ಗೀತಾಮೃತ - 55

ಗೀತಾಮೃತ - 55

*ಅಧ್ಯಾಯ ೧೪*

     *ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ/*

*ಪ್ರಮಾದಮೋಹೌ ತಮಸೋ ಭವತೋ ಜ್ಞಾನಮೇವ ಚ//೧೭//*

     ಸತ್ವ ಗುಣದಿಂದ ಜ್ಞಾನವು ಉಂಟಾಗುತ್ತದೆ ಮತ್ತು ರಜೋಗುಣದಿಂದ ನಿಸ್ಸಂದೇಹವಾಗಿ ಲೋಭವು ಹಾಗೂ ತಮೋಗುಣದಿಂದ ಪ್ರಮಾದ,ಮೋಹಗಳು ಮತ್ತು ಅಜ್ಞಾನವು ಕೂಡ ಉಂಟಾಗುತ್ತವೆ.

*ಊರ್ದ್ವಂ ಗಚ್ಛಂತಿ ಸತ್ವ್ತಸ್ಥಾ  ಮಧ್ಯೇ ತಿಷ್ಠಂತಿ ರಾಜಸಾ:/*

*ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾ://೧೮//*

ಸತ್ವಗುಣದಲ್ಲಿ ಸ್ಥಿತರಾದ ಪುರುಷರು ಸ್ವರ್ಗಾದಿ ಉಚ್ಛಲೋಕಗಳಿಗೆ ಹೋಗುತ್ತಾರೆ; ರಜೋಗುಣದಲ್ಲಿ ನೆಲೆಸಿರುವ ರಾಜಸ ಪುರುಷರು ಮಧ್ಯದಲ್ಲಿ ಅರ್ಥಾತ್ ಮನುಷ್ಯಲೋಕದಲ್ಲಿಯೇ ಇರುತ್ತಾರೆ ಮತ್ತು ತಮೋಗುಣದ ಕಾರ್ಯರೂಪೀ ನಿದ್ರೆ,ಪ್ರಮಾದ ಮತ್ತು ಆಲಸ್ಯಾದಿಗಳಲ್ಲಿ ನೆಲೆನಿಂತ ತಾಮಸ ಪುರುಷರು ಅಧೋಗತಿಗೆ ಅರ್ಥಾತ್ ಕೀಟ,ಪಶು ಮೊದಲಾದ ನೀಚಯೋನಿಗಳನ್ನು ಹಾಗೂ ನರಕಗಳನ್ನು ಪಡೆಯುತ್ತಾರೆ.

***

*ನಾನ್ಯಂ ಗುಣೇಭ್ಯ: ಕರ್ತಾರಂ ಯದಾ ದ್ರಷ್ಟಾನುಪಶ್ಯತಿ/*

*ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ  ಸೋಧಿಗಚ್ಛತಿ//೧೯//*

ಯಾವ ಸಮಯದಲ್ಲಿ ದ್ರಷ್ಟಾ ಅರ್ಥಾತ್  ಸಮಷ್ಟಿ ಚೇತನದಲ್ಲಿ ಏಕೀಭಾವದಿಂದ ಸ್ಥಿತನಾದ ಸಾಕ್ಷಿಪುರುಷನು ಮೂರೂ ಗುಣಗಳನ್ನಲ್ಲದೆ ಬೇರೆ ಯಾರನ್ನೂ ಕರ್ತನೆಂದು ನೋಡುವುದಿಲ್ಲವೋ ಮತ್ತು ಮೂರೂ ಗುಣಗಳಿಗಿಂತ ಅತ್ಯಂತ ಶ್ರೇಷ್ಠ ನಾದ ಸಚ್ಚಿದಾನಂದಘನಸ್ವರೂಪೀ ಪರಮಾತ್ಮನಾದ ನನ್ನನ್ನು ತತ್ತ್ವದಿಂದ ತಿಳಿಯುತ್ತಾನೋ ಆ ಸಮಯವೇ ಅವನಿಗೆ ನನ್ನ ಸ್ವರೂಪದ ಪ್ರಾಪ್ತಿಯಾಗುತ್ತದೆ.

*ಗುಣನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್/*

*ಜನ್ಮಮೃತ್ಯುಜರಾದು:ಖೈರ್ವಿಮುಕ್ತೋಮೃತಮಶ್ನುತೇ//೨೦//*

ಈ ಪುರುಷನು ಶರೀರದ ಉತ್ಪತ್ತಿಗೆ ಕಾರಣರೂಪವಾದ ಈ ಮೂರೂ ಗುಣಗಳನ್ನು ದಾಟಿಕೊಂಡು ಜನ್ಮ,ಮೃತ್ಯು,ವೃದ್ಧಾವಸ್ಥೆ ಮತ್ತು ಎಲ್ಲ ಪ್ರಕಾರದ ದು:ಖಗಳಿಂದ ಮುಕ್ತನಾಗಿ ಪರಮಾನಂದ ವನ್ನು ಪಡೆಯುತ್ತಾನೆ.

