ಗುಬ್ಬಿ

Submitted by karunakaranid54 on Thu, 04/09/2020 - 15:03
ಬರಹ

ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು

ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು

ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು

ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು

ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು

ಚೀಂವ್ ಚೀಂವ್ ಕೂಗಿ ಕೂಗಿ ಹರಟೆಹೊಡೆಯಿತು.

ನೂರು ಬಾರಿ ಇಟ್ಟು ಅಳಿಸಿ ಬರಹ ತಿದ್ದಿತು

ಕಾಡು ಕಲಿಸಿಕೊಟ್ಟ ಕಲಿಕೆ ಮಂತ್ರವಾಯಿತು.

ಬದುಕ ಬರಹ ಕಲಿತ ಗುಬ್ಬಿ ಗೂಡು ಕಟ್ಟಿತು

ಗೂಡಿನೊಳಗೆ ಅಂದದೆರಡು ಕವಿತೆ ಬರೆಯಿತು

ಕಾಲ ಬೆಳೆದು ದೇವನೊಲಿದು ಜೀವ ಬಳೆಯಿತು

ಪ್ರಾಸ ಛಂದ ದಂತೆ ಗುಟುಕು ಕವಿತೆ ಉಲಿಯಿತು.

ತಾಯಿ ತಂದೆ ಮರಿಗಳಿಂತು ಬದುಕುತಿದ್ದವು

ಕಾಡು ನಾಡಿನೆಲ್ಲ ಮನವು ಹರಸುತಿದ್ದವು

ಯಾವ ಕರೆಯೊ ಬಯಕೆ ಬದುಕೊ ಮರಿಗೆ ಕೇಳಿತು

ರೆಕ್ಕೆ ಪುಕ್ಕ ಬಲಿತ ಜೋಡಿ ಹಾರಿ ನಡೆಯಿತು

ನಡೆದವೇಕೆ? ಮರೆತವೇಕೆ? ತಾಯಿ ಕೇಳದು

ಬರಿದೆ ಬದುಕು ಗೂಡು ಗುಟುಕು- ತಂದೆ ಹೇಳದು

ಎಳೆಯ ಬಿಸಿಲು ತಂಪು ಗಾಳಿ ಕಾಡು ಹೂವಲಿ- ಗುಬ್ಬಿ

ಹೇಳುತಿತ್ತು ಸಂತಸದಲಿ ಹಾಡು ಹಾಡಲೀ-

ಹಾಡು ಪಾಡು ಕಾಡು ನಾಡಿಗೊಂದೆ ಪಾಠವು

ಕೇಳು ಮಗುವೆ ನಿಜಕು ಇದುವೆ ಬದುಕ ಮರ್ಮವು.