ಗುಜರಿ ಬಕೀಟಿನೊಂದಿಗೆ ಶಿವಾಯನಮಹ

ಗುಜರಿ ಬಕೀಟಿನೊಂದಿಗೆ ಶಿವಾಯನಮಹ

ಪುಸ್ತಕದ ಲೇಖಕ/ಕವಿಯ ಹೆಸರು
ಕೃಷ್ಣಮೂರ್ತಿ ಬಿಳಿಗೆರೆ
ಪ್ರಕಾಶಕರು
ನಮ್ಮ ಪ್ರಕಾಶನ, ಬಿಳಿಗೆರೆ, ತಿಪಟೂರು, ತುಮಕೂರು- ೫೭೨೧೧೪
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೩

“ಗುಜರಿ ಬಕೀಟಿನೊಂದಿಗೆ ಶಿವಾಯನಮಹ" ಎಂಬ ವಿಲಕ್ಷಣ ಹೆಸರಿನ ಕೃತಿಯೊಂದನ್ನು ಬರೆದು ಪ್ರಕಟಿಸಿದ್ದಾರೆ ಲೇಖಕರಾದ ಕೃಷ್ಣಮೂರ್ತಿ ಬಿಳಿಗೆರೆ ಇವರು. ಮನುಷ್ಯ ಪಾತ್ರಗಳು ಬಂದರೂ ಅವು ನಿಮಿತ್ತ ಮಾತ್ರ ಇಡಿಯಾದ ನೋಟವನ್ನು ಸಾಧಿಸಿಕೊಂಡಿರುವುದರಿಂದಲೇ ಅವರು ವೈರುಧ್ಯ ಪಾತ್ರಗಳ ಎದಿರು ಬದಿರು ನಿಲ್ಲಿಸಿ ಜಗಳ ಮಾಡಿಸುವುದಿಲ್ಲ. ಭೂಮಿ ತಾಯಿಯ ಸಲುವಾಗಿ ತಾನೇ ಸೇನಾನಿಯಾಗಲು ತೊಡಗುವ ಬರಹಗಳಲ್ಲಿ ಲೇಖಕರು ಮುಳುಗುತ್ತಾರೆ ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಲೇಖಕರಾದ  ಮೊಗಳ್ಳಿ ಗಣೇಶ್‌ ಇವರು. ಇವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

“ಕೃಷ್ಣಮೂರ್ತಿ ಬಿಳಿಗೆರೆ ಹಳ್ಳಿಯ ಬೇರುಗಳ ಮೂಲಕವೇ ಬದುಕನ್ನು ಕಂಡವರು. ಗ್ರಾಮ ಭಾರತದ ಜೀವ ಜಾಲ ಸಂಬಂಧಗಳು ಜನಪದರ ಜೀವನ ವಿಧಾನ ಆಗಿರುತ್ತವೆ. ಅದೇ ಅವರ ಸಂಸ್ಕೃತಿ, ಸಾಮಾಜಿಕ ನಡವಳಿಕೆ, ಬಿಳಿಗೆರೆ ಸಮರ್ಥವಾಗಿ ಹಳ್ಳಿಯ ಬಾಳಿನ ಜೈವಿಕ ಅಂತರಂಬಂಧಗಳನ್ನು ಮೈದುಂಬಿ ಬರೆಯುತ್ತಾರೆ. ಒಬ್ಬ ಜೀವ ವಿಜ್ಞಾನಿ. ಪರಿಸರ ತಜ್ಞ.. ಅಂದರೆ ಅಖಂಡವಾದ ಮಾನವ ವಿಜ್ಞಾನಿಯ ಹಲವು ಆಯಾಮಗಳು ಕೃಷ್ಣಮೂರ್ತಿಯ ಪ್ರಜ್ಞೆಯಲ್ಲಿ ಮಿಳಿತವಾಗಿವೆ. ಚರಿತ್ರೆಯ ಪ್ರಾಧ್ಯಾಪಕನಾಗಿ ವೃತ್ತಿ ಮಾಡುವ ಈ ಲೇಖಕ ವಿಜ್ಞಾನಗಳ ಚರಿತ್ರೆಗಳನ್ನು ಅರಿತು ಬರೆಯುವುದು ಅಪರೂಪದ್ದು.

