ಗೀತಾಮೃತ - 67
*ಅಧ್ಯಾಯ ೧೮*
*ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಮ್/*
*ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ//೨೫//*
ಯಾವ ಕರ್ಮವು ಪರಿಣಾಮ ,ಹಾನಿ,ಹಿಂಸೆ ಮತ್ತು ಸಾಮರ್ಥ್ಯ ಮೊದಲಾದವುಗಳ ವಿಚಾರಮಾಡದೆ ಕೇವಲ ಅಜ್ಞಾನದಿಂದ ಆರಂಭಿಸಲ್ಪಡುತ್ತದೆಯೋ ಅದನ್ನು ತಾಮಸವೆಂದು ಹೇಳಲಾಗುತ್ತದೆ.
*ಮುಕ್ತಸಂಗೋನಹಂವಾದೀ ಧೃತ್ಯುತ್ಸಾಹಸಮನ್ವಿತ: /*
*ಸಿದ್ಧ್ಯದ್ಧೋರ್ನಿರ್ವಿಕಾರ: ಕರ್ತಾ ಸಾತ್ವ್ತಿಕ ಉಚ್ಯತೇ//೨೬//*
ಯಾವ ಕರ್ತನು ಸಂಗರಹಿತನಾಗಿ,ಅಹಂಕಾರದಿಂದ ಕೂಡಿದ ವಚನವನ್ನು ಆಡದೆ,ಧೈರ್ಯ ಮತ್ತು ಉತ್ಸಾಹದಿಂದ ಕೂಡಿ ಹಾಗೂ ಕಾರ್ಯವು ಸಿದ್ಧವಾಗುವುದು ಮತ್ತು ಆಗದಿರುವುದರಲ್ಲಿ ಹರ್ಷ _ ಶೋಕಾದಿ ವಿಕಾರಗಳಿಂದ ರಹಿತನಾಗಿದ್ದಾನೋ ಅವನು ಸಾತ್ತ್ವಿಕನೆಂದು ಹೇಳಲ್ಪಡುತ್ತಿದ್ದಾನೆ.
***
*ರಾಗೀ ಕರ್ಮಫಲಪ್ರೇಫ್ಸುರ್ಲುಬ್ಧೋ ಹಿಂಸಾತ್ಮಕೋಶುಚಿ:/*
*ಹರ್ಷಶೋಕಾನ್ವಿತ: ಕರ್ತಾ ರಾಜಸ: ಪರಿಕೀರ್ತಿತ://೨೭//*
ಯಾವ ಕರ್ತೃವು ಆಸಕ್ತಿಯಿಂದ ಕೂಡಿದವನಾಗಿ,ಕರ್ಮಗಳ ಫಲವನ್ನು ಬಯಸುವವನೂ ಮತ್ತು ಲೋಭಿಯಾಗಿದ್ದಾನೋ ಹಾಗೂ ಇತರರಿಗೆ ಕಷ್ಟಕೊಡುವ ಸ್ವಭಾವವುಳ್ಳವನಾಗಿ,ಅಶುದ್ಧಾಚಾರಿಯೂ ಮತ್ತು ಹರ್ಷ _ ಶೋಕಗಳಿಂದ ಲಿಪ್ತನಾಗಿದ್ದಾನೋ ಅವನು ರಾಜಸನೆಂದು ಹೇಳಲಾಗಿದೆ.
*ಅಯುಕ್ತ: ಪ್ರಾಕೃತ: ಸ್ತಬ್ಧ: ಶಶೋ ನೈಷ್ಕೃತಿಕೋಲಸ: /*
*ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ//೨೮//*
ಯಾವ ಕರ್ತೃವು ಅಯುಕ್ತನೂ,ಶಿಕ್ಷಣರಹಿತನೂ,ಅಹಂಕಾರಿಯೂ,ಧೂರ್ತನೂ ಮತ್ತು ಇತರರ ಜೀವನವನ್ನು ನಾಶಗೊಳಿಸುವವನೂ ಹಾಗೂ ಶೋಕಿಸುವವನೂ,ಸೋಮಾರಿಯೂ ಮತ್ತು ದೀರ್ಘಸೂತ್ರಿಯೂ ಆಗಿದ್ದಾನೋ ಅವನನ್ನು ತಾಮಸನೆಂದು ಹೇಳಲಾಗುತ್ತದೆ.
