ಗುಬ್ಬಚ್ಚಿಗಳು ಮರಳಿ ಬಂದವು !
ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಮನೆಯ ಎದುರಲ್ಲಿ ಎರಡು ಗುಬ್ಬಚ್ಚಿಗಳು ಹಾರಾಟ ನಡೆಸಿದ್ದವು, ಅದನ್ನು ಕಂಡು ನನಗೆ ಬಹಳ ಖುಷಿ ಆಗಿತ್ತು. ಕಾರಣವೇನೆಂದರೆ, ನಾನಾ ಕಾರಣಗಳಿಂದ ಇತ್ತೀಚೆಗೆ ಗುಬ್ಬಿಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತಿವೆ. ಮೊದಲಾದರೆ ಯಾವುದೇ ಕಿರಾಣಿ ಅಂಗಡಿ ಎದುರು ಹೋದರೆ ಸಾಕು, ನೂರಾರು ಗುಬ್ಬಿಗಳು ಕಾಳು, ಧಾನ್ಯಗಳನ್ನು ಆಯುತ್ತಾ, ತಿನ್ನುತ್ತಾ ಇರುತ್ತಿದ್ದವು. ಜನರು ಬಂದಾಗ ಬುರ್ರನೇ ಹಾರಿ ಮೇಲಿನ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದವು. ಅವುಗಳು ಆಗ ಜನಕ್ಕೆ ಹೆದರುತ್ತಲೇ ಇರಲಿಲ್ಲ. ಜನರು ಅತ್ತ ಹೋದೊಡನೆಯೇ ಮತ್ತೆ ಬಂದು ಕಾಳುಗಳನ್ನು ಆಯುತ್ತಿದ್ದವು.
ಮೊಬೈಲ್ ಟವರ್ ಗಳಿಂದ ಹೊರಹೊಮ್ಮುವ ವಿದ್ಯುತ್ ಕಾಂತೀಯ ವಿಕಿರಣಗಳಿಂದಲೇ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಬಹಳಷ್ಟು ಜನರ ನಂಬಿಕೆ. ಈ ವಿಷಯ ಸತ್ಯವೂ ಆಗಿರಲೂ ಬಹುದು. ಸುಳ್ಳೂ ಇರಬಹುದು. ಇನ್ನೂ ಈ ಬಗ್ಗೆ ಸಂಪೂರ್ಣ ಅಧ್ಯಯನ ನಡೆದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಬದಲಾದ ಕಾಲಕ್ಕೆ ಗುಬ್ಬಿಗಳು ಹೊಂದಿಕೊಳ್ಳಲು ಕಷ್ಟವಾಗಿ ಅವುಗಳ ಸಂಖ್ಯೆ ಕ್ಷೀಣಿಸಲು ಪ್ರಾರಂಭವಾಗಿವೆ ಎಂದು ನನ್ನ ಅಂದಾಜು. ಮೊದಲು ಬಹುತೇಕ ಧಾನ್ಯ, ಕಾಳುಗಳು ಗೋಣಿಚೀಲದಲ್ಲಿ ಅಂಗಡಿಗೆ ಬರುತ್ತಿದ್ದವು. ಅವುಗಳಿಂದ ಅಲ್ಪ ಪ್ರಮಾಣದಷ್ಟಾದರೂ ಧಾನ್ಯಗಳು ಹೊರ ಚೆಲ್ಲಿ ಈ ಗುಬ್ಬಿಯಂತಹ ಪಕ್ಷಿಗಳಿಗೆ ಆಹಾರವಾಗುತ್ತಿದ್ದವು. ಆದರೆ ಈಗ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ ಗಳು ಧಾನ್ಯಗಳನ್ನು ಚೆನ್ನಾಗಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡುವುದರಿಂದ ಅವುಗಳು ಗುಬ್ಬಿಗಳಿಗೆ ಸಿಗುವುದೇ ಇಲ್ಲ. ಆಹಾರ ಧಾನ್ಯಗಳು ಸುಲಭವಾಗಿ ಸಿಗದೇ ಇರುವುದರಿಂದ ಮತ್ತು ತಮ್ಮ ಸಂತತಿಯನ್ನು ಬೆಳೆಸಲು ಸೂಕ್ತ ಸ್ಥಳಾವಕಾಶ ಇಲ್ಲದೇ ಅವುಗಳು ಕಡಿಮೆಯಾಗುತ್ತಾ ಹೋದವು. ಗುಬ್ಬಚ್ಚಿಗಳು ಬಹಳ ಸೂಕ್ಷ್ಮ ಪಕ್ಷಿಗಳು. ಪರಿಸರದ ಸಣ್ಣಪುಟ್ಟ ಬದಲಾವಣೆಗಳಿಗೆ ಬಹಳವಾಗಿ ಸ್ಪಂದಿಸುತ್ತವೆ. ಈ ಕಾರಣದಿಂದಲೇ ಅವುಗಳ ಸಂಖ್ಯೆ ಕ್ಷೀಣಿಸಿರಬಹುದು.
