ಗೀತಾಮೃತ - 54
*ಅಧ್ಯಾಯ ೧೪*
*ಸತ್ವ್ತಂ ಸುಖೇ ಸಂಜಯತಿ ರಜ: ಕರ್ಮಣಿ ಭಾರತ/*
*ಜ್ಞಾನಮಾವೃತ್ಯ ತು ತಮ: ಪ್ರಮಾದೇ ಸಂಜಯತ್ಯುತ//೯//*
ಹೇ ಅರ್ಜುನಾ! ಸತ್ವಗುಣವು ಸುಖದಲ್ಲಿ ತೊಡಗಿಸುತ್ತದೆ ಮತ್ತು ರಜೋಗುಣವು ಕರ್ಮದಲ್ಲಿ ಹಾಗೂ ತಮೋಗುಣವಾದರೂ ಜ್ಞಾನವನ್ನು ಮುಚ್ಚಿಹಾಕಿ ಪ್ರಮಾದ ದಲ್ಲಿಯೂ ತೊಡಗಿಸುತ್ತದೆ.
*ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ /*
*ರಜ: ಸತ್ತ್ವಂ ತಮಶ್ಚೈವ ತಮ: ಸತ್ತ್ವಂ ರಜಸ್ತಥಾ//೧೦//*
ಹೇ ಅರ್ಜುನಾ! ರಜೋಗುಣ ಮತ್ತು ತಮೋಗುಣಗಳನ್ನು ಅದುಮಿಕೊಂಡು ಸತ್ವಗುಣವು ವೃದ್ಧಿಸುತ್ತದೆ, ಸತ್ವಗುಣ ಮತ್ತು ತಮೋಗುಣಗಳನ್ನು ಅದುಮಿಕೊಂಡು ರಜೋಗುಣವು ವೃದ್ಧಿಸುತ್ತದೆ,ಅಂತೆಯೇ ಸತ್ವಗುಣ ಮತ್ತು ರಜೋಗುಣಗಳನ್ನು ಅದುಮಿಕೊಂಡು ತಮೋಗುಣವು ವೃದ್ಧಿಸುತ್ತದೆ.
***
*ಸರ್ವದ್ವಾರೇಷು ದೇಹೇಸ್ಮಿನ್ಪ್ರಕಾಶ ಉಪಜಾಯತೇ/*
*ಜ್ಞಾನಂ ಯದಾ ತದಾ ವಿದ್ಯಾದ್ವಿವೃದ್ಧಂ ಸತ್ತ್ವಮಿತ್ಯುತ//೧೧//*
ಯಾವಾಗ ಈ ದೇಹದಲ್ಲಿ ಹಾಗೂ ಅಂತ:ಕರಣ ಮತ್ತು ಇಂದ್ರಿಯಗಳಲ್ಲಿ ಚೈತನ್ಯವು ಮತ್ತು ವಿವೇಕಶಕ್ತಿಯು ಉಂಟಾಗುತ್ತದೋ ಆಗ ಸತ್ವಗುಣವೇ ವೃದ್ಧಿಸಿದೆಯೆಂದು ತಿಳಿಯಬೇಕು.
*ಲೋಭ: ಪ್ರವೃತ್ತಿರಾರಂಭ: ಕರ್ಮಣಾಮಶಮ: ಸ್ಪೃಹಾ/*
*ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ//೧೨//*
ಹೇ ಅರ್ಜುನಾ! ರಜೋಗುಣವು ಹೆಚ್ಚಿದಾಗ ಲೋಭ,ಪ್ರವೃತ್ತಿ,ಸ್ವಾರ್ಥ ಬುದ್ಧಿಯ ಮೂಲಕ ಸಕಾಮ ಭಾವದಿಂದ ಕರ್ಮಗಳನ್ನು ಮಾಡುವುದು,ಅಶಾಂತಿ ಮತ್ತು ವಿಷಯ ಭೋಗಗಳ ಲಾಲಸೆ _ ಇವೆಲ್ಲವೂ ಉಂಟಾಗುತ್ತವೆ.
