ಗುಪ್ತಚರ ವಿಭಾಗದ ಬಲವರ್ಧನೆಗೆ ತುರ್ತು ಕ್ರಮ ಅಗತ್ಯ

ರಾಜ್ಯದ ಗುಪ್ತಚರ ವಿಭಾಗವನ್ನು ಬಲವರ್ಧನೆಗೊಳಿಸಬೇಕೆಂಬ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದಂತಿದೆ. ರಾಜ್ಯ ಪೋಲೀಸ್ ಮಹಾನಿರ್ದೇಶಕರು ಹಾಗೂ ಗುಪ್ತಚರ ವಿಭಾಗದ ಎಡಿಜಿಪಿ ಜತೆ ಬೇಹು ದಳದ ಕಾರ್ಯಕ್ಷಮತೆ ಸುಧಾರಣೆ ಕುರಿತು ಸಿಎಂ ವ್ಯಾಪಕ ಪರಾಮರ್ಶೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಏಕಾಏಕಿಯಾಗಿ ಹಾಗೂ ಇಷ್ಟೊಂದು ತ್ವರಿತವಾಗಿ ಕ್ರಮಕ್ಕೆ ಮುಂದಾಗಿರುವುದು ಗುಪ್ತಚರ ವಿಭಾಗದ ನಿರ್ವಹಣೆಯು ತೃಪ್ತಿಕರವಾಗಿಲ್ಲ ಎಂಬುದರ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ.
ಆರ್ ಎಸ್ ಎಸ್ ನ ವಿದ್ಯಾರ್ಥಿ ವಿಭಾಗ ಎಂದೇ ಪರಿಗಣಿಸಲಾಗಿರುವ ಅಭಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶನಿವಾರ ಪ್ರತಿಭಟನೆ ಕೈಗೊಂಡು ಗೃಹ ಸಚಿವರ ಅಧಿಕೃತ ನಿವಾಸದೊಳಗೆ ನುಗ್ಗಲು ಮುಂದಾದ ಘಟನೆ ಜರುಗಿದ ಹಿನ್ನಲೆಯಲ್ಲಿ ಗುಪ್ತಚರ ವಿಭಾಗದ ಕಾರ್ಯವೈಖರಿ ವೈಫಲ್ಯದ ಚರ್ಚೆ ಏಕಾಏಕಿಯಾಗಿ ಮುನ್ನಲೆಗೆ ಬಂದಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಹಾಗೂ ಪಿಎಫ್ ಐ, ಸಿ ಎಫ್ ಐ, ಎಸ್ ಡಿ ಪಿ ಐ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲು ಎಬಿವಿಪಿ ಮುಂಚಿತವಾಗಿಯೇ ತೀರ್ಮಾನಿಸಿದ್ದು, ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ಸಂಗತಿಯು ಮಾಧ್ಯಮಗಳಿಗೆ ಕೂಡಾ ಗೊತ್ತಾಗಿದೆ. ಹೀಗಿದ್ದರೂ ಪೋಲೀಸರಿಗೆ ಇದೇಕೆ ತಿಳಿಯಲಿಲ್ಲ ಎಂಬುದು ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿದೆ. ಪ್ರವೀಣ್ ಹತ್ಯೆ ಖಂಡಿಸಿ ಆಡಳಿತರೂಢ ಬಿಜೆಪಿಯ ಪದಾಧಿಕಾರಿಗಳೇ ದೊಡ್ದ ಪ್ರಮಾಣದಲ್ಲಿ ರಾಜೀನಾಮೆಗೂ ಮುಂದಾಗಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಯಾದರೂ ಕ್ರಮ ಕೈಗೊಳ್ಳದೆ ಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಆಕ್ರೋಶದ ಮಾತುಗಳು ಬಲಪಂಥೀಯ ಸಂಘಟನೆಗಳಿಂದಲೇ ಈಗ ಕೇಳಿಬರತೊಡಗಿವೆ. ಈ ಹಿನ್ನಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಸಾಕಷ್ಟು ಉದ್ವಿಗ್ನ ವಾತಾವರಣವಿದ್ದು, ಕಣ್ಗಾವಲು ವಹಿಸಬೇಕಾದ ಗುಪ್ತಚರ ವಿಭಾಗಕ್ಕೆ ಚಿಕ್ಕಪುಟ್ಟ ಮಾಹಿತಿಗಳೂ ಏಕೆ ಲಭ್ಯವಾಗಿಲ್ಲ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿ ಸರ್ಕಾರವನ್ನು ಕಾಡತೊಡಗಿದೆ.