***

*ಅರ್ಜುನ ಉವಾಚ*

*ಕೈರ್ಲಿಂಗೈಸ್ರ್ತೀನ್  ಗುಣಾನೇತಾನತೀತೋ ಭವತಿ ಪ್ರಭೋ/*

*ಕಿಮಾಚಾರ: ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ//೨೧//*

ಅರ್ಜುನನು ಹೇಳಿದನು _ ಈ ಮೂರೂ ಗುಣಗಳಿಂದ ಅತೀತನಾದ ಪುರುಷನು ಯಾವ ಯಾವ ಲಕ್ಷಣಗಳಿಂದ ಯುಕ್ತನಾಗಿರುತ್ತಾನೆ ಮತ್ತು ಯಾವ ಪ್ರಕಾರದ ಆಚರಣೆಯುಳ್ಳವನಾಗುತ್ತಾನೆ; ಹಾಗೂ ಹೇ ಪ್ರಭುವೇ! ಮನುಷ್ಯನು ಯಾವ ಉಪಾಯದಿಂದ ಈ ಮೂರೂ ಗುಣಗಳನ್ನು ದಾಟಿ ಹೋಗುತ್ತಾನೆ.

    *ಶ್ರೀ ಭಗವಾನುವಾಚ*

*ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ/*

*ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ//೨೨//*

ಶ್ರೀ ಭಗವಂತನು ಹೇಳದನು _ ಹೇ ಅರ್ಜುನಾ! ಯಾವ ಪುರುಷನು ಸತ್ವಗುಣದ ಕಾರ್ಯರೂಪೀ ಪ್ರಕಾಶವನ್ನುಮತ್ತು ರಜೋಗುಣದ ಕಾರ್ಯರೂಪೀ ಪ್ರವೃತ್ತಿಯನ್ನು ಹಾಗೂ ತಮೋಗುಣದ ಕಾರ್ಯರೂಪೀ ಮೋಹವನ್ನು ಯಾವುದೇ ಆಗಿರಲಿ ಅದರಲ್ಲಿ ಪ್ರವೃತ್ತನಾದ ಮೇಲೆ ಅವುಗಳನ್ನು ದ್ವೇಷಿಸುವುದಿಲ್ಲ ಮತ್ತು ನಿವೃತ್ತನಾದ ಮೇಲೆ ಅವುಗಳನ್ನು ಬಯಸುವುದಿಲ್ಲ.

***

*ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ/*

*ಗುಣಾ ವರ್ತಂತ ಇತ್ಯೇವ ಯೋವತಿಷ್ಠತಿ ನೇಂಗತೇ//೨೩//*

      ಹಾಗೂ ಯಾರು ಸಾಕ್ಷಿಯಂತೆ ಸ್ಥಿತನಾಗಿದ್ದುಕೊಂಡು ಗುಣಗಳ ಮೂಲಕ ವಿಚಲಿತಗೊಳಿಸಲಾಗುವುದಿಲ್ಲವೋ ಮತ್ತು ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆಯೆಂದು ತಿಳಿಯುತ್ತ ಯಾರು ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಏಕೀಭಾವದಿಂದ ಸ್ಥಿತನಾಗಿದ್ದಾನೋ ಮತ್ತು ಆ ಸ್ಥಿತಿಯಿಂದ ಯಾವಾಗಲೂ ವಿಚಲಿತನಾಗುವುದಿಲ್ಲವೋ _

*ಸಮದು:ಖಸುಖ: ಸ್ವಸ್ಥ ಸಮಲೋಷ್ಟಾಶ್ಮ ಕಾಂಚನ:/*

*ತುಲ್ಯಪ್ರಿಯಾ ಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿ://೨೪//*

ಯಾರು ನಿರಂತರ ಆತ್ಮಭಾವದಲ್ಲಿ ಸ್ಥಿತನಾಗಿದ್ದಾನೋ ಸುಖದು:ಖಗಳನ್ನು ಸಮಾನವೆಂದು ತಿಳಿಯುತ್ತಾನೋ,ಮಣ್ಣು ಕಲ್ಲು ಮತ್ತು ಚಿನ್ನಗಳಲ್ಲಿ ಸಮಾನವಾದ ಭಾವವುಳ್ಳವನಾಗಿದ್ದಾನೋ,ಜ್ಞಾನಿಯಾಗಿದ್ದಾನೋ ಪ್ರಿಯ ಮತ್ತು ಅಪ್ರಿಯರನ್ನು ಒಂದೇ ಎಂದು ತಿಳಿಯುತ್ತಾನೋ ಮತ್ತು ನಿಂದಾಸ್ತುತಿಯಲ್ಲಿ ಕೂಡ ಸಮಭಾವವುಳ್ಳವ ನಾಗಿದ್ದಾನೋ _

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್