ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 03: ಅಂತಿಮ ಭಾಗ)
[ಹಿನ್ನಲೆ: ಪಾಡುಪಟ್ಟು ಟಿಕೆಟ್ಟು ಒದಗಿಸಿದರೂ ಮುಗಿಯದ ಅವಸ್ಥೆ, ಕಾಟಗಳಿಂದ ಜರ್ಜರಿತನಾದ ಗುಬ್ಬಣ್ಣ, ಕೊಂಚ್ ಬ್ರೇಕ್ ತೆಗೆದುಕೊಂಳ್ಳಲೆಂದು ಕ್ಲಬ್ಬೊಂದರಲ್ಲಿ ಪರಮಾತ್ಮನನ್ನು ಸೇವಿಸುತ್ತ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾನೆ. ಆ ಗೋಳಿನ ಕಥೆಯ ಮುಂದುವರಿದ ಹಾಗೂ ಅಂತಿಮ ಭಾಗ ಈಗ ಓದಿ]
(ಎರಡನೆ ಭಾಗದ ಕೊಂಡಿ:
ಇವತ್ತು ಗುಬ್ಬಣ್ಣ "ಟೈಗರ" ಅನ್ನುತ್ತಿದ್ದಂತೆ ನಾನು ಎದುರಿನ ಕುರ್ಚಿಯಲ್ಲಿ ಕೂರುತ್ತಾ "ಯಾಕೊ ಗುಬ್ಬಣ್ಣ , ಬೆಳ್ಬೆಳಿಗ್ಗೆ 'ಓಂ' ನಾಮನೆ ಬಿಯರು ಹಾಕ್ತಾ ಇದ್ದಿಯಾ..ಇನ್ನೂ ನಾಷ್ಟಾ, ಕಾಫಿ ಹೊತ್ತು ಕಣಯ್ಯಾ.." ಎಂದೆ.
" ಅಯ್ಯೋ ಹಾಳಾಗೋಗ್ಲಿ ಟೈಮಿಂಗು ಬಿಡಿ ಸಾರ್...ಆಗ್ಲೆ ಹೇಳಿದ್ನಲ್ಲಾ ನಾಲ್ಗೆಯೆಲ್ಲಾ ಎಕ್ಕುಟ್ಟೊದಂಗಾಗ್ಬಿಟ್ಟಿದೆ... ಸ್ವಲ್ಪ ಬಿಯರು ಬಿದ್ದು 'ಗರಂ' ಆದ್ರೆ 'ನರಂ' ಆಗಿರೊ ನರಗಳೆಲ್ಲ ಎದ್ದು ಕೆಲ್ಸ ಮಾಡೋಕೆ ಸರಿಯ್ಯೊಗುತ್ತೆ..."
ಅದೆಲ್ಲಾ ಬುರುಡೆ ಸಿದ್ದಾಂತ ಅಂತ ಇಬ್ಬರಿಗೂ ಗೊತ್ತಿತ್ತು. ನಿಜವಾದ ಗುಟ್ಟು ಏನೆಂದರೆ, ಎಷ್ಟು ಬೇಗ ಕುಡಿದು ಏರಿ ಎಷ್ಟು ಬೇಗ ಅಮಲಿಳಿಯುತ್ತೊ, ಅಷ್ಟು ಒಳ್ಳೇದು ಗುಬ್ಬಣ್ಣನಿಗೆ..ಯಾಕೆಂದ್ರೆ ಮನೆಗ್ಹೋಗೊಷ್ಟೊತ್ತಿಗೆ ಅಮಲು ಇಳಿದಿರುತ್ತೆ, ವಾಸನೆನು ಹೋಗಿರುತ್ತೆ.. ಹಾಕರ ಸೆಂಟರಲ್ಲಿ ಒಂದು 'ತೇಸಿ' ಹಾಕಿ, ಎರಡು ಮಿಂಟಿ ಚಪ್ಪರಿಸಿ ಹೊರಟುಬಿಟ್ರೆ, ಹೆಂಡ್ತಿ ಬೆಕ್ಕಿನ ತರ ಮೂಸುದ್ರೂ ವಾಸನೆ ಹಿಡಿಯೊಕಾಗಲ್ಲ ಅಂತ ಅವನ ಪ್ಲಾನು. ಗುಬ್ಬಣ್ಣನ ಹೆಂಡ್ತಿ ಪಾರ್ವತಿ ಮಹಾ ಸಾಧ್ವಿಮಣಿ, ದೇವ್ರೂ ದಿಂಡರೂ ಅಂತ ಕಂಡ ಕಂಡ ಕಲ್ಗೂ ಕೈ ಮುಗಿದು ಅಡ್ಡಬೀಳೊ ಜಾತಿ. ಅವಳಿಗೆ 'ತಾನು ಕುಡಿಯೊ ಅಭ್ಯಾಸವೆ ಇಲ್ಲದ 'ಸಂತ ತುಕಾರಾಂ', ಜೀವಮಾನದಲ್ಲಿ ಅದರ ವಾಸನೆನೂ ನೋಡಿಲ್ಲ' ಅಂತ ಏನೇನೊ ಆಣೆ, ಪ್ರಮಾಣ ಮಾಡಿ ನಂಬಿಸಿಬಿಟ್ಟಿದ್ದ. ಹೀಗಾಗಿ ಕುಡಿಯೊದಿದ್ರೆ ಇಲ್ಲಾ ಹೀಗೆ ಕದ್ದು ಮುಚ್ಚೊ ಅಥವಾ ಬಿಜಿನೆಸ್ಸು ಟ್ರಿಪ್ಪು ಅಂತ ದೇಶ ಬಿಟ್ಟು ಹೋದ ದಿನಗಳಲ್ಲೊ ಎಕ್ಕಾಮುಕ್ಕ ಕುಡಿದೊ ತೆವಲು ತೀರಿಸ್ಕೊತಾ ಇದ್ದಾ..ಈ ಸಾರಿ ಬಿಜಿನೆಸ್ಸ್ ಟ್ರಿಪ್ಪುಗಳು ಇಲ್ದೆ, ತಿಂಗಳಾನುಗಟ್ಲೆ ದೊಡ್ಡ ಬರಗಾಲವೆ ಬಂದಂತಾಗಿಬಿಟ್ಟಿತ್ತೇನೊ...ಅದಕ್ಕೆ ಈಗ ಅವಕಾಶ ಸಿಕ್ಕಿದ ತಕ್ಷಣ 'ಓಪನರ' ಹಿಡಿದು ಕೂತುಬಿಟ್ಟಿದ್ದ!
ಸಿಂಗಾಪುರದಲ್ಲಿ ಕಾರು ಡ್ರೈವ್ ಮಾಡೋದಾದ್ರೆ ಮಾತ್ರ ಕುಡಿಯೊ ಹಂಗಿಲ್ಲ...ಪಬ್ಲಿಕ್ ಟ್ರಾನ್ಸ್ಪೊರ್ಟು ಹಿಡಿಯುವವರಿಗೇನು ಲೆಕ್ಕವಿಲ್ಲವಲ್ಲಾ...? ಹೀಗಾಗಿ ನಾನು ಒಂದು ಗ್ಲಾಸು ವೈಟು ವೈನ್ಹಿಡಿದು ಕಡಲೆಕಾಯಿ ಬೀಜದ ಪ್ಲೇಟ್ ಜತೆ ಅವನ ಮುಂದೆ ಕುಳಿತೆ.
" ಏನ್ ಸಾರ್... ಬಿಯರು ಹಾಕೋದು ಬಿಟ್ಟು, ವೈನಾಗಿ 'ವೈನು' ಹಾಕ್ತಾ ಇದೀರ...ಬಿಯರು ಬೇಡಾಂತ್ಲೊ ಅಥವ ಫಸ್ಟು ಹೆಲ್ತಿ ವೈನಿಂದ 'ಓಂ' ನಾಮ ಹಾಕಲಿಕ್ಕೊ? "
" ಇಲ್ಲಾ ಗುಬ್ಬಣ್ಣ ಈಗ ಬಿಯರು ಹಾಕೋದು ನಿಲ್ಸಿಬಿಟ್ಟಿದ್ದಿನಪ್ಪಾ..ನೀನೆ ನೋಡ್ತಾಯಿದಿಯಲ್ಲಪ್ಪ ಈ ಹಾಳು ಹೊಟ್ಟೆಪಾಡನ್ನ... ಬಡ್ಡಿಮಗಂದು ಬಸುರಿ ಹೊಟ್ಟೆ ಸೇರ್ಕೊಂಡಿರೊ ಹುಣ್ಮೆ ಚಂದ್ರನ್ತರ ದಿನದಿನಾ ಬೆಳಿತಾನೆ ಇದೆ...ಹಾಳಾದ್ದು ಮಧ್ಯಾಹ್ನದ ಹೊತ್ತು ನಮ್ಮ ಸಿಂಗಾಪುರ ಚೈನಿ ಕೊಲೀಗ್ಸ್ ಜತೆ ಊಟಕ್ಕೆ ಹೋಗ್ತಾ ಇದ್ರೆ, ಅವರ ಸಮಕ್ಕೆ ನಡೆಯೋಕು ಎದುಸಿರು ಬಿಡ್ತಾ, ವದ್ದಾಡ್ತಾ ಅವರು ನಡೀತಿದ್ರೆ ನಾನು ಓಡೊಂಗಾಗುತ್ತಯ್ಯ...ನಂಗಿಂತ್ಲೂ ವಯಸಾದವರೆ ಎಳೆಮಕ್ಕಳ ಹಾಗೆ ಕಾಣ್ತಾರೆ...ತುಂಬಾ ನಾಚಿಕೆಯಾಗುತ್ತೆ....ಅದಕ್ಕೆ ಹೊಟ್ಟೆನ ಬಿಯರ ಗಟ್ಟರ ಮಾಡೋದು ಬೇಡಾ ಅಂತ ವೈನು ಹಿಡ್ದಿದ್ದೀನಪ್ಪಾ..ಹಾರ್ಟ್ಗೂ ಒಳ್ಳೆದಂತಾರಲ್ಲ ಹೇಗಿದ್ರೂ.."
"ಅಲ್ಲೆ ಸಾರ್ ನೀವು ತಪ್ಪು ತಿಳ್ಕೊಂಡಿರೋದು... ಗಾದೆನೆ ಇಲ್ವಾ ಸಾರ್...'ಇನ್ಕ್ರೀಮೆಂಟು ನೋಡೋಕೆ ಲೆನ್ಸ್ ಬೇಕು, ಹೊಟ್ಟೆ ಸೈಜು ನೊಡೋಕೆ ಸೆನ್ಸು ಬೇಕು' ಅಂತ..." ಎಂದು ಹೊಸ ಗಾದೆ ಒಗೆದ!
'ಸೊ ಪರಮಾತ್ಮಾ ಆಗಲೆ ಕೆಲ್ಸ ಶುರು ಮಾಡ್ಕೊಂಡಿದಾನೆ' ಅಂತ ಕನ್ಫರ್ಮು ಆಯ್ತು. ಅದಕ್ಕೆ ಈ ಸಾರಿ 'ಹೊಸ ಗಾದೆನಾ ' ಅಂತ ಕೇಳಲಿಲ್ಲ.." ಹಾಗಲ್ಲಾ ಗುಬ್ಬಣ್ಣ....."
