ಗುಪ್ತಚರನಿಗೆ ಕರ್ತವ್ಯಪ್ರಜ್ಞೆ ಬೋಧಿಸಿದ ತಿಲಕರು

ಬಾಲಗಂಗಾಧರ ತಿಲಕರು ಲೋಕಮಾನ್ಯರೆಂದೇ ಹೆಸರಾಗಿದ್ದವರು. ಅವರು ಹೋದೆಡೆಯಲ್ಲೆಲ್ಲಾ ಸಹಸ್ರಾರು ಸ್ವಾತಂತ್ರ್ಯಪ್ರಿಯರು ಸೇರುವುದು ರೂಢಿಯಾಗಿತ್ತು. ಜನರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದ ತಿಲಕರು ಅನಕ್ಷರಸ್ಥರಲ್ಲೂ ಸ್ವಾತಂತ್ರ್ಯದ ಆಸೆ ಚಿಗುರಿಸುತ್ತಿದ್ದರು. 'ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು'' ಎಂದು ಘೋಷಿಸಿದ ಅವರ ಮೇಲೆ ಆಂಗ್ಲ ಸರ್ಕಾರಕ್ಕೆ ಸಾಕಷ್ಟು ಕೋಪವಿತ್ತು. ತಿಲಕರ ಚಲನವಲನಗಳ ಬಗ್ಗೆ ಬ್ರಿಟಿಷರಿಗೆ ಸಂದೇಹವೂ ಇತ್ತು. ಯಾವುದಾದರೊಂದು ನೆಪವೊಡ್ಡಿ ಅವರನ್ನ ಬಂಧಿಸಿ ಜೈಲಿನಲ್ಲಿಡಬೇಕೆಂದು ಹವಣಿಸುತ್ತಿದ್ದರು. ಅದಕ್ಕಾಗಿ ಒಬ್ಬ ಗುಪ್ತಚರನನ್ನೂ ಅವರ ಹಿಂದೆ ಬಿಟ್ಟಿದ್ದರು. ಈ ವಿಷಯ ತಿಲಕರಿಗೂ ತಿಳಿದಿತ್ತು.
ಒಮ್ಮೆ ತಿಲಕರು ಸ್ವಾತಂತ್ರ್ಯ ಹೋರಾಟದ ಮುಂದಿನ ರೂಪುರೇಷೆಗಳನ್ನು ಯೋಜಿಸಲು ಅವರ ಆಪ್ತಮಿತ್ರನ ಮನೆಗೆ ತೆರಳಿದ್ದರು. ಯಥಾಪ್ರಕಾರ ಒಬ್ಬ ಗುಪ್ತಚರನೂ ಅವರನ್ನು ಹಿಂಬಾಲಿಸಿದ. ತಿಲಕರು ತಮ್ಮ ಮಿತ್ರನ ಮನೆಯಲ್ಲಿ ಸರಿರಾತ್ರಿಯವರೆಗೂ ಸಮಾಲೋಚನೆಯಲ್ಲಿ ತೊಡಗಿ ಅಲ್ಲಿಯೇ ಊಟಮುಗಿಸಿ ಹೊರಬಂದಾಗ ಅವರನ್ನು ಹಿಂಬಾಲಿಸಿ ಬಂದಿದ್ದ ಗುಪ್ತಚರನು ಕುಳಿತಲ್ಲೇ ನಿದ್ರೆಗೆ ಜಾರಿದ್ದ, ಅವನು ನಿದ್ರಿಸುತ್ತಿರುವುದನ್ನು ಕಂಡ ತಿಲಕರು ಅವನೆಲ್ಲಿ ಬ್ರಿಟಿಷ್ ಸರ್ಕಾರದ ಅವಕೃಪೆಗೆ ಪಾತ್ರನಾಗಿ ಕೆಲಸ ಕಳೆದುಕೊಂಡು ಹೆಂಡತಿ ಮಕ್ಕಳು ಉಪವಾಸ ಬೀಳುತ್ತಾರೋ ಎಂಬ ಕಾಳಜಿಯಿಂದ ಅವನನ್ನು ಎಚ್ಚರಿಸಿದರು. ನಿದ್ರೆಯಿಂದೆದ್ದು ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಅವನಿಗೆ "ಇಲ್ಲಿ ನನ್ನ ಕೆಲಸ ಮುಗಿಯಿತು. ನಾನಿನ್ನು ಹೊರಹೋಗುತ್ತಿದ್ದೇನೆ. ನಿನ್ನ ಕೆಲಸವನ್ನು ಮುಂದುವರೆಸು" ಎಂದು ಹೇಳಿ ಹೊರಟುಹೋದರು. ತಿಲಕರ ಮಾತನ್ನು ಕೇಳಿದ ಗುಪ್ತಚರನು ಅವಾಕ್ಕಾಗಿ, ನಿದ್ದೆಗಣ್ಣಿನಲ್ಲಿ ಅವರನ್ನೇ ಹಿಂಬಾಲಿಸಿ ನಡೆದನು.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