ಮೊದಲು ಎಲ್ಲರ ಮನೆ ಹಂಚಿನದ್ದಾಗಿತ್ತು. ಹಂಚುಗಳ ಎಡೆಗಳಲ್ಲಿ ಗುಬ್ಬಿಗಳಿಗೆ ಗೂಡು ಕಟ್ಟಲು ಬೇಕಾದಷ್ಟು ಸ್ಥಳಾವಕಾಶ ಇತ್ತು. ಕ್ರಮೇಣ ತಾರಸಿ ಮನೆಗಳು ಹೆಚ್ಚಾಗಿ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಜಾಗವೇ ಇಲ್ಲವಾಯಿತು. ಸಂತತಿ ಮುಂದುವರೆಯದೇ ಇದ್ದಲ್ಲಿ ಸಂಖ್ಯೆ ಜಾಸ್ತಿಯಾಗುವುದಾರೂ ಹೇಗೆ? ಇದನ್ನು ಗಮನಿಸಿ ನಾನು ಅದಕ್ಕೆ ಗೂಡು ಕಟ್ಟಲು ಎರಡು ವರ್ಷಗಳ ಹಿಂದೆ ಒಂದು ಪುಟ್ಟ ರಟ್ಟಿನ ಬಾಕ್ಸ್ ತಂದು ಮನೆಯ ಮುಂದಿನ ಛಾವಣಿಗೆ ನೇತು ಹಾಕಿದ್ದೆ. ಆದರೆ ಗುಬ್ಬಚ್ಚಿಗಳು ಬರಲೇ ಇಲ್ಲ. ಆದರೆ ಮಡಿವಾಳ (ಕಪ್ಪು ಬಿಳುಪು ಬಣ್ಣದ ಹಕ್ಕಿ) ಹಕ್ಕಿ ಅಥವಾ ಇಂಡಿಯನ್ ರಾಬಿನ್ ಸಂಸಾರ ನಡೆಸಲು ಪ್ರಾರಂಭ ಮಾಡಿತು. ಬಹುಷಃ ಮೂರು ಮೊಟ್ಟೆಗಳು ಇದ್ದುವು ಎಂದು ನನ್ನ ಅಂದಾಜು. ಸ್ವಲ್ಪ ದಿನಗಳಲ್ಲಿ ಮೊಟ್ಟೆ ಒಡೆದು ಮರಿ ಹೊರ ಬಂದು, ಕೆಲವೇ ದಿನಗಳಲ್ಲಿ ರೆಕ್ಕೆ ಬಲಿತು ಹಾರಿ ಹೋದದ್ದು ನನಗಿನ್ನೂ ನೆನಪಿದೆ. ನಂತರದ ವರ್ಷ ಯಾವುದೇ ಗುಬ್ಬಿ ಸೇರಿ ಯಾವುದೇ ಹಕ್ಕಿ ಮನೆಯ ಅಂಗಣಕ್ಕೆ ಬರಲೇ ಇಲ್ಲ.