"ಹಾಗೂ ಇಲ್ಲಾ ಹೀಗೂ ಇಲ್ಲ ಸುಮ್ನಿರಿ ಸಾರ್..ಇದೂನು ಹೊಸ್ಗಾದೇನಾ ಅಂತ ಕೇಳ್ತಿರಾ ಅಂತ ಗೊತ್ತು ನನಗೆ....ಹೊಸಾದೆ ಅಂತಿಟ್ಕೊಳಿ, ಏನೀಗ? ಅಲ್ಲಾ ಸಾರ್ ನಮ್ಮ ಕನ್ನಡದವರ ಹೊಟ್ಟೆ ಯಾಕೆ ಹೀಗೆ ದಪ್ಪಗೆ, ದುಂಡಗೆ, ವಿಶಾಲವಾಗಿ ಇರುತ್ತೆ ಅಂತಾ ಯಾವಾಗ್ಲಾದ್ರೂ ಯೋಚನೆ ಮಾಡಿದ್ದೀರಾ?"
ನಾನು ಗುಬ್ಬಣ್ಣನ ಹೊಟ್ಟೆ ನೋಡಿದೆ..ನನಗಿಂತ ಎರಡರಷ್ಟು ಗುಂಡಗೆ , ಗೋಲಾಕಾರವಾಗಿ ಕಾಣ್ತಿತ್ತು. ನನ್ನ ಹೊಟ್ಟೆ ಒಳಗೆ ಚಂದ್ರ ಇದೆ ಅಂದ್ರೆ, ಅವನ್ಹೊಟ್ಟೆ ಒಳಗೆ ನಮ್ಮ ಭೂಮಿ ತಾಯಿನೆ ಸೇರ್ಕೊಂಡಿದಾಳೆ ಅಂತ ಧಾರಾಳವಾಗಿ ಹೇಳೊವಂತ , ವಿಶಾಲವಾದ ಅಪ್ಪಟ ಕನ್ನಡದ ಹೊಟ್ಟೆ...
" ನಾನು ಕನ್ನಡಿಗರ ವಿಶಾಲ ಹೃದಯಾಂತ ಕೇಳಿದ್ದಿನಪ್ಪ..ವಿಶಾಲ ಹೊಟ್ಟೆ ಅಂತ ಇದುವರ್ಗೂ ಕೇಳಿರಲಿಲ್ಲ..." ಗುಬ್ಬಣ್ಣನ ಮುಂದೆ ಖಾಲಿಯಾಗುತ್ತಿದ್ದ ಎರಡನೆ ಗ್ಲಾಸು ನೋಡುತ್ತಲೆ ನಾನು ಉತ್ತರಿಸಿದೆ.
"ಅಲ್ಲೆ ಸಾರ್..'ಮಿಸ್ಸಿಂಗ್ ಲಿಂಕು' ಇರೋದು..ನಮ್ಮ ಜನಕ್ಕೆ ಈ ಹೃದಯಕ್ಕೂ ಹೊಟ್ಟೆಗೂ ಇರೊ ಕನೆಕ್ಷನ್ ಮೇಲ್ಮೇಲೆ ನೋಡಿದ್ರೆ ಗೊತ್ತಾಗೋದಿಲ್ಲ...ಆದಕ್ಕೆ ಸ್ವಲ್ಪ ಡೀಪ್ ಇನ್ಸೈಟು ಬೇಕು ಸಾರ್...ಇನ್ಸೈಟು" ಅಂತ ಫಿಪ್ಟಿ ಪರ್ಸೆಂಟು ತೇಜಸ್ವಿ ಟರ್ನು, ಇನ್ನು ಫಿಪ್ಟೀ ಪರ್ಸೆಂಟು ಫಿಲಾಸಫಿಕಲ್ ಆಂಗಲ್ಲೂ ಕೊಟ್ಟು, ಬುದ್ಧಿಜೀವಿ ತರ ಪೋಸಿನಲ್ಲಿ ಕುಳಿತ..
ನಾನು ಇನ್ನೊಂದು ಸಾರಿ ಗುಬ್ಬಣ್ಣನ ಹೊಟ್ಟೆ ನೋಡುತ್ತ 'ಏನೂಂತ ಗೊತ್ತಿಲ್ದೆ ಇದ್ರೂ ಕನೆಕ್ಷನ್ನಂತೂ ಗ್ಯಾರಂಟಿ ಇದೆ' ಅಂದುಕೊಳ್ಳುತ್ತಾ, "ಅದೇನಂಥಾ ಕನೆಕ್ಷನ್ನು ಗುಬ್ಬಣ್ಣ...ನಮ್ಮ ಘಟಾನುಘಟಿಗಳ ತರದವ್ರೂ ಮಿಸ್ ಮಾಡ್ಕೊಂಡಿರೊ ಅಂಥಾದ್ದು?" ಅಂತ ಕೇಳಿದೆ, ಪ್ರಶ್ನಾರ್ಥಕ ಚಿಹ್ನೆಯ ಹಾಗೆ ಆಗುತ್ತಿದ್ದ ಅವನ ದೇಹವನ್ನೆ ಗಮನಿಸುತ್ತಾ..
" 'ನಮ್ ಕನ್ನಡದವರ್ದು ವಿಶಾಲ ಹೃದಯಾ' ಅನ್ನೊ ಬೇಸಿಕ್ ಅಸಂಪ್ಶನ್ನಿಂದ್ಲೆ ಶುರು ಮಾಡಿ ನೋಡಿ ಸಾರ್...ಅದಕ್ಕೆ ತಾನೆ ನಾವು ಬಂದ ಬಂದವರ್ಗೆಲ್ಲ ಇಲ್ಲಾ ಅನ್ನದೆ ಬೆಂಗ್ಳೂರು, ಮೈಸೂರು ಅನ್ನದೆ ಕರ್ನಾಟಕದ ಎಲ್ಲಾ ಕಡೆ ಎಲ್ಲಾ ಹೊರಗ್ನೋರ್ನೂ ಒಳಗೆ ಬಿಟ್ಕೊಂಡ್ವಿ..? ಅದೂ ನಮ್ಮಂತೋರು ಕೆಲವರು ರಾಜ್ಯಾ, ದೇಶಾನೆ ಬಿಟ್ಟು ಹೊರದೇಶಕ್ಕೊಗೊವಷ್ಟು ವಿಶಾಲ ಹೃದಯಾನೂ ತೋರಿಸಿಬಿಟ್ವಿ...."
ಈ ಕಡೆ ಪಾಯಿಂಟು ಸ್ವಲ್ಪ ಹೊಸ ಆಂಗಲ್ಲು ಅನ್ಸುದ್ರೂ, ಅವನ ವಾಗ್ಝರಿಗೆ ತಡೆ ಹಾಕ್ದೆ , " ಸೊ...." ಅಂದೆ.
ಗುಬ್ಬಣ್ಣ ಗ್ಲಾಸು ಎತ್ತಿ ಇನ್ನೊಂದು ಸಿಪ್ ಎಳೆದು, "ಈ ಹಾಳು ವಿಶಾಲ ಹೃದಯ ಅಂತ ಬ್ಯಾನರು ಹಾಕ್ಕೊಂಡು ನಮಗೆ ಎಲ್ಲಾರ ತಪ್ಪುಗಳ್ನೂ ಕ್ಷಮಿಸಿ ಕ್ಷಮಿಸಿ ಅಭ್ಯಾಸ ಸಾರ್...ಮನೆಲಿ ಮನೆಯವ್ರು - ಅಪ್ಪ, ಅಮ್ಮ, ಅಕ್ಕ, ತಮ್ಮ, ಮಕ್ಕಳು- ಹೀಗೆ ಎಲ್ಲಾರು ಮಾಡೊ ತಪ್ಪೆಲ್ಲ ಬೈದು ಗದರಿ ಜಗಳ ಮಾಡಿದ್ರೂ ಹೊಟ್ಟೆಗಾಕ್ಕೊಂಡು ಕ್ಷಮಿಸ್ತಿವಿ..."
"ಹೌದಲ್ಲಾ...." ನನಗೆ ನನ್ನ ಮಗನ ಪ್ರಚಂಡ ಆಟಗಳು, ಕಾಟಗಳು ನೆನಪಾಯ್ತು.
" ಹಂಗೆ ಅದೆ ಟೋನಲ್ಲಿ , ಹೊರಗ್ನಿಂದ ಬಂದವ್ರೂ ಮೊದ್ಮೊದ್ಲು ಬೆಕ್ಕಂಗಿದ್ದೂ ಆಮೇಲಾಮೇಲೆ, ನಮ್ಮನ್ನೆ ಏಮಾರ್ಸಿ ನಮ್ಮೇಲೆ ಸವಾರಿ ಮಾಡ್ತಾ ಹೋದ್ರೂ, ಮಾಡಬಾರದ ಪಾಪ ಮಾಡ್ತಾ ಕಾಟ ಕೊಡ್ತಾ ಹೋದ್ರೂ, ಹಂಗೆ ಹೊಟ್ಟೆಗ್ ಹಾಕ್ಕೊಂಡು ಕ್ಷಮಿಸ್ತಾನೆ ಹೋಗ್ತೀವಿ...ಹೌದೊ , ಅಲ್ವೊ ಯೋಚ್ನೆ ಮಾಡಿ ನೀವೇ ಹೇಳಿ ಸಾರ್...."
ಅವನು ಹೇಳ್ತಾ ಇರೋದ್ರಲ್ಲೂ ಲಾಜಿಕ್ಕಿದೆ ಅಲ್ವಾ ಅನಿಸಿ , "ನಿಜಾ ಅಲ್ವಾ...?" ಎಂದು ಅವನನ್ನೆ ಪ್ರಶ್ನಿಸಿದೆ..
"ಹಿಂಗೆ ಸ್ವಂತದವರ್ದು, ಹೊರಗ್ನವರದು, ಗೊತ್ತಿದ್ದೊರದು, ಗೊತ್ತಿಲ್ದೋರದು - ಹೀಗೆ ಎಲ್ಲಾರ ಪಾಪನೂ ಮೊಖಮೂತಿ ನೋಡ್ದೆ ನುಂಗ್ಕೊಂಡು, ಕ್ಷಮಿಸ್ತಾ, ಹೊಟ್ಟೆಗ್ಹಾಕ್ಕೊಂತಾ ಹೋದ್ರೆ, ನೀವೆ ಹೇಳಿ ಸಾರ್..ಯಾವ ಕನ್ನಡಿಗನ ಹೊಟ್ಟೆ ತಾನೆ ಇದ್ದಂಗೆ ಇರುತ್ತೆ? ಆ ಪಾಪಗಳನ್ನ ತಿಂದೆ ತಿಂದೆ ಅರ್ಧ ಊದೋಗ್ಬಿಡಲ್ವಾ.....ಅಂತಾ ಉದರ ವೈಶಾಲ್ಯದ ಹೊಟ್ಟೆನ, ಬೀಯರು ಕುಡಿದು ಬೆಳೆದ ಹೊಟ್ಟೆ ಅಂತ ಆಡ್ಕೋತಿರಲ್ಲಾ..? ಇದು ಕನ್ನಡಿಗರ ಮೇಲಿನ ಸಾರಾಸಗಟು ಅನ್ಯಾಯ ಹಾಗೂ ದೌರ್ಜನ್ಯ ಅಲ್ವಾ...ಹೇಳಿ ಸಾರ್..."
