ಗೀತಾಮೃತ - 6
ಅಧ್ಯಾಯ ೨
ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನ:/
ರಸವರ್ಜಂ ರಸೋಪ್ಯಸ್ಯ ಪರಂ ದೃಷ್ಟ್ಯಾ ನಿವರ್ತತೇ//೫೯//
ಇಂದ್ರಿಯಗಳ ಮೂಲಕ ವಿಷಯಗಳನ್ನು ಗ್ರಹಿಸದಿರುವ ಪುರುಷನಲ್ಲಿ ಕೂಡ ಕೇವಲ ವಿಷಯಗಳಾದರೋ ನಿವೃತ್ತಿ ಯಾಗಿ ಬಿಡುತ್ತವೆ, ಆದರೆ ಈ ಸ್ಥಿತಪ್ರಜ್ಞ ಪುರುಷನ ಆಸಕ್ತಿಯು ಕೂಡ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡು ನಿವೃತ್ತಿ ಹೊಂದುತ್ತವೆ//೫೯//
ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತ: /
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನ://೬೦//
ಹೇ ಅರ್ಜುನನೇ ! ಆಸಕ್ತಿಯು ನಾಶವಾಗದಿರುವ ಕಾರಣ ಈ ಪ್ರಮಥನ ಸ್ವಭಾವವುಳ್ಳ ಇಂದ್ರಿಯಗಳು ಪ್ರಯತ್ನಿಸುತ್ತಿರುವ ಬುದ್ಧಿವಂತನಾದ ಪುರುಷನ ಮನಸ್ಸನ್ನು ಕೂಡ ಬಲವಂತನಾಗಿ ಅಪಹರಿಸಿಕೊಳ್ಳತ್ತವೆ//೬೦//
****
ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರ: /
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೬೧//
ಅದಕ್ಕಾಗಿ ಸಾಧಕನು ಆ ಸಂಪೂರ್ಣ ಇಂದ್ರಿಯಗಳನ್ನು ವಶಪಡಿಸಿಕೊಂಡು ,ಸಮಾಹಿತಚಿತ್ತನಾಗಿ ನನ್ನ ಪರಾಯಣನಾಗಿ,ಧ್ಯಾನದಲ್ಲಿ ಕುಳಿತುಕೊಳ್ಳಲಿ.ಏಕೆಂದರೆ,ಯಾವ ಪುರುಷನ ಇಂದ್ರಿಯಗಳು ವಶದಲ್ಲಿ ಇರುತ್ತವೆಯೋ ಅವನ ಬುದ್ಧಿಯು ಸ್ಥಿರವಾಗಿರುತ್ತದೆ.
ಧ್ಯಾಯತೋ ವಿಷಯಾನ್ ಪುಂಸ: ಸಂಗಸ್ತೇಷೂಪಜಾಯತೇ/
ಸಂಗಾತ್ಸಂಜಾಯತೇ ಕಾಮ: ಕಾಮಾತ್ಕ್ರೋಧೋ ಭಿಜಾಯತೇ//೬೨//
ವಿಷಯಗಳನ್ನು ಚಿಂತಿಸುವ ಪುರುಷನಿಗೆ,ಆ ವಿಷಯಗಳಲ್ಲಿ ಆಸಕ್ತಿಯುಂಟಾಗುತ್ತದೆ.ಆಸಕ್ತಿಯಿಂದಾಗಿ ಆ ವಿಷಯಗಳ ಕಾಮನೆ ಉಂಟಾಗುತ್ತದೆ ಮತ್ತು ಕಾಮನೆಯಲ್ಲಿ ವಿಘ್ನವುಂಟಾಗುವುದರಿಂದ ಕ್ರೋಧವು ಉತ್ಪನ್ನವಾಗುತ್ತದೆ.
