ಗುಪ್ತಗಾಮಿನಿ ಸರಸ್ವತಿಯ ಹುಡುಕಾಟದಲ್ಲಿ...
ಪ್ರಕಾಶಕರು
ಪೆಂಗ್ವಿನ್ ಬುಕ್ಸ್ ಇಂಡಿಯ
ಪುಸ್ತಕದ ಬೆಲೆ
೩೯೯
ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ ಅಲ್ಲದೆ, ಬರಿಗಣ್ಣಿಗೆ ಕಾಣದ ಸರಸ್ವತೀ ಕೂಡ ಅಲ್ಲೇ ಸೇರುತ್ತೆ. ಅದು ಗುಪ್ತ ಗಾಮಿನಿ, ಹಾಗಾಗಿ ಇದಕ್ಕೆ ತ್ರಿವೇಣಿ ಸಂಗಮ ಅಂತ ಹೆಸರು (ವೇಣಿ = ಜಡೆ. ಜಡೆಗೆ ಮೂರು ಕಾಲುಗಳಿರುವುದರಿಂದ ಈ ಹೆಸರು ಇರಬೇಕು)ಅಂತೆಲ್ಲ ಅವರು ಹೇಳುತ್ತಿದ್ದು ನೆನಪಿದೆ.
ಈ ರೀತಿ ಎಷ್ಟೋ ಕಡೆಗಳಲ್ಲಿ ಎರಡು ನದಿಗಳು ಸೇರುವ ಕಡೆ ಮೂರನೆಯ ಗುಪ್ತಗಾಮಿನಿಯನ್ನು ಹೇಳುವುದನ್ನು ನೋಡಿರಬಹುದು. ಉದಾಹರಣೆಗೆ ನಮ್ಮ ಕರ್ನಾಟಕದಲ್ಲೇ ಕೊಡಗಿನ ಭಾಗಮಂಡಲದಲ್ಲಿ ಕಾವೇರಿ ಕನ್ನಿಕೆ ಕೂಡುವಲ್ಲಿ ಅವುಗಳ ಜೊತೆಯಲ್ಲೇ ಕಣ್ಣಿಗೆ ಕಾಣದ ಸುಜ್ಯೋತಿ. ಮತ್ತೆ ತಿರುಮಕೂಡಲು ನರಸೀಪುರದಲ್ಲಿ (ತಿರು=ಪವಿತ್ರವಾದ ಮುಕ್ಕೂಡಲ್ = ಮೂರು ಹೊಳೆ ಸೇರುವೆಡೆ), ಕಾವೇರಿ ಕಪಿಲೆಯರ ಜೊತೆ ಅದೃಶ್ಯವಾದ ಸ್ಫಟಿಕ(ಸರೋವರ), ಇವುಗಳನ್ನು ನೆನೆಸಿಕೊಳ್ಳಬಹುದು. ಪಕ್ಕದ ತಮಿಳುನಾಡಿನ ಈರೋಡಿನಲ್ಲಿ ಕಾವೇರಿ ಭವಾನಿ ಸಂಗಮದಲ್ಲೇ ಕಣ್ಣಿಗೆ ಕಾಣದ ಗುಪ್ತಗಾಮಿನಿ ಅಮುದಾ ಇದೆಯೆಂಬ ನಂಬಿಕೆ ಇದೆಯಂತೆ. ಇವುಗಳಲ್ಲದೇ ಬೇರೆ ಕಡೆಗಳಲ್ಲೂ ಇರಬಹುದು ಅನ್ನಿ.
ಎಲ್ಲಿಂದಲೋ ಎಲ್ಲಿಗೋ ಹೋದೆ. ಅಜ್ಜಿಯನ್ನ ಕಣ್ಣಿಗೆ ಕಾಣದೆ ನದಿ ಹೇಗೆ ಹರಿಯುತ್ತೆ ಅಂತ ಕೇಳಿದರೆ, ಅದು ನೆಲದಡಿಯಲ್ಲಿ ಹರಿಯುತ್ತೆ, ಅಂತ ಸುಮ್ಮನಾಗಿಸಿಬಿಡುತ್ತಿದ್ದರು. ಇನ್ಯಾವಾಗಲೋ ಒಂದು ಸಲ ಅಜ್ಜಿ ಮನೆಯ ಅಟ್ಟದಲ್ಲಿ ದೂಳು ಹಿಡಿದ ಹಳೇ ಕಸ್ತೂರಿ ಸಂಚಿಕೆಗಳನ್ನು ಹುಡುಕಿ ಹುಡುಕಿ ಓದೋವಾಗ ಈ ಬಗ್ಗೆ ಒಂದು ಬರಹ ನೋಡಿದೆ. ಅದು ಬಹುಶ: ೧೯೬೯-೭೦ ರ ಸುಮಾರಿನ ಕಸ್ತೂರಿ ಇದ್ದಿರಬಹುದು. ಅದರಲ್ಲಿ ಸರಸ್ವತಿ ನದಿ ಅಲಹಾಬಾದಿಗೆ ಬರೋದಿರ್ಲಿ, ಅದು ಪಶ್ಚಿಮ ದಿಕ್ಕಿಗೆ ಹರಿದು ರಾಜಾಸ್ಥಾನದ ಮರುಭೂಮಿಯಲ್ಲಿ ಮಾಯವಾಗುತ್ತೆ ಅನ್ನುವ ವಿಷಯ ಓದಿ, ಅಜ್ಜಿ ಹೇಳುತ್ತಿದ್ದ ಸರಸ್ವತೀ ನದಿಯೂ ಇದೂ ಹೇಗೆ ತಾನೇ ಒಂದೇ ಆಗುತ್ತೆ ಅನ್ನಿಸಿದರೂ, ಅದೇ ಬರಹದಲ್ಲಿಯೇ, ಒಂದಾನೊಂದು ಕಾಲದಲ್ಲಿ ಸತ್ಲಜ್ ನದಿಯೂ ಯಮುನಾ ನದಿಯೂ ಈ ಸರಸ್ವತಿಗೇ ಸೇರುತ್ತಿದ್ದವು ಎಂದೂ, ಕಾಲಾನುಕ್ರಮದಲ್ಲಿ ಸಟ್ಲಜ್ ಮತ್ತು ಯಮುನಾ ನದಿ ತಮ್ಮ ಹರಿಯುವ ದಾರಿಯನ್ನು ಬದಲಿಸಿದ್ದರಿಂದ (ಹಾಗೂ ಯಮುನೆ ಗಂಗೆಗೆ ಸೇರಿಕೊಳ್ಳುತೊಡಗಿದ್ದರಿಂದ) ಸರಸ್ವತಿ ನದಿಯ ಹರಿವು ಕಡಿಮೆ ಆಯಿತೆಂದೂ, ಸರಸ್ವತಿಗೆ ಸೇರುವ ಯಮುನೆ ಗಂಗೆಗೆ ಸೇರತೊಡಗಿದ್ದರಿಂದಲೇ ಅಲಹಾಬಾದಿನ ಸಂಗಮದಲ್ಲಿ ಗಂಗಾ ಯಮುನಾ ಮತ್ತೆ ಸರಸ್ವತಿ ಮೂರೂ ನದಿಗಳು ಸೇರುತ್ತಿದೆ ಎಂದು ಹೇಳುವುದು ಚರಿತ್ರೆಯ ದೃಷ್ಟಿಯಿಂದ ಒಂದು ರೀತಿ ಸರಿಯೆಂದೂ ಬರೆದಿದ್ದನ್ನು ಓದಿದ್ದರ ನೆನಪು ಮಸುಕು ಮಸುಕಾಗಿದೆ.
ಮತ್ತೆ ಸುಮಾರು ೨೦ ವರ್ಷದ ನಂತರದ ಮಾತು. ೧೯೯೮-೯೯ರ ಅಕ್ಕಪಕ್ಕ ಇರಬಹುದು. ಅಂತರ್ಜಾಲದಲ್ಲಿ ಸುದ್ದಿಯೋ ಸುದ್ದಿ. ಸರಸ್ವತೀ ನದಿಯ ಜಾಡು ಸಿಕ್ಕಿದೆಯಂತೆ! ರಾಜಾಸ್ಥಾನದ ಮರುಭೂಮಿಯಲ್ಲಿ ಈ ನದಿಯ ಹರಿವಿರುವುದು ಉಪಗ್ರಹಗಳಿಂದ ತೆಗೆದ ಚಿತ್ರಗಳಿಂದ ಗೊತ್ತಾಗಿದೆಯಂತೆ ಇತ್ಯಾದಿ ಇತ್ಯಾದಿ. ನನಗೆ ಸ್ವಲ್ಪ ಅಚ್ಚರಿಯೂ ಆಗಿತ್ತು. ಇದೇನಪ್ಪ ಇಷ್ಟು ಹಳೆಯ ವಿಷಯವನ್ನು ಹೊಸ ವಿಷಯವೊಂದನ್ನು ಹೇಳುವ ರೀತಿ ಹೇಳುತ್ತಿದ್ದಾರಲ್ಲ ಅಂತ. ಅದಾದ ನಂತರ ಈಗ ಕಳೆದ ಹತ್ತು ವರ್ಷಗಳಲ್ಲಿ ಈ ಬಗ್ಗೆ ಅಂತರ್ಜಾಲದಲ್ಲೂ , ಹಲವಾರು ಪುಸ್ತಕಗಳಲ್ಲಿಯೂ ಅಲ್ಲಿ ಇಲ್ಲಿ ಓದಿದ್ದೂ ಆಗಿತ್ತು. ಆದರೆ ಈಚೆಗೆ Michel Danino ಬರೆದಿರುವ The Lost River - On the trail of Sarasvati ಎಂಬ ಪುಸ್ತಕವನ್ನು ಓದಿದಾಗ ಈ ಹಳೆಯ ವಿಷಯಗಳೆಲ್ಲ ಹಾಗೇ ನೆನಪಿಗೆ ಬಂತು.
ಸರಸ್ವತಿ ನದಿಯ ಜಾಡಿನಲ್ಲಿ ನಡೆದಿರುವ ನೂರೈವತ್ತಕ್ಕೂ ವರ್ಷಗಳಿಗೂ ಹೆಚ್ಚಿನ ಹುಡುಕಾಟವನ್ನು, ಆ ದಾರಿಯಲ್ಲಿ ಸಿಕ್ಕಿರುವ ಫಲಿತಾಂಶಗಳನ್ನು ಈ ಪುಸ್ತಕ ಸಾಮಾನ್ಯರಿಗೂ ತಿಳಿಯುವ ಸುಲಭವಾದ ಶೈಲಿಯಲ್ಲಿ ಪರಿಚಯ ಮಾಡಿಕೊಡುತ್ತದೆ. ಜೊತೆಗೆ ಈ ವಿಷಯದಲ್ಲಿ ಹೆಚ್ಚಿನ ಓದು, ಹೆಚ್ಚಿನ ಮಾಹಿತಿಯನ್ನು ಬಯಸುವಂತಹ ಓದುಗರಿಗೆ ಬೇಕಾದ ಪುಸ್ತಕ ಉಲ್ಲೇಖಗಳೂ ಬೇಕಾದಷ್ಟಿವೆ. ಪೆಂಗ್ವಿನ್ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ರೂ.೩೯೯.
ರಾಜಾಸ್ಥಾನದ ಮರುಭೂಮಿಯಲ್ಲಿ ಹರಿಯುವ ಘಾಗ್ಗರ್ ನದಿಯ ಒಣ ಹರಿವಿರುವ ಪಾತ್ರದಲ್ಲಿ ಒಂದು ಭಾರೀ ನದಿಯು ಹರಿಯುತ್ತಿತ್ತೆಂಬ ಸಂಶೋಧನೆ ೧೯ನೇ ಶತಮಾನದಲ್ಲೇ ನಡೆದಿತ್ತು. ಅದೇ ವೇದಗಳಲ್ಲಿ ಹೆಸರಿಸಿರುವ ಸರಸ್ವತಿ ನದಿ, ಗುಪ್ತಗಾಮಿನಿ ಸರಸ್ವತಿ ಇರಬೇಕೆಂಬ ಊಹೆಯನ್ನು ಆಗಲೇ ಮಾಡಲಾಗಿತ್ತು. ಈಗ ಹನಿನೀರೂ ಇಲ್ಲದ ರಾಜಾಸ್ತಾನದ ಮರಳುಭೂಮಿಯಲ್ಲಿ ನಾಲ್ಕುಸಾವಿರ ವರ್ಷಗಳ ಹಿಂದೆ ನಾಲ್ಕೈದು ಕಿಲೋಮೀಟರ್ ಗೂ ಹೆಚ್ಚಿನ ಪಾತ್ರವಿರುವ ನದಿಯೊಂದು ಹರಿಯುತ್ತಿತ್ತೆಂಬುದು ಆಶ್ಚರ್ಯವಾದರೂ ನಿಜವಾದ ಸಂಗತಿ.
ಅಲ್ಲದೆ ಸಿಂಧೂ ನದಿ ನಾಗರೀಕತೆ, ಹರಪ್ಪ ನಾಗರೀಕತೆ ಎಂದು ಯಾವುದನ್ನು ಕರೆಯುತ್ತೇವೋ, ಆ ನಾಗರೀಕತೆಯ ಹೆಚ್ಚಿನ ನೆಲೆಗಳು ಇದ್ದದ್ದು ಹೀಗೆ ಒಣಗಿ ಹೋಗಿರುವ ನದಿಯ ಅಕ್ಕಪಕ್ಕದಲ್ಲೇ ಎನ್ನುವುದು ೨೦ನೇ ಶತಮಾನದಲ್ಲಿ, ಅದರಲ್ಲೂ ೧೯೫೦ - ೨೦೦೦ ದಲ್ಲಿ ನಡೆದಿರುವ ಭೂಶೋಧನೆಗಳಲ್ಲಿ ಕಂಡು ಬಂದಿದೆ. ಸಿಂಧೂ ನದಿಯ, ಮತ್ತೆ,ಅದರ ಉಪನದಿಗಳು ಹರಿವ ಪಾಕೀಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು ೧೦% ರಷ್ಟು ನೆಲೆಗಳಿದ್ದರೆ, ಸರಸ್ವತೀ ನದೀ ತೀರದಲ್ಲಿ ಸುಮಾರು ೩೦%ಕ್ಕೂ ಹೆಚ್ಚಿನ ನೆಲೆಗಳು, ಸುಮಾರಾಗಿ ಅಷ್ಟೇ ನೆಲೆಗಳು ಗುಜರಾತ್ ನ ಬಳಿಯೂ (ಸರಸ್ವತೀ ನದಿಯು ಸಮುದ್ರ ಸೇರುತ್ತಿದ್ದಿದ್ದು ಈ ಗುಜರಾತಿನ ಕಚ್ಛ್ ನ ’ರಣ’ ದಲ್ಲೇ)ಕಂಡುಬಂದಿವೆ. ಹಾಗಾಗಿ ಇದನ್ನು ಸಿಂಧೂ ನಾಗರೀಕತೆ (Indus civilization) ಎಂದು ಕರೆಯುವ ಬದಲು ಸರಸ್ವತೀ-ಸಿಂಧೂ ನಾಗರೀಕತೆ ಎಂದು ಕರೆಯುವುದು ಏಕೆ ಸರಿ ಎಂಬುದನ್ನು ಈ ಪುಸ್ತಕ ಮನದಟ್ಟು ಮಾಡಿಕೊಡುತ್ತದೆ.
ಹಾಗಿದ್ದರೆ, ಹೀಗೆ ನೂರಾರು ನೆಲೆಗಳನ್ನು ಹುಟ್ಟು ಹಾಕಿದ್ದ ಈ ಸರಸ್ವತೀ ನದಿ ಮಾಯವಾದದ್ದಾದರೂ ಹೇಗೆ? ಭೂಮಿಯ ಮೇಲ್ಪದರದಲ್ಲಿ ಬದಲಾವಣೆಯಾಗುವುದೂ, ಬಯಲು ಸೀಮೆಯಲ್ಲಿ ಹರಿಯುವ ನದಿಗಳು ತಮ್ಮ ಹರಿವನ್ನು ಬದಲಿಸುವುದೂ ಗೊತ್ತಿರುವ ಸಂಗತಿಯೇ. ಇನ್ನೂ ಕಳೆದ ವರ್ಷ ಕೂಡ ಬಿಹಾರದಲ್ಲಿ ಕೋಸೀ ನದಿ ತನ್ನ ಹರಿವನ್ನು ಬದಲಿಸಿದ್ದ ವಿಷಯ ಪತ್ರಿಕೆಗಳಲ್ಲಿ ಸುದ್ದಿ ಮಾಡಿತ್ತು. ಗಂಗಾ ನದಿಯ ದಡದಲ್ಲಿದ್ದ ಹಸ್ತಿನಾವತಿ ಈಗ ನದಿಯ ಹರಿವಿರುವ ಎಡೆಯಿಂದ ಹಲವಾರು ಮೈಲಿ ದೂರದಲ್ಲಿದೆ. ಈ ಎರಡೂ ಕಾರಣಗಳಿಂದ "ನದಿಗಳೆಲ್ಲೆಲ್ಲ ಅತ್ಯುತ್ತಮ"ವಾದದ್ದೆಂಬ ಹೊಗಳಿಕೆ ದಕ್ಕಿದ್ದ ಸರಸ್ವತಿ ಒಣಗಿ ಹೋದಳು.
ಸರಸ್ವತಿ ನದಿಗೆ ಎಡಗಡೆಯಿಂದ ಸೇರುವ ಮುಖ್ಯವಾದ ಉಪನದಿಯಾಗಿದ್ದ ಯಮುನೆ ಹಲವು ಹಂತಗಳಲ್ಲಿ ದಾರಿ ಬದಲಾಯಿಸಿ, ಗಂಗೆಗೆ ಸೇರಿಕೊಂಡಿತು. ಇನ್ನೊಂದು ಕಡೆ ಸರಸ್ವತಿಗೆನೀರು ಪೂರಯಿಸುತ್ತಿದ್ದ ಸಟ್ಲಜ್(ಶತದ್ರು)ಕೂಡಾ ದಾರಿ ಬದಲಿಸಿ ಬಿಯಾಸ್ (ವಿಪಾಶಾ) ನದಿಯ ಕಡೆಗೆ ತಿರುಗಿ ಕೊನೆಗೆ ಸಿಂಧೂ ನದಿಗೆ ಸೇರಿಕೊಂಡಿತು. ಹೀಗಾಗಿ ಹಿಮನದಿ (glacier) ಗಳ ಸೆಲೆ ಸರಸ್ವತಿಗೆ ತಪ್ಪಿ ಹೋಯಿತು. ಇನ್ನು ಬೇರೆ ಮೂಲಗಳಿಂದ ಬರುವ ಚೌತಂಗ್ (ದೃಶದ್ವತಿ) , ಮಾರ್ಕಂಡ ನದಿಗಳು, ಮಳೆಗಾಲದಲ್ಲಿ ಮಾತ್ರ ಸರಸ್ವತಿಯಲ್ಲಿ ನೀರು ಹರಿಸುವುದಕ್ಕೆ ಸಾಕಾಗುವುದಾದರೂ, ಮರುಭೂಮಿಯನ್ನು ದಾಟಿ ಮುಂದೆ ಹೋಗುವುದಕ್ಕೆ ಸಾಲದಾಯಿತು. ಈ ವಿಷಯವನ್ನೇ, ಮಹಾಭಾರತದಲ್ಲಿ, ಪುರಾಣಗಳಲ್ಲಿ ಸರಸ್ವತೀ ನದಿ "ವಿನಾಶನ" ಎಂಬಲ್ಲಿ ಮಾಯವಾಗುತ್ತದೆ ಎಂದು ಹೇಳಿದೆ ಎಂಬುದನ್ನಿಲ್ಲಿ ನೆನೆಯಬಹುದು. ಹೀಗೆ ಸರಸ್ವತೀ ನದಿಯು ಪಾತ್ರ ಬದಲಾಯಿಸಿದ್ದರಿಂದಲೇ ಕ್ರಿ.ಪೂ ೧೯೦೦೦ - ೧೮೦೦ ರ ಕಾಲದಲ್ಲಿ ಅಲ್ಲಿದ್ದ ನಗರಗಳಲ್ಲಿದ್ದ ಜನ ಆ ಊರುಗಳನ್ನು ತೊರೆದು ಬೇರೆಡೆಗೆ ಹೋಗುವಂತೆ ಮಾಡಿರಬೇಕು.
ಇದಲ್ಲದೇ ಈ ಪುಸ್ತಕದಲ್ಲಿ ಇನ್ನೊಂದು ಹೊಸ ಹೊಳವನ್ನು ನಾನು ಕಂಡುಕೊಂಡೆ. ಇಲ್ಲಿಯವರೆಗೆ ಸಿಂಧೂ-ಸರಸ್ವತೀ ಲಿಪಿಯನ್ನು ಸರಿಯಾಗಿ ಹೀಗೇ ಎಂದು ಬಿಡಿಸಿ ಹೇಳಲು ಆಗಿಲ್ಲದಿದ್ದರೂ, ಆ ಲಿಪಿಯಲ್ಲಿಯೂ, ಮತ್ತೆ ಅಶೋಕನ ಕಾಲದಲ್ಲಿ ಮತ್ತೆ ಕಂಡುಬರುವ ಬ್ರಾಹ್ಮೀ ಲಿಪಿಗೂ ಇರುವ ಹೋಲಿಕೆಗಳನ್ನೂ, ಮತ್ತೆ ಮೊಹೆಂಜೊದಾರೋ-ಹರಪ್ಪ ಅಥವಾ ಕಾಲಿಬಂಗನ್ ಲೋಥಾಲ್ ಗಳಲ್ಲಿ ಕಂಡುಬರುವ ಕೆಲವು ಅಂಶಗಳು ಹೇಗೆ ನಂತರದ ಕಾಲದ ಭಾರತದಲ್ಲಿ ಮುಂದುವರೆದುಬಂದಿದೆ ಅನ್ನುವುದನ್ನು ಈ ಪುಸ್ತಕ ಚೆನ್ನಾಗಿ ತೋರಿಸಿಕೊಟ್ಟಿದೆ ಎಂದು ನನಗೆ ಅನ್ನಿಸಿತು.
ಇನ್ನೂ ಹೆಚ್ಚಿನ ವಿಷಯ ನಾನು ಹೇಳೋದು ಚೆನ್ನಾಗಿರೋಲ್ಲ. ನಿಮಗೆ ಈ ವಿಷಯದಲ್ಲಿ ಆಸಕ್ತಿ ಇದ್ದರೆ ಖಂಡಿತ ಈ ಪುಸ್ತಕ ಓದಿ ಅನ್ನೋ ಶಿಫಾರಸ್ಸು ಮಾತ್ರ ಮಾಡಬಲ್ಲೆ!
-ಹಂಸಾನಂದಿ
ಕೊ: ಇದೊಂದು ಪುಸ್ತಕ ಪರಿಚಯದ ಪ್ರಯತ್ನವಷ್ಟೇ. ವಿಮರ್ಶೆ ಅಂತೇನೂ ಹೇಳಲಾರೆ.