ಗೀತಾಮೃತ - 9

ಅಧ್ಯಾಯ ೩
ತಸ್ಮಾದಸಕ್ತ: ಸತತಂ ಕಾರ್ಯಂ ಕರ್ಮ ಸಮಾಚಾರ/
ಆಸಕ್ತೋ ಹ್ಯಾಚರನ್ಕರ್ಮ ಪರಮಾಪ್ನೋತಿ ಪೂರುಷ://೧೯//
ಆದ್ದರಿಂದ ನೀನು ನಿರಂತರವಾಗಿ ಆಸಕ್ತಿರಹಿತನಾಗಿ ಸದಾಕಾಲ ಕರ್ತವ್ಯ ಕರ್ಮವನ್ನು ಚೆನ್ನಾಗಿ ಮಾಡುತ್ತಿರು.ಏಕೆಂದರೆ ಆಸಕ್ತಿ ರಹಿತನಾಗಿ ಕರ್ಮವನ್ನು ಮಾಡುತ್ತಿರುವ ಮನುಷ್ಯನು ಪರಮಾತ್ಮನನ್ನು ಪಡೆಯುತ್ತಾನೆ.
ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯ:/
ಲೋಕ ಸಂಗ್ರಹಮೇವಾಪಿ ಸಂಪಶ್ಯನ್ಕರ್ತುಮರ್ಹಸಿ//೨೦//
ಜನಕಾದಿ ಜ್ಞಾನಿಜನರೂ ಕೂಡ ಆಸಕ್ತಿರಹಿತವಾದ ಕರ್ಮದ ಮೂಲಕವೇ ಪರಮಸಿದ್ಧಿಯನ್ನು ಪಡೆದಿದ್ದರು.ಆದ್ದರಿಂದ ಲೋಕ ಸಂಗ್ರಹವನ್ನು ದೃಷ್ಠಿಯಲ್ಲಿರಿಸಿಕೊಂಡು ಸಹ ನೀನು ಕರ್ಮಮಾಡುವುದಕ್ಕೇ ಯೋಗ್ಯನಾಗಿದ್ದೀಯೆ, ಅರ್ಥಾತ್ ನೀನು ಕರ್ಮ ಮಾಡುವುದೇ ಉಚಿತವಾಗಿದೆ.
****
ಪ್ರಕೃತೇ: ಕ್ರಿಯಮಾಣಾನಿ ಗುಣೈ: ಕರ್ಮಾಣಿ ಸರ್ವಶ:/
ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ//೨೭//
ವಾಸ್ತವವಾಗಿ ಸಮಸ್ತ ಕರ್ಮಗಳು ಎಲ್ಲ ಪ್ರಕಾರದಿಂದಲೂ ಪ್ರಕೃತಿಯ ಗುಣಗಳ ಮೂಲಕವೇ ಮಾಡಲ್ಪಡುತ್ತವೆ.ಆದರೂ ಕೂಡ ಯಾರ ಅಂತ:ಕರಣವು ಅಹಂಕಾರದಿಂದ ಮೋಹಿತವಾಗಿದೆಯೋ ಅಂತಹ ಅಜ್ಞಾನಿಯು ನಾನು ಕರ್ತೃವಾಗಿದ್ದೇನೆ ಎಂದು ತಿಳಿಯುತ್ತಾನೆ.
ತತ್ತ್ವವಿತ್ತು ಮಹಾಬಾಹೋ ಗುಣಕರ್ಮ ವಿಭಾಗಯೋ:/
ಗುಣಾ ಗುಣೇಷು ವರ್ತಂಡ ಇತಿ ಮತ್ವಾನ ನ ಸಜ್ಜತೇ//೨೮//
ಆದರೆ ಹೇ ಮಹಾಬಾಹುವೇ! ಗುಣವಿಭಾಗ ಮತ್ತು ಕರ್ಮವಿಭಾಗದ ತತ್ವವನ್ನು ಬಲ್ಲ ಜ್ಞಾನಯೋಗಿಯು ಸಂಪೂರ್ಣವಾಗಿ ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆಯೆಂದು ತಿಳಿದುಕೊಂಡು ಅವುಗಳಲ್ಲಿ ಆಸಕ್ತನಾಗುವುದಿಲ್ಲ.