ಕನ್ನಡದಲ್ಲಿ ವಿಜ್ಞಾನ ಲೇಖಕರು ಹಲವರಿದ್ದಾರೆ ಅವರು ವಿಜ್ಞಾನದ ಬೆಳಕಲ್ಲಿ ಸುತ್ತಣ ಪರಿಸರದ ಆಗುಹೋಗುಗಳ ಬಗ್ಗೆ ಚೆನ್ನಾಗಿಯೇ ಬರೆಯುತ್ತಾರೆ. ಅಂತಹ ಅತಿ ಸೂಕ್ಷ್ಮ ಬರಹಗಾರರಲ್ಲಿ ನಾಗೇಶ್ ಹೆಗಡೆ ವಿಶೇಷವಾಗಿ ಕಾಣುತ್ತಾರೆ. ಪೂರ್ಣಚಂದ್ರ ತೇಜಸ್ವಿ ವಿಜ್ಞಾನದ ಆತ್ಯಂತಿಕ ಸ್ಥಿತಿಯಾದ ನಿಗೂಢಗಳ ಜಾಡು ಹಿಡಿದು ನಿಸರ್ಗದ ಅನುಭವವನ್ನು ವೈಜ್ಞಾನಿಕ ಅನುಭಾವದ ಇನ್ನೊಂದು ಘನವಾದ ಸ್ಥಿತಿಯತ್ತ ಕೊಂಡೊಯ್ದು ಅಪಾರ ಕುತೂಹಲವನ್ನು ಬಿತ್ತುತ್ತಿದ್ದರು. ಕೃಷ್ಣಮೂರ್ತಿ ಬಿಳಿಗೆರೆ ಅವರು ತನ್ನ ಸುತ್ತಣ ಲೋಕದ ರಾಕ್ಷಸ ರೂಪಗಳು ಹೇಗೆ ಪರಿಸರವನ್ನು ನಾಶಪಡಿಸುತ್ತ ಜೀವ ಜಾಲದ ಕೊಂಡಿಗಳ ಕಡಿಯುತ್ತಿವೆ ಎಂಬುದನ್ನು ಆತಂಕ, ವಿಷಾದ, ಸಾತ್ವಿಕ ಸಿಟ್ಟಿನಿಂದ ಬರೆಯುತ್ತಲೇ ಎಚ್ಚರ ಮೂಡಿಸುವತ್ತ ಮುಂದಾಗುತ್ತಾರೆ. ಕೃಷ್ಣಮೂರ್ತಿಯ ಇಂತಹ ಬರಹಗಳು ಸಾಹಿತ್ಯದ ಉಪಾದಿಯವಲ್ಲ. ಅದರ ರೀತಿ ನೀತಿ ರಗಳೆಗಳನ್ನು ಬಿಳಿಗೆರೆ ತಂದು ಇಲ್ಲಿ ಒದರುವುದಿಲ್ಲ. ಕನ್ನಡ ಸಾಹಿತ್ಯದ ಈ ಮೂರು ನಾಲ್ಕು ದಶಕಗಳ ಅವಧಿಯಲ್ಲಿ ಬಂದ ಅನೇಕ ಲೇಖಕರ ಪೈಕಿ ಕೃಷ್ಣಮೂರ್ತಿ ನಿಸ್ಸಂದೇಹವಾಗಿ ಬಹುಮುಖ ಪ್ರತಿಭೆಯ ವೈವಿಧ್ಯ ಬರಹಗಾರ.