***
*ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು/*
*ಪ್ರೋಚ್ಯಮಾನಮತೇಷೇಣ ಪೃಥಕ್ತ್ವೇನ ಧನಂಜಯ//೨೯//*
ಹೇ ಧನಂಜಯನೇ! ಈಗ ನೀನು ಬುದ್ಧಿಯ ಮತ್ತು ಧೃತಿಯ ಮೂರು ಪ್ರಕಾರದ ಭೇದಗಳನ್ನು ಕೂಡ ಗುಣಗಳಿಗನುಸಾರವಾಗಿ ನನ್ನ ಮೂಲಕ ಸಂಪೂರ್ಣವಾಗಿ, ವಿಭಾಗಪೂರ್ವಕವಾಗಿ ಹೇಳಲ್ಪಡುವುದನ್ನು ಕೇಳು.
*ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ/*
*ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿ: ಸಾ ಪಾರ್ಥ ಸಾತ್ತ್ವಿಕೀ//೩೦//*
ಹೇ ಪಾರ್ಥನೇ! ಯಾವ ಬುದ್ಧಿಯು ಪ್ರವೃತ್ತಿಮಾರ್ಗ ಮತ್ತು ನಿವೃತ್ತಿ ಮಾರ್ಗವನ್ನು,ಕರ್ತವ್ಯ ಮತ್ತು ಅಕರ್ತವ್ಯವನ್ನು , ಭಯ ಮತ್ತು ಅಭಯವನ್ನು ಹಾಗೂ ಬಂಧನವನ್ನು ಮತ್ತು ಮೋಕ್ಷವನ್ನು ಯಥಾರ್ಥವಾಗಿ ತಿಳಿಯುತ್ತದೆಯೋ ಆ ಬುದ್ಧಿಯು ಸಾತ್ವಿಕವಾಗಿದೆ.
***
*ಧೃತ್ಯಾ ಯಯಾ ಧಾರಯತೇ ಮನ:ಪ್ರಾಣೇಂದ್ರಿಯಕ್ರಿಯಾ:/*
*ಯೋಗೇನಾವ್ಯಭಿಚಾರಿಣ್ಯಾ ಧೃತಿ: ಸಾ ಪಾರ್ಥ ಸಾತ್ತ್ವಿಕೀ//೩೩//*
ಹೇ ಪಾರ್ಥನೇ! ಯಾವ ಅವ್ಯಭಿಚಾರಿಣಿಯಾದ ಧಾರಣ ಶಕ್ತಿಯಿಂದ ಮನುಷ್ಯನು ಧ್ಯಾನಯೋಗದ ಮೂಲಕ ಮನಸ್ಸು,ಪ್ರಾಣ ಮತ್ತು ಇಂದ್ಇಯಗಳ ಕ್ರಿಯೆಗಳನ್ನು ಧಾರಣೆ ಮಾಡುತ್ತಾನೆಯೋ ಆ ಧೃತಿಯು ಸಾತ್ತ್ವಿಕವಾಗಿದೆ.
*ಯಯಾತು ಧರ್ಮಕಾಮಾರ್ಥಾನ್ದೃತ್ಯಾಧಾರಯತೇರ್ಜುನ:/*
*ಪ್ರಸಂಗೇನ ಫಲಾಕಾಂಕ್ಷೀ ಧೃತೀ ಸಾ ಪಾರ್ಥ ರಾಜಸೀ//೩೪//*
ಆದರೆ ಹೇ ಪೃಥಾಪುತ್ರ ಅರ್ಜುನಾ! ಫಲದ ಇಚ್ಛೆಯುಳ್ಳ ಮನುಷ್ಯನು ಯಾವ ಧಾರಣಶಕ್ತಿಯ ಮೂಲಕ ಅತ್ಯಂತ ಆಸಕ್ತಿಯಿಂದ ಧರ್ಮ,ಅರ್ಥ ಮತ್ತು ಕಾಮಗಳನ್ನು ಧಾರಣೆ ಮಾಡುತ್ತಾನೋ ಆ ಧಾರಣಶಕ್ತಿಯು ರಾಜಸಿಯಾಗಿದೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