ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಅರಳಿದಾಗ
ಚಾಮರಾಜ ನಗರ ಜಿಲ್ಲೆಯ ಕೆಳಸೂರು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಚೆಂಡುಮಲ್ಲಿಗೆಯ ಘಾಟು ವಾಸನೆ ಹಬ್ಬಿದೆ. ಅದಕ್ಕಿತಂತಲೂ ದಟ್ಟವಾಗಿ ಹಬ್ಬಿದೆ – ರೈತರ ಪ್ರತಿಭಟನೆಯ ಕಾವು. ಕಳೆದ ಎರಡು ದಶಕಗಳಲ್ಲಿ ಅಲ್ಲಿನ ಮಳೆಯಾಶ್ರಿತ ಗುಂಡ್ಲುಪೇಟೆ ತಾಲೂಕಿನ ಹಳ್ಳಿಗಳಲ್ಲಿ ಹೂವಿನ ಬೇಸಾಯದ ಸುಗ್ಗಿಯಿಂದಾಗಿ ಬದಲಾವಣೆಯ ಗಾಳಿ ಬೀಸಿದೆ. ಅಲ್ಲಿ ಹಾದು ಹೋಗುವ ಮೈಸೂರು – ಕೊಝಿಕೋಡ್ ಹೆದ್ದಾರಿಯ ಇಬ್ಬದಿಗಳಲ್ಲಿ ಕಿತ್ತಳೆ ಬಣ್ಣದ ಚೆಂಡುಮಲ್ಲಿಗೆ ಮತ್ತು ಹೊಳಪು-ಹಳದಿ ಬಣ್ಣದ ಸೂರ್ಯಕಾಂತಿ ಹೂಗಳ ಹೊಲಗಳ ಸಾಲು. ಇದರಿಂದಾಗಿ ಅಲ್ಲಿನ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ರಫ್ತು ಮಾರುಕಟ್ಟೆಯ ಪರಿಚಯವಾಗಿದೆ. ಮಾತ್ರವಲ್ಲ, ಹಲವು ಕಂಪೆನಿಗಳಿಗೆ ಅಲ್ಲಿ ತಮ್ಮ ಕಾರ್ಖಾನೆ ಸ್ಥಾಪಿಸಲು ಆಕರ್ಷಣೆ. ಅವುಗಳಲ್ಲೊಂದು ಕಂಪೆನಿಗೆ ರೈತರ ಪ್ರತಿಭಟನೆಯ ಬಿಸಿ ತಟ್ಟಿದೆ.
ಇತ್ತೀಚೆಗೆ ಸುಮಾರು ೧,೦೦೦ ರೈತರು ಕಗ್ಗದಲಹುಂಡಿ ಗ್ರಾಮದಲ್ಲಿ ಜಮಾಯಿಸಿದ್ದರು – ತ್ರಿಯಂಬಕಪುರ ಗ್ರಾಮದಲ್ಲಿ ಚೈನಾ ಕಂಪೆನಿಯೊಂದು ಚೆಂಡುಮಲ್ಲಿಗೆ ಸಾರ ಭಟ್ಟಿಯಿಳಿಸುವ ಕಾರ್ಖಾನೆ ಸ್ಥಾಪಿಸುವುದನ್ನು ಪ್ರತಿಭಟಿಸಲಿಕ್ಕಾಗಿ. ಚೆಂಗುವಾಂಗ್ ನ್ಯಾಚುರಲ್ ಎಕ್ಸ್ಟ್ರಾಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಆ ಕಂಪೆನಿಯ ಮುಖ್ಯ ಉತ್ಪನ್ನಗಳು: ಪ್ರಾಕೃತಿಕ ಬಣ್ಣಗಳು ಮತ್ತು ಚೆಂಡುಮಲ್ಲಿಗೆ ಹೂಗಳಿಂದ ಒಲಿಯೋರೆಸಿನ್ ಎಂಬ ಔಷಧೀಯ ಸಾರ.ರೈತರ ಪ್ರತಿಭಟನೆಯ ಸೊಲ್ಲು ಅಡಗಿಸಲಿಕ್ಕಾಗಿ ಪೊಲೀಸರಿಂದ ಲಾಠೀ ಚಾರ್ಚ್ ಮತ್ತು ೨೯ ಪ್ರತಿಭಟನಾಕಾರರ ಬಂಧನ. ಅವರನ್ನು ಅನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಜಿಲ್ಲಾಡಳಿತವು ಈಗ ಆ ಘಟಕದ ಸುತ್ತಮುತ್ತ ನಿಷೇಧಾಜ್ನೆ ಹೇರಿದೆ. ಕಾರ್ಖಾನೆಯ ಗೇಟಿಗೆ ಬೀಗ ಹಾಕಲಾಗಿದ್ದು, ಗೇಟಿನ ಹೊರಗಡೆ ಪೊಲೀಸ್ ವ್ಯಾನಿನಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮತ್ತು ಟೀ ಸ್ಟಾಲುಗಳಲ್ಲಿ ಗುಂಪು ಸೇರುವ ಹಳ್ಳಿಗರಿಂದ ತಮಗಾದ ಅನ್ಯಾಯ ಮತ್ತು ಜಿಲ್ಲಾಡಳಿತದ ಅಸಡ್ಡೆಯ ಬಗ್ಗೆ ಚರ್ಚೆ. ರೂಪಾಯಿ ೩೬ ಕೋಟಿಯ ಚೈನಾ ಕಂಪೆನಿ ಚೆಂಗುವಾಂಗ್ ನ್ಯಾಚುರಲ್ ಎಕ್ಸ್ಟ್ರಾಕ್ಟ್ಸ್ (ಇಂಡಿಯಾ) ಕಂಪೆನಿಯ ಕಾರ್ಖಾನೆಯನ್ನು ರೂಪಾಯಿ ೩೬ ಕೋಟಿ ವೆಚ್ಚದಲ್ಲಿ ೬೦ ಎಕ್ರೆ ಜಮೀನಿನಲ್ಲಿ ನಿರ್ಮಿಸಲಾಗುತ್ತಿದೆ. ಇದರ ಉತ್ಪಾದನಾ ಸಾಮರ್ಥ್ಯ ವರುಷಕ್ಕೆ ೭,೦೦೦ ಮೆಟ್ರಿಕ್ ಟನ್. ಇದು ಚೆಂಡುಮಲ್ಲಿಗೆ ಹೂಗಳನ್ನು ಸಂಸ್ಕರಿಸಿ ಅದರ ಸಣ್ಣ ಉಂಡೆಗಳನ್ನು ಉತ್ಪಾದಿಸುವ ಕಾರ್ಖಾನೆ. ಇದರ ಅಂತಿಮ ಉತ್ಪನ್ನ ಒಲಿಯೋರೆಸಿನ್. ಉತ್ತಮ ಔಷಧೀಯ ಗುಣಗಳಿರುವ ಇದಕ್ಕೆ ಯುಎಸ್ಎ ದೇಶ, ಚೀನಾ ಮತ್ತು ಯುರೋಪಿನಲ್ಲಿ ಭಾರೀ ಬೇಡಿಕೆ. ಕಣ್ಣಿನ ದೃಷ್ಟಿ ರಕ್ಷಣೆಯ ಔಷಧಿಯಾದ ಲ್ಯುಟೆನ್ ತಯಾರಿಗೆ ಚೆಂಡುಮಲ್ಲಿಗೆಯ ಸಾರವಾದ ಜಾಂತೊಫಿಲ್ ಹೆಸರಿನ ರಾಸಾಯನಿಕದ ಬಳಕೆ.
“ಕರ್ನಾಟಕದಲ್ಲಿ ಹಣ ಹೂಡಿಕೆ ಮಾಡಲು ಬನ್ನಿ” ಎಂದು ರತ್ನಗಂಬಳಿ ಹಾಸಿ ಕರೆಸಿಕೊಂಡ ಕಂಪೆನಿಗಳಲ್ಲೊಂದು ಈ ಚೈನಾ ಕಂಪೆನಿ. ಕರ್ನಾಟಕ ಉದ್ಯೋಗ ಮಿತ್ರ (ಕೈಗಾರಿಕಾ ಯೋಜನೆಗಳಿಗೆ ಪರವಾನಗಿ ನೀಡುವ ಏಕಗವಾಕ್ಷಿ ವ್ಯವಸ್ಥೆ) ಮತ್ತು ವಿಶ್ವ ಹೂಡಿಕೆದಾರರ ಸಮ್ಮೇಳನಗಳು ಹೀಗೆ ಬೃಹತ್ ಯೋಜನೆಗಳನ್ನು ಹಳ್ಳಿಗಳಿಗೆ ಕರೆದು ತರುತ್ತಿವೆ. ಇಂತಹ ಕಂಪೆನಿಗಳ ಉದ್ದೇಶ ಲಾಭ ಗಳಿಕೆ, ಅಲ್ಲವೇ? ಈ ಕಂಪೆನಿಯ ಕಾರ್ಖಾನೆಯಲ್ಲಿರುವುದು ಆರು ಸೈಲೋಗಳು (ನೀರಿನಲ್ಲಿ ಹೂ ತುಂಬಿಸಿ ಸಂಸ್ಕರಿಸುವ ಘಟಕ) ಮತ್ತು ಒಂದು ದ್ರವ್ಯತ್ಯಾಜ್ಯ ಪರಿಷ್ಕರಣಾ ಘಟಕ. ಕಾರ್ಖಾನೆಯ ಮೆನೇಜರ್ ವಾಂಗ್ ಲಿಜಿ ಅಲ್ಲಿನ ಕಾರ್ಯಾಚರಣೆ ವಿವರಿಸುವುದು ಹೀಗೆ: “ನಾವು ದಿನಕ್ಕೆ ೧೫ ಕಿಲೋ ಲೀಟರ್ ನೀರು ಬಳಸಿ ೩೦೦ ಟನ್ ಚೆಂಡುಮಲ್ಲಿಗೆ ಸಂಸ್ಕರಿಸುತ್ತೇವೆ. ಈ ಹೂಗಳನ್ನು ಸೈಲೋಗಳಲ್ಲಿ ೨೦ ದಿನ ಸಂಸ್ಕರಿಸಿ, ರಾಸಾಯನಿಕವನ್ನು ಭಟ್ಟಿ ಇಳಿಸಿ, ಅದನ್ನು ಒಲಿಯೋರೆಸಿನ್ ಆಗಿ ಪರಿವರ್ತಿಸುತ್ತೇವೆ.”
ಚೆಂಡುಮಲ್ಲಿಗೆಯ ಹಂಗಾಮು ಜೂನಿನಿಂದ ಸಪ್ಟಂಬರ್. ಈ ನಾಲ್ಕು ತಿಂಗಳುಗಳಲ್ಲಿ ಎಂಟರಿಂದ ಹತ್ತು ಸಲ ಹೂವಿನ ಕಟಾವು. “ನಾವು ಸ್ಥಳೀಯ ರೈತರಿಂದ ಚೆಂಡುಮಲ್ಲಿಗೆ ಖರೀದಿಸುತ್ತೇವೆ.
ಈ ವರುಷ ೮,೦೦೦ ಎಕ್ರೆಗಳಲ್ಲಿ ಚೆಂಡುಮಲ್ಲಿಗೆ ಬೆಳೆಯಲಾಗಿದೆ. ಮುಂದಿನ ವರುಷ ರೈತರು ೧೮,೦೦೦ ಎಕರೆಗಳಲ್ಲಿ ಬೆಳೆಯಲಿದ್ದಾರೆ. ಚೆಂಡುಮಲ್ಲಿಗೆ ಸಂಸ್ಕರಣಾ ಕಾರ್ಖಾನೆಗಳು ಹಾಸನ ತಿಪಟೂರಿನಲ್ಲಿ ಕಳೆದ ಹತ್ತು ವರುಷಗಳಿಂದ ಕೆಲಸ ಮಾಡುತ್ತಿವೆ.” ಎಂಬುದು ವಾಂಗ್ ನೀಡುವ ಮಾಹಿತಿ. “ನಮ್ಮ ಕಾರ್ಖಾನೆಯಿಂದ ಪರಿಸರಕ್ಕೆ ಏನೂ ಹಾನಿಯಾಗಲ್ಲ. ಯಾಕೆಂದರೆ ಕೊಳಚೆ ನೀರನ್ನು ಸಂಸ್ಕರಿಸಲು ದ್ರವ್ಯತ್ಯಾಜ್ಯ ಸಂಸ್ಕರಣಾ ಘಟಕವಿದೆ. ಈ ಕಾರ್ಖಾನೆಯ ತ್ಯಾಜ್ಯ ಬೇರೆ ಏಜೆನ್ಸಿಗೆ ಮಾರುತ್ತೇವೆ; ಅವರು ಅದರಿಂದ ಗೊಬ್ಬರ ತಯಾರಿಸಲಿದ್ದಾರೆ. ನಾವು ಪರಿಸರ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ್ದಾದರೆ, ಕಾರ್ಖಾನೆ ಮುಚ್ಚಲಿಕ್ಕೂ ಸಿದ್ಧ” ಎಂಬುದು ವಾನ್ ಅವರ ಹೇಳಿಕೆ.
ಆದರೆ, ಈ ಕಾರ್ಖಾನೆಯಿಂದಾಗುವ ಪರಿಸರ ಮಾಲಿನ್ಯದಿಂದಾಗಿ ಸುತ್ತಮುತ್ತಲಿನ ಹಳ್ಳಿಗರ ಆರೋಗ್ಯ ಹದಗೆಡುತ್ತಿದೆ. ಸದಾಶಿವಪ್ಪ ಶಿವಪ್ಪ ಅವರ ೮೦ ವರುಷ ವಯಸ್ಸಿನ ತಂದೆಯವರನ್ನು ಚರ್ಮದ ಎಲರ್ಜಿಯಿಂದಾಗಿ ಆಸ್ಪತ್ರೆಗೆ ಸೇರಿಸ ಬೇಕಾಯಿತು. “ಮಳೆ ಬಂದಾಗೆಲ್ಲ ಈ ಕಾರ್ಖಾನೆಯಿಂದ ನುಗ್ಗಿ ಬರುವ ವಾಸನೆಯಿಂದಾಗಿ ನಮಗೆ ಮನೆಯೊಳಗೆ ಕೂರಲಾಗುತ್ತಿಲ್ಲ. ನನಗೆ ಹಾಗೂ ಪತ್ನಿಗೆ ಕೂಡ ಎಲರ್ಜಿ ಆಗಿದೆ. ಇದಕ್ಕೆ ಯಾವುದೋ ರಾಸಾಯನಿಕ ಕಾರಣ ಅಂತಾರೆ ನಮ್ಮ ಡಾಕ್ಟರು. ಜಿಲ್ಲಾಡಳಿತ ಇದನ್ನು ಗಮನಿಸಬೇಕು” ಎನ್ನುತ್ತಾರೆ ಸದಾಶಿವಪ್ಪ ಶಿವಪ್ಪ. ಈ ಕಾರ್ಖಾನೆಯಿಂದಾಗಿ ಅಲ್ಲಿನ ಅಂತರ್ಜಲ ಕಲುಷಿತವಾಗುತ್ತದೆ ಎಂಬುದು ರೈತರ ಆತಂಕ.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಗುರುಪ್ರಾಸಾದ್, ಅಲ್ಲಿನ ಬೆಳವಣಿಗೆಗಳಿಂದಾಗಿ ರೈತರ ಹಿತಾಸಕ್ತಿಗಳಿಗೆ ಧಕ್ಕೆ ಆಗುತ್ತಿರುವುದನ್ನು ವಿವರಿಸುತ್ತಾರೆ, “ಕಂಪೆನಿಗಳು ರೈತರಿಗೆ ಹೈಬ್ರಿಡ್ ಬೀಜ, ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ಒದಗಿಸಿ ಆಮಿಷ ಒಡ್ಡುತ್ತವೆ. ಇವುಗಳಿಂದಾಗಿ ಮಣ್ಣಿನ ಫಲವತ್ತತೆ ನಾಶ. ಅದಲ್ಲದೆ, ಈ ಒಳಸುರಿಗಳ ಬೆಲೆ ಹೆಚ್ಚಾಗುತ್ತಿದ್ದರೂ, ರೈತರು ನಿಶ್ಚಿತ ದರದಲ್ಲಿಯೇ ತಮ್ಮ ಫಸಲು ಮಾರಬೇಕಾಗಿದೆ. ಇಲ್ಲಿ ರೈತರು ಕಿಲೋಕ್ಕೆ ೫.೩೫ ರೂಪಾಯಿ ದರದಲ್ಲಿ ಚೆಂಡುಮಲ್ಲಿಗೆ ಮಾರುತ್ತಿದ್ದಾರೆ. ಇದರಿಂದ ಪಡೆಯುವ ಒಲಿಯೋರೆಸಿನನ್ನು ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಕಿಲೋಕ್ಕೆ ೧೦,೦೦೦ದಿಂದ ೨೦,೦೦೦ ರೂಪಾಯಿ ಬೆಲೆಗೆ ಮಾರುತ್ತದೆ. ಅಂತೂ ಕಂಪೆನಿಗಳಿಗೆ ಭಾರೀ ಲಾಭ.”
ಇಂಥ ಶೋಷಣೆಗೆ ಇನ್ನೊಂದು ಉದಾಹರಣೆ: ಕಬ್ಬನ್ನು ಸಂಸ್ಕರಿಸಿ ಪಡೆಯುವ ಉಪ-ಉತ್ಪನ್ನಗಳನ್ನು ಭಾರೀ ಬೆಲೆಗೆ ಮಾರುವ ಸಕ್ಕರೆ ಕಾರ್ಖಾನೆಗಳು, ಆ ಲಾಭದ ಕಿಂಚಿತ್ ಪಾಲನ್ನೂ ಕಬ್ಬು ಬೆಳೆಗಾರರಿಗೆ ನೀಡುವುದಿಲ್ಲ. ಯಾಕೆಂದರೆ, ಇಂತಹ ಲಾಭ ಹಂಚಿಕೆಗಾಗಿ ಯಾವುದೇ ಒಪ್ಪಂದವನ್ನು ಕಬ್ಬಿನ ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಳ್ಳುವುದಿಲ್ಲ.