ಅವುಗಳಿಗಾಗಿ ಇಟ್ಟ ನೀರು, ಕಾಳು ವ್ಯರ್ಥವಾಗುತ್ತಿತ್ತು. ಕಾಳನ್ನು ರಾತ್ರಿ ಹೊತ್ತಲ್ಲಿ ಇಲಿ ಬಂದು ತಿಂದು ಹೋಗುತ್ತಿತ್ತು. ಅದನ್ನು ಕಾಯುವುದೇ ದೊಡ್ಡ ಕೆಲಸವಾಗಿತ್ತು. ಸ್ವಲ್ಪ ದಿನ ಆಹಾರ ಇಡಲೇ ಇಲ್ಲ. ಆದರೆ ಈ ವರ್ಷ ಫೆಬ್ರವರಿ ಸಮಯದಲ್ಲಿ ಉಳಿದಿದ್ದ ಕಾಳನ್ನು (ಬಾಜ್ರಾ) ಸಪೂರವಾದ ತಂತಿಗೆ ಕಟ್ಟಿ ನೇತು ಹಾಕಿದೆ. ಅದರಲ್ಲಿ ಇಲಿ ಹೋದರೆ ಅದರ ಭಾರಕ್ಕೆ ಆ ಕಾಳುಗಳು ಕೆಳಗೆ ಬೀಳುತ್ತದೆ ಎಂದು ನಾನು ಅಂದಾಜಿಸಿದ್ದೆ. ಒಂದೆರಡು ದಿನ ಹಾಗೇ ಇದ್ದ ಆಹಾರದ ತಟ್ಟೆಗೆ ಒಂದು ದಿನ ಬೆಳಿಗ್ಗೆ ಎರಡು ಗುಬ್ಬಚ್ಚಿಗಳ ಆಗಮನವಾಯಿತು. ಬಹಳ ಸಂತೋಷವಾಯಿತು ನನಗೆ. ಇನ್ನೂ ಗುಬ್ಬಚ್ಚಿಗಳು ಉಳಿದಿವೆಯಲ್ಲಾ ಎಂದು. ಮೊದಲ ದಿನವಾದುದರಿಂದ ಹೆಚ್ಚಿಗೆ ಆಹಾರವನ್ನೇನೂ ತಿನ್ನದೇ ಕೇವಲ ಒಂದೆರಡು ಕಾಳುಗಳನ್ನು ತಿಂದು ಹೋಯಿತು.
ಮರುದಿನದಿಂದ ಪ್ರತೀ ದಿನ ಬಂದು ಗುಬ್ಬಚ್ಚಿಗಳು ಕಾಳುಗಳನ್ನು ಆಯುವುದು. ಚಿಂವ್ ಚಿಂವ್ ಎಂದು ಮಧುರವಾದ ಸದ್ದು ಮಾಡುವುದು ನಡೆದೇ ಇತ್ತು. ಒಂದೆರಡು ವಾರಗಳ ಹಿಂದೆ ಈ ಶಬ್ಧ ಸ್ವಲ್ಪ ಹೆಚ್ಚಿಗೇ ಕೇಳುತ್ತಿದೆಯಲ್ಲಾ ಎಂದು ನೋಡಹೋದರೆ ಗುಬ್ಬಿಗಳ ಸಂಖ್ಯೆ ನಾಲ್ಕು ಆಗಿದೆ. ನಂತರದ ದಿನಗಳಲ್ಲಿ ನಾಲ್ಕು ಗುಬ್ಬಿಗಳು ತಮಗೆ ತೋಚಿದ ಸಮಯದಲ್ಲಿ ಬಂದು (ಈಗೀಗ ಹೆದರಿಕೆ ಇಲ್ಲದೇ) ಅಧಿಕಾರಯುತವಾಗಿ ಕಾಳುಗಳನ್ನು ತಿಂದು ನೀರು ಕುಡಿದು ಹೋಗುತ್ತಿವೆ. ಗುಬ್ಬಿಯ ಜೊತೆ ಇನ್ನೂ ಕೆಲಬು ಪುಟ್ಟ ಪುಟ್ಟ ಹಕ್ಕಿಗಳು ಬಂದು ಕಾಳು ತಿಂದು ಹೋಗುತ್ತಿವೆ. ಗುಬ್ಬಚ್ಚಿಗಳು ಮರಳಿ ಮನೆಗೆ ಸಂತೋಷ ನಿಮ್ಮಲ್ಲಿ ಹಂಚಿಕೊಳ್ಳುವ ಎಂದು ಕೊಂಡರೆ ಮಾರ್ಚ್ ೨೦ ಗುಬ್ಬಚ್ಚಿಗಳ ದಿನ ಎಂದು ನೆನಪಾಯಿತು. ಅದರ ಜೊತೆಗೆ ಈ ದಿನವನ್ನು ‘ವಿಶ್ವ ಸಂತೋಷ' ದಿನವನ್ನಾಗಿಯೂ ಆಚರಣೆ ಮಾಡುತ್ತಾರಂತೆ. ಖಂಡಿತಕ್ಕೂ ಇದು ಸಂತೋಷದ ದಿನವೇ ಅಲ್ಲವೇ?