ಇವರ ಮರದಡಿಯ ಮನುಷ್ಯ ಪುಸ್ತಕ ಬಂದಾಗ ಅದನ್ನು ಓದಿ ಎಷ್ಟು ಚೆಂದ ಪ್ರಬಂಧಗಳ ಬರೆದಿದ್ದಾನಲ್ಲಾ ಎಂದು ಪತ್ರ ಬರೆದಿದ್ದೆ. ಸಕ್ಕರೆಯ ಪಾಕದಲ್ಲಿ ಅದ್ದಿ ಬರೆದರೆ ಹೇಗಿರಬಹುದು ಬಹಳ ಸವಿ ಸಿಹಿ ಹಿತವಾಗಿರುತ್ತದೆ. ಸರಿ. ಆದರೆ ಕೃಷ್ಣಮೂರ್ತಿ ತನ್ನ ಆತ್ಮವನ್ನೇ ಮಣ್ಣ ಪಾಕದಲ್ಲಿ ಅದ್ದಿ ಅದ್ದಿ ಬರೆದಂತಿದೆ. ಇದು ಸಾಧಾರಣ ಅಲ್ಲ. ಅಪರೂಪದ ಸೃಜನಶೀಲತೆ, ಅವರ ವಾರಿಗೆಯ ಯಾವ ಬಿಳಿಗೆರೆ ಇಂತಹ ಘನವಾದ ಸಂಗತಿಗಳನ್ನೆಲ್ಲ ಘನ ಘೋರವಾಗಿ ಬಾಯಿ ಬಡಿದು ಬಂಬಡಾ ಬಜಾಯಿಸಿಕೊಂಡು ಬರೆಯುವುದಿಲ್ಲ. ಸೆನ್ಸ್ ಆಫ್ ಸೆಟೈರ್, ಹೂಮ‌ ಹಾಗೂ ಸೆನ್ಸ್ ಆಫ್ ಲಾಸ್ ದಟ್ಟವಾಗಿ ಆವರಿಸಿದೆ. ವ್ಯಂಗ್ಯ ವಿನೋದ ಹರಟೆಯ ಗುಣಗಳ ಜೊತೆಗೆ ದುರಂತ ಪ್ರಜ್ಞೆಯೂ ಬೆಸುಗೆಗೊಂಡು ಬರಹ ಆತ್ಮೀಯವಾಗುತ್ತದೆ. ಮೆಲ್ಲ ಮೆಲ್ಲಗೆ ನಗಿಸುತ್ತಲೇ ಕಿಲಾಡಿಯ ಕಣ್ಣೋಟ ಬರಹಕ್ಕೆ ಲವಲವಿಕೆ ತಂದಿದೆ. ಮೆಚ್ಚಿನ ನಾಯಿ ಮುದ್ದನ ಪ್ರಸಂಗ ಮಾರ್ಮಿಕವಾಗಿದೆ.

ಅತ್ತ ಕಥೆ, ಇತ್ತ ಆತ್ಮಕಥೆಯ ಜಾಡಿನಲ್ಲಿ ಈ ಪ್ರಬಂಧ ಅದ್ಭುತವಾಗಿ ಮೈದಾಳಿದೆ. ಗುಜರಿ ಬಕೀಟಿನ ಪ್ರಕರಣದ ಪುಟ್ಟ ಕಥೆಯು ತಟ್ಟನೆ ನಿಂತಂತೆ ಭಾಸವಾಗುತ್ತದೆ. ಹಿತಮಿತವಾದ ಸಂಯಮಿ ಬರಹದಲ್ಲಿ ಸಹನೆಯನ್ನು ನಿರ್ವಹಿಸುವ ಕೃಷ್ಣಮೂರ್ತಿಯ ಗದ್ಯದಲ್ಲಿ ಮಾನವ ಪ್ರೀತಿ ಉದಾರವಾಗಿ ಚದುರಿದೆ. ಬಾಲ್ಯ ಕಾಲವನ್ನು, ಅವತ್ತಿನ ಬದುಕನ್ನು ಗೆಳೆಯರನ್ನು ಉತ್ಕಟವಾಗಿ ನೆನೆವ ಬರಹಗಳಲ್ಲಿ ಬಿಳಿಗೆರೆಯ ಸುಂದರ ಲೋಕ ಹಾರಾಡಿದಂತೆ ಬರಹದಲ್ಲಿ ಭಾಸವಾಗುತ್ತದೆ. ತೋಟ ತುಡಿಕೆ, ಹೊಲಗದ್ದೆ, ಬೆಟ್ಟ ಗುಡ್ಡ ಹಳ್ಳ ಕೊಳ್ಳ ಕೆರೆಕಟ್ಟೆ ತೊರೆಗಳ ಬಗ್ಗೆ ಅಪಾರವಾಗಿ ಅರ್ಪಿಸಿಕೊಳ್ಳುವ ಕೃಷ್ಣಮೂರ್ತಿ ನಮ್ಮ ಕಾಲದ ಭಾವ ಜಗತ್ತಿನ ಬಲವಾದ ಕೊಂಡಿ ಬರಹಗಾರ.

