ಗುರುಗಳ ಆಶೀರ್ವಚನ
ಬಹಳ ದಿನಗಳ ನಂತರ ನಮ್ಮ ಹಳ್ಳಿಗೆ ಶ್ರೀ ಶ್ರೀ ಶ್ರೀ ಗುಲ್ಕನ್ 120 ಸ್ವಾಮೀಜಿ ಆಗಮಿಸಿದ್ದರು. ಇವರು ವಿದೇಶಗಳಲ್ಲೂ ಬಹಳ ಫೇಮಸ್ ಅಂತೆ. ಸಂಸ್ಕ್ಋತ, ಉರ್ದು, ಅರೇಬಿಕ್, ಇಂಗ್ಲೀಷ್ ಮತ್ತೆ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುವುದು ಮಾತ್ರವಲ್ಲದೆ ಉತ್ತಮ ಆಶೀರ್ವಚನ ಕೊಡ್ತಾರಂತೆ ತಿಳಿದಿತ್ತು. ಹಾಗಾಗಿ ನಮ್ಮ ಹಳ್ಳಿಗೂ ಕರೆಸಿ ಇವರ ಮಾತುಗಳನ್ನು ಕೇಳಬೇಕು ಎನ್ನುವುದು ನಮ್ಮೆಲ್ಲರ ಆಸೆಯಾಗಿದ್ದ ಕಾರಣ, ಊರ ಹಿರಿಯರಾದ ಗೌಡರಿಗೆ ಇಸ್ಯಾ ತಿಳಿಸಿದ್ವಿ, ಪಾದಪೂಜೆಗೇನೇ ಒಂದು ಲಕ್ಷ ರೂಪಾಯಿ ಅಂದ್ರು, ಲೇ ಇವರ ಕಾಲೇನು ಚಿನ್ನದ್ದ ಅಂದ ಸುಬ್ಬ, ಹಂಗೆಲ್ಲ ಅನ್ಬೇಡಲಾ, ಸ್ವಾಮೀಜಿ ಬೇಜಾರ್ ಆಯ್ತಾರೆ ಅಂದ ಗೌಡಪ್ಪ. ಕಾಲು ತೊಳೆದು ನೀರು ಕುಡಿದು ತಲೆಗೆ ಒರಿಸ್ಕೊ ಬೇಕಲಾ ಅಂದ ಗೌಡಪ್ಪ. ಹೌದು ಇದೇನು ಗುಲ್ಕನ್ 120. ಇವರು ಸ್ವೀಟ್ ಹಾಗೂ 120 ಬೀಡಾ ಹಾಕ್ತಾರಲ್ಲಾ ಅದಕ್ಕೆ ಕಲಾ ಅಂದ.
ಸರಿ ಊರ್ನಾಗೆಲ್ಲಾ ಕಾಸು ಎತ್ತಿದ್ದಾತು. ಅವರಿಗೆ ಪೂರ್ಣ ಕುಂಭ ಸ್ವಾಗತ ಅಂದಿದ್ದಕ್ಕೆ ಮುಂಡೇವು ಕೆರೆತಾವ ಹೋಗೋ ಚೊಂಬನ್ನು ತಂದಿದ್ವು. ಅದಕ್ಕೆ ಈಭೂತಿ ಪಟ್ಟಿ, ಕುಂಕುಮ, ಅರಿಸಿನ ಹಚ್ಚಕಂಡ್ ಬಂದಿದ್ವು, ಒಂದು ವರ್ಸದಿಂದ ಖರ್ಚಾಗದೇ ಇದ್ದ ಈಭೂತಿನ್ನ ಸೀಮೆಸುಣ್ಣ ತರಾ ಬಳಸ್ತಾ ಇದ್ವಿ. ಅಂತೂ ಧಾರ್ಮಿಕ ಕಾರ್ಯಕ್ಕೆ ಬಳಕೆ ಆಯ್ತಲ್ಲಾ ಅಂತ ಸಾನೇ ಖುಸಿಯಾಗಿದ್ದ ಪಂಚಾಕ್ಸರಿ. ಲೇ ಸಕ್ಕರೆ ಹಾಕಿದ್ದರೆ ಬೆಂಡು ಬತ್ತಾಸು ತರಾ ಬಳಸುತ್ತಾ ಇದ್ದೇಯ್ನಲಾ ಅಂದ ಸುಬ್ಬ.
ಸರಿ ಸ್ವಾಮೀಜಿ ಬಂದರು, ಪೂರ್ಣ ಕುಂಭ ಸ್ವಾಗತ ಅಲ್ಲ ಕೆರೆತಾವ ಚೊಂಬ್ನಾಗೆ ಸ್ವಾಗತ, ಮಗಂದು ಕಿಸ್ನನ ಮನೆಯದು ಚೊಂಬು ತೂತ ಆಗಿತ್ತು. ಅವಾಗವಾಗ ನೀರು ತುಂಬಿಕೊಂಡು ಬರೋನು. ಯಾಕಲಾ, ನೀರು ನಿಲ್ಲಕ್ಕಿಲ್ಲ ಕಲೇ ಅನ್ನೋನು, ಮಗ ಸಿದ್ದೇಸನ ಗುಡಿ ಬರೋದ್ರೊಳಗೆ ಸ್ನಾನ ಮಾಡಿದಂಗೆ ಆಗಿತ್ತು. ಸರಿ ಗೌಡರ ಮನೆಯಲ್ಲಿ ದಾಸೋಹ. ಅಲ್ಲೇ ಗೌಡರ ಪಾದಪೂಜೆ. ಸಣ್ಣ ತಟ್ಟೆ ಆಗಕ್ಕಿಲ್ಲ ಅಂತ ಮದುವೆಯಲ್ಲಿ ಚಿತ್ರಾನ್ನ ಕಲಿಸೋ ದೊಡ್ಡ ಹಿತ್ತಾಳೆ ತಟ್ಟೆ ಮಡಗಿದ್ದ. ಓಡಾಡೋರ ಕಾಲಿಗೆ ಬಡಿಯೋದು,. ಗೌಡಪ್ಪ ಮಾತ್ರ ಉಸಾರಾಗಿ ನಡಿಯೋನು. ಸುಗರ್ ಐತೆ ಅಂತ. ಮಗಂದು 4ಕೊಡ ನೀರು ಹಿಡೀತು. ಇಡೀ ಊರಿಗೆ ತೀರ್ಥ ಕೊಟ್ಟರೂ ಖಾಲಿ ಆಗಲಿಲ್ಲ. ಮುಂಡೇವು ಬಾಟಲಾಗೆ ತುಂಬಿಕೊಳ್ಳೋವು. ಧರ್ಮಸ್ಥಳ ತೀರ್ಥ ಅಂತ. ಮಗಂದು ಸ್ವಾಮಿ ಕಾಲ್ನಾಗೆ ಇಸುಬು ಬೇರೆ ಆಗಿತ್ತು. ಏಥೂ .ಕಡೆಗೆ ಚೆರಂಡಿಗೆ ಚೆಲ್ಲಿದ್ದು ಆತು.
ಅಹಂ ಸುಗರ್ ಲೆಸ್ ಶಕ್ಕರಃ ಕಾಫಿ ಇದಂ ಅಸ್ಮಿ. ತಸ್ಮಿನ್ ಕಾಲೇ ರೊಟ್ಟಿ ಅನ್ನಂ ಸ್ವೀಕರಂತಿ, ಸಾಯಂಕಾಲೇ ಪುನಃ ಸುಗರ್ ಲೆಸ್ ಶಕ್ಕರಃ ಚಾ, ಮಿತ್ರಂ ಪಾರ್ಲೇಜಿ ಬಿಸ್ಕತ್ತು ಸ್ವೀಕರಂತಿ, ಅಹಂ ಕರೋಮಿ, ರಾಮಃ ರಾಮೌ, ರಾಮಾಃ, ಏನಲಾ ಹಿಂಗಂದ್ರೆ, ಸುಗರ್ ಲೆಸ್ ಚಾ, ಪಾರ್ಲೇಜಿ ಬಿಸ್ಕತ್ತಂತೆ ರೀ, ಸಂಸ್ಕೃತ ರೀ, ಅಯ್ಯೋ ಇವನ ಮಕ್ಕೆ ಸಗಣಿ ಹಾಕ, ಇದನ್ನೇ ಕನ್ನಡದಾಗೆ ಹೇಳಬೋದಿತ್ತಲ್ಲಾ ಅಂದ ಗೌಡಪ್ಪ. ಸರಿ ಸಂಜೆ ಎಲ್ಲಾ ಸಿದ್ದೇಸನ ಗುಡಿತಾವ ಬಂದ್ಬಿಡಿ. ಅಲ್ಲೇ ಆಸೀರ್ವಚನ ಕಾರ್ಯಕ್ರಮ ಮಡಿಗಿದೀವಿ ಅಂದು ಒಂದು 5ಕೆಜಿ ಕಲ್ಲು ಸಕ್ಕರೆ ತರಿಸಿದ,. ಯಾಕ್ರೀ ಇದು. ಪರಸಾದ ಕಲಾ ಅಂದ.
ಸರಿ ಸ್ವಾಮೀಜಿ ಆಸೀರ್ವಚನ ಕಾರ್ಯಕ್ರಮ ಸುರುವಾತು. ನಮ್ಮ ಹಳ್ಳಿ, ಪಕ್ಕದ ಹಳ್ಳಿ ಜನಾ ಎಲ್ಲಾ ಸೇರಿತ್ತು. ನಮ್ಮೂರ್ನಾಗೆ ಡಬ್ಬಲ್ ಮೀನಿಂಗ್ ನಾಟಕ ಮಡಗಿದಾಗಲೂ ಈಟೊಂದು ಜನಾ ಸೇರ್ಲಿಲ್ಲ.
ಸರಿ ಸ್ವಾಮೀಜಿ ಎಲ್ಲರಿಗೂ ನಮಸ್ಕಾರ, ಅಂದು ಸುರುಹಚ್ಕಂಡ್ರು, ನೋಡಿ ಸಂಸ್ಕೃತದಲ್ಲಿ ಒಂದು ಪದ್ಯವಿದೆ. "ಅಹಂ ಶೂಬಾತ್ವಂ ರಾಮ ಖಲ್ವಿದಂ ಬ್ರಹ್ಮಮಯಃ" ಅಂದರೆ ಈ ಕಲಾ ಹಸಾಕಿ ಕುಫೂ ಅಂತಾ ಅರೇಬಿಕ್ ಭಾಷೆಯಲ್ಲಿ ಹೇಳಲಾಗುತ್ತದೆ. ಇದರ ಕನ್ನಡ ಅನುವಾದ ಈ ರೀತಿ ಇದೆ,. ನಾನು ಶುಭ್ರವಾಗಿದ್ದರೆ ಸಾಲದು, ಬದಲಾಗಿ ಪಕ್ಕದಲ್ಲಿ ಇರುವವರನ್ನೂ ಶುಭ್ರಗೊಳಿಸಿ, ರಾಮನನ್ನು ನೆನೆಯುತ್ತಾ, ಖಲ್ವಿದಂ ಬ್ರಹ್ಮಮಯಃ ಅಂದರೆ ಖಲೀಜಾ ಬೋಟಿ ಇವನ್ನು ತಿನ್ನದೆ ಬ್ರಹ್ಮನನ್ನು ನೆನೆದರೆ ಮನಸ್ಸಿಗೆ ಶಾಂತಿ ಹಾಗೂ ದೇವರ ಸನ್ನಿಧಿಗೆ ನಾವೆಲ್ಲರೂ ಹತ್ತಿರವಾಗುತ್ತೀವಿ ಎನ್ನುವುದು ಅಂದ್ರು. ಎಲ್ಲಾ ಗೌಡಪ್ಪನನ್ನ ನೋಡಿದ್ರು, ಯಾಕ್ರಲಾ, ಶುಭ್ರ ಅಂದ್ರಲಾ ಅದಕ್ಕೆ ಅಂದ ಕಿಸ್ನ, ಏನಲಾ ಈ ಸ್ವಾಮೀಜಿ ಒಂದು ಲೈನಿಗೆ ಒಂದು ಎರಡು ಪೇಜ್ ಅರ್ಥ ಹೇಳ್ತದಲಾ ಅಂದ ಸುಬ್ಬ.
ಈಗ ಇನ್ನೊಂದು ಶ್ಲೋಕ ಇದೆ ಕೇಳಿ ಮಹಾಜನಗಳೆ, ಸುಪ್ರಭಾತೇ ನಮಸ್ಕರಂತಿ ಸೂರ್ಯಾಃ, ಇದಂ ದೇಹಂ ಅಸ್ತು, ಮರಣಾಂತೇ ದೇಹಂ ನಮಃ, ಪಿಶಾಚಿ, ಭೂತ, ಸನ್ನಿಹ ಆಹೇಸ್ಮಿನ್, ಶಾಂತಿ ದಧಾತು, ಇದಂ ಗ್ರಾಮಂ ಶುಚೇ ಭವತು, ರಾಮ, ಸೀತಾ ವಿವಾಹಸ್ಯ ಸನ್ಮಂಗಲ ಭವತಿ, ಶಾಂತಿ ಲಭಂತು, ಅಂದರೆ ಉರ್ದುವಿನಲ್ಲಿ ಮಹಾನ್ ಸಂತರಾದ ಶ್ರೀಯುತ ಬಿನ್ ಲಾಡೆನ್ ಈ ರೀತಿ ಹೇಳುತ್ತಾರೆ. ಅರೆ ಸಾಲೇ, ಸುಭಾ ಉಟ್ಕೆ ಹಾತ್ ಧೋಲನಾ, ಅಲ್ಲಾಕೋ ನಮಾಜ್ ಕರ್ ಬಾದ್ ಮೇ ಕಾಮ್ ಕರ್ರೇ, ವರನಾ ತೇರಾ ಜೀವನ್ ನಶ್ ಹೋತಾ ಹೈ, ಮೇರ್ ಸಾಥ್ ಆಕೆ ಜಿಹಾದ್ ಕರೋ ಬೋಲ್ತಾ ಹೈ. ಏನಲಾ ಇದು ಇಷ್ಟು ವರ್ಸ ನಾನು ಖುರಾನ್ ಓದ್ತೀನಿ ನಂಗೇ ಗೊತ್ತಿರಲಿಲ್ಲ ಅಂದ ಇಸ್ಮಾಯಿಲ್. ಇದೀಗ ಕನ್ನಡ ಅನುವಾದ ಈ ರೀತಿಯಾಗಿದೆ,. ಇದನ್ನು ವಾಲ್ಮೀಕಿ ರಾಮಾಯಣದಲ್ಲೂ ಹಾಗೇ ಭಗವದ್ಗೀತೆಯಲ್ಲೂ ಕೃಷ್ಣ ಪ್ರಸ್ತಾಪಿಸುತ್ತಾನೆ. ನಾನು ಬೆಳಗ್ಗೆ ಎದ್ದಾಗ ಬೆಳಗಿನ ಕಾರ್ಯವನ್ನು ಮುಗಿಸಿ, ಸೂರ್ಯನಿಗೊಂದು ನಮಸ್ಕಾರ ಮಾಡಿ. ಅನಂತರ ರಾಮ ