ಗುಬ್ಬಿ ಕಥೆ (ಮಕ್ಕಳ ಗೀತೆ)

ಗುಬ್ಬಿ ಕಥೆ (ಮಕ್ಕಳ ಗೀತೆ)

ಕವನ

ಪುಟ್ಟ ಗುಬ್ಬಿಯೊಂದು ಹಾರಿ

ಒಂಟಿ ಮರದಿ ಕೂತಿತು

ತನ್ನ ಪುಟ್ಟ ಬಳಗ ಕರೆದು

ವ್ಯಥೆಯ ಕಥೆಯ ಹೇಳಿತು

 

ಮಕ್ಕಳೆಲ್ಲ ಕೇಳಿ ಇಲ್ಲಿ

ಕಾಲವೊಂದು ಇದ್ದಿತು

ಮನೆ,ಮಹಲು,ಛತ್ರಗಳಲಿ

ನಮ್ಮ ವಾಸವಿದ್ದಿತು

 

ಚಾವಣಿಯಲಿ ಗೂಡು ಕಟ್ಟಿ

ಅಂಗಳದಲಿ ಕುಣಿದೆವು

ಬಿದ್ದ ಬೇಳೆ ಕಾಳು ಹೆಕ್ಕಿ

ಸಂಭ್ರಮ ನೆಲೆ ಕಂಡೆವು

 

ಚಿವ್ ಚಿವ್ ಹಾಡು ಅಲ್ಲಿ

ಜನರ ಮನಸ ಸೆಳೆಯಿತು

ಪುಟ್ಟ ಹೆಜ್ಜೆ ಇಟ್ಟು ಲಜ್ಜೆ

ಪುಟ್ಟ ಹೃದಯ ಗೆದ್ದಿತು

 

ಅವಮಾನದ ವೈಪರೀತ್ಯ

ಅವಸಾನವ ತಂದಿತು

ಮಾನವನ ವಿಜ್ಞಾನವು

ನಮ್ಮ ಪ್ರಾಣ ತಿಂದಿತು!

 

ಕೇಳಿ ನನ್ನ ಮಕ್ಕಳೆಲ್ಲ

ನಾಡ ತೊರೆದು ಬನ್ನಿರಿ

ಕಾಡ ಸೇರಿ ಹಾರಿ ಹೋಗಿ

ನಮ್ಮ ಕುಲವ ಉಳಿಸಿರಿ

 

ಆಡಂಬರದ ಬದುಕ ಕಟ್ಟಿ

ಜನರೆ ನಮ್ಮ ಕೊಂದಿರಿ

ನಾಳೆ ನೀವು ಅಳಿಯೊ ಮೊದಲು

ಸಹಜೀವನ ಅರಿಯಿರಿ

***

(ಮಾರ್ಚ್ ೨೦ ವಿಶ್ವ ಗುಬ್ಬಿ ದಿನ. ಆ ಸಂದರ್ಭದಲ್ಲಿ ಈ ಕವನ)

-ಜನಾರ್ದನ ದುರ್ಗ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್