ಗೀತಾಮೃತ - 62
ಅಧ್ಯಾಯ ೧೭
*ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯ:/*
*ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು//೭//*
ಭೋಜನವು ಕೂಡ ಎಲ್ಲರಿಗೂ ತಮ್ಮ ತಮ್ಮ ಪ್ರಕೃತಿಗೆ ಅನುಗುಣವಾಗಿ ಮೂರು ಪ್ರಕಾರವಾಗಿ ಪ್ರಿಯವಾಗಿರುತ್ತದೆ ಹಾಗೆಯೇ ಯಜ್ಞ,ತಪಸ್ಸು ಮತ್ತು ದಾನವೂ ಸಹ ಮೂರು ಮೂರು ಪ್ರಕಾರದಿಂದಿರುತ್ತವೆ.ಅವುಗಳ ಈ ಬೇರೆಬೇರೆಯಾದ ಭೇದವನ್ನು ನೀನು ನನ್ನಿಂದ ಕೇಳು.
*ಆಯು:ಸ್ಸತ್ತ್ವ ಬಲಾರೋಗ್ಯಸುಖಪ್ರೀತಿವಿವರ್ಧನಾ:/* *ರಸ್ಯಾ: ಸ್ನಿಗ್ಧಾ: ಸ್ಥಿರಾ ಹೃದ್ಯಾ ಆಹಾರಾ: ಸಾತ್ತ್ವಿಕಪ್ರಿಯಾ://೭//*
ಆಯಸ್ಸು, ಬುದ್ಧಿ,ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ಹೆಚ್ಚಿಸುವ, ರಸಯುಕ್ತ, ಸ್ನೇಹಯುಕ್ತ ಮತ್ತು ಸ್ಥಿರವಾಗಿರುವ ಹಾಗೂ ಸ್ವಭಾವದಿಂದಲೇ ಮನಸ್ಸಿಗೆ ಪ್ರಿಯವಾದಂತಹ ಆಹಾರ ಅರ್ಥಾತ್ ಭೋಜನ ಮಾಡುವ ಪದಾರ್ಥಗಳು,ಸಾತ್ವಿಕ ಪುರುಷನಿಗೆ ಪ್ರಿಯವಾಗಿರುತ್ತವೆ.
***
*ಕಟ್ ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನ:/*
*ಆಹಾರಾ ರಾಜಸಸ್ಯೇಷ್ಟಾ ದು:ಖಶೋಕಾಮಯಪ್ರದಾ://೯//* ಕಹಿಯಾದ,ಹುಳಿಯಾದ,ಹೆಚ್ಚು ಉಪ್ಪಿನಿಂದ ಕೂಡಿದ,ಹೆಚ್ಚು ಬಿಸಿ ಮತ್ತು ಖಾರವಾದ ,ಹುರಿದಿರುವ,ಉರಿಯನ್ನುಂಟುಮಾಡುವ ಮತ್ತು ದು:ಖ,ಚಿಂತೆ ಹಾಗೂ ರೋಗಗಳನ್ನುಂಟು ಮಾಡುವ ಆಹಾರ ಅರ್ಥಾತ್ ಭೊಜನ ಪದಾರ್ಥಗಳು ರಾಜಸ ಪುರುಷನಿಗೆ ಪ್ರಿಯವಾಗಿರುತ್ತವೆ.
*ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್/*
*ಉಚ್ಛಿಷ್ಟಮಪಿ ಚಾಮೇದ್ಯಂ ಭೋಜನಂ ತಾಮಸಪ್ರಿಯಮ್//೧೦//* ಯಾವ ಭೋಜನವು ಅರ್ಧಬೆಂದಿದೆಯೋ, ರಸರಹಿತವಾಗಿದೆಯೋ, ದುರ್ಗಂಧಯುಕ್ತವಾದುದೋ, ಹಳಸಿದೆಯೋ, ಎಂಜಲಾಗಿದೆಯೋ ಹಾಗೂ ಅಪವಿತ್ರವೂ ಕೂಡ ಆಗಿದೆಯೋ ಆ ಭೋಜನವು ತಾಮಸ ಪುರುಷನಿಗೆ ಪ್ರಿಯವಾಗಿರುತ್ತದೆ.
***
*ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ/*
*ಯಷ್ಟವ್ಯಮೇವೇತಿ ಮನ: ಸಮಾಧಾಯ ಸ ಸಾತ್ತ್ವಿಕ://೧೧//*
ಶಾಸ್ತ್ರವಿಧಿಯಿಂದ ನಿಯತವಾದ ಯಾವ ಯಜ್ಞವು ಮಾಡಲೇಬೇಕಾದ ಕರ್ತವ್ಯವಾಗಿದೆ _ ಈ ಪ್ರಕಾರವಾಗಿ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು ಫಲವನ್ನು ಬಯಸದ ಪುರುಷರ ಮೂಲಕ ಮಾಡಲ್ಪಡುತ್ತದೋ ಅದು ಸಾತ್ತ್ವಿಕವಾಗಿದೆ.
*ಅಭಿಸಂಧಾಯ ತ: ಫಲಂ ದಂಭಾರ್ಥಮಪಿ ಚೈವ ಯತ್/*
*ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್//೧೨//*
ಆದರೆ ಹೇ ಅರ್ಜುನಾ! ಕೇವಲ ದಂಭಾಚರಣೆಗಾಗಿಯೇ ಅಥವಾ ಫಲವನ್ನು ಕೂಡ ದೃಷ್ಟಿ ಯಲ್ಲಿಟ್ಟುಕೊಂಡು ಯಾವ ಯಜ್ಞವು ಮಾಡಲಾಗುತ್ತದೆಯೋ ಆ ಯಜ್ಞವನ್ನು ನೀನು ರಾಜಸವೆಂದು ತಿಳಿ.
***
*ವಿಧಿಹೀನಮಸೃಷ್ಟಾನ್ನಂ ಮಂತ್ರಹೀನಮದಕ್ಷಿಣಮ್/*
*ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ//೧೩//*
ಶಾಸ್ತ್ರವಿಧಿಯಿಲ್ಲದೇ,ಅನ್ನದಾನರಹಿತವಾದ,ಮಂತ್ರಗಳಿಲ್ಲದ,ದಕ್ಷಿಣೆಯಿಲ್ಲದ ಮತ್ತು ಶ್ರದ್ಧೆಯಿಲ್ಲದೆ ಮಾಡಲ್ಪಡುವ ಯಜ್ಞವನ್ನು ತಾಮಸ ಯಜ್ಞವೆಂದು ಹೇಳುತ್ತಾರೆ.
*ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್/*
*ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ//೧೪//*
ದೇವತೆಗಳ ,ಬ್ರಾಹ್ಮಣರ,ಗುರುಗಳ ಮತ್ತು ಜ್ಞಾನಿಜನರ ಪೂಜೆ,ಪವಿತ್ರತೆ, ಸರಳತೆ, ಬ್ರಹ್ಮಚರ್ಯೆ ಮತ್ತು ಅಹಿಂಸೆ _ ಇವು ಶರೀರ ಸಂಬಂಧವಾದ ತಪಸ್ಸು ಎಂದು ಹೇಳಲಾಗುತ್ತದೆ.
***
-ವಿಜಯಾ ಶೆಟ್ಟಿ, ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