಜುನಾ! ಅನಾದಿಯಾದ್ದರಿಂದ ಮತ್ತು ನಿರ್ಗುಣ ನಾದ್ದರಿಂದ ಈ ಅವಿನಾಶಿಯಾದ ಪರಮಾತ್ಮನು ಶರೀರದಲ್ಲಿ ಸ್ಥಿತನಾಗಿದ್ದರೂ ಕೂಡ ,ವಾಸ್ತವದಲ್ಲಿ ಏನೂ ಮಾಡುವುದಿಲ್ಲ ಮತ್ತು ಲಿಪ್ತನಾಗುವುದೂ ಇಲ್ಲ.
*ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ/*
*ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾನೋಪಲಿಪ್ಯತೇ//೩೨//*
ಹೇಗೆ ಸರ್ವತ್ರ ವ್ಯಾಪಿಸಿರುವ ಆಕಾಶವು ಸೂಕ್ಷಗಮವಾಗಿರುವ ಕಾರಣ ಲಿಪ್ತವಾಗುವುದಿಲ್ಲವೋ ಹಾಗೆಯೇ ದೇಹದಲ್ಲಿ ಸರ್ವತ್ರ ಸ್ಥಿತನಾಗಿರುವ ಆತ್ಮನು ನಿರ್ಗುಣನಾದ ಕಾರಣ ದೇಹದ ಗುಣಗಳಿಂದ ಲಿಪ್ತನಾಗುವುದಿಲ್ಲ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