ಗುಂಡೂಪಂತನ ದುಬಾರಿ ಸಲಹೆಗಳು

ಗುಂಡೂಪಂತನ ದುಬಾರಿ ಸಲಹೆಗಳು

ಒಂದೂರಿನಲ್ಲೊಬ್ಬ ಗುಂಡೂಪಂತನೆಂಬ ನೀಚ ಬುದ್ಧಿಯ ಜಿಪುಣನಿದ್ದ. ಸೇವಕರಿಂದ ಕೆಲಸ ಮಾಡಿಸಿ, ಅವರಿಗೆ ಮಜೂರಿ ಕೊಡದಿರುವುದು ಅವನ ನೀಚಬುದ್ಧಿಗೊಂದು ನಿದರ್ಶನ. ಸುತ್ತಮುತ್ತಲಿನ ಹಳ್ಳಿಗಳ ಹಲವಾರು ಯುವಕರು ಅವನ ಬಳಿಗೆ ಬಂದು ಕೆಲಸ ಮಾಡಿ, ಮಜೂರಿ ಸಿಗದೆ ಮೋಸ ಹೋಗಿದ್ದರು.

ಒಮ್ಮೆ ಗುಂಡೂಪಂತ ಪಕ್ಕದ ಪಟ್ಟಣಕ್ಕೆ ಹೋಗಿ ಮನೆಗೆ ಬೇಕಾದ ಹಲವು ವಸ್ತುಗಳನ್ನು ಖರೀದಿಸಿದ. ಅವನ್ನು ಸಾಗಿಸಲು ಯಾರಾದರೂ ಸಿಗುತ್ತಾರೆಯೇ ಎಂದವನು ಅತ್ತಿತ್ತ ನೋಡುತ್ತಿದ್ದಾಗ, ಯುವಕನೊಬ್ಬ ಹತ್ತಿರ ಬಂದ. "ಬಾಬೂಜಿ, ನಿಮಗೆ ಕೂಲಿ ಬೇಕಾಗಿದೆಯೇ?" ಎಂದು ಕೇಳಿದ.

ಇವನೊಬ್ಬ ಬಕರಾ ಸಿಕ್ಕಿದ ಎಂದುಕೊಂಡ ಗುಂಡೂಪಂತ. ಯುವಕನ ಹೆಸರೇನೆಂದು ಕೇಳಿದಾಗ, ಆತ ಸೋಮು ಎಂದ. "ನನ್ನ ಮನೆಯಲ್ಲಿ ಕೆಲಸ ಮಾಡುತ್ತೀಯಾ?" ಎಂದು ಗುಂಡೂಪಂತ ಪ್ರಶ್ನಿಸಿದಾಗ, “ಖಂಡಿತ ಬಾಬೂಜಿ. ನಾನು ಎಲ್ಲ ಕೆಲಸ ಮಾಡಬಲ್ಲೆ” ಎಂದು ಉತ್ತರಿಸಿದ ಸೋಮು.

ತಾನು ಖರೀದಿಸಿದ ಎಲ್ಲ ವಸ್ತುಗಳನ್ನೂ ಸೋಮುವಿನ ತಲೆಯಲ್ಲಿ ಹೊರಿಸಿಕೊಂಡು ಗುಂಡೂಪಂತ ತನ್ನ ಹಳ್ಳಿಗೆ ಹೊರಟ. ದಾರಿಯಲ್ಲಿ ಸೋಮುವಿನ ಜೊತೆ ಬಣ್ಣಬಣ್ಣದ ಮಾತುಗಳನ್ನು ಆಡುತ್ತಾ, ಇವನಿಗೆ ಹೇಗೆ ಮೋಸ ಮಾಡುವುದೆಂದು ಗುಂಡೂಪಂತ ಯೋಚಿಸುತ್ತಿದ್ದ.

ಹಳ್ಳಿ ಹತ್ತಿರ ಬಂದಾಗ, ಗುಂಡೂಪಂತ ಸೋಮುವಿನ ಬಳಿ ಕೇಳಿದ, “ಹಣ ಅಥವಾ ಸಲಹೆ - ಇವೆರಡರಲ್ಲಿ ಯಾವುದನ್ನು ನಿನ್ನ ಮಜೂರಿಯಾಗಿ ಆಯ್ಕೆ ಮಾಡುತ್ತಿ?” ಸೋಮು ಬುದ್ಧಿವಂತ. "ಬಾಬೂಜಿ, ಒಳ್ಳೆಯ ಸಲಹೆ ಹಣಕ್ಕಿಂತ ಹೆಚ್ಚು ಬೆಲೆ ಬಾಳುತ್ತದೆ. ಆದ್ದರಿಂದ ನಾನು ಸಲಹೆಯನ್ನೇ ಆಯ್ಕೆ ಮಾಡುತ್ತೇನೆ.”

ಸ್ವಲ್ಪ ದೂರ ಹೋಗುವಾಗ ಗುಂಡೂಪಂತ ಮೊದಲ ಸಲಹೆಯನ್ನಿತ್ತ, "ಹುಲಿಯ ಹಾಲು ಕಪ್ಪಗಿದೆ ಎಂದು ಯಾರಾದರೂ ಹೇಳಿದರೆ ನಂಬಬೇಡ.” ಸೋಮುವಿಗೆ ಇದು ವಿಚಿತ್ರ ಹೇಳಿಕೆ ಎನಿಸಿದರೂ ಆತ ತಲೆಯಾಡಿಸಿದ.

ಅನಂತರ ಗುಂಡೂಪಂತ ಎರಡನೆಯ ಸಲಹೆಯನ್ನಿತ್ತ, “ಬೆಂಕಿ ಘನವಸ್ತು ಎಂದು ಯಾರಾದರೂ ಹೇಳಿದರೆ ನಂಬಬೇಡ.” ಗುಂಡೂಪಂತನಿಗೆ ತಲೆಕೆಟ್ಟಿದೆ ಎಂದು ಸೋಮು ಭಾವಿಸಿದರೂ ಮೌನವಾಗಿ ಮುಂದೆ ನಡೆದ. ಮನೆ ಹತ್ತಿರ ಬಂದಾಗ ಗುಂಡೂಪಂತ ಮೂರನೆಯ ಸಲಹೆಯನ್ನಿತ್ತ, “ಮಂಜುಗಡ್ಡೆ ಬಿಸಿಯಾಗಿದೆ ಎಂದು ಯಾರಾದರೂ ಹೇಳಿದರೆ ಒಪ್ಪಬೇಡ."

"ಬಾಬೂಜಿ, ನನಗೆ ಇವೆಲ್ಲ ಗೊತ್ತಿವೆ. ಹಾಗಿರುವಾಗ ಇವನ್ನೆಲ್ಲ ನನಗೆ ಯಾಕೆ ಹೇಳಿತ್ತಿದ್ದೀರಿ?" ಎಂದು ಕೇಳಿದ ಸೋಮು. ಆಗ ಮನೆಯೆದುರು ಬಂದಿದ್ದ ಗುಂಡೂಪಂತ ಸಿಟ್ಟಿನಿಂದ ಹೇಳಿದ, “ನನಗೆ ಸಲಹೆ ಕೊಡಿ ಎಂದು ನೀನೇ ಹೇಳಿದ್ದು; ಅದಕ್ಕಾಗಿ ಕೆಲವು ಸಲಹೆಗಳನ್ನು ಕೊಟ್ಟೆ. ನಿನ್ನ ಸಹವಾಸ ಸಾಕು. ಎಲ್ಲ ವಸ್ತುಗಳನ್ನೂ ಕೆಳಗಿಟ್ಟು ನೀನು ಹೊರಟು ಹೋಗು.”

ಗುಂಡೂಪಂತ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಸೋಮುವಿಗೆ ಅರ್ಥವಾಯಿತು. ಅವನು ಮನೆಯ ಪಕ್ಕದ ಚರಂಡಿಗೆ ಎಲ್ಲ ವಸ್ತುಗಳನ್ನೂ ಎಸೆದು ಬಿಟ್ಟ. ಅವೆಲ್ಲವೂ ಕೊಳಕು ನೀರಿನಲ್ಲಿ ಬಿದ್ದು ಹಾಳಾದವು.

"ನನ್ನ ವಸ್ತುಗಳನ್ನೆಲ್ಲ ಚರಂಡಿಗೆ ಯಾಕೆ ಹಾಕಿದೆ?" ಎಂದು ರೇಗಿದ ಗುಂಡೂಪಂತ. "ಬಾಬೂಜಿ, ವಸ್ತುಗಳನ್ನೆಲ್ಲ ಕೆಳಗಿಡು ಎಂದು ನೀವು ಹೇಳಿದಿರಿ ವಿನಃ ಅವನ್ನೆಲ್ಲ ಎಲ್ಲಿಡಬೇಕೆಂದು ಹೇಳಲಿಲ್ಲ. ಹಾಗಾಗಿ ನನಗೆ ಸರಿಕಂಡಲ್ಲಿ ಹಾಕಿದೆ" ಎಂದ ಸೋಮು.

"ಇನ್ನೂ ಒಂದು ವಿಷಯ. ಎಲ್ಲ ಜನರೂ ಮೂರ್ಖರು ಎಂದು ಯಾರಾದರೂ ಹೇಳಿದರೆ ನಂಬಬೇಡಿ” ಎಂದ ಸೋಮು. ಹಾಗೆನ್ನುತ್ತಾ, ಸೋಮು ನಸುನಗುತ್ತಾ ಅಲ್ಲಿಂದ ಹೊರಟ. ಗುಂಡೂಪಂತ ಪೆಚ್ಚಾಗಿ ಸೋಮುವನ್ನು ನೋಡುತ್ತಾ ನಿಂತ.

ಚಿತ್ರಕೃಪೆ: ವಿಸ್-ಡಮ್ ಟೇಲ್ಸ್ ಪುಸ್ತಕ