ಗುಕೇಶ್ ಗೆಲುವು : ಭಾರತದ ಯುವಶಕ್ತಿಯ ಸಂಕೇತ

ಗುಕೇಶ್ ಗೆಲುವು : ಭಾರತದ ಯುವಶಕ್ತಿಯ ಸಂಕೇತ

ಕೆನಡಾದ ಟೊರಂಟೋದಿಂದ ಸೋಮವಾರ ಬೆಳಿಗ್ಗೆ ಭಾರತಕ್ಕೊಂದು ಶುಭ ಸಮಾಚಾರ ಬಂತು. ಡಿ.ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಪ್ರಶಸ್ತಿಯನ್ನು ಗೆದ್ದು ವಿಶ್ವಚಾಂಪಿಯನ್ ಶಿಪ್ ಫೈನಲ್ ಗೇರಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ೨೦೨೩ರಲ್ಲಿ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ ಫೈನಲ್ ಗೇರಿದ, ಭಾರತದ ಕೇವಲ ೨ನೇ ಆಟಗಾರ ಎನಿಸಿಕೊಂಡಿದ್ದರು. ಆಗವರು ಫೈನಲ್ ನಲ್ಲಿ ಚೆಸ್ ದಂತಕಥೆ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋತಿದ್ದರು.

ಈ ವರ್ಷ ಗುಕೇಶ್ ಇನ್ನೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಚೆಸ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೇರಿದ ಅತ್ಯಂತ ಕಿರಿಯ ಎಂಬ ಸಾಧನೆ ಅವರದ್ದು. ಜತೆಗೆ ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅನಂತರ, ಫೈನಲ್ ಗೇರಿದ ಮೊದಲನೇ ಆಟಗಾರನೂ ಹೌದು. ಪ್ರಜ್ಞಾನಂದ (ವಿಶ್ವಕಪ್) ಮತ್ತು ಗುಕೇಶ್ (ವಿಶ್ವ ಚಾಂಪಿಯನ್ ಶಿಪ್) ಇಬ್ಬರೂ ತಮ್ಮದೇ ರೀತಿಯಲ್ಲಿ ಅಸಾಮಾನ್ಯ ಸಾಧನೆ ಮಾಡಿ, ಭಾರತದ ಚೆಸ್ ಜಗತ್ತನ್ನು ಬೆಳಗಿದ್ದಾರೆ. 

ಪ್ರಜ್ಞಾನಂದ ಕೇವಲ ೧೮ನೇ ವಯಸ್ಸಿನಲ್ಲಿ ಗುಕೇಶ್ ೧೭ನೇ ವಯಸ್ಸಿನಲ್ಲಿ ಇಡೀ ವಿಶ್ವವನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದರ ನಡುವೆ ೨೯ ವರ್ಷದ ವಿದಿತ್ ಗುಜ್ರಾತಿ ಎಂಬ ಇನ್ನೊಬ್ಬ ಆಟಗಾರನೂ ತಮ್ಮ ಪ್ರತಿಭೆಯಿಂದ ಮಿಂಚಿದ್ದಾರೆ. ಇನ್ನು ಮಹಿಳಾ ಕ್ಯಾಂಡಿಡೇಟ್ಸ್ ಚೆಸ್ ನಲ್ಲೂ ಭಾರತಕ್ಕೆ ಅತ್ಯಂತ ಭರವಸೆಯ ಸುದ್ದಿಗಳು ಬಂದಿವೆ. ಕೊನೆರು ಹಂಪಿ ೨ನೇ ಸ್ಥಾನಿಯಾಗಿ ಕೂಟ ಮುಗಿಸಿದರೆ, ಪ್ರಜ್ಞಾನಂದ ಅವರ ಸಹೋದರಿ ಆರ್ ವೈಶಾಲಿ ಸತತ ೫ ಜಯ ಪಡೆದಿದ್ದಾರೆ.

ಈ ಅಷ್ಟೂ ಸಾಧನೆಗಳು ಭಾರತದಲ್ಲಿ ಚೆಸ್ ಕ್ರೀಡೆಯನ್ನು ಯುವಕರು ಗಂಭೀರವಾಗಿ ತೆಗೆದುಕೊಂಡಿದ್ದರ ಸಂಕೇತವಾಗಿದೆ. ಹಾಗೆಯೇ ಎಲ್ಲ ರೀತಿಯ ಕ್ರೀಡೆಗಳೂ ಭಾರತದಲ್ಲಿ ಬೆಳೆಯುತ್ತಿವೆ ಎನ್ನುವುದನ್ನೂ ಖಾತ್ರಿ ಪಡಿಸಿವೆ. ಈ ಹಿಂದೆ ಚೆಸ್ ಅಂದರೆ ವಿಶ್ವನಾಥನ್ ಆನಂದ್ ಎನ್ನುವ ಕಾಲವಿತ್ತು. ಪ್ರಸ್ತುತ ಅಂತಹ ಪರಿಸ್ಥಿತಿಯಿಲ್ಲ. ನೂರಾರು ಪ್ರತಿಭಾವಂತ ಆಟಗಾರರ ಹೆಸರು ಈ ವಿಭಾಗದಲ್ಲಿ ಕೇಳಿ ಬರುತ್ತಿದೆ. ಇವರೆಲ್ಲ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಸಾಧಾರಣ ಆಟವನ್ನು ಆಡುತ್ತಿದ್ದಾರೆ. ಚೆಸ್ ನಲ್ಲಿ ಭಾರತಕ್ಕೆ ಅದ್ಭುತ ಭವಿಷ್ಯವಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. 

ಗುಕೇಶ್ ಮಾಡಿರುವ ಸಾಧನೆ ಸಾಮಾನ್ಯವಾದುದಲ್ಲ. ಅವರ ವಯಸ್ಸನ್ನು ಪರಿಗಣಿಸಿದರೆ, ಈ ಸಾಧನೆಗೆ ಮತ್ತಷ್ಟು ತೂಕ ಬರುತ್ತದೆ. ಈ ವರ್ಷಾಂತ್ಯದಲ್ಲಿ ನಡೆಯುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅವರು ಚೀನಾದ ಡಿಂಗ್ ಲಿರೆನ್ ರನ್ನು ಸೋಲಿಸಿದರೆ, ವಿಶ್ವಚೇತನರೇ ಆಗಲಿದ್ದಾರೆ ! ಎಲ್ಲಕ್ಕಿಂತ ಮುಖ್ಯವಾಗಿ ೧೭ನೇ ವರ್ಷದಲ್ಲಿ ಕ್ಯಾಂಡಿಡೇಟ್ಸ್ ಚೆಸ್ ಪ್ರಶಸ್ತಿಯನ್ನು ಗೆಲ್ಲುವಾಗ ಅವರು, ಫ್ಯಾಬಿಯಾನೊ ಕರುವಾನ (ವಿಶ್ವ ನಂ ೨), ಹಿಕಾರು ನಕಮುರ ( ವಿಶ್ವ ನಂ ೩) ಎದುರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಎಲ್ಲ ಮಾಹಿತಿಗಳು ಗುಕೇಶ್ ಹಾದಿ ಸಲೀಸಾಗಿರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಪ್ರಶಸ್ತಿ ಜಯಕ್ಕೂ ಮುನ್ನ ದೊಡ್ದ ಸವಾಲುಗಳನ್ನು ಅವರು ದಾಟಿರುವುದು, ಭಾರತದ ಯುವಶಕ್ತಿಯ ಸಂಕೇತವಾಗಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೩-೦೪-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