ತುಮಕೂರಿನ ತಟ್ಟೆ ಇಡ್ಲಿ ರಾಜಣ್ಣನ ಹೋಟೆಲ್ ತಿಂಡಿಗೆ ಮಾರು ಹೋಗುವುದು, ಪ್ರೇಮ ಪತ್ರ ಪ್ರಸಂಗದಲ್ಲಿ ಸಿಕ್ಕಿ ಬಿದ್ದು ತಂದೆಯಿಂದ ಗೂಸಾ ತಿನ್ನುವುದೂ, ಬಗೆಬಗೆಯ ಹೋಟೆಲುಗಳ ತಿಂಡಿ ಪೋತರಾಗುವುದು ಬಹಳ ಚೆನ್ನಾಗಿ ಮೂಡಿವೆ.

ಪ್ರಬಂಧಗಳೆಲ್ಲ ಹೆಚ್ಚು ಪರಿಸರ ಪ್ರಜ್ಞೆಯಿಂದ ಹುಟ್ಟಿವೆ. ಮಧುರ ಬಾಲ್ಯದ ನೆನಪುಗಳ ನಡುವೆಯೇ ಪರಿಸರ ವಿಜ್ಞಾನದ ವಿಚಾರಗಳನ್ನು ಪೋಣಿಸುವ ರೀತಿಯು ಹೊರೆ ಎನಿಸುವುದಿಲ್ಲ. ವಿಚಾರಗಳ ಲಹರಿಯೂ ಬೇಕು. ಹಾಗೆಯೇ ಬಿಸಿಲೆಂದರೆ, ಬೆಳಗಾಗುವುದೆಂದರೆ ಸಕಲ ಚರಾಚರ ವಸ್ತು ಅವಸ್ತು ಜಗತ್ತೆಲ್ಲ ಹೇಗೆ ಎಚ್ಚರವಾಗುತ್ತವೆ ಎಂಬುದನ್ನು ಧ್ವನಿ ಪೂರ್ಣವಾಗಿ ಬಿಳಿಗೆರೆ ನಿರೂಪಿಸುತ್ತಾರೆ. ಎಷ್ಟು ಗಾಢವಾಗಿ ಕೃಷ್ಣಮೂರ್ತಿ ಈ ಬರಹಗಳಲ್ಲಿ ಮುಳುಗಿರುತ್ತಾರೆ ಎಂದರೆ, ಎಲ್ಲಿ ಕೆರೆಕಟ್ಟೆ ಹಳ್ಳಗಳು ಕಂಡವೊ. ಆ ನೀರಿಗೆ ಹೋಗಿ ಎಮ್ಮೆಗಳು ಕೆಡೆದುಕೊಂಡವು ಮರಳಿ ಅವನ್ನು ಕಟ್ಟೆಯಿಂದ ಎಬ್ಬಿಸಿ ಹೊರಕ್ಕೆ ಹೊಡೆ ತರುವುದು ಬಹಳ ಕಷ್ಟ. ಕಲ್ಲು ಹೊಡೆದು ಬೆದರಿಸಿದರೂ ಜಪ್ಪಯ್ಯ ಎನ್ನುವುದಿಲ್ಲ. ಎಮ್ಮೆಗಳಿಗೂ ಹಿಪ್ಪೆಗಳಿಗೂ ಅನಾದಿ ಕಾಲದ ನೆಂಟಸ್ತಿಕೆ ಇರಬಹುದು. ಹಿಪ್ಪೆಗಳಿಗೆ ಬಗ್ಗಡದ ನೀರೇ ಬಂಗಾರ ಅದಿರಲಿ. ಜೀವ ಜಾಲದ ಸಂಗತಿಗಳು ಎಲ್ಲೆಲ್ಲಿ ಆಕರ್ಷಕವಾಗಿ ಕಾಣುತ್ತವೊ; ಅಂತೆಲ್ಲ ಸಂಗತಿಗಳ ಬಗ್ಗೆ ನಮ್ಮ ಮಹಿಷಗಳಂತೆಯೇ ಬಿಳಿಗೆರೆ ಕೂಡ ಅತ್ಯಾಪ್ತವಾಗಿ ಧುಮುಕಿ ಆ ಸಂಗತಿಗಳ ಆಳ ಅಗಲವ ನೋಡೆ ಬಿಡುವೆ ಎಂಬಂತೆ ಢಮಾರನೆ ಲೇಖಕರಲ್ಲಿಯೂ ಈ ಪರಿಯ 'ಭೂಮಿಗೀತ' ದ ಗುಣವಿಲ್ಲ. ಮಣ್ಣಿಗೆ ಅಂಟಿಕೊಂಡರೆ ಸಾಕು ಬೀಜ ಮೊಳಕೆವೊಡೆಯುತ್ತದೆ. ಕೃಷಮೂರ್ತಿ ಸಾಮಾಜಿಕ ವಿಕಾರಗಳ ಜೊತೆಯಲ್ಲಿ ಗಾಳಿಯ ಗುದ್ದಾಟ ಮಾಡುವುದಿಲ್ಲ. ಅವರ ಆರಂಭದ ಬರಹಗಳಿಂದ ಈ ಸಂಕಲನದ ತನಕ ದಟ್ಟವಾಗಿ ತುಂಬಿಕೊಂಡಿರುವ ಪಾತ್ರಗಳು ಜೀವಜಾಲದು.

