ಗುಡ್ ಬೈ ಆಸ್ತ್ಮ

ಗುಡ್ ಬೈ ಆಸ್ತ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ಕಾಕುಂಜೆ ಕೇಶವ ಭಟ್ಟ
ಪ್ರಕಾಶಕರು
ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೧೬

ಆಸ್ತ್ಮಾ ಅಥವಾ ಅಸ್ತಮಾ ಒಂದು ಭೀಕರ ತೊಂದರೆ. ಈ ಸಮಸ್ಯೆಯಿಂದ ನಮಗೆ ಸರಾಗವಾಗಿ ಉಸಿರಾಡಲು ಬಹಳ ಸಮಸ್ಯೆಯಾಗುತ್ತದೆ. ಆಸ್ತ್ಮಾ ನಿವಾರಣೆಗೆ ಸರಳ ಯೋಗ ಚಿಕಿತ್ಸಾ ಮಾರ್ಗದರ್ಶಿಯೇ-ಗುಡ್ ಬೈ ಆಸ್ತ್ಮಾ. “ ಸ್ವಚ್ಚಂದವಾಗಿ, ನಿರಾತಂಕವಾಗಿ ಉಸಿರಾಡುವುದೊಂದು ಆಹ್ಲಾದಕರ ಪ್ರಕ್ರಿಯೆ. ಆದರೆ ಸರ್ವರೂ ಸರ್ವಕಾಲದಲ್ಲೂ ಅದೃಷ್ಟವಂತರಾಗಿರದೇ, ಕೆಲವರು ಆಸ್ತ್ಮಾದಂತಹ ಉಸಿರುಗಟ್ಟಿಸುವ ಜಟಿಲವಾದ ಕಾಯಿಲೆಯಿಂದ ಬಳಲುತ್ತಾರೆ. ಈ ಕ್ಲಿಷ್ಟಕರವಾದ ಕಾಯಿಲೆ ಬಗ್ಗೆ ಕಾಕುಂಜೆ ಕೇಶವ ಭಟ್ಟರು ಈ ಹೊತ್ತಿಗೆಯಲ್ಲಿ ಸಾಕಷ್ಟು ಬೆಳಕು ಚೆಲ್ಲಿದ್ದಾರೆ.

ಲೇಖಕರು ಹಲವಾರು ವೈದ್ಯಕೀಯ ಪುಸ್ತಕಗಳನ್ನು ಓದಿ, ವಿಷಯಗಳನ್ನು ಕ್ರೋಢೀಕರಿಸಿ, ಸರಳವಾಗಿಸಿ ಜನಸಾಮಾನ್ಯನಿಗೆ ತಲುಪುವಂತೆ ಬರೆದ ಶೈಲಿ ಶ್ಲಾಘನೀಯ. ಉಸಿರಾಟದ ಅಂಗಗಳ ರಚನೆ, ಅದರ ಕಾರ್ಯವೈಖರಿಯಿಂದ ಪ್ರಾರಂಭಿಸಿ, ಆಸ್ತ್ಮದಲ್ಲಿ ಈ ಅಂಗಗಳಲ್ಲುಂಟಾಗುವ ಬದಲಾವಣೆ ಬಗ್ಗೆ ತಿಳಿಸುತ್ತ, ಈಗ ಲಭ್ಯವಿರುವ ಚಿಕಿತ್ಸಾಕ್ರಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ಯೋಗ ಈ ರೋಗಗಳನ್ನು ಗುಣಪಡಿಸುವಲ್ಲಿ ಎಂತಹ ಮಹತ್ತರವಾದ ಪಾತ್ರವನ್ನು ವಹಿಸಬಲ್ಲದೆಂಬುದನ್ನು ಸವಿವರವಾಗಿ ಬರೆದಿದ್ದಾರೆ.

ಪ್ರತಿ ಆಸ್ತ್ಮ ರೋಗಿಯನ್ನು ಗಮನದಲ್ಲಿಟ್ಟು ಬರೆದ ಈ ಕೃತಿ ಪರಿಪೂರ್ಣತೆಯ ಪ್ರತೀಕ ಮತ್ತು ರೋಗಿಯ ಬಗ್ಗೆ ಇರುವ ಕಾಳಜಿಯ ಸಂಕೇತ.” ಎಂದು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಲಲಿತಾ ಅವಧಾನಿ ಇವರು.

ಲೇಖಕರು ತಮ್ಮ ಮನೋಗತದಲ್ಲಿ “ಈ ಪುಸ್ತಕದಲ್ಲಿ ಆಸ್ತ್ಮ ಮತ್ತು ಉಸಿರಾಟದ ತೊಂದರೆಯ ನಿವಾರಣೆ ಕುರಿತಾಗಿ ಸರ್ವಸಾಮಾನ್ಯರಿಗೂ ಕೂಡ ಸುಲಭವಾಗಿ ಅರ್ಥವಾಗುವಂತಹ ಒಂದಷ್ಟು ಸಂಗತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಮಾರ್ಗದರ್ಶಿಯಾಗಿ ನೀಡಲು ಪ್ರಯತ್ನ ಮಾಡಿದ್ದೇನೆ. ಜೊತೆಗೆ, ಯೋಗದ ಮೂಲಕ ಆಸ್ತ್ಮ ಮತ್ತು ಉಸಿರಾಟದ ತೊಂದರೆಯ ನಿವಾರಣೆಗೆ ಹೇಗೆ ಪರಿಹಾರ ದೊರಕೀತು ಎಂಬ ಬಗ್ಗೆಯೂ ಕೂಲಂಕಷವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ. ಇಲ್ಲಿ ಶಬ್ದ, ವಿಷಯಗಳ ಪುನರುಕ್ತಿ ಯಥೇಚ್ಚವಾಗಿ ಆಗಿದೆ. ಆದರೆ ಅವೆಲ್ಲವೂ ವಿಷಯ ಮನನದ ದೃಷ್ಟಿಯಿಂದ ಅತ್ಯಗತ್ಯ ಎಂದು ಭಾವಿಸಿದ್ದೇನೆ. ಸಹೃದಯಿ ವಿದ್ವಜ್ಜನರು ಹಾಗೆಯೇ ಸ್ವೀಕರಿಸಬೇಕು ಎಂಬುವುದು ನನ್ನ ನಮ್ರ ವಿನಂತಿ. ಒಟ್ಟಾರೆಯಾಗಿ, ಶಾಂತಿ, ನೆಮ್ಮದಿಯಿಂದ ಆರೋಗ್ಯಯುಕ್ತ ಜೀವನವನ್ನು ನಡೆಸಲು ಈ ಕಿರುಹೊತ್ತಿಗೆಯು ಓದುಗರಿಗೆ ನೆರವಾದರೆ ನನ್ನ ಪರಿಶ್ರಮ ಸಫಲವಾದಂತೆ.” 

ಪುಸ್ತಕದ ಪರಿವಿಡಿಯಲ್ಲಿ ಎರಡು ಅಧ್ಯಾಯಗಳಿವೆ. ಅಧ್ಯಾಯ ಒಂದರಲ್ಲಿ ಅಧ್ಯಯನ ಪಠ್ಯ ಹಾಗೂ ಎರಡನೇ ಅಧ್ಯಾಯದಲ್ಲಿ ಅಭ್ಯಾಸ ಪಾಠ ಇವೆ. ಯೋಗವ್ಯಾಯಾಮ, ಉಸಿರಾಟದ ವ್ಯಾಯಾಮ, ಸೂರ್ಯ ನಮಸ್ಕಾರ, ಯೋಗಾಸನಗಳು, ಉಸಿರಾಟದ ಕ್ರಿಯೆಗಳು, ಪ್ರಾಣಾಯಾಮ, ಧ್ಯಾನ ಎಂಬ ಭಾಗಗಳಲ್ಲಿ ಸೊಗಸಾಗಿ ಚಿತ್ರ ಸಹಿತ ಯೋಗದ ನಿರೂಪಣೆ ಮಾಡಿದ್ದಾರೆ. ಇವೆಲ್ಲಾ ಯೋಗ ಮತ್ತು ಧ್ಯಾನ ನಿಮ್ಮನ್ನು ಆಸ್ತ್ಮಾದಿಂದ ಹೊರ ಬರಲು ಸಹಾಯ ಮಾಡುತ್ತವೆ. ಇದರ ಜೊತೆಗೆ ಆಸ್ತ್ಮಾ ಬಗ್ಗೆ, ಅದರಿಂದಾಗುವ ಮಾನಸಿಕ ಒತ್ತಡ, ಆ ಒತ್ತಡವನ್ನು ನಿರ್ವಹಿಸುವ ಬಗೆ, ಆಸ್ತ್ಮ ನಿವಾರಣೆಗೆ ಕೆಲವೊಂದು ಆಪ್ತ ಸಲಹೆಗಳು ಹಾಗೂ ಯೋಗದ ಅಭ್ಯಾಸಕ್ಕೆ ಮೊದಲು ಮುನ್ಸೂಚನೆಗಳು ಹಾಗೂ ಎಚ್ಚರಿಕೆಗಳನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. 

ಸುಮಾರು ೧೭೦ ಪುಟಗಳ ಈ ಪುಸ್ತಕವನ್ನು ಲೇಖಕರು ಪೂಜ್ಯ ಗುರುವರ್ಯ- ಯೋಗಾಚಾರ್ಯ ಪದ್ಮಭೂಷಣ ಡಾ॥ ಬಿ.ಕೆ.ಎಸ್. ಐಯ್ಯಂಗಾರ್ ಇವರಿಗೆ ಸಮರ್ಪಿಸಿದ್ದಾರೆ.