ಗೀತಾಮೃತ - 64

ಗೀತಾಮೃತ - 64

*ಅಧ್ಯಾಯ ೧೭*

      *ಓಂ ತತ್ಸದಿತಿ ನಿರ್ದೇಶೋ ಬ್ರಾಹ್ಮಣಸ್ತ್ರಿವಿಧ: ಸ್ಮೃತ:/*

*ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾ: ಪುರಾ //೨೩//*

        ಓಂ,ತತ್,ಸತ್ _ ಹೀಗೆ ಈ ಮೂರೂ ಪ್ರಕಾರದ ಹೆಸರುಗಳು ಓರ್ವ ಸಚ್ಚಿದಾನಂದಘನಬ್ರಹ್ಮನದ್ದೇ ಆಗಿವೆ. ಅವನಿಂದಲೇ ಸೃಷ್ಠಿ ಯ ಆದಿಕಾಲದಲ್ಲಿ ಬ್ರಾಹ್ಮಣರು ವೇದಗಳು ಹಾಗೂ ಯಜ್ಞಾದಿಗಳು ರಚಿಸಲ್ಪಟ್ಟವು.

*ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪ:ಕ್ರಿಯಾ:/*

*ಪ್ರವರ್ತಂತೇ ವಿಧಾನೋಕ್ತಾ: ಸತತಂ ಬ್ರಹ್ಮವಾದಿನಾಮ್//೨೪//*    ಆದ್ದರಿಂದ ವೇದಮಂತ್ರಗಳನ್ನು ಉಚ್ಚರಿಸುವ ಶ್ರೇಷ್ಠ ಪುರುಷರ ಶಾಸ್ತ್ರ ವಿಧಿಯಿಂದ ನಿಯತವಾದ ಯಜ್ಞ,ದಾನ ಮತ್ತು ತಪೋರೂಪವಾದ ಕ್ರಿಯೆಗಳು,ಸದಾ ಓಂ _ ಎಂಬ ಈ ಪರಮಾತ್ಮನ ಹೆಸರನ್ನು ಉಚ್ಛಾರಣೆ ಮಾಡಿಯೇ ಆರಂಭವಾಗುತ್ತವೆ.

***

 *ತದಿತ್ಯನಭಿಸಂಧಾಯ  ಫಲಂ ಯಜ್ಞತಪ: ಕ್ರಿಯಾ:/*

*ದಾನಕ್ರಿಯಾಶ್ಚವಿವಿಧಾ:ಯಂತೇ ಮೋಕ್ಷಕಾಂಕ್ಷಿಭಿ://೨೫//*

ತತ್ ಅರ್ಥಾತ್ 'ತತ್' ಎಂಬ ಹೆಸರಿನಿಂದ ಹೇಳಲಾಗುವ ಪರಮಾತ್ಮನದ್ದೇ ಇದೆಲ್ಲವೂ ಆಗಿದೆ _  ಎಂಬ ಈ ಭಾವದಿಂದ ಫಲವನ್ನು ಬಯಸದೆ ನಾನಾಪ್ರಕಾರದ ಯಜ್ಞ  ತಪೋರೂಪೀ ಕ್ರಿಯೆಗಳು ಹಾಗೂ ದಾನರೂಪೀ ಕ್ರಿಯೆಗಳು ಶ್ರೇಯಸ್ಸಿನ ಇಚ್ಛೆಯುಳ್ಳ ಪುರುಷರ ಮೂಲಕ ಮಾಡಲ್ಪಡುತ್ತವೆ.

*ಸದ್ಭಾವೇ ಸಾಧುಭಾವೇ ಚ ಸದಿತ್ಯೇತತ್ಪ್ರಯುಜ್ಯತೇ/*

*ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ಧ: ಪಾರ್ಥ ಯುಜ್ಯತೇ//೨೬//*     'ಸತ್' ಎಂಬುದು ಪರಮಾತ್ಮನ ಹೆಸರು ಸತ್ಯಭಾವದಲ್ಲಿ ಮತ್ತು ಶ್ರೇಷ್ಠ ಭಾವದಲ್ಲಿ ಪ್ರಯೋಗಿಸಲ್ಪಡುತ್ತದೆ ಹಾಗೂ ಹೇ ಪಾರ್ಥನೇ! ಉತ್ತಮವಾದ ಕರ್ಮದಲ್ಲಿಯೂ ಸಹ 'ಸತ್' ಶಬ್ಧದ ಪ್ರಯೋಗ ಮಾಡಲಾಗುತ್ತದೆ.

***

*ಯಜ್ಞೇ ತಪಸಿ ದಾನೇ ಚ ಸ್ಥಿತಿ ಸದಿತಿ ಚೋಚ್ಯತೇ/*

*ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ//೨೭//*

     ಹಾಗೂ ಯಜ್ಞ,ತಪಸ್ಸು ಮತ್ತು ದಾನದಲ್ಲಿ ಯಾವ ಸ್ಥಿತಿಯಿದೆಯೋ ಅದನ್ನು ಕೂಡ 'ಸತ್' ಎಂದು ಹೇಳಲಾಗುತ್ತದೆ ಮತ್ತು ಆ ಪರಮಾತ್ಮನಿಗಾಗಿ ಮಾಡಲಾದ ಕರ್ಮವು ನಿಶ್ಚಯಪೂರ್ವಕವಾಗಿ 'ಸತ್' ಎಂದು ಹೇಳಲಾಗುತ್ತದೆ.

*ಆಶ್ರಯದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್/*

*ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪ್ರೇತ್ಯ ನೋ ಇಹ//೨೮//*

    ಹೇ ಅರ್ಜುನಾ! ಶ್ರದ್ಧೆಯಿಲ್ಲದೆ ಮಾಡಲಾದ ಹವನವು,ಕೊಡಲಾದ ದಾನ ಹಾಗೂ ತಪಿಸಿದ ತಪವು ಮತ್ತು ಯಾವುದಾದರೂ ಮಾಡಲ್ಪಟ್ಟ ಶುಭಕರ್ಮಗಳಿವೆಯೋ ಆ ಸಮಸ್ತವು 'ಅಸತ್ತು' ಎಂದು ಹೇಳಲಾಗುತ್ತದೆ.ಆದ್ದರಿಂದ ಅದು ಈ ಲೋಕದಲ್ಲಾಗಲೀ,ಸತ್ತನಂತರವೇ ಆಗಲಿ ಲಾಭದಾಯಕವಲ್ಲ.

*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಶ್ರದ್ಧಾತ್ರಯವಿಭಾಗಯೋಗೋ ನಾಮ ಸಪ್ತದಶೋಧ್ಯಾಯ://೧೭//*

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