***
*ಅಪ್ರಕಾಶೋ ಪ್ರವೃತ್ತಿ ಶ್ಚ ಪ್ರಮಾದೋ ಮೋಹ ಏವಚ/*
*ತಮಸ್ಯೇತಾನಿ ಜಾಯಂತೇ ವಿವೃದ್ದೇ ಕುರುನಂದನ//೧೩//*
ಹೇ ಅರ್ಜುನಾ! ತಮೋಗುಣವು ಹೆಚ್ಚಿದಾಗ ಅಂತ:ಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ ,ಅಂದರೆ ಚೈತನ್ಯ ಶಕ್ತಿಯ ಅಭಾವ,ಕರ್ತವ್ಯ _ ಕರ್ಮಗಳಲ್ಲಿ ಅಪ್ರವೃತ್ತಿ ಮತ್ತು ಪ್ರಮಾದ ಅರ್ಥಾತ್ ವ್ಯರ್ಥ ಚೇಷ್ಟೆಗಳು ಹಾಗೂ ನಿದ್ರೆಯೇ ಮೊದಲಾದ ಅಂತ:ಕರಣದ ಮೋಹಿನೀವೃತ್ತಿಗಳು _ ಇವೆಲ್ಲವೂ ಉಂಟಾಗುತ್ತವೆ.
*ಯದಾ ಸತ್ತ್ವೇ ಪ್ರವೃದ್ದೇ ತು ಪ್ರಲಯಂ ಯಾತಿ ದೇಹಭೃತ್/*
*ತದೋತ್ತಮವಿದಾಂ ಲೋಕಾನಮಲಾನ್ಪ್ರತಿಪದ್ಯತೇ//೧೪//*
ಯಾವಾಗ ಈ ಮನುಷ್ಯನು ಸತ್ವಗುಣದ ವೃದ್ಧಿಯಲ್ಲಿ ಮೃತ್ಯುವನ್ನು ಪಡೆಯುತ್ತಾನೋ ಆಗಲಾದರೋ ಉತ್ತಮ ಕರ್ಮ ಮಾಡುವವರ ನಿರ್ಮಲವಾದ ದಿವ್ಯವಾದ,ಸ್ವರ್ಗಾದಿ ಲೋಕಗಳನ್ನು ಪಡೆಯುತ್ತಾನೆ.
***
*ರಜಸಿ ಪ್ರಲಯಂ ಗತ್ವಾ ಕರ್ಮ ಸಂಗಿಷು ಜಾಯತೇ/*
*ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ//೧೫//*
ರಜೋಗುಣವು ವೃದ್ಧಿಯಾದಾಗ ಮೃತ್ಯುವನ್ನು ಪಡೆದುಕೊಂಡು ಕರ್ಮಗಳಲ್ಲಿ ಆಸಕ್ತಿಯುಳ್ಳ ಮನುಷ್ಯರಲ್ಲಿ ಜನಿಸುತ್ತಾನೆ; ಹಾಗೂ ತಮೋಗುಣವು ಹೆಚ್ಚಾದಾಗ ಸತ್ತ ಮನುಷ್ಯನು ಕೀಟ,ಪಶು ಮೊದಲಾದ ಮೂಢಯೋನಿಗಳಲ್ಲಿ ಹುಟ್ಟುತ್ತಾನೆ.
*ಕರ್ಮಣ: ಸುಕೃತಸ್ಯಾಹು: ಸಾತ್ತ್ವಿಕಂ ನಿರ್ಮಲಂ ಫಲಮ್*/*
*ರಜಸಸ್ತು ಫಲಂ ದು:ಖಮಜ್ಞಾನಂ ತಮಸ: ಫಲಮ್/*
ಶ್ರೇಷ್ಠ ವಾದ ಕರ್ಮದ ಫಲವು ಸಾತ್ವಿಕ ಅರ್ಥಾತ್ ಸುಖ,ಜ್ಞಾನ ಮತ್ತು ವೈರಾಗ್ಯವೇ ಮುಂತಾದ ನಿರ್ಮಲವಾದುದೆಂದೂ,ಆದರೆ ರಾಜಸ ಕರ್ಮದ ಫಲವು ದು:ಖವೆಂದೂ, ಹಾಗಯೇ ತಾಮಸ ಕರ್ಮಗಳ ಫಲವು ಅಜ್ಞಾನವೆಂದೂ ಹೇಳುತ್ತಾರೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