ಅದೇನಿದ್ದರೂ, ಎಲ್ಲ ರೈತರೂ ಚೈನಾ ಕಂಪೆನಿಯ ಕಾರ್ಖಾನೆಯನ್ನು ವಿರೋಧಿಸುತ್ತಿಲ್ಲ. ಬರೆಗಿ ಗ್ರಾಮದ ನಾಗೇಂದ್ರ ಹೇಳುತ್ತಾರೆ, “ಬೇರೆ ಬೆಳೆಗಳೊಂದಿಗೆ ಹೋಲಿಸಿದಾಗ ಹೂವಿನ ಬೇಸಾಯ ಲಾಭದಾಯಕ. ಕಳೆದ ಇಪ್ಪತ್ತು ವರುಷಗಳಲ್ಲಿ ಹತ್ತಿ, ಜೋಳ ಮತ್ತು ಚೆಂಡುಮಲ್ಲಿಗೆ ಬೇಸಾಯ ಮಾಡಿದೆ ನಮ್ಮ ಕುಟುಂಬ. ಚೆಂಡುಮಲ್ಲಿಗೆ ಬೇಸಾಯದಿಂದ ನಮಗೆ ಒಳ್ಳೆಯ ಲಾಭವಾಗಿದೆ. ಯಾಕೆಂದರೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ಕಂಪೆನಿ ಕೊಡುತ್ತದೆ. ಕೊಯ್ಲು ಮತ್ತು ಸಾಗಾಟಕ್ಕೂ ಕಾರ್ಖಾನೆಯವರು ವ್ಯವಸ್ಥೆ ಮಾಡುತ್ತಾರೆ. ಒಂದು ಎಕ್ರೆ ಚೆಂಡುಮಲ್ಲಿಗೆ ಬೇಸಾಯದಿಂದ ೫೦,೦೦೦ ರೂಪಾಯಿ ಕೈಗೆ ಸಿಗುತ್ತದೆ. ಹೂಗಳನ್ನು ಕೊಯ್ದ ನಂತರ, ಗಿಡಗಳನ್ನು ಕಿತ್ತು ಗೊಬ್ಬರ ಮಾಡುತ್ತೇವೆ. ಅನಂತರ ಬೀನ್ಸ್ ಬೀಜ ಬಿತ್ತುತ್ತೇವೆ.”
ನಾಗಮಲ್ಲಯ್ಯ ಮತ್ತು ಪತ್ನಿ ವಿಜಯಲಕ್ಷ್ಮಿ ತಮ್ಮ ಮೊದಲ ಚೆಂಡುಮಲ್ಲಿಗೆ ಫಸಲಿನ ಕೊಯ್ಲು ಮಾಡುತ್ತಿದ್ದಾರೆ, “ನನಗೆ ೩೬ ಗುಂಟೆ ಜಮೀನಿದೆ. ಒಮ್ಮೆ ಚೆಂಡುಮಲ್ಲಿಗೆ ಬೆಳೆಸಿದರೆ, ಎಂಟರಿಂದ ಹತ್ತು ಸಲ ಹೂವಿನ ಫಸಲು ಕೊಯ್ಲು ಮಾಡಬಹುದು. ಇದರಿಂದ ೬೦,೦೦೦ ರೂಪಾಯಿ ವರೆಗೆ ಆದಾಯ ಸಿಗುತ್ತದೆ. ಅದೇ ಒಂದೆಕ್ರೆಯಲ್ಲಿ ಸಿರಿಧಾನ್ಯ ಬೆಳೆಸಿದರೆ, ಕೈಗೆ ಸಿಗೋದು ೧೦,೦೦೦ ರೂಪಾಯಿ ಮಾತ್ರ” ಎನ್ನುತ್ತಾರೆ ನಾಗಮಲ್ಲಯ್ಯ. ಚೈನಾ ಕಂಪೆನಿಯ ಸಮನ್ವಯ-ಕೆಲಸಗಾರನಾದ ದೀಪಕ್, ಮುಂದಿನ ವರುಷ ಹಲವಾರು ರೈತರು ಚೆಂಡುಮಲ್ಲಿಗೆ ಬೇಸಾಯ ಆರಂಭಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಚೈನಾ ಕಂಪೆನಿಯ ಕಾರ್ಖಾನೆಗಾಗಿ ಚೆಂಡುಮಲ್ಲಿಗೆ ಬೆಳೆಸುವ ಗುಂಡ್ಲುಪೇಟೆ ತಾಲೂಕಿನ ಹಳ್ಳಿಗಳ ರೈತರ ಬದುಕು ಬಂಗಾರವಾದೀತೇ? ಕಾದು ನೋಡೋಣ.