****
ಸದೃಶಂ ಚೇಷ್ಟತೇ ಸ್ವಸ್ಯಾ: ಪ್ರಕೃತೇಜ್ಞಾನವಾನಪಿ/
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹ: ಕಿಂ ಕರಿಷ್ಯತಿ//೩೩//
ಎಲ್ಲ ಪ್ರಾಣಿಗಳು ಪ್ರಕೃತಿಯನ್ನು ಪಡೆಯುತ್ತವೆ ಅರ್ಥಾತ್ ತಮ್ಮ ಸ್ವಭಾವಕ್ಕೆ ಪರವಶವಾಗಿ ಕರ್ಮ ಮಾಡುತ್ತವೆ,ಜ್ಞಾನಿಯೂ ಸಹ ತನ್ನ ಪ್ರಕೃತಿಗೆ ಅನುಸಾರವಾಗಿ ಕ್ರಿಯೆಗಳನ್ನು ಮಾಡುತ್ತಾನೆ.ಮತ್ತೆ ಇದರಲ್ಲಿ ಯಾರ ಹಠವು ಏನು ಮಾಡಬಲ್ಲದು?
ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ/
ತಯೋರ್ನ ವಶಮಾಗಚ್ಛೇತ್ತೌ ಹ್ಯಸ್ಯ ಪರಿಪಂಥಿನೌ//೩೪//
ಇಂದ್ರಿಯ _ ಇಂದ್ರಿಯದ ಅರ್ಥದಲ್ಲಿ ಅರ್ಥಾತ್ ಪ್ರತಿಯೊಂದು ಪ್ರತಿಯೊಂದು ಇಂದ್ರಿಯದ ವಿಷಯದಲ್ಲಿ ರಾಗ ಮತ್ತು ದ್ವೇಷಗಳು ಅಡಗಿದ್ದು ಸ್ಥಿತವಾಗಿರುತ್ತವೆ.ಮನುಷ್ಯನು ಅವೆರಡರ ವಶನಾಗಬಾರದು.ಏಕೆಂದರೆ ಅವೆರಡೇ ಅವನ ಶ್ರೇಯಸ್ಸಿನ ಮಾರ್ಗದಲ್ಲಿ ವಿಘ್ನವನ್ನುಂಟುಮಾಡುವ ಮಹಾ ಶತ್ರುಗಳಾಗಿವೆ.
***
*ಶ್ರೇಯಾನ್ಸ್ವಧರ್ಮೋ ವಿಗುಣ: ಪರಧರ್ಮಾತ್ಸ್ವನುಷ್ಠಿತಾತ್*/
*ಸ್ವಧರ್ಮೇ ನಿಧನಂ ಶ್ರೇಯ: ಪರಧರ್ಮೋ ಭಯಾವಹ:*//೩೫//
ಒಳ್ಳೆಯ ಪ್ರಕಾರದಿಂದ ಆಚರಣೆಗೆ ತರಲಾಗಿರುವ ಇನ್ನೊಬ್ಬರ ಧರ್ಮಕ್ಕಿಂತ ಗುಣರಹಿತವಾದರೂ ತನ್ನ ಧರ್ಮವು ಅತಿ ಉತ್ತಮವಾಗಿದೆ.ತನ್ನ ಧರ್ಮದಲ್ಲಾದರೋ ಸಾಯುವುದೂ ಕೂಡ ಶ್ರೇಯಸ್ಕರವಾಗಿದೆ ಮತ್ತು ಬೇರೆಯವರ ಧರ್ಮವು ಭಯವನ್ನುಂಟುಮಾಡುವುದಾಗಿದೆ.
*ಅರ್ಜುನ ಉವಾಚ:*
*ಅಥ ಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷ:*
*ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತ:*//೩೬//
ಅರ್ಜುನನು ಹೇಳಿದನು : ಹೇ ಕೃಷ್ಣಾ! ಹಾಗಾದರೆ ಈ ಮನುಷ್ಯನು ಸ್ವತ: ಇಚ್ಛಿಸದಿದ್ದರೂ ಕೂಡ ಬಲವಂತವಾಗಿ ತೊಡಗಿಸಲ್ಪಟ್ಟವನಂತೆ ಯಾವುದರಿಂದ ಪ್ರೇರಿತನಾಗಿ ಪಾಪದ ಆಚರಣೆಯನ್ನು ಮಾಡುತ್ತಾನೆ?
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)