ಹಲವಾರು ಸಂಗತಿಗಳಿಂದಾಗಿ ಈ ವಿಭಾಗದ ಕಾರ್ಯಕ್ಷಮತೆ ಕುಸಿಯುತ್ತಿದೆ. ಸಮಾಜಘಾತಕ, ವಿಚ್ಛಿದ್ರಕಾರಿ ಶಕ್ತಿಯನ್ನು ನಿಯಂತ್ರಿಸುವಲ್ಲಿ ಅದರ ಕೊಡುಗೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ ಎಂಬ ಸಾರ್ವತ್ರಿಕ ಟೀಕೆಗಳು ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ನಿಷೇಧಿತ ಸಂಘಟನೆಗಳಿಂದ ಚಟುವಟಿಕೆ, ಸೆಟ್ ಲೈಟ್ ಫೋನ್ ಬಳಕೆ, ಶಂಕಿತ ಉಗ್ರಗಾಮಿಗಳ ಬಂಧನ ಮೊದಲಾದ ಪ್ರಕರಣಗಳನ್ನು ಕೇಂದ್ರ ಸರಕಾರದ ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿ ಕ್ರಮ ಕೈಗೊಂಡಿವೆ. ರಾಜಧಾನಿ ಬೆಂಗಳೂರಿನಲ್ಲೇ ಇತ್ತೀಚೆಗೆ ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಅಲ್ ಕೈದಾದಂತಹ ಪ್ರಮುಖ ಸಂಘಟನೆಯ ನಂಟು ಹೊಂದಿರುವರೆನ್ನಲಾದ ಶಂಕಿತರು ಮೂರ್ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರೂ ರಾಜ್ಯದ ಗುಪ್ತಚರ ದಳಕ್ಕೆ ಮಾಹಿತಿ ಇರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಬಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ, ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ, ಡಿಜೆ ಹಳ್ಳಿ ಹಾಗೂ ಕೆ ಜೆ ಹಳ್ಳಿ ಗಲಭೆ ಮುಂತಾದ ಪ್ರಕರಣಗಳು ರಾಜ್ಯದಲ್ಲಿ ಸಾಕಷ್ಟು ಉದ್ವಿಗ್ನತೆಗೆ ಕಾರಣವಾಗಿದೆ. ಘಟನೆಗಳು ನಡೆದುಹೋದ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕಿಂತ, ಮುನ್ಸೂಚನೆ ಪಡೆದು ಅಪರಾಧ ತಡೆಗಟ್ಟಲು ಸಾಧ್ಯವಾಗದೇ ಇರುವುದು ರಾಜ್ಯ ಗುಪ್ತಚರ ವಿಭಾಗದ ನಿಷ್ಕ್ರಿಯತೆಯ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಮುಖ್ಯಮಂತ್ರಿಗಳು ಗುಪ್ತಚರ ವಿಭಾಗ ಬಲವರ್ಧನೆಗೆ ಈಗಲಾದರೂ ಮುಂದಾಗಿರುವುದು ಸೂಕ್ತವೇ ಆಗಿದೆ. ಈ ವಿಭಾಗವು ನೇರವಾಗಿ ಅವರ ಸುಪರ್ದಿಗೆ ಒಳಪಟ್ಟಿರುವುದು ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ದಕ್ಷ ಅಧಿಕಾರಿಗಳ ತಂಡವನ್ನು ಕಟ್ಟಿ ಈ ವಿಭಾಗವನ್ನು ಸಕ್ರಿಯಗೊಳಿಸುವ ಸವಾಲು ಅವರ ಮುಂದಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೧-೦೮-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