ಮನುಷ್ಯ ಪಾತ್ರಗಳು ಬಂದರೂ ಅವು ನಿಮಿತ್ತ ಮಾತ್ರ ಇಡಿಯಾದ ನೋಟವನ್ನು ಸಾಧಿಸಿಕೊಂಡಿರುವುದರಿಂದಲೇ ಅವರು ವೈರುಧ್ಯ ಪಾತ್ರಗಳ ಎದಿರು ಬದಿರು ನಿಲ್ಲಿಸಿ ಜಗಳ ಮಾಡಿಸುವುದಿಲ್ಲ. ಭೂಮಿ ತಾಯಿಯ ಸಲುವಾಗಿ ತಾನೇ ಸೇನಾನಿಯಾಗಲು ತೊಡಗುವ ಬರಹಗಳಲ್ಲಿ ಮುಳುಗುತ್ತಾರೆ. ಆದರೆ ಎಲ್ಲೂ ಈ ಬರಹಗಾರ ಪರಿಸರ ತಜ್ಞನಂತೆ ವೇಷ ಹಾಕುವುದಿಲ್ಲ. ಬಿಳಿಗೆರೆಯ ಒಟ್ಟು ಸೃಜನಶೀಲ ವ್ಯಕ್ತಿತ್ವವೇ ಮಣ್ಣಸಾರಕ್ಕೆ ಗಾಳಿ, ಬೆಳಕು, ನೀರು, ಪ್ರಾಣಿ ಪಕ್ಷಿ, ಮರ, ಗಿಡ, ಚಿಟ್ಟೆ. ಕಾಡು ಹಣ್ಣು ಹಸಿರು ಹೀಗೆ ಸಾವಯವವಾಗಿ ಬದುಕುವ ಬರೆಯುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದಾರೆ.

ಪ್ರಸ್ತುತ ಸಂಕಲನ ಆಪ್ತವಾದ ಬಾಲ್ಯಕಾಲದ ಜೀವನಾನುಭವಗಳಿಂದ ಆತ್ಮಕಥನವನ್ನು ಮಂಡಿಸುವಂತೆ ತೆರೆದುಕೊಳ್ಳತ್ತದೆ. ಎಲ್ಲೂ ಬಿಳಿಗೆರೆ ಈರ್ಷೆಯ ವಿಷಯಗಳತ್ತ ತಿರುಗಿಯೂ ನೋಡುವುದಿಲ್ಲ. ಕೃಷ್ಣಮೂರ್ತಿ ಅಳಿನ ಅಂಚಿನ ವೃಕ್ಷ ಸಂಹಿತೆಯ ಬಗ್ಗೆ ಗಾಢವಾದ ವಿಷಾದ ವ್ಯಕ್ತಪಡಿಸುತ್ತಾರೆ. ಮರಗಿಡಗಳ ಬಗ್ಗೆ ಇರುವಷ್ಟು ವಿಶ್ವಾಸ ಖಂಡಿತ ಮನುಷ್ಯರ ಬಗ್ಗೆ ಇಲ್ಲ. ಅಷ್ಟರ ಮಟ್ಟಿಗೆ ಜೀವ ಜಾಲದ ಅಖಂಡತೆಯನ್ನು ಆವಾಹಿಸಿಕೊಂಡಿರುವ ಲೇಖಕರು ಹೇಳಬೇಕಾದ ಕಥನವನ್ನು ಪರಿಣಿತ ಕಥೆಗಾರರ ದಾಟಿಯಲ್ಲಿ ನಿರೂಪಿಸುತ್ತಾರೆ.

ತೇಜಸ್ವಿ ಅವರ ಪ್ರಭಾವ ಅವರ ಮೇಲೆ ಇರುವಂತೆ ಕಾಣುತ್ತದೆ. ಛಿದ್ರ ಸಮಾಜಗಳ ಬಗ್ಗೆ ಎಷ್ಟು ಬರೆದರೂ ಅಷ್ಟೆಯೇ ಎಂಬಂತಿರುವ ಈ ಕಾಲದಲ್ಲಿ ನಮ್ಮನ್ನೆಲ್ಲ ಹಡೆದು ಸಲಹುತ್ತಲೇ ಬಂದಿರುವ ಭೂಮಿಗೆ ಆಳವಾದ ಗಾಯಗಳಾಗಿ ಬಿಟ್ಟರೆ ಯಾರು ಮುದ್ದಿಕುವವರು ಯುದ್ಧಗಳಿಂದಾದ ಅಣು ಬಾಂಬುಗಳ ಗಾಯಗಳು ಇನ್ನೂ ವಾಸಿ ಆಗಿಲ್ಲವಲ್ಲ ನಾಳೆ ಇನ್ನೇನೇನು ಮಹಾಗಾಯಗಳು ಮಹಾಯುದ್ಧಗಳಿಂದ ಆಗಬಲ್ಲವು ಎಂಬ ಆತಂಕವನ್ನು ಬಿಳಿಗೆರೆ ಸೂಕ್ಷ್ಮವಾಗಿ ಮುಟ್ಟಿಸುತ್ತಾರೆ. ಭೂಮಿಯ ಮೇಲಿನ ಮೂಲ ಜೈವಿಕ ಗುಣ ಎಂದರೆ ಬೀಜೋತ್ಪತ್ತಿ, ಭೂಮಿಯೇ ತನಗಾಗಿ ಸೃಷ್ಟಿಸಿಕೊಂಡಿದ್ದ ಬೀಜಗಳಿಂದ ಪರಿಸರದಲ್ಲಿ ಸಮತೋಲನ ಇತ್ತು. ಈಗ ಹೈಬ್ರಿಡ್‌ ಬೀಜಗಳಿಂದ ಏನೇನಾಗುತ್ತಿದೆ ಎಂದು ಎಲ್ಲೆಲ್ಲಿಗೋ ಜಿಗಿದು; ಇಡೀ ಭೂಮಿಯೇ ಒಂದು ಆಕಾಶ ಬೀಜ. ಈ ಬೀಜ ಬರಡಾಗಿ ಚಂದ್ರನಂತೆ ಒಣ ಗುಂಡಾದರೆ ಆಗ ಏನು ಮಾಡುವುದು ಎಂಬ ಎಚ್ಚರಿಕೆಯನ್ನು ಬಿಳಿಗೆರೆ ಈ ಬರಹಗಳಿಂದ ನೀಡುತ್ತಾರೆ.