ನಾನು 'ಎಲಾ ಇವನಾ...ಬಡ್ಡಿಮಗ ನಿಜವಾದ ಕನ್ಸಲ್ಟೆಂಟು...ತಲೆ ಸವರಿ ಏನೊ ಲಾಜಿಕ್ ಹಾಕಿ ನಂಬಿಸಿಬಿಡ್ತಾನಲ್ಲಾ...ವಾದಾನಾ' ಅನ್ಕೊಂಡೆ, ಸ್ವಲ್ಪ ಕಿಚಾಯ್ಸೋಣ ಅನ್ಸಿ " ಗುಬ್ಬಣ್ಣ ನೀನು ಹೇಳ್ತಾ ಇರೊ ಪಾಪಾ ಅಂದ್ರೆ ಮನುಷ್ಯರು ಮಾಡೊ ಪಾಪಾನ (ಸಿನ್ನು) ಅಥವಾ ಗಂಡು ಹೆಣ್ಣಿಗೆ ಹುಟ್ಟೊ 'ಪಾಪು ಕಂದ' ಪಾಪಾನ " ಅಂದೆ..
ಪುಲ್ ಜೋಶಿನಲ್ಲಿದ್ದ ಗುಬ್ಬಣ್ಣನಿಗೆ ನಾನು ಕಿಚಾಯಿಸಿದ್ದೂ ಗಮನಕ್ಕೆ ಬರಲೆ ಇಲ್ಲವೆಂಬಂತೆ,"ಅದಕ್ಕೆ ಸಾರ್...ಇನ್ಮೇಲೆ ಕನ್ನಡಿಗರ ಗುಢಾಣದ ಹೊಟ್ಟೆ ಕಂಡ್ರೆ ಮಾತ್ರ, ಕಂಡಂ ಮಾಡ್ಬೇಡಿ...ಜನಗಳು ಮಾಡೊ ಪಾಪಾ ಸೇರಿ ಗುಢಾಣವಾದರೂ ಸರಿ, ಪಾಪ ಮಾಡಿದ ಜನರಿಂದ ಹುಟ್ಟೊ 'ಪಾಪಾ' ಆದ್ರೂ ಸರಿ...ವೀ ಶುಡ್ ಬಿ ಪ್ರೌಢ್ ಆಫ್ ಅವರ್ ಕಣ್ಣಡಿಗ ಸ್ಟಮಕ್.." ಅಂತ ಅಪ್ಪಣೆ ಬೇರೆ ಕೊಡಿಸಿದ. ಜತೆಗೆ 'ಕನ್ನಡಿಗ' ಹೋಗಿ 'ಕಣ್ಣಡಿಗ' ಆಯ್ತು ಅಂದ್ರೆ ಮೂರನೆ ಗ್ಲಾಸು ಓಡ್ತಾಯಿದೆ ಅಂತ ಅರ್ಥ...ಹೀಗೆ ಬಿಟ್ರೆ, ನಮಗೆ ಬೇಕಾದ್ದ ವಿಷಯ ಬಿಟ್ಟು ಎಲ್ಲೆಲ್ಲೊ ಹೋಗ್ಬಿಡ್ತಾನೆ ಅಂತ ಖಚಿತವಾಯ್ತು. ಇನ್ನು ನಾಲ್ಕನೆ ಗ್ಲಾಸು ಮುಗಿಯೊದ್ರೊಳಗೆ, ಅವನ 'ಪ್ರಸಂಗ'ದ ಕಥಾನಕ ಮುಗಿಸಲಿಲ್ಲಾ ಅಂದ್ರೆ, ಅದರ ಕಥೆ ಇವತ್ತಿಗೆ ಮುಗಿದ ಹಾಗೆ ಅನಿಸಿ, "ಗುಬ್ಬಣ್ಣ, ಹೊಟ್ಟೆ ಮನೆ ಒಲೆಗ್ಹಾಕು...ನಾವಿಲ್ಲಿ ಬಂದಿದ್ದು ಏನುಕ್ಕೆ , ಮಾತಾಡ್ತಾ ಇರೋದು ಯಾವುದರ ಬಗ್ಗೆ? ನಾನೇನೊ ಯುನಿವರ್ಸಲ್ ಪ್ರಸಂಗ ಹೇಳ್ತಿಯಾ ಅಂಥ ಕಾಯ್ತ ಕೂತಿದ್ರೆ, ನೀನು 'ಉದರ ಪುರಾಣ' ಶುರು ಮಾಡ್ತಿದ್ದಿಯಲ್ಲಪ್ಪ, ಗುರುವೆ?" ಅಂತ ಬ್ರೇಕು ಹಾಕಿದೆ.
ಗ್ಲಾಸುಗಳಿಳಿತಾ ಇದ್ರೂ ಮಾತಲ್ಲಿ ಮಾತ್ರ ಗುಬ್ಬಣ್ಣ ಪಕ್ಕ ಕನ್ಸಲ್ಟೆಂಟೆ. ಯಾವಾಗ ಬೇಕಾದ್ರೂ, ಯಾವ ವಿಷಯ ಬೇಕಾದ್ರೂ ಕೊಡಿ ಕುಡಿದಿರಲಿ, ಬಿಡಲಿ - ನೀಟಾಗಿ ಮಾತಾಡಿಬಿಡ್ತಾನೆ. ಕುಡ್ದಾಗ ಸ್ವಲ್ಪ ಹೆಚ್ಚು ರಸಮಯವಾಗಿ ಆಡ್ಬೋದು ಅನ್ನೋದು ಬಿಟ್ರೆ, ಬಾಕಿ ಖದರೆಲ್ಲಾ ಒಂದೆ. ಸ್ವಲ್ಪ ತೇಲುಗಣ್ಣಲ್ಲೆ, " ವರಿ ಮಾಡ್ಕೋಬೇಡಿ ಸಾರ್...ನಾನು ಸ್ವಲ್ಪ ಟೈಟಾದ್ರೂ, ಮಾತು ಅಷ್ಟೆ ನೀಟು. ನಿಮಗೆ ಗೊತ್ತಲ್ಲಾ..? ನಿಮ್ಗೆ ಬೇಕಾಗಿರೋದು ಯೂನಿವರ್ಸಲ್ ಪುರಾಣ ತಾನೆ? ಹೇಳ್ತೀನಿ, ಕೇಳ್ಬಿಟ್ಟು ಕಥೆನೊ, ಕವನನೊ ಏನ್ಬೇಕಾದ್ರೂ ಗೀಚ್ಕೊಳ್ಳಿ ಸಾರ್..." ಅನ್ನುತ್ತ ಗ್ಲಾಸು ಎತ್ತಿ ಸಿಪ್ಪೆರಿಸಿದ.
ಅಷ್ಟರಲ್ಲಿ ಕ್ಲಬ್ಬಿನ ಪರಿಚಾರಕ ಒಂದಷ್ಟು ಫಿಂಗರು ಚಿಪ್ಸು ತಂದು ಸುರಿದ. ಕುರುಕು ತಿಂಡಿಗಳೆಂದರೆ ಮೊದಲೆ ಕಾರಣ ಕೇಳದೆ, ಹೊತ್ತು ಗೊತ್ತಿಲ್ಲದೆ ತಿನ್ನೊ ಜನ; ಸಾಸಿಗದ್ದಿ ಬಾಯಿಗಿಡುತ್ತಲೆ ಆರಂಭಿಸಿದ ಗುಬ್ಬಣ್ಣ. ಅಂಕ ಅಂಕವಾಗಿ ಬಿಚ್ಚುತ್ತಾ ಹೋದಂತೆ, ಅಷ್ಟೆ ವಿವರವಾಗಿ, ಕಲಾತ್ಮಕವಾಗಿ, ರಸವತ್ತಾಗಿ ಪೋಣಿಸುತ್ತಾ ಪ್ರಸಂಗವನ್ನು ತೆರೆದಿಡುತ್ತ ಹೋದ ಗುಬ್ಬಣ್ಣ..
"ಅವತ್ತು ಇವರೆಲ್ಲಾರನ್ನು ಒಟ್ಟಿಗೆ ಸೇರ್ಸಿ, ಯುನಿವರ್ಸಲ್ಲು ಸ್ಟೂಡಿಯೊಗೆ ಹೊರಡಿಸಿ, ನಾನೂ ಆಫೀಸಿನತ್ತ ಹೊರಟೆ..ಅದೂ ಭಾನುವಾರವಾದ್ರೂ, ಅವತ್ತು ಸ್ಪೆಶಲ್ಲಾಗಿ ಟೆಸ್ಟಿಂಗು, ಟ್ರೈನಿಂಗಿಗೆ ಅಂತ ಬರಹೇಳಿದ್ರು ಸಾರ್....ಇವರ ಬಂದು ಹೋದ ಓಡಾಟ , ಎಳೆದಾಟದಲ್ಲಿ ಆಗ್ಲೆ ಸುಮಾರು ದಿನ ರಜೆ ಹಾಕಿದ್ದೆ; ಈ ದಿನ ನನ್ನಿಂದಾಗಿಯೆ ತಡವಾಗಿರೊ ಭಾಗಾನ ಕವರಪ್ಪ್ ಮಾಡೋಕೆ ಅಂಥ ಅರೆಂಜು ಮಾಡಿದ್ದು, ಓವರು ಟೈಮು...;ಭಾನುವಾರದ ದಿನವೂ ಆಫೀಸಿಗೆ ಬರಬೇಕಲ್ಲಾ ಅಂತ ಬೈಕೊಂಡು ಬೈಕೊಂಡೆ ಕೆಲಸಕ್ಕೆ ಬಂದಿದ್ರು ಆ ಪ್ರಾಜೆಕ್ಟು ಯೂಸರುಗಳು ಸಾರ್.."
ಸದ್ಯ ಕೊನೆಗೂ ಕಥಾನಕ ಪ್ರಸಂಗ ಆರಂಭವಾಯ್ತಲ್ಲಾ ಅನ್ನುತ್ತ ಖುಷಿಯಲ್ಲಿ,"ಅದು ಹೆಂಗೊ ಗುಬ್ಬಣ್ಣ.. ಇಲ್ಲಿನವರು ಭಾನುವಾರಾ, ರಜೆ ದಿನದ ಕೆಲಸಾ ಅಂದ್ರೆ ಮೂರು ಮೈಲಿ ಆಚೆ...ಅಂಥಾದ್ರಲ್ಲಿ ನಿನ್ನ ಪ್ರಾಜೆಕ್ಟಲ್ಲಿ ಬರೋಕೆ ಒಪ್ಕೊಂಡ್ರು ಅಂದ್ರೆ, ಬಾಳ ಒಳ್ಳೆ ಜನಾಂತ ಕಾಣುತ್ತೆ..."
"ಒಳ್ಳೆ ಜನಾ ಮಣ್ಣಾಂಗಟ್ಟಿ....ಕಾಲ್ಕಾಲಿಗೆ ಬಿದ್ದು , ದಮ್ಮಯ್ಯ ಗುಡ್ಡೆ ಹಾಕಿ ಇದೋಂದೆ ಒಂದು ಸಾರಿ ಬನ್ನಿ ಅಂತ ಗೋಳಾಡಿದ್ದಕ್ಕೆ, ಅವ್ರು ಅತ್ತು ಕರೆದು ಒಪ್ಕೊಂಡ್ರು ಸಾರ್...ಅದೂ ಸುಮ್ನೆ ಅಲ್ಲಾ...ಕಂಪನಿಯಿಂದ ಡಬ್ಬಲ್ ಪೇ ಜತೆಗೆ ಕಾಂಪನ್ಸೇಟರಿ ಲೀವು ಎಲ್ಲಾ ಅರೇಂಜು ಮಾಡಿಸಿದ ಮೇಲೆ, ಧರ್ಮಕ್ಕೆ ಅನ್ನೊ ಹಾಗೆ ಒಪ್ಕೊಂಡು ಬಂದಿದ್ರು..ನಮ್ಮ ಪ್ರಾಜೆಕ್ಟು ಮ್ಯಾನೇಜರು ಸುಮ್ಮನೆ ಉರು ಉರು ಅಂಥ ಉರಿದು ಬೀಳ್ತಾ ಇದ್ದಾ ಸಾರ್..."