****
ಕ್ರೋಧಾದ್ಭವತಿ ಸಮ್ಮೋಹಂ ಸಮ್ಮೋಹಾತ್ಸ್ಮೃತಿವಿಭ್ರಮ: / ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ರ್ಪಣಶ್ಯತಿ//೬೩//
ಕ್ರೋಧದಿಂದ ಅತ್ಯಂತ ಮೂಢಭಾವವು ಉಂಟಾಗುತ್ತದೆ, ಮೂಢಭಾವದಿಂದ ಸ್ಮೃತಿಯಲ್ಲಿ ಭ್ರಮೆಯುಂಟಾಗುತ್ತದೆ, ಸ್ಮೃತಿ ಯಲ್ಲಿ ಭ್ರಮೆಯುಂಟಾಗುವುದರಿಂದ ಬುದ್ಧಿ ಅರ್ಥಾತ್ ಜ್ಞಾನಶಕ್ತಿಯು ನಾಶವಾಗಿ ಹೋಗುತ್ತದೆ ಮತ್ತು ಬುದ್ಧಿನಾಶವಾಗುವುದರಿಂದ ಈ ಪುರುಷನು ತನ್ನ ಸ್ಥಿತಿಯಿಂದ ಜಾರಿ ಬೀಳುತ್ತಾನೆ.
ರಾಗಧ್ವೇಷವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್/
ಆತ್ಮವಶ್ಯೈರ್ವಿಧೇಯತ್ಮಾ ಪ್ರಸಾದಮಧಿಗಚ್ಛತಿ//೬೪//
ಆದರೆ, ಅಂತ:ಕರಣವನ್ನು ತನ್ನ ಅಧೀನವಾಗಿ ಮಾಡಿಕೊಂಡಿರುವ , ರಾಗ _ ದ್ವೇಷರಹಿತವಾದ ಇಂದ್ರಿಯಗಳ ಮೂಲಕ ವಿಷಯಗಳಲ್ಲಿ ವಿಹರಿಸುತ್ತ ಅಂತ:ಕರಣದ ಪ್ರಸನ್ನತೆಯನ್ನು ಪಡೆಯುತ್ತಾನೆ.
*****
ಪ್ರಸಾದೇ ಸರ್ವ ದು:ಖಾನಾಂ ಹಾನಿರಸ್ಯೋಪಜಾಯತೇ/
ಪ್ರಸನ್ನಚೇತಸೋ ಹ್ಯಾಶು ಬುದ್ಧಿ: ಪರ್ಯವತಿಷ್ಟತೇ//೬೫//
ಅಂತ:ಕರಣದಲ್ಲಿ ಆಧ್ಯಾತ್ಮಿಕ ಪ್ರಸನ್ನತೆ ಉಂಟಾದ ಮೇಲೆ ಇವನ ಸಂಪೂರ್ಣ ದು:ಖಗಳ ಅಭಾವವು ಉಂಟಾಗುತ್ತದೆ ಮತ್ತು ಆ ಪ್ರಸನ್ನಚಿತ್ತನಾದ ಕರ್ಮಯೋಗಿಯ ಬುದ್ಧಿಯು ಶೀಘ್ರವೇ ಎಲ್ಲ ಕಡೆಯಿಂದ ಹಿಮ್ಮೆಟ್ಟಿ ಓರ್ವ ಪರಮಾತ್ಮನಲ್ಲಿಯೇ ಚೆನ್ನಾಗಿ ಸ್ಥಿರ ವಾಗುತ್ತದೆ.
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ/
ನ ಚಾಭಾವಯತ: ಶಾಂತಿರಶಾಂತಸ್ಯ ಕುತ: ಸುಖಮ್//೬೬//
ಮನಸ್ಸು ಮತ್ತು ಇಂದ್ರಿಯಗಳನ್ನು ಗೆಲ್ಲದಿರುವ ಪುರುಷನಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಇರವುದಿಲ್ಲ ಮತ್ತು ಆ ಅಯುಕ್ತ ಮನುಷ್ಯನ ಅಂತ:ಕರಣದಲ್ಲಿ ಭಾವನೆಯೂ ಇರುವುದಿಲ್ಲ.ಹಾಗೆಯೇ ಭಾವನಾಹೀನನಾದ ಮನುಷ್ಯನಿಗೆ ಶಾಂತಿಯು ಸಿಗುವುದಿಲ್ಲ ಮತ್ತು ಶಾಂತಿರಹಿತನಾದ ಮನುಷ್ಯನಿಗೆ ಸುಖವು ಹೇಗೆ ಸಿಗಬಲ್ಲದು?
****
-(ಸಾರ ಸಂಗ್ರಹ) ವಿಜಯ ಶೆಟ್ಟಿ ಸಾಲೆತ್ತೂರು