ಜಿಗಿದು ಮುಳುಗಿ ಮುಳುಗಿ ಜೀವದ ಹಂಗು ತೊರೆದು ಬರೆಯಲು ಹಾತೊರೆಯುತ್ತಾರೆ. ಅದರಿಂದಲೇ ಈ ಬರಹಗಳು ಜೀವಜಾಲದ ಅತೀತ ಮುಗ್ಧತೆಯನ್ನು ತುಂಬಿಕೊಂಡು ಅನಾವರಣಗೊಂಡಿರುವುದು. ನಿಸರ್ಗದಲ್ಲಿ ವ್ಯಕ್ತವಾದ ತಿಳುವಳಿಕೆಗಿಂತಲೂ ಅವ್ಯಕ್ತವಾದ ಸತ್ಯಗಳೇ ಅಪಾರವಾಗಿವೆ. ಹಾಗೆ ನೀರಾಳ ಜಿಗಿದಾಗ ಈಜು ಬಾರದಿದ್ದ ಬಾಲಕ ಕೃಷ್ಣಮೂರ್ತಿಯನ್ನು ಜೀವಾಪಾಯದಿಂದ ರಕ್ಷಿಸಿ ಉಳಿಸಿದ್ದು ಕೂಡ ಇವೆ ಎಮ್ಮೆಗಳು. ಕೃಷ್ಣಮೂರ್ತಿ ಅವತ್ತಿಂದ ಇವತ್ತಿನ ತನಕ ಸೃಜನಶೀಲತೆಯ ಈ ಪರಿಯ ನಿಸರ್ಗ ನಿಷ್ಟೆ ಪ್ರಜ್ಞೆಯಲ್ಲಿ ಬರೆಯುತ್ತ ಬಂದಿರುವುದೇ ಒಬ್ಬ ಲೇಖಕನ ದೀರ್ಘ ಪಯಣ.

ಅಭಿವೃದ್ಧಿ ರಾಜಕಾರಣದ ಹೆಸರಲ್ಲಿ ಎಲ್ಲಿ ಹಸಿರು ವಲಯಗಳ ಮೇಲೆ ಕಣ್ಣಿಟ್ಟಿರುವ ಭ್ರಷ್ಟರು ಎಗ್ಗಿಲ್ಲದೆ ಮೆರೆಯುತ್ತಿರುವಾಗ ಲೇಖಕ ನಿಜವಾದ ಅರ್ಥದಲ್ಲಿ ಕೂಗು ಮಾರಿ ಹಕ್ಕಿಯಾಗಬೇಕು. ಆ ರೂಪಕವೂ ಈಗ ಮಾರಾಟವಾಗಿ ಬಿಟ್ಟಿದೆ. ಕೊನೆಯ ಪಕ್ಷ ಲೇಖಕ ತನ್ನ ಸುತ್ತಣ ನಿಸರ್ಗದ ಬಗ್ಗೆ ಒಂದು ಜೀರುಂಡೆ ಹುಳದಂತಾದರೂ ನಿರಂತರವಾಗಿ ಏನೊ ಒಂದು ಸದ್ದನ್ನು ಮಾಡುತ್ತಲೇ ಇರಬೇಕು. ಕೃಷ್ಣಮೂರ್ತಿ ಬಿಳಿಗೆರೆ ಆ ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ. ಕೃಷ್ಣಮೂರ್ತಿ ಮುಂದೆ ಏನು ಬರೆಯುವರೋ ಗೊತ್ತಿಲ್ಲ. ಅದು ಇನ್ನಷ್ಟು ಪ್ರಖರವಾಗಿ ಎಚ್ಚರಿಸುವ ಕೆಲಸ ಮಾಡಲಿ.”