"ಆಮೇಲೆ...?"
" ಅವತ್ತು ಪ್ಲಾನು ಇದ್ದದ್ದು, ಮೊದಲು ನಾನು ಟ್ರೈನಿಂಗು ಮುಗಿಸಿ, ಆಮೇಲೆ ಅವರ ಕೈಯಲ್ಲಿ ಟೆಸ್ಟಿಂಗು ಮಾಡಿಸಿ ಪಾಸೊ, ಫೇಲೊ ರಿಸಲ್ಟು ತೊಗೊಬೇಕಿತ್ತು ಸಾರ್..ಅದಕ್ಕೆ ಸರಿಯಾಗಿ ಎಲ್ಲಾ ಒಂಭತ್ತಕ್ಕೆ ಸರಿಯಾಗಿ ಬನ್ನಿ ಅಂತ ಹೇಳಿದ್ರೆ ಒಬ್ಬೊಬ್ಬರೆ ಬಂದು ಕ್ಲಾಸು ಶುರುವಾಗುವಷ್ಟೊತ್ತಿಗೆ ಆಗ್ಲೆ ಹತ್ತು ಗಂಟೆ..ಸರಿ ಹಾಳಾಗ್ಲಿ ಅಂಥ ಇನ್ನೇನು ಶುರು ಮಾಡಿದಿನಿ ಕ್ಲಾಸು....", ಎನ್ನುತ್ತ ಒಳ್ಳೆ ಕುತೂಹಲಕರ ಘಟ್ಟದಲ್ಲಿ ಸಸ್ಪೆನ್ಸು ಇಡುವವನಂತೆ 'ಪಾಹ್ಸ್' ಮಾಡಿ ಮತ್ತೆ ಗ್ಲಾಸು ಕೈಗೆತ್ತಿಕೊಂಡ ಗುಬ್ಬಣ್ಣ.
" ಏನಯ್ಯ ಯುನಿವರ್ಸಲ್ ನೋಡೋದು, ಒಳ್ಳೆ ಸಸ್ಪೆನ್ಸು ಥ್ರಿಲ್ಲರ ತರ ಓಡ್ತಾ ಇರೊ ಹಂಗೆ ಕಾಣುತ್ತೆ ನಿನ್ನ ಕಥೆ? ಅಥವ ನನಗೆ ಸುಮ್ಮನೆ ಹೋಳು ಬಿಡೋಕೆ ಅಂತ ಎಲ್ಲ ಬಣ್ಣ ಕಟ್ಟಿ ಹೇಳ್ತಾ ಇದೀಯಾ ಹೇಗೆ?"
ಗುಬ್ಬಣ್ಣ ಸಾವಕಾಶದಿಂದ ಎರಡು ಮೂರು ಸಿಪ್ ಬಿಯರು ಗುಟುಕರಿಸಿ, ಜತೆಗೆ ಒಂದೆರಡು ಫಿಂಗರು ಚಿಪ್ಸು, ಸಾಸಿನ ಜತೆ ನೆಂಚಿಕೊಂಡು ನಿಧಾನವಾಗಿ ಮೆದ್ದವನೆ, ಒಂದು 'ಬಿಯರ್ವಾಸನಭರಿತ' ಸದ್ದಿನೊಂದಿಗೆ 'ಢರ್ರೆಂದು' ತೇಗಿ ಅದರ ಆಸ್ವಾದನೆಯನ್ನೆ ಆಹ್ಲಾದತೆಯಿಂದ, ಅನುಭೂತಿಯಾಗಿ ಅನುಭವಿಸುತ್ತಾ, " ಸ್ವಲ್ಪ ತಾಳ್ಮೆಯಿಂದ ಕೇಳಿ ಸಾರ್..ನಿಮಗೆ ಗೊತ್ತಾಗುತ್ತೆ..ನಾನು ಹೇಳ್ತಾ ಇರೋದು ರೀಲೊ, ಇಲ್ಲ ರಿಯಲ್ಲೊ ಅಂತ...ನೀವು ಕೇಳೊಕೆ ಇಷ್ಟು ಸಂಕಟ ಪಡೊ ಹಾಗೆ ಇದೆ, ನಾನು ಅನುಭವಿಸಿದವನು ಎಷ್ಟು ಸಂಕಟಪಟ್ಟಿರಬೇಕು ಯೋಚ್ನೆ ಮಾಡಿ ಸಾರ್...."
"ಆಯ್ತಪ್ಪ..ರೀಲಲ್ಲ ಅಂತ ನಂಬ್ತೀನಿ, ಮುಂದೇನಾಯ್ತು ಹೇಳು" ಅಂದೆ
" ಹೂಂ...ಎಲ್ಲಿಗೆ ನಿಲ್ಲಿಸಿದ್ದೆ ಪ್ರಸಂಗ?"
"ಅದೇ..ಇನ್ನೇನು ಟ್ರೈನಿಂಗು ಶುರುಮಾಡ್ಬೇಕು... ಅಷ್ಟರಲ್ಲಿ...."
"ಆಷ್ಟರಲ್ಲಿ ಮೊಬೈಲು ಹೊಡ್ಕೊಳ್ಳೊಕೆ ಶುರುವಾಯ್ತು..... ಇದ್ಯಾರಪ್ಪಾ ಸರಿಯಾದ ಹೊತ್ನಲ್ಲಿ ಅಂತ ನೋಡಿದ್ರೆ ಮಗಳ ನಂಬರು ಕಾಣಿಸ್ತು...ಇನ್ನೇನು ಗ್ರಾಚಾರಾನಪ್ಪ ಶಿವನೆ ಅಂತ ಹೊರಗಡೆ ಬಂದು ಮಾತಾಡ್ದೆ...." ಅಂತ ಆ ಸಂಭಾಷಣೆಯನ್ನೂ ವಿವರಿಸತೊಡಗಿದ ಗುಬ್ಬಣ್ಣ;
" ಅಪ್ಪಾ...ನಾನಪ್ಪ...."
"ಎಲ್ಲಿದ್ದಿ ಮಗಳೆ, ಏನು ಫೋನು ಮಾಡಿದ್ದು.. ಅರ್ಜೆಂಟಾ? ನಾನು ಮೀಟಿಂಗಿನಲ್ಲಿದ್ದಿನಮ್ಮ..."
"ಅಪ್ಪಾ..ಎಲ್ಲಾ ಬಂದು ಯುನಿವರ್ಸಲ್ಲಿಗೆ ಸೇರಿದ್ವಿ... ಎಂಟ್ರೆನ್ಸತ್ರ ನಿಂತಿದಿವಿ..."
"ಅಲ್ಲ್ಯಾಕೆ ನಿಂತ್ಕೊಂಡ್ರಿ...ಹೋಗೊದಲ್ವಾ ಓಳಗೆ? ಇನ್ನು ಓಪನ್ನು ಆಗಿದಿಯೊ ಇಲ್ವೊ?"
"ಓಪನ್ನು ಆಗಿದೆ ಅಪ್ಪಾ..ಆದರೆ ನಾವು ಓಳಗೆ ಹೋಗೋಕಾಗಲ್ಲಾ..ಅಪ್ಪಾ..."
"ಹೋಗೋಕಾಗಲ್ಲ ಅಂದ್ರೇನಮ್ಮ ಅರ್ಥ? ಏನು ಬಾಗಿಲು ಚಿಕ್ಕದೂಂತನಾ? ಅಲ್ಲೆಲ್ಲಾ ಗೇಟು ದೊಡ್ದೆ ಇರುತ್ತಲ್ಲಾ..."
" ಅಯ್ಯೊ..ಅಪ್ಪಾ ಅದಲ್ಲಾ...ಸ್ವಲ್ಪ ಎಡವಟ್ಟಾಗ್ಹೋಗಿದೆ..."
"ಏನು ಎಡವಟ್ಟಮ್ಮ? ಎಲ್ಲಾ ಹುಷಾರಾಗಿದೀರಾ ತಾನೆ...?"
" ಎಲ್ಲಾ ಚೆನ್ನಾಗೆ ಇದ್ದಾರಪ್ಪ....ಆದ್ರೆ ಒಳಗೆ ಹೋಗೋಕೆ ಯಾರತ್ರಾನು ಟಿಕೇಟ್ಟೆ ಇಲ್ಲಪ್ಪಾ...."
"ನನ್ನ ಕೈಲಿದ್ದ ಪೋನು ಕೆಳಗೆ ಬೀಳೊದೊಂದು ಬಾಕಿ ಸಾರ್..ಯಾಕೊ ಈ ಟಿಕೆಟ್ಟು ಬೆನ್ನುಹತ್ತಿದ ಭೇತಾಳದ ತರ ಕಾಡ್ತಾ ಇದೆಯಲ್ಲಾ ಅಂತಾ..." ಮಧ್ಯದಲ್ಲೆ ತಜ್ಞ ವೀಕ್ಷಕ ವಿವರಣೆ ಕೊಟ್ಟ ಗುಬ್ಬಣ್ಣ..ನಾನು ಕುತೂಹಲದಿಂದ, "ಮತ್ತೆ ಟಿಕೆಟ್ಟಿಗೇನಾಗಿತ್ತಪ್ಪ ಅಲ್ಲಿ? " ಅನ್ನುತ್ತ ಮತ್ತೆ ಪ್ರಸಂಗಕ್ಕೆ ಚಾಲನೆ ಕೊಟ್ಟೆ.
" ನಾನು ಅದನ್ನೆ ಕೇಳ್ದೆ ಸಾರ್....ಕೋಪದ ದನಿಯಲ್ಲಿ..'ಯಾಕಮ್ಮಾ ಮಗಳೆ? ಈಗೇನಂತೆ ಅವರ ಗೋಳು? ಅವರಿಗೆಲ್ಲ ಹೇಳು, ಈಗ ಕೈಲಿ ಟಿಕೆಟ್ಟಿಲ್ಲಾಂತ ನಖರ ಮಾಡಿದ್ರೆ ನಡೆಯೊದಿಲ್ಲ..ಅವ್ರವ್ರ ಕೈಯಲ್ಲೆ ಬೇಕಾದ್ರೆ ಕಾಸು ಕೊಟ್ಟು ಹೊಸಾದು ಟಿಕೆಟ್ಟು ತೊಗೊಳ್ಳಿ ಅಂತ'..."
"ಅಯ್ಯೊ ಅಪ್ಪ ಕಿರುಚ್ಬೇಡಾ...ಎಡವಟ್ಟು ಮಾಡಿರೋದು ಅವರಲ್ಲಾ...ಅಮ್ಮ...!"
"ಹಾಂ.....!!"
"ನೀನು ಅವರ ಕೈಗೆ ಕೊಟ್ಟಿದ್ದ ಟಿಕೆಟ್ಟೆಲ್ಲ ಎಲ್ಲರೂ ಜೋಪಾನವಾಗಿರಲಿ ಅಂತ ಅಮ್ಮನ ಹತ್ರ ಕೊಟ್ಟಿದ್ರಂತೆ..."
"ಅಯ್ಯೊ...ಗೂಬೆ ಮುಂಡೇವಾ...ಅವಕ್ಯಾಕೆ ಆ ದುರ್ಬುದ್ಧಿ ಬಂತೂ.....ಮೊದಲೆ ಅವ್ಳಿಗೆ ಅಸಾಧ್ಯ ಮರೆವು ಅಂತ ಗೊತ್ತಿಲ್ವಾಮ್ಮ.....ಎಷ್ಟೊ ಸಾರಿ ನನ್ಮುಖಾನೆ ಮರ್ತು 'ಯಾರಪ್ಪಾ ನೀವು, ಯಾರು ಬೇಕಿತ್ತು' ಅಂತ ಕೇಳ್ದೋಳು... ನಿಂಗೊತ್ತಿತ್ತಲ್ಲಾ.. ನೀನಾದ್ರೂ ತೆಗೆದು ಇಟ್ಕೊಬಾರದಾಗಿತ್ತಾ...."
"ಈ ಕಥೆಯೆಲ್ಲಾ ನಂಗೇನು ಗೊತ್ತಪ್ಪಾ...ಎಲ್ಲಾ ಈಗ ಹೇಳ್ತಾ ಇದಾರೆ....ಗೇಟು ಹತ್ರ ಹೋದ್ವಿ...ಎಲ್ಲ ಅಮ್ಮನ್ನ 'ಪಾರಕ್ಕ ಟಿಕೆಟು ಕೊಡೆ' ಅಂದಾಗ ಅಮ್ಮ ಟಿಕೆಟ್ಟು ಇಟ್ಟು ಇಟ್ಟಿದ್ದ ಪರ್ಸೆಲ್ಲಿ ಅಂತಾ ಹುಡ್ಕಾಡೋಕೆ ಶುರು ಮಾಡಿದ್ಲು...ಆಮೇಲೆ, ಜ್ಞಾಪಿಸ್ಕೊಂಡು 'ಬೀಗ ಹಾಕೊ ಹೊತ್ನಲ್ಲಿ ಟೀವಿ ಪಕ್ಕ ಇಟ್ಟಿದ್ದೆ' ಅಂದ್ಲು...ಹೊರಡೊ ಗಡಿಬಿಡಿಲಿ ಅಲ್ಲೆ ಮರೆತು, ಬೀಗಾ ಮಾತ್ರ ಹಾಕ್ಕೋಂಡು ಬಂದ್ಬಿಟ್ಲಂತಪ್ಪ..."
"ಅಯ್ಯೊ...ಹಾಳದವಳನ್ನ ತಗೊಂಡು ಬಂದು, ಹಾಳದವಳನ್ನ ತಗೊಂಡು ಬಂದು....ಮೊದ್ಲೆ ಮರೆವು ಅಂತ ಗೊತ್ತಿದ್ದು ಈಸ್ಕೊಂಡಿಟ್ಕೊಂಡಿದಾಳಲ್ಲಾ, ಗೂಬೆನ್ತಂದು.....ಸರಿ ಸರಿ...ನನಗೀಗ ಮೀಟಿಂಗ್ ವಾಪಸ್ ಹೋಗ್ಬೇಕು ಹೊತ್ತಾಯ್ತು...ನಿಮ್ಮಮ್ಮನ್ನೆ ಮನೆಗೆ ಹೋಗಿ ಟಿಕೆಟ್ ತೊಗೊಂಡು ಬಾ ಅಂತೇಳು....ಎಲ್ಲ ಅಲ್ಲೆ ಪಿಕ್ನಿಕ್ ಮಾಡ್ಕೊಂಡು ಕಾಯ್ಲಿ ಅಲ್ಲಿ ತನಕ..."
"ಅದನ್ನ ಕೇಳಕೆ ಪೋನ್ ಮಾಡಿದ್ದಪ್ಪಾ...ಅಮ್ಮ ಹೇಳುದ್ಲು , ನಿಮ್ಮಪ್ಪನಿಗೆ ಪೋನು ಮಾಡಿ ಮನೆಗೆ ಹೋಗಿ ಬೇಗಾ ಟಿಕೆಟ್ಟು ತೊಗೊಂಬರೊಕೇಳೆ ಅಂತ...."
"ಹೇಳ್ತಾಳೆ ಹೇಳ್ತಾಳೆ...ಹೇಳ್ದೆ ಏನು ಮಾಡ್ತಾಳೆ ಪಂಕಜವಲ್ಲಿ...ಅವಳಲ್ಲಿ ಮಹಾರಾಣಿತರ ಆರ್ಡರು ಮಾಡ್ಲಿ, ನಾನಿಲ್ಲಿ ಅಬ್ಬೆಪಾರಿತರ ಗೂಬೆಮುಂಡೆ ಟವಲ್ ಹಾಕ್ಕೊಂಡು, ಅವಳು ಹೇಳಿದ್ದುಕ್ಕೆಲ್ಲಾ ಕಪೀಶನ ತರ ತಲೆಯಾಡಿಸ್ಕೊಂಡು..'ಜೀಹುಕುಂ', 'ಜೀಹುಕುಂ' ಅಂತ ಗುಲಾಮ ಸೇವೆ ಮಾಡ್ತಾ ಇರ್ತೀನಿ....ಎಲ್ಲಿ ಅವಳು? ಕೊಡವಳ ಕೈಗೆ ಪೋನು? ಅದಕ್ಕೆ ಅವಳೆ ಮಾತಾಡ್ದೆ ನಿನ್ಕೈಲಿ ಫೋನು ಮಾಡ್ಸುದ್ಲಾ?"
" ಅಮ್ಮ..ಇಲ್ಲಿಲ್ಲಪ್ಪ...ಟಿಕೆಟ್ ಕೌಂಟರತ್ರ ಹೋಗ್ತಾ ಇದಾಳೆ....."
"ಅಲ್ಲ್ಯಾಕೆ ಹೋಗ್ತಾಳಂತೆ ಅವಳು? ಅವಳೇನು ದಮ್ಮಯ್ಯ ಗುಡ್ಡೆ ಹಾಕಿದ್ರೂ ಅವರು ಟಿಕಿಟಿಲ್ದೆ ಒಳಗೆ ಬಿಡೊಲ್ಲಾ ಅಂತಾ ಗೊತ್ತಿಲ್ವಾ...ಇವಳ್ನೇನೂ ಅವರ ಮಾವನ ಮಗಳು ಅನ್ಕೊಂಡ್ಲಾ ಹೇಗೆ..."
" ಇಲ್ಲಪ್ಪಾ..ಶಂಕರ ಚಿಕ್ಕಪ್ಪ ಇದ್ಕೊಂಡು, 'ಗುಬ್ಬಣ್ಣಂಗೆ ಹೇಳಿ ಟಿಕೆಟ್ಟು ತರಸ್ಕೊಳಿ ಪಾರ್ವತಕ್ಕ'..ಅಂದ್ರು...ಅದಕ್ಕೆ ಅಮ್ಮ 'ಅಯ್ಯಯ್ಯೊ... ಈಗವರನ್ನ ಕೇಳಿದ್ರೆ ರೇಗ್ಕೊಂಡು ಉರ್ರಂತ ಮೈಮೇಲೆ ಬೀಳ್ತಾರೆ...ನಾನಂತೂ ಕೇಳಲ್ಲಪ್ಪಾ...' ಅಂದ್ಲು. ಚಿಕ್ಕಪ್ಪ ಇದ್ಕೊಂಡು 'ಹಾಗಾದ್ರೆ ಒಂದು ಕೆಲಸ ಮಾಡೋಣ...ಅಪ್ಪನಿಗೆ ಮಗಳೂಂದ್ರೆ ಪ್ರಾಣ...ಅವಳೆ ಕೇಳ್ನೋಡ್ಲಿ...' ಅಂದ್ರು. ಅಮ್ಮ ಮಾತ್ರ, 'ಅವರು ಕೋಪದಲ್ಲಿ ವಿಶ್ವಾಮಿತ್ರ, ದೂರ್ವಾಸನ ವಂಶದೋರು...ಮಗಳಾದ್ರೂ ಅಷ್ಟೆ, ಹೆಂಡ್ತಿ ಆದ್ರೂ ಅಷ್ಟೆ...' ಅಂದ್ಲು.."
"ಸದ್ಯ ಅಷ್ಟನ್ನಾದ್ರೂ ಸರಿಯಾಗಿ ತಿಳ್ಕೊಂಡಿದಾಳಲ್ಲಾ...ಮಂಕು ಮುಂಡೆದನ್ನ ತಂದು.... ಅದು ಗೊತ್ತಿದ್ದೂ ತಿರುಗಾ ಬೂತತ್ರ ಯಾಕೋದ್ರಂತೆ?"
"ಅದಾ..ಚಿಕ್ಕಪ್ಪ ಇದ್ಕೊಂಡು... 'ಪಾತಕ್ಕ.. ನಿಮ್ಮೆಜಮಾನ್ರು ಯಾವುದಕ್ಕೂ ಇರಲಿ ಅಂತ ನಿಮ್ಮ ಹತ್ರ ಸಪ್ಲಿಮೆಂಟರಿ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದಾರಲ್ಲಾ...ಅದ್ರಲ್ಲಿ ಹೋಗಿ ಹೊಸ ಟಿಕೆಟ್ಟಾದ್ರೂ ತೋಗೊಂಡು ಹೋಗೋಣ ಬನ್ನಿ...ಈಗ್ಲೆ ಲೇಟು ಆಗಿದೆ...."ಅಂದ್ರು.....
"ಅಯ್ಯೊ ಮನೆಮುರುಕ ನನ್ನ ಮಕ್ಳಾ...ಅಷ್ಟೊಂದು ದುಡ್ಡಾಕಿ ತಂದಿರೊ ಹೊಸಾ ಟಿಕೆಟ್ಟನ್ನ ಮೂಲೆಗ್ಹಾಕಿ ತಿರುಗಾ ಹೊಸಾ ಟಿಕೆಟ್ಟು, ಅದೂ ನಮ್ಮ ಕ್ರೆಡಿಟ್ಟು ಕಾರ್ಡಿನಲ್ಲಿ ತೊಗೊಬೇಕಂತಾ? ನಿಮ್ಮಮ್ಮ ಖಡಾಖಂಡಿತವಾಗಿ ' ಬಿಲ್ಕುಲ್ ಆಗಲ್ಲ..' ಅಂತ ಹೇಳಿದ್ಲೂ ತಾನೆ?"
"ಅಯ್ಯೊ ಇರೊ ಟಿಕೆಟ್ಟು ಹಾಳಾಗಲ್ವ ...ಅಂತ ಅಮ್ಮ ಅಂದ್ಲು ಅಪ್ಪ....ಅದಕ್ಕೆ ಚಿಕ್ಕಪ್ಪ ಬಂದು, 'ನಿಮ್ಮೆಜ್ಮಾನ್ರಿಗೆ ಅಷ್ಟೊಂದು ಇನ್ ಫ್ಲುಯೆನ್ಸಿದೆ...ಏನಾದ್ರೂ ಮಾಡಿ ಟಿಕೆಟ್ಟು ವಾಪಸ್ಸು ಮಾಡ್ಬಿಡ್ತಾರೆ ಬಿಡಿ ಪಾತಕ್ಕ...ಇಲ್ಲಾಂದ್ರು ಯಾರ್ಗಾದ್ರೂ ಮಾರಾಕಿಬಿಡ್ತಾರೆ....ಮಹಾ ಪ್ರಚಂಡರೂ ಅವರು' ಅಂತೆಲ್ಲ ಹೇಳಿ ಈಗ ಟಿಕೆಟ್ಟು ತರೋಕೆ ಅಂತ ಕೌಂಟರಹತ್ರ ಹೋಗಿ 'ಕ್ಯೂ'ನಲ್ಲಿ ನಿಂತಿದಾರಪ್ಪ..."
"ಅಯ್ಯಯ್ಯೊ...ಮನೆ ಹಾಳ್ ನನ್ಮಕ್ಳ, ಮನೆ ಹಾಳ್ ನನ್ಮಕ್ಳ....ಒಂದೊಂದು ಟಿಕೆಟ್ಟು ಎಪ್ಪತ್ತೈದು, ಹದಿನಾಲ್ಕು ಜನಕ್ಕೆ ಅಂದ್ರೆ ಹುಡುಗಾಟ ಅನ್ಕೊಂಡಿದಾರ ಏನ್ಕತೆ... ನಿಮ್ಮಮ್ಮಂಗಾದ್ರೂ ಬುದ್ಧಿ ಬೇಡ್ವಾ...ಕೋಲೆ ಬಸವನ ಹಾಗೆ ಅವನ್ಯಾವನೊ ಗೋಸುಂಬೆ ಹೇಳ್ದಾ ಅಂತಾ ಕೇಳ್ತಾ ಹೋಗಿದಾಳಲ್ಲಾ, ರಾಮ ರಾಮ...."
" ನಂಗೂ ಯಾಕೊ ಒಂಥರ ಅನ್ನುಸ್ತಪ್ಪಾ...ಅದಕ್ಕೆ ಯಾವುದಕ್ಕೂ ನಿನಗೆ ಹೇಳ್ಬಿಡೋಣ ಅಂತ ಪೋನ್ ಮಾಡ್ದೆ ಅಪ್ಪಾ...ಪೋನಿಡ್ಲಾಪ್ಪಾ, ನಿಂಗೆ ಮೀಟಿಂಗಿಗೆ ಲೇಟಾಗುತ್ತೆ...."
"ಮಗಳೆ, ಮಿಟೀಂಗ್ ಮನೆ ಹಾಳಾಯ್ತು...ಇಲ್ಲಿ ನನ್ನ ಸರ್ವನಾಶ ಆಗೋಗ್ತಾ ಇದೆ....ನನಗೊಂದು ಹೆಲ್ಪು ಮಾಡ್ತೀಯಾ ಪುಟ್ಟಾ...."
"ಏನಪ್ಪಾ ಅದು? ಮನೆಲಿರೊ ಟಿಕೆಟ್ಟುನ ನನ್ನ ಫ್ರೆಂಡ್ಸಿಗೆಲ್ಲಾ ಮಾರ್ಕೊಡ್ಬೇಕಾ...ನಂಗೆ ತುಂಬಾ ಫ್ರೆಂಡ್ಸ್ ಇದಾರಪ್ಪಾ...ಫಿಫ್ಟಿ ಪರ್ಸೆಂಟು ಡಿಸ್ಕೌಂಟು ಅಂದ್ರೆ ಎಲ್ಲಾ ನಾನೂ, ತಾನೂ ಅಂತ ಮೇಲ್ಬಿದ್ದು ತೊಗೊತಾರಪ್ಪ..."
"ಸದ್ಯಕ್ಕೆ ಅದು ಬೇಡಾ ಮಗಳೆ...ಹೇಗಾದ್ರೂ ಮಾಡಿ ನಿಮ್ಮಮ್ಮನ್ನ ಹೊಸ ಟಿಕೆಟ್ಟು ತೊಗೊಳ್ದೆ ಇರೊ ತರ ಬ್ರೇಕು ಹಾಕ್ಸು...."
"ಅಪ್ಪಾ ಮತ್ತೆ ಯುನಿವರ್ಸಲ್ಲೂ..."
" ನಾನು ಪೂರ್ತಿ ಹೇಳೊದನ್ನ ಕೇಳೊ ಮಗಳೆ ಮೊದಲು.....ನೀನು ನಿಮ್ಮಮ್ಮನ್ನ ಹಿಡಿದು ಮೊದಲು ಆ ಕ್ರೆಡಿಟ್ ಕಾರ್ಡು ಕಿತ್ತು ಕೈಗಿಟ್ಟುಕೊ.....ಅದೊಂತರ ಏತಿ ಅಂದ್ರೆ ಪ್ರೇತಿನ್ನೊ ಜಾತಿ...."
"ಅಮ್ಮನ್ನ ಬೈಬೇಡಾಪ್ಪ..."
"ಸರಿ ಕೇಳಮ್ಮಾ.....ನಾನು ಈ ಮೀಟಿಂಗನ್ನ ಕ್ಯಾನ್ಸಲ್ ಮಾಡಿಸಿಬಿಟ್ಟು, ಇದೊ ಈಗ್ಲೆ ಟ್ಯಾಕ್ಸಿ ತಗೊಂಡು ಮನೆಗೆ ಹೋಗಿ ಟಿಕೆಟ್ಟು ತಗೊಂಡು ಬರ್ತೀನಿ ಒಂದರ್ಧ ಮುಕ್ಕಾಲು ಗಂಟೆ ಒಳಗೆ ..ಅಲ್ಲಿತನಕ ಏನೂ ಎಡವಟ್ಟು ಮಾಡದೆ ತೆಪ್ಪಗಿರೋಕೆ ಹೇಳು, ಆ ಮೊದ್ಮಣಿಗೆ..."
"ಆಗ್ಲಪ್ಪಾ..ಆದ್ರೆ ಬೇಗಾ ಬಾರಪ್ಪ ...ಒಳಗೆ ತುಂಬಾ ದೊಡ್ಡ 'ಕ್ಯೂ' ಇರುತ್ತೆ...ಈಗ್ಲೆ ನಾವು ತುಂಬಾ ಲೇಟು...."
"ಸರಿಯಮ್ಮ..ಇದೋ ಈಗ ಹೊರಟೆ......"
"ಸರೀಪ್ಪಾ..ನಾನು ಅಮ್ಮಂಗೆ ಹೇಳ್ತಿನಿ...ಬೈ...ಬೈ...."
ಅಷ್ಟು ಹೇಳಿ ಗುಬ್ಬಣ್ಣ ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ಮೌನದ ಜತೆ ಬಿಯರು ಹೀರತೊಡಗಿದ...ಬಹುಶಃ ಹಳೆಯದೆಲ್ಲಾ ಸಿನಿಮಾ ರೀಲಿನಂತೆ ನೆನೆಸಿಕೊಳ್ಳುತ್ತಲೆ ಎಲ್ಲರಿಗೂ ಹಿಡಿ ಶಾಪ ಹಾಕುತ್ತಿದ್ದಾ ಅಂತ ಕಾಣುತ್ತೆ.. ನಾನೂ ಎಲ್ಲಾ ಸ್ವಲ್ಪ ಡೈಜೆಸ್ಟಾಗಲಿ ಅಂತ ಸುಮ್ಮನಿದ್ದೆ..ಅಲ್ಲದೆ ಮಾತಾಡುತ್ತಾಡುತ್ತ ಮೂರನೆ ಗ್ಲಾಸು ಖಾಲಿಯಾಗಿತ್ತು, ಬಾಟಲಿಯೂ ಬರಿದಾಗಿತ್ತು...ನಾನು ಮತ್ತೊಂದು ಬಿಯರಿನ ಬಾಟಲಿಗೆ ಆರ್ಡರು ಕೊಟ್ಟು ನನ್ನ ವೈನಿನ ಗ್ಲಾಸಿಗೆ ತುಟಿ ತಾಕಿಸುತ್ತ ಮೌನ ಮುರಿದೆ...
" ಗುಬ್ಬಣ್ಣ...ಕೊನೆಗೆ ಮೀಟಿಂಗ್ ಹೇಗೆ ಕ್ಯಾನ್ಸಲ್ ಮಾಡ್ಸಿದ್ಯೊ?"
ಗುಬ್ಬಣ್ಣ ತಗ್ಗಿಸಿದ್ದ ತಲೆಯನ್ನು ನಿಧಾನವಾಗಿ ಮೇಲೆತ್ತಿ , "ನಾವು ಬೇಡಾಂದ್ರೂ ಎಷ್ಟು ತರ ಡ್ರಾಮಾ..ಮಾಡ್ಬೇಕು ನೋಡಿ ಸಾರ್..ಅದೂ ಬೇರೆಯವರ್ಗೊಸ್ಕರ...ಅವರಿಗೆಲ್ಲ ಒಂದು ಇನ್ ಸ್ಟಂಟ್ ಹೊಸಾ ಬುರುಡೆ ಬಿಟ್ಟು, ಯಾರೊ ಕ್ಲೋಸು ರಿಲೆಟೀವ್ಗೆ ತುಂಬಾ ಸೀರಿಯಸ್ಸು , ಎಮರ್ಜೆನ್ಸಿ ಅಂತೆಲ್ಲ ಬಣ್ಣ ಕಟ್ಟಿದೆ....ನಾನು ಪೋನಲ್ಲಿ ಕೂಗಾಡ್ತಾ ಇದ್ದುದ್ದನ್ನೆಲ್ಲಾ ನೋಡ್ತಿದ್ರಲ್ಲಾ, ಬಾಳ ಸೀರಿಯಸ್ಸೆ ಇರ್ಬೇಕು ಅನ್ಕೊಂಡು 'ಮೊದಲು ಹೋಗಿ, ಈ ಸೆಶನ್ನು ಮುಂದಿನ ವಾರ ಮಾಡೋಣ ' ಅಂದ್ರು. ಪುಣ್ಯಕ್ಕೆ ಮಾತಾಡಿದ್ದೆಲ್ಲಾ ಕನ್ನಡದಲ್ಲಿ, ಅದಕ್ಕೆ ಯಾರಿಗೂ ಏನು ಮಾತಾಡಿದ್ದು ಅಂತ ಗೊತ್ತಾಗಲಿಲ್ಲ. ಇದು ನಮ್ಮ ಯುನಿವರ್ಸಲ್ ಕಥೆ ಅಂತೇನಾದ್ರೂ ಗೊತ್ತಗಿದ್ರೆ ಮಾತ್ರ ಅಲ್ಲೆ ಹೂತು ಹಾಕಿ ಬಿಡೋರೊ ಏನೊ...."
"ಅಂತು ಅಲ್ಲಿಂದ ಹೆಂಗೊ ಬಚಾವಾದೆ ಅನ್ನು..."
" ಬಚಾವೆಲ್ಲಿ ಬಂತು ಸಾರು...ಶಿಕಾರಿ ತೋಳದ ಕೈಯಿಂದ ತಪ್ಪಿಸ್ಕೊಂಡು ಸಿಂಹದ ಬಾಯಿಗೆ ಸೇರಿದ ಹಾಗಾಯ್ತು ಅಷ್ಟೆ...ಅಲ್ಲಿಂದ ಟ್ಯಾಕ್ಸಿ ಹಿಡಿದು, ದೂರದಲ್ಲಿರೊ ಜುರಾಂಗ್ ಮನೆಯಿಂದ ಟಿಕೆಟ್ಟು ಹುಡುಕಿ ಎತ್ಕೊಂಡು ಯುನಿವರ್ಸಲ್ ತಲುಪೊ ಹೊತ್ತಿಗೆ ಟ್ಯಾಕ್ಸಿನೆ ಐವತ್ತು ಡಾಲರು ಆಗಿತ್ತು ಸಾರ್...."
"ಹೋಗ್ಲಿ ಟಿಕೆಟ್ಟಾದ್ರು ಹೇಳಿದಂಗೆ ಟಿವಿ ಪಕ್ಕ ಇತ್ತಾ?"
" ಎಲ್ಲಿ ಸಾರ್...ಇರುತ್ತೆ? ನನ ಹೆಂಡ್ತಿ ಬಗ್ಗೆ ನಿಮಗೆ ಗೊತ್ತಿಲ್ವ? ಕೊನೆಗೆ ಅದು ಅಡುಗೆ ಮನೆಲಿ ಸಕ್ಕರೆ ಡಬ್ಬದೊಳಗಿತ್ತು....ಶರ್ಲಾಕ್ ಹೋಂ ತರ ಅದನ್ನು ಪತ್ತೆ ಮಾಡಿ ಎತ್ಕೊಂಡು ಓಡಿ ಹೋದೆ ಸಾರ್..."
" ಸರಿ ಬಿಡು ಅಲ್ಲಿಗೆಲ್ಲಾ ಸುಖಾಂತ ಆಯ್ತಲ್ಲಾ..."
"ಯಾವ ಸೀಮೆ ಸುಖಾಂತ ಸಾರ್...ಹೋಗಿ ಟಿಕೆಟ್ಟು ಕೊಟ್ಟುಬಿಟ್ಟು, ಮನೆಲಾದ್ರೂ ಆರಾಮಾವಾಗಿ ಮಲಗಿಕೊಳ್ಳೋಣವೆಂದ್ರೆ, ಅಲ್ಲಿ 'ಬರೋದು ಬಂದಿದ್ದೀಯ..ಹೆಂಡ್ತಿ ಮಗಳು ಹೇಗೂ ಜತೆಗಿದಾರೆ....ಇನ್ನು ನೀನೊಬ್ಬನೆ ಏನು ಮಾಡ್ತಿ, ಗುಬ್ಬಣ್ಣ? ನೀನು ಬನ್ಬಿಡೋದೆ ಅಲ್ವ' ಅಂತ ತಲೆ ತಿಂದು, ನನಗೂ ಎಪ್ಪತ್ತೈದು ಡಾಲರು ಬೋಳಿಸ್ಕೊಳ್ಳೋ ಹಾಗೆ ಮಾಡಿದ್ರು..."
"ವಾರೆಹ್ವಾ ಗುಬ್ಬಣ್ಣ! ಅಂತೂ ನೀನೂ ಯುನಿವರ್ಸಲ್ ದಂಡಯಾತ್ರೆ ಹೊಡೆದುಬಿಟ್ಯಾ ನೆಂಟರ ಜತೆಯಲ್ಲಿ...."
" ಬೇಕಿದ್ದೊ, ಬೇಡದೇನೊ ಹೋಗಿದ್ದೇನೊ ನಿಜ..ಆದರೆ ಹೋದ್ಮೇಲೆ ಯಾಕಾದರೂ ಹೋದೆನೊ ಅನಿಸಿಬಿಟ್ಟಿತು ಸಾರ್..."
"ಯಾಕಪ್ಪಾ..ಅಲ್ಲಿಂದಾಚೆಗೆಲ್ಲಾ ಸುಗಮವಾಗಿರಬೇಕಲ್ಲಾ?"
"ಎಲ್ಲಿ ಬಂತು ಸಾರ್..ಅಜ್ಜಿ ಪಿಂಡಾ...ಯುನಿವರ್ಸಲ್ ಅಂದ್ರೆನು ಅಂತಾನೂ ಐಡಿಯ ಇಲ್ದೆ ಬನ್ಬುಟ್ಟಿದಾರೆ ಸಾರ್...ಮೊದಲು ನ್ಯೂಯಾರ್ಕ್ ಜೋನಿನಲ್ಲಿ ಒಂದು ಬೋಟು ರೈಡು ತರ ಕೂತು ಮೊದಲ ರೌಂಡು ಹಾಕಿದ್ವಿ ಸಾರೂ...ತುಂಬಾ ಸಿಂಪಲ್ಲು...ಆದರೆ ಹಳ್ಳಿ ಜಾತ್ರೆಲೊ , ಎಗ್ಸಿಬಿಷನ್ನಲ್ಲೊ ಗಿರಗಿಟ್ಲೆ ಸುತ್ತಿರೋದ್ ಬಿಟ್ರೆ, ಬೇರೇನೂ ಕಾಣದವುಕ್ಕೆ, ಇಂಥಾದಕ್ಕೆಲ್ಲ ಯೋಗ್ಯತೆಯೆಲ್ಲಿ ಬರಬೇಕು? ಆ ಬೋಟು ರೈಡಿಗೆ ಹೆದರಿ, ಅದುರಿ ಅಲ್ಲಡಿ ಹೋಗಿ ' ಅಯ್ಯಯ್ಯಪ್ಪ...ಇಂಥಾದ್ದು ಅಂತ ಗೊತ್ತಿದ್ರೆ ನಾವು ಬರ್ತಾನೆ ಇರ್ಲಿಲ್ಲಪ್ಪ...ಶ್ಯಾನೆ ಭಯವಾಗುತ್ತೆ...ನಾನೊಲ್ಲೆ, ನಾನೊಲ್ಲೆ ಅಂಥ ಡ್ರಾಮ ಮಾಡ್ಕೊಂಡು ಯಾರೂ ಉಳಿದಿದ್ದ ರೈಡು, ಅಡ್ವೆಂಚರ್ಸಿಗೆ ಬರಲೆ ಇಲ್ಲಾ ಸಾರು...ಕೊನೆಗೆ ನಾನೂ, ನನ್ನ ಮಗಳು, ಅವರ ಒಂದಿಬ್ಬರು ಹುಡುಗರಷ್ಟೆ ಎಲ್ಲಾದರಲ್ಲು ಕ್ಯೂನಲ್ಲಿ ಕಾದು, ಕೂತು ಬಂದ್ವಿ...ಟ್ರಾನ್ಸ್ಫಾರ್ಮರ, ಮಮ್ಮಿಸ್ ರಿವೆಂಜ್ ಅದೂ ಇದೂ ಅಂತ ಬರಿ ನಾವು ಮೂರ್ನಾಲ್ಕು ಜನರಷ್ಟೆ ಹೋಗಿಬಂದಿದ್ದು....."
"ಅಯ್ಯೊ ಶಿವನೆ, ಹಾಗಾದ್ರೆ ಉಳಿದವರೆಲ್ಲಾ ಏನು ಮಾಡ್ತಿದ್ರೂ ಮತ್ತೆ?"
"ಮತ್ತೇನು ಮಾಡ್ತಾರೆ ಸಾರು....ನಾವು ಬರುವ ತನಕ ಆಚೆನೆ ಕಾಯೋದು...ಕೆಲವು ಕೂತು ನೋಡೊ ಆಟ ಇತ್ತಲ್ಲ -'ವಾಟರು ವರ್ಡ್', 'ಲಾಂಗ್ ಲಾಂಗ್ ಎಗೊ' ತರದ್ದು ಅದು ನೋಡಿದ್ದು ಬಿಟ್ರೆ ಬೇರೇನೂ ಇಲ್ಲಾ ನೋಡಿ....ಕೊನೆಗೆ ಎಲ್ಲಾರ್ನೂ ಬಲವಂತ ಮಾಡಿ ಹಂಗಿಸಿದ್ದಿಕ್ಕೆ...ಎಲ್ಲ ಬಹಳ ಧೈರ್ಯಾ ಮಾಡಿ, 'ಮೆರ್ರಿ ಗೋ ರೌಂಡಲ್ಲಿ ' ಬಂದು ಅದೂ ಆ ಸೀಟುಗಳ ಮೇಲೆ ಕೂತ್ಕೊಂಡ್ರು...ಪ್ರಾಣಿಗಳ ಮೇಲೂ ಹತ್ತಿ ಕೂರಲಿಲ್ಲ ಒಬ್ಬರಾದ್ರು...ಅಲ್ಲು ನಾನು ನನ್ನ ಮಗಳೆ ಸರಿಯಾಗಿ ಆಡಿದ್ದು ಅಂದ್ರೆ..."
" ದುಡ್ಡೆಲ್ಲ ಹಾಳು ವೇಸ್ಟಾಗಿ ಹೋಯ್ತಲ್ಲೊ ಗುಬ್ಬಣ್ಣ..."
" ಕಸದ ತೊಟ್ಟಿಗೆ ಹಾಕಿದ ಹಾಗಾಯ್ತು ಸಾರು....ಇದು ಸಾಲದೂಂತಾ ಊಟದ ಹೊತ್ತಿಗೆ ಸರಿಯಾಗಿ ನಮಗೆ ಇಂಡಿಯನ್ ಪುಡ್ಡೆ ಬೇಕೂಂತ ಒಂದೆ ವರಾತ. ಅಲ್ಲಿ ಇಂಡಿಯನ್ ರೆಸ್ಟೊರೆಂಟೆಲ್ಲಿ ಹುಡುಕೋಣ ಸಾರ್....ಕೊನೆಗೆ ಈಜಿಪ್ಟ್ ಅಟ್ರಾಕ್ಷನ್ ಎದುರು 'ಓಯಸಿಸ್' ಅಂಥ ಇರೊ ಮುಸ್ಲೀಮ್ ಶಾಪೊಂದರಲ್ಲಿ, ಬಿರಿಯಾನಿ, ಬಟರ್ ಚಿಕನ್, ಮಸಲಾ ಮಟನ್ ಹಾಗೆ ಹೀಗೆ ಅಂತ ಏನೆಲ್ಲಾ ಇತ್ತು...ಸರಿ, ಎಲ್ಲ ಒಳಗೆ ಸೇರಿ ಹೊಡೆದಿದ್ದೆ, ಹೊಡೆದಿದ್ದು..."
" ಕೊನೆಗೆ ಆ ಬಿಲ್ಲು ನಿನ್ನ ತಲೆಗೆ ಕಟ್ಟಿತೂ ಅನ್ನು"
" ಹೌದು ಸಾರು, ಮುನ್ನೂರು ನಾನೂರು ಡಾಲರು ದಿಢೀರ ಭಸ್ಮ....ಒಳಗೆಲ್ಲ ಎಕ್ಸ್ಪೆನ್ಸಿವ್ ಬೇರೆ...ಅಂತೂ ಕೊನೆಗೆ ಚೆನ್ನಾಗಿ ತಿನ್ಸಿ, ಗಿರಗಿಟ್ಲೆ ಆಡ್ಸಿ ಚೂರು ಪಾರು ಶೋ ತೋರಿಸಿ ಕರೆದುಕೊಂಡು ಬಂದದ್ದಾಯ್ತು...ಅಷ್ಟೊಂದು ದುಡ್ಡು ಸುರಿದೂನೂ..."
"ಹಾಳಾಗಿ ಹೊಗ್ಲಿ ಬಿಡು ಗುಬ್ಬಣ್ಣ..ಅಂತೂ ನೀವಾದ್ರೂ ನೋಡಿದ ಹಾಗೆ ಆಯ್ತಲ್ಲಾ......ಇದೆಲ್ಲದರ ಮಧ್ಯೆ ಆ ಅಸ್ಪತ್ರೆ ಕತೆ ಎಲ್ಲಿಂದ ಬಂತಪ್ಪಾ?"
" ಸಾರ್...ಇಷ್ಟರವರೆಗೂ ಹೇಳಿದ್ದೇನೆ ಒಂದು ದೊಡ್ಡ ಪ್ರಸಂಗ...ಅದರ ಜತೆಗೆ ಈಗಾ ಆ ಆಸ್ಪತ್ರೆ ಕಥೆನೂ ಹೇಳೊಕೆ ಮೂಡಿಲ್ಲಾ...ಸಾರ್...ನೆಕ್ಸ್ಟು ಮೀಟಿಂಗ್ನಲ್ಲಿ ಆ ಅಜೆಂಡಾ ಇಟ್ಟುಕೊಳ್ಳೊನ ಈ ಸಾರಿಗೆ ಇಷ್ಟು...ಸಾಕು"
"ಸರಿ ಗುಬ್ಬಣ್ಣ....ನಿನ್ನಿಷ್ಟ...ಈಗ ನಿನ್ನ ಕೊನೆ ಗ್ಲಾಸು ಮುಗಿಸು...ಊಟಕ್ಕೆ ಇಲ್ಲೆ ಆರ್ಡರು ಮಾಡಿದೀನಿ... ಊಟ ಮುಗಿಸಿ ಹೊರಟು ಬಿಡೋಣ...ಬೇಕಿದ್ರೆ, ನನ್ನ ರೂಮಲ್ಲಿ ರೆಸ್ಟು ತೊಗೊಂಡು ಸಾಯಾಂಕಾಲ ಆದ ಮೇಲೆ ಮನೆಗ್ಹೋಗುವಿಯಂತೆ..."
"ಸರಿ ಸಾರ್...ಅಂದ ಹಾಗೆ ಇನ್ನೊಂದು ವಿಷಯ; ನಾವು ಮೂರು ಜನರೂ ಸೇರಿ ಯುನಿವರ್ಸಲ್ ವರ್ಷದ ಸೀಸನ್ ಟಿಕೆಟ್ಟು ತಲಾ ಇನ್ನೂರು ಡಾಲರು ಕೊಟ್ಟು ಖರೀದಿಸಿಬಿಟ್ಟೆವು..."
" ಆಹಾ...! ಯಾಕಣ್ಣ ? ಯೂನಿವರ್ಸಲ್ ಅಷ್ಟೋಂದು ಇಷ್ಟವಾಗೋಯ್ತ?"
"ಅಯ್ಯೊ..ಅದಿನ್ನೊಂದು ಕತೆ ಸಾರ್...."ನಿಟ್ಟುಸಿರಿಟ್ಟ ಗುಬ್ಬಣ್ಣ..." ಈ ಹಾಳು ಪೀಡೆಗಳೆಲ್ಲ ಬಂದು ಹೋದರಲ್ಲಾ, ಹೋಗಿ ಏನೇನು ಕೊಚ್ಚಿಕೊಂಡರೊ, ಏನೇನು ಹೇಳಿದರೊ ಗೊತ್ತಿಲ್ಲಾ ಸಾರ್....ನಮಗಂತೂ ಪೋನ್ ಮೇಲೆ ಪೋನ್ ಊರಿಂದ...."
"ಏನಂಥ?"
"ಎಲ್ಲಾ ಹತ್ತಿರ ದೂರದ ಉಳಿದ ನೆಂಟರೂ ಪೋನು ಮಾಡಿ, 'ತುಂಬಾ ಚೆನ್ನಾಗಿ ನೋಡ್ಕೊಂಡ್ರಂತೆ... ನಮ್ಮನ್ನೆಲ್ಲಾ ಕರೀಲೆ ಇಲ್ಲಾ, ನಾವು ಸದ್ಯಕ್ಕೆ ಬರೋಣಾಂತಿದಿವಿ ಸಾರು, ಬರೋಕು ಮುಂಚೆ ಹೇಳ್ತೀವಿ' ಅಂತ ಒಂದೆ ವರಾತಾ, ಅದೂ ಒಬ್ರಾದ್ಮೇಲೊಬ್ರು!"
"ಅಯ್ಯೊ ಭಗವಂತ....!"
" ಅದಕ್ಕೆ ಪದೆ ಪದೆ ಹೋಗಿ ಹೊಸ ಟಿಕೆಟ್ಟು ಕೊಳ್ಳೊದ್ಬೇಡಾ ಅಂತ ಹೇಳಿ ವರ್ಷದ ಟಿಕೆಟ್ ಖರೀದಿಸಿಬಿಟ್ಟೆ.... ಕನಿಷ್ಟ ಯಾರ ಜತೆ ಹೋದ್ರು ನಮಗೆ ಮಾತ್ರ ತಿರುಗಿ ಕೊಳ್ಳೊ ಹಂಗಿರೊಲ್ಲಾ... ಜತೆಗೆ ಬರ್ತೀವಿ ಅನ್ನೊರನ್ನ ಹೇಗಾದ್ರೂ ಮಾಡಿ ತಡೆದು ನಿಲ್ಸೋದಂತು ನಡೆದೆ ಇದ್ದೆ ಇರುತ್ತೆ; ಇದು ಬರಿ ಬ್ಯಾಕಪ್ಪು ಪ್ಲಾನು.."
" ಸರಿಯಪ್ಪಾ ಏಡುಕೊಂಡಲವಾಡ...! ನಿನಗೆ ಅಡ್ಡಬೀಳಬೇಕೊ,ಅಥವಾ ಆ ಭಗವಂತ ಅವನಿಗೆ ಬೀಳಬೇಕೊ ಗೊತ್ತಾಗ್ತಾ ಇಲ್ಲಾ......"
"ನೀವ್ಯಾರಿಗಾದರೂ ಬೀಳಿ ಸಾರ್...ಈಗ ಹೊಟ್ಟೆ ಹಸಿವಾಗೋಕೆ ಶುರುವಾಗಿ ತಾಳ ಕುಟ್ತಾ ಇದೆ ಒಳಗೆ...."
"ಸರಿಯಪ್ಪಾ ನಿನ್ನ ಕಥೆ...ನಿನ್ನ ಕೊನೆ ಗ್ಲಾಸು ಬೀರು ಮುಗಿಸು...ಡೈನಿಂಗು ಹಾಲಿಗೆ ಹೋಗೋಣ...ಊಟ ರೆಡಿಯಿರುತ್ತೆ ಈಗ..."
"ಹೀಗಾಗಿದೆ ನೋಡಿ ಸಾರ್ ನನ್ನ ಕಥೆ...ಬಂದ ನೆಂಟರೆಲ್ಲಾ ಊರಿಗೆ ವಾಪಸ್ಸಾಗುವಷ್ಟರಲ್ಲಿ ಬೊನಸ್ಸೆಲ್ಲಾ ಖಾಲಿ...ಆ ಬೇಜಾರಿನ್ನೂ ಆರೊ ಮೊದಲೆ ಇನ್ನೊಂದು ಬ್ಯಾಚು ಕಮಿಂಗು ಅನ್ನೊ ಸುದ್ದಿ....ಅದಕ್ಕೆ ಮುನ್ನೆಚ್ಚರಿಕೆಯಾಗಿ ನಿಮ್ಮತ್ರ ಮೊದಲೆ ಕೇಳಿಬಿಡೋಣಾ ಅನ್ಕೊಂಡೆ ಸಾರ್..."
"ಏನನ್ನಪ್ಪಾ?"
"ಈಗ ಎಮರ್ಜೆನ್ಸೀಗೆ ಅಂತ ಯಾವುದಕ್ಕೂ ಒಂದಿಷ್ಟು ಕೈ ಸಾಲಾ ಕೊಟ್ಟಿರ್ತೀರಾ..ಸಾರ್..." ದೈನ್ಯತೆಯಲ್ಲಿ ನುಡಿದ ಗುಬ್ಬಣ್ಣ.
ಗುಬ್ಬಣ್ಣ ಇಡಿ ಬಾಟಲನೆತ್ತಿ, ಲೋಟಕ್ಕೆ ಸುರಿದುಕೊಂಡು; ಒಂದೆ ಸಾರಿಗೆ ಗಟಗಟನೆ ಕುಡಿಯುತ್ತಿದ್ದುದನ್ನು ನೋಡುತ್ತಲೆ ನಾನು - "ಗುಬ್ಬಣ್ಣಾ ಸಾಲದ ವಿಷಯ ಕುಡಿದ ಹೊತ್ನಲ್ಲಿ ಮಾತಾಡಬಾರದಪ್ಪ" ಅಂತ ಏಮಾರಿಸಿ, "ಶ್ರೀಮದ್ ರಮಾರಮಣ ಗೋವಿಂದಾ..." ಎಂದೆ!
ಅದೆ ರಾಗದಲ್ಲಿ "ಗೋವಿಂದಾ"ಎಂದವನೆ ಗ್ಲಾಸು ಕೆಳಗಿಟ್ಟ ಗುಬ್ಬಣ್ಣ, "ನಡೆಯಿರಿ ಸಾರ್...ಈಗ ಊಟಕ್ಕೆ ಹೋಗೋಣಾ" ಎಂದು ಎದ್ದು ನಿಂತ. ನಾನೂ ಜತೆಗೆ ನಡೆದೆ 'ಅವನೆಲ್ಲಾ ಪ್ರಾಬ್ಲಮ್ಮಿಗೆ ನಾನೆ ಯೂನಿವರ್ಸಲ್ ಸಾಲ್ವೆಂಟ್ ಅನ್ನೊ ತರಹ'!
------------------------------------------------------------------------------------------------------------------------------
ನಾಗೇಶ ಮೈಸೂರು, ಸಿಂಗಾಪುರ (ಯುನಿವರ್ಸಲ್ ಸರಣಿ ಮುಕ್ತಾಯ)
------------------------------------------------------------------------------------------------------------------------------
ಕೊ.ಕೊ: ನಾನು ಮಾತನಾಡದೆ ಜತೆಗೆ ನಡೆಯುತ್ತಾ, ನನ್ನ ಕಿರು ಹೊತ್ತಗೆ ತೆಗೆದು ಗುರುತು ಮಾಡಿಕೊಂಡೆ ಟೈಟಲ್ : "ಗುಬ್ಬಣ್ಣನ ಯೂನಿವರ್ಸಲ್ ದಂಡಯಾತ್ರೆಗಳು..."
Comments
ಹಮ್ಮಾ....ಸೂಪರ್:) ಮೂರೂ ಕಂತುಗಳು
In reply to ಹಮ್ಮಾ....ಸೂಪರ್:) ಮೂರೂ ಕಂತುಗಳು by ಗಣೇಶ
ಗಣೇಶ್ ಜಿ, ಗುಬ್ಬಣ್ಣನ್ನೇನೊ ಪಾಸ್
ಹ..ಹ..ಹಾ!! ದಂಡಯಾತ್ರೆ
In reply to ಹ..ಹ..ಹಾ!! ದಂಡಯಾತ್ರೆ by kavinagaraj
ಕವಿ ನಾಗರಾಜರೆ, ಓದುಗರ
Nagesh--- Super
In reply to Nagesh--- Super by Harish S k
ಹರೀಶ್, ಗುಬ್ಬಣ್ಣನ ಹಿಂದಿನ