ಗೀತಾಮೃತ - 71
*ಅಧ್ಯಾಯ ೧೮*
*ಈಶ್ವರ: ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ/*
*ಭ್ರಾಮಯನ್ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ//೬೧//*
ಹೇ ಅರ್ಜುನಾ! ಶರೀರರೂಪೀ ಯಂತ್ರದಲ್ಲಿ ಆರೂಢನಾಗಿರುವ ,ಸಂಪೂರ್ಣ ಪ್ರಾಣಿಗಳನ್ನು ಅಂತರ್ಯಾಮಿ ಪರಮೇಶ್ವರನು ತನ್ನ ಮಾಯೆಯಿಂದ ಅವರ ಕರ್ಮಗಳನುಸಾರವಾಗಿ ಅಲೆಸುತ್ತ ಎಲ್ಲ ಪ್ರಾಣಿಗಳ ಹೃದಯದಲ್ಲಿ ಸ್ಥಿತನಾಗಿದ್ದಾನೆ.
*ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ/*
*ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್//೬೨//* ಹೇ ಅರ್ಜುನಾ ! ನೀನು ಎಲ್ಲಾ ಪ್ರಕಾರದಿಂದಲೂ ಆ ಪರಮೇಶ್ವರ ನಲ್ಲಿಯೇ ಶರಣುಹೋಗು.ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿ ಯನ್ನು ಹಾಗೂ ಸನಾತನವಾದ ಪರಮಧಾಮವನ್ನು ಪಡೆಯುವೆ.
***
*ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ/*
*ವಿಮೈಶ್ಯೈತದಷೇಣ ಯಥೇಚ್ಛಸಿ ತಥಾ ಕುರು//೬೩//* ಈ ಪ್ರಕಾರವಾಗಿ ಈ ಗೋಪನೀಯಕ್ಕಿಂತಲೂ ಅತಿ ಗೋಪನೀಯವಾದ ಜ್ಞಾನವನ್ನು ನಾನು ನಿನಗೆ ಹೇಳಿಬಿಟ್ಟೆನು. ಈಗ ನೀನು ಈ ರಹಸ್ಯಯುಕ್ತವಾದ ಜ್ಞಾನವನ್ನು ಪೂರ್ಣವಾಗಿ ಚೆನ್ನಾಗಿ ವಿಚಾರಮಾಡಿ ಹೇಗೆ ಇಷ್ಟಪಡುವೆಯೋ ಹಾಗೆಯೇ ಮಾಡು.
*ಸರ್ವಗುಹ್ಯತಮಂ ಭೂಯ: ಶೃಣು ಮೇ ಪರಮಂ ವಚ:/*
*ಇಷ್ಟೋಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್//೬೪//*
ಸಂಪೂರ್ಣವಾದ ಗೋಪನೀಯಕ್ಕಿಂತ ಅತಿ ಗೋಪನೀಯವಾದ ನನ್ನ ಪರಮ ರಹಸ್ಯಯುಕ್ತವಾದ ವಚನವನ್ನು ನೀನು ಇನ್ನೊಮ್ಮೆ ಕೇಳು.ನೀನು ನನಗೆ ಅತಿಶಯವಾಗಿ ಪ್ರಿಯನಾಗಿರುವೆ,ಆದುದರಿಂದ ಈ ಪರಮ ಹಿತಕಾರಕವಾದ ವಚನವನ್ನು ನಾನು ನಿನಗೆ ಹೇಳುವೆನು.
***
*ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು/*
*ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಯೋಸಿ ಮೇ//೬೫//*
ಹೇ ಅರ್ಜುನಾ! ನೀನು ನನ್ನಲ್ಲಿ ಮನಸ್ಸುಳ್ಳವನಾಗು,ನನ್ನ ಭಕ್ತನಾಗು,ನನ್ನನ್ನು ಪೂಜಿಸುವವನಾಗು ಮತ್ತು ನನಗೆ ಪ್ರಣಾಮ ಮಾಡು.ಹೀಗೆ ಮಾಡುವುದರಿಂದ ನೀನು ನನ್ನನ್ನೇ ಪಡೆಯುವೆ.ಇದನ್ನು ನಾನು ನಿನ್ನಲ್ಲಿ ಸತ್ಯವಾಗಿ ಪ್ರತಿಜ್ಞೆಮಾಡಿ ಹೇಳುತ್ತೇನೆ. ಏಕೆಂದರೆ ನೀನು ನನಗೆ ಅತ್ಯಂತ ಪ್ರಯನಾಗಿರುವೆ.
*ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ/*
*ಅಹಂ ತ್ವಾಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚ://೬೬//*
ಸಂಪೂರ್ಣ ಧರ್ಮಗಳನ್ನು ಅರ್ಥಾತ್ ಸಮಸ್ತ ಕರ್ತವ್ಯ ಕರ್ಮಗಳನ್ನು ನನ್ನಲ್ಲಿ ತ್ಯಾಗಮಾಡಿ ನೀನು ಕೇವಲ,ಸರ್ವಶಕ್ತಿವಂತ,ಸರ್ವಾಧಾರ ಪರಮೇಶ್ವರನಾದ ನನ್ನೋರ್ವನಿಗೇ ಶರಣು ಬಂದುಬಿಡು.ನಾನು ನಿನ್ನನ್ನು ಸಮಸ್ತ ಪಾಪಗಳಿಂದ ಮುಕ್ತನಾಗಿಸುವೆ.ನೀನು ಶೋಕ ಮಾಡಬೇಡ.
***
*ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ/*
*ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಭ್ಯಸೂಯತಿ//೬೭//*
ನೀನು ಈ ಗೀತಾರೂಪವಾದ ರಹಸ್ಯಮಯ ಉಪದೇಶವನ್ನು ಯಾವ ಕಾಲದಲ್ಲಿಯೂ ತಪರಹಿತನಾದ ಮನುಷ್ಯನಿಗಾಗಲೀ,ಭಕ್ತಿರಹಿತನಾದವನಿಗಾಗಲೀ ಮತ್ತು ಕೇಳಲು ಇಚ್ಛೆಯಿಲ್ಲದಿರುವವನಿಗಾಗಲೀ ಹೇಳಬಾರದು,ಹಾಗೂ ಯಾರು ನನ್ನಲ್ಲಿ ದೋಷದೃಷ್ಟಿಯನ್ನು ಇಡುತ್ತಾರೋ ಅವನಿಗಂತೂ ಎಂದಿಗೂ ಹೇಳಬಾರದು.
*ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ/*
*ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯ://೬೮//* ಯಾವ ಪುರುಷನು ನನ್ನಲ್ಲಿ ಪರಮ ಪ್ರೇಮವನ್ನಿಟ್ಟುಕೊಂಡು ಈ ಪರಮ,ರಹಸ್ಯಯುಕ್ತವಾದ,ಗೀತಾಶಾಸ್ತ್ರವನ್ನು ನನ್ನ ಭಕ್ತರಲ್ಲಿ ಹೇಳುವನೋ ಅವನು ನನ್ನನ್ನೇ ಪಡೆಯುತ್ತಾನೆ_ ಇದರಲ್ಲಿ ಯಾವ ಸಂದೇಹವೂ ಇಲ್ಲ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