ಗುಜರಾತಿನ ಮೋಡಿ, ಪಟೇಲರ ಹಾಡಿ..

Submitted by nageshamysore on Thu, 10/31/2013 - 18:08

ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋಚನೆಗಳ ಸಮಷ್ಟಿ ಸಂಗಮ. ಮೆದು ಧೋರಣೆಯ ನೆಹರು ಆಡಳಿತದ ಅಡಿಯಲ್ಲೆ, ಈ ಕಾರ್ಯ ಸಾಧಿಸುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಸಾಕಷ್ಟು ತೊಡಕುಗಳನ್ನೆದುರಿಸಿಯೆ ಅವರು ಭಾರತದ ಎಲ್ಲಾ ಸಂಸ್ಥಾನ, ಅಂಗಭಾಗಗಳನ್ನು ಒಗ್ಗೂಡಿಸಬೇಕಾಯ್ತು. ಅಂದು ಅವರು ಅದನ್ನು ಮಾಡಿರದಿದ್ದರೆ, ಇಂದು ಈ ದೇಶ ಯಾವ ಸ್ಥಿತಿಯಲ್ಲಿ ಛಿದ್ರವಾಗಿರುತ್ತಿತ್ತೊ , ಅಥವಾ ಹೀಗೆ ಭದ್ರ ಒಕ್ಕೂಟವಾಗಿರುತ್ತಿತ್ತೊ ಹೇಳಲು ಬರುವುದಿಲ್ಲ. ಆದರೆ, ಪಟೇಲರ ಆಶಯವನ್ನು ಮೀರಿ ಬಲಾತ್ಕಾರವಾಗಿ ವಿಶ್ವಸಂಸ್ಥೆಯ ನಿರ್ಣಯಕ್ಕೊಪ್ಪಿಸಿದ ಕಾಶ್ಮೀರದ ಉದಾಹರಣೆ ನೋಡಿದರೆ, ಏನಾಗಿರುತ್ತಿತ್ತೆಂದು ಊಹಿಸಲು ಕಷ್ಟವೇನಿಲ್ಲ. ಅದೇನಿದ್ದರೂ, ಇಂದಿನ ಈ ಒಗ್ಗೂಡಿತ ಒಕ್ಕೂಟದ ಅಸ್ತಿಭಾರ ಹಾಕಿ, ಭದ್ರ ನೆಲೆಗಟ್ಟಿನಲ್ಲಿ ನಿಲ್ಲುವಂತೆ ಮಾಡುವಲ್ಲಿ ಪಟೇಲರ ಪಾತ್ರ ಹೋಲಿಕೆಗತೀತವಾದದ್ದು. ನಯ, ಭಯದನುಸಂಧಾನದಿಂದ ಹಿಡಿದು 'ದಂಡಂ ದಶಗುಣಂ' ವರೆಗಿನ ಎಲ್ಲಾ ಅಸ್ತ್ರ ಶಸ್ತ್ರಗಳನ್ನು ಬಳಸಿ ಇದನ್ನು ಸಾಧ್ಯವಾಗಿಸಿದ್ದು ಈ ಉಕ್ಕಿನ ಮನುಷ್ಯನ ಹಿರಿಮೆ. ಅದಕೊಂದು ಕೃತಜ್ಞತೆಯ ಕುರುಹಾಗಿ ಈ ಸರಳ ಕವನದ ಅಶ್ರುತರ್ಪಣ - ಅವರ ಹುಟ್ಟು ಹಬ್ಬದ ಜಯಂತಿಯಂದು.

ಗುಜರಾತಿನ ಮೋಡಿ, ಪಟೇಲರ ಹಾಡಿ 
_______________________________

ಖಂಡ ಖಂಡ ಗೊತ್ತ, ಸ್ವತಂತ್ರ ಭಾರತದ ಒಕ್ಕೂಟ
ಅಖಂಡವಾಗಿಸಲವಿರತ, ದುಡಿದಿದ್ದೊಂದೆ ಚಿತ್ತ ||

ಮನದಿ ಗಾಂಧಿತತ್ವ, ಅಸಹಕಾರ ಚಳುವಳಿ ಸತ್ವ
ಜನರೊಡನೆಯೆ ಒಡನಾಡುತ, ಬೆಳೆದ ನಾಯಕತ್ವ ||

ಸ್ವಾತ್ಯಂತ್ರಾ ಹೋರಾಟಕೆ, ಹೋರಾಟದ ಸ್ವಾತಂತ್ರ
ಬಿಟ್ಟೋಡಿದ ಪರಂಗೀ ಜನರೆ, ಮೆಚ್ಚಿದ ಮಹಾಪಾತ್ರ ||

ಬಿಡುಗಡೆಯೇನೊ ಹಸ್ತ, ದೇಶ ಪೂರಾ ಅಸ್ತವ್ಯಸ್ತ
ಚಿಂದಿ ಛಿದ್ರ ನಾಡಾಗಿಸೊ, ಪುಂಡು ಜನರೆ ಮಸ್ತ ||

ನೆಟ್ಟಗಿರಬೇಕಿರೆ ಮನೆ, ಬೇಕು ಸರಿ ಗೃಹಮಂತ್ರಿ
ಆ ಸಂಧಿ ಕಾಲದಲಿ, ನಿಭಾಯಿಸಿದನೀ ಸ್ವಾತಂತ್ರಿ ||

ಬಾರೆನೆಂದವರ ಒಲಿಸಿ, ಬರದವರ ಎಳೆತರಿಸಿ
ದಂಡಂ ದಶಗುಣಂ ದನಿಸಿ, ಮಿಕ್ಕವರ ಒತ್ತರಿಸಿ ||

ಲಕ್ಷದೀಪಕೆ ಹಾಕುತ ಲಗ್ಗೆ, ಬಿಡದೆಲೆ ಶತ್ರು ನುಗ್ಗೆ
ನಿವಾರಿಸಿ ನಯನೀತಿಗೆ, ಬಾಗದ ನವಾಬರ ಪಿಡುಗೆ ||

ಒಕ್ಕೂಟದಲಿ ವಿಲೀನ, ಮಾಡಿಸುತೆಲ್ಲ ಜನರ ಕನಸ
ನನಸಾಗಿಸಿ ನೆಲೆ ನಿಂತ, ಜನಮನದಿ ಉಕ್ಕಿನ ಮನುಷ್ಯ ||

ಮಾಡಿದ್ದೆಲ್ಲ ಮಹನೀಯ, ಬಾಳಿ ಬದುಕಿದ ಸರದಾರ
ಭಾರತದ ಈ ಒಕ್ಕೂಟ, ಪಟೇಲರು ಕಟ್ಟಿದ ಉಡಿದಾರ ||

ಮಾತವರ ಕೇಳದೆಲೆ, ವಿಶ್ವಸಂಸ್ಥೆ ನ್ಯಾಯಕಿತ್ತ ಕಾಶ್ಮೀರ
ಇನ್ನು ಹರಿಯದ ಗೊಂದಲ, ಮುಂದಾಲೋಚನೆ ದೂರ ||

ಒಗ್ಗೂಡಿಸಿದ ನಮನ, ವಲ್ಲಭ ಭಾಯಿ ಪಟೇಲರ ಧ್ಯಾನ
ಹುಟ್ಟುಹಬ್ಬದ ಗಳಿಗೆಯಲಿ, ಕೃತಜ್ಞತೆಯ ಅಶ್ರುತರ್ಪಣ ||

- ಧನ್ಯವಾದಗಳೊಂದಿಗೆ
    ನಾಗೇಶ ಮೈಸೂರು