ಕೊನೇ ಮಾತು: ಬೇಸಿಗೆಯ ದಿನಗಳು ನಿಧಾನವಾಗಿ ಪ್ರಾರಂಭವಾಗಿ ಸೆಖೆಯ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಜೊತೆಯಾಗಿ ಕುಡಿಯುವ ನೀರಿನ ಸಮಸ್ಯೆಯೂ ಪ್ರಾರಂಭವಾಗಿದೆ. ನೂರಾರು ಪ್ರಾಣಿ-ಪಕ್ಷಿಗಳು ಕುಡಿಯಲು ನೀರು ಸಿಗದೆ ಸಾಯುತ್ತಿವೆ. ನಿಮ್ಮ ಅಂಗಳದಲ್ಲಿ, ತೋಟದಲ್ಲಿ ನೀರು ಇಟ್ಟುಬಿಡಿ. ಹಕ್ಕಿಗಳು, ಸಣ್ಣ ಪುಟ್ಟ ಪ್ರಾಣಿಗಳು ಬಂದು ಕುಡಿದಾವು. ಪ್ರಾಣಿ ಪಕ್ಷಿಗಳ ನೈಸರ್ಗಿಕ ನೆಲೆಯಾದ ಕಾಡುಗಳನ್ನು ನಾವು ಈಗಾಗಲೇ ಹಾಳು ಮಾಡಿ ಆಗಿದೆ. ರಸ್ತೆ ಅಗಲೀಕರಣ, ನಗರೀಕರಣದ ನೆಪದಲ್ಲಿ ಉಳಿದಿದ್ದ ಮರಗಳನ್ನೂ ಕಡಿದು ಧಾರಾಶಾಯಿ ಮಾಡಿದ್ದೇವೆ. ಹೀಗಿರುವಾಗ ಈ ಪ್ರಾಣಿ ಪಕ್ಷಿಗಳು ಎಲ್ಲಿಗೆ ಹೋಗಬೇಕು. ಈಗಾಗಲೇ ನೂರಾರು ಜೀವಿಗಳು ಅಳಿದು ಇತಿಹಾಸದ ಪುಟ ಸೇರಿ ಹೋಗಿವೆ. ಅವುಗಳನ್ನು ಚಿತ್ರಗಳಲ್ಲಿ ನೊಡುತ್ತಿದ್ದೇವೆ. ಇನ್ನಷ್ಟು ಜೀವಿಗಳು ಅಳಿವಿನ ಅಂಚಿನಲ್ಲಿವೆ. ಅವುಗಳನ್ನು ಉಳಿಸುವ. ಗುಬ್ಬಚ್ಚಿಯಂತಹ ಪುಟ್ಟ ಹಕ್ಕಿಗಳು ನಮ್ಮ ಪರಿಸರದಲ್ಲೇ ಹಾಯಾಗಿರುವಂತಹ ವಾತಾವರಣ ನಿರ್ಮಿಸೋಣ.