ಗೀತಾಮೃತ - 68
*ಅಧ್ಯಾಯ ೧೮*
*ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ/*
*ನ ವಿಮುಂಚತಿ ದುರ್ಮೇಧಾ ಧೃತಿ: ಸಾ ಪಾರ್ಥ ತಾಮಸೀ//೩೫//*
ಹೇ ಪಾರ್ಥನೇ!, ದುಷ್ಟಬುದ್ಧಿಯುಳ್ಳ ಮನುಷ್ಯನು ಯಾವ ಧಾರಣಶಕ್ತಿಯ ಮೂಲಕ ನಿದ್ರೆ, ಭಯ,ಚಿಂತೆ ಮತ್ತು ದು:ಖವನ್ನೂ ಹಾಗೂ ಉನ್ಮತ್ತತೆಯನ್ನು ಕೂಡ ಬಿಡುವುದಿಲ್ಲವೋ ಅರ್ಥಾತ್ ಧಾರಣಮಾಡಿರುತ್ತನೆಯೋ ಆ ಧಾರಣಶಕ್ತಿಯು ತಾಮಸಿಯಾಗಿದೆ.
*ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ/*
*ಅಭ್ಯಾಸಾದ್ರಮತೇ ಯತ್ರ ದು:ಖಾಂತಂ ಚ ನಿಗಚ್ಛತಿ//೩೬//*
ಹೇ ಭರತಶ್ರೇಷ್ಠನೇ! ಈಗ ಮೂರು ಪ್ರಕಾರದ ಸುಖವನ್ನು ಕೂಡ ನನ್ನಿಂದ ಕೇಳು.ಯಾವ ಸುಖದಲ್ಲಿ ಸಾಧಕನಾದ ಮನುಷ್ಯನು ಭಜನೆ,ಧ್ಯಾನ ಮತ್ತು ಸೇವೆ ಮೊದಲಾದ ಅಭ್ಯಾಸದಿಂದ ರಮಿಸುತ್ತಾನೋ
***
*ಯತ್ತದಗ್ರೇ ವಿಷಮಿವ ಪರಿಣಾಮೇ ಮೃತೋಪಮಮ್/*
*ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್//೩೭//*
ಯಾವುದರಿಂದ ದು:ಖದ ಅಂತ್ಯವನ್ನು ಪಡೆಯುತ್ತಾನೆಯೋ,ಯಾವ ಇಂತಹ ಸುಖವಿದೆಯೋ ಅದು ಆರಂಭಕಾಲದಲ್ಲಿ ವಿಷಕ್ಕೆ ಸಮಾನವಾಗಿ ತೋರಿದರೂ ಪರಿಣಾಮದಲ್ಲಿ ಅಮೃತಕ್ಕೆ ಸಮಾನವಾಗಿದೆ.ಆದ್ದರಿಂದ ಆ ಪರಮಾತ್ಮ ವಿಷಯಕವಾದ ಬುದ್ಧಿಯ ಪ್ರಸಾದದಿಂದ ಉಂಟಾಗುವ ಸುಖವನ್ನು ಸಾತ್ವಿಕವೆಂದು ಹೇಳಲಾಗಿದೆ.
*ವಿಷಯೇಂದ್ರಿಯ ಸಂಯೋಗಾದ್ಯತ್ತದಗ್ರೇಮೃತೋಪಮಮ್/*
*ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಮ್//೩೮//*
ಯಾವ ಸುಖವು ವಿಷಯ ಮತ್ತು ಇಂದ್ರಿಯಗಳ ಸಂಯೋಗದಿಂದ ಉಂಟಾಗುತ್ತವೆಯೋ ಅದು ಮೊದಲು ಭೋಗಕಾಲದಲ್ಲಿ ಅಮೃತಕ್ಕೆ ಸಮಾನವಾಗಿ ತೋರಿದರೂ ಸಹ ಪರಿಣಾಮದಲ್ಲಿ ವಿಷಕ್ಕೆ ಸಮಾನವಾಗಿದೆ; ಆದ್ದರಿಂದ ಆ ಸುಖವು ರಾಜಸವೆಂದು ಹೇಳಲ್ಪಟ್ಟಿದೆ.
***
*ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನ:/*
*ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್//೩೯//* ಯಾವ ಸುಖವು ಭೋಗಕಾಲದಲ್ಲಿ ಹಾಗೂ ಪರಿಣಾಮದಲ್ಲಿಯೂ ಕೂಡ ಆತ್ಮನನ್ನು ಮೋಹಗೊಳಿಸುತ್ತದೆಯೋ ಆ ನಿದ್ರಾ,ಆಲಸ್ಯ ಮತ್ತು ಪ್ರಮಾದದಿಂದ ಉತ್ಪನ್ನವಾದ ಸುಖವನ್ನು ತಾಮಸವೆಂದು ಹೇಳಲಾಗಿದೆ.
*ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನ:/*
*ಸತ್ವ್ತಂಪ್ರಕೃತಿಜೈರ್ಮುಕ್ತಂ ಯದೇಭಿ: ಸ್ಯಾತ್ತ್ರಿಭಿರ್ಗುಣೈ:/*
ಪೃಥ್ವಿಯಲ್ಲಿ ಅಥವಾ ಆಕಾಶದಲ್ಲಿ ಅಥವಾ ದೇವತೆಗಳಲ್ಲಿ ಹಾಗೂ ಇವಲ್ಲದೆ ಮತ್ತೆಲ್ಲಿಯಾದರೂ ಯಾವ ಪ್ರಕೃತಿಯಿಂದ ಉತ್ಪನ್ನವಾದ ಈ ಮೂರೂ ಗುಣಗಳಿಂದ ರಹಿತವಾಗಿರುವಂತಹ ಸತ್ತ್ವವು ಇಲ್ಲವಾಗಿದೆ.
***
*ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ/*
*ಕರ್ಮಾಣಿ ಪ್ರವಿಭಕ್ತಾನಿ ಪ್ರಭಾವಪ್ರಭವೈರ್ಗುಣೈ://೪೧//*
ಹೇ ಪರಂತಪನೆ ! ಬ್ರಾಹ್ಮಣ,ಕ್ಷತ್ತಿಯ ಮತ್ತು ವೈಶ್ಯರ ಹಾಗೂ ಶೂದ್ರರ ಕರ್ಮಗಳು ಸ್ವಭಾವದಿಂದ ಉತ್ಪನ್ನವಾದ ಗುಣಗಳ ಅನುಸಾರವಾಗಿ ವಿಭಾಗಿಸಲ್ಪಟ್ಟಿವೆ.
*ಶಮೋ ದಮಸ್ತಪ: ಶೌಚಂ ಕ್ಷಾಂತಿರರ್ಜವಮೇವ ಚ/*
*ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್//೪೨//*
ಅಂತ:ಕರಣವನ್ನು ನಿಗ್ರಹಿಸುವುದು; ಇಂದ್ರಿಯಗಳ ದಮನಮಾಡುವುದು; ಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು; ಹೊರಗೊಳಗಿಂದ ಶುದ್ಧನಾಗಿರುವುದು; ಬೇರೆಯವರ ಅಪರಾಧಗಳನ್ನು ಕ್ಷಮಿಸುವುದು; ಮನಸ್ಸು ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿಸುವುದು; ವೇದ,ಶಾಸ್ತ್ರ,ದೇವರು ಮತ್ತು ಪರಲೋಕಾದಿಗಳಲ್ಲಿ ಶ್ರದ್ಧೆಯನ್ನಿಡುವುದು; ವೇದಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನಮಾಡುವುದು ಮತ್ತು ಪರಮಾತ್ಮ ತತ್ತ್ವದ ಅನುಭವ ಪಡೆಯುವುದು _ ಇವೆಲ್ಲವೂ ಬ್ರಾಹ್ಮಣನ ಸ್ವಾಭಾವಿಕವಾದ ಕರ್ಮಗಳಾಗಿವೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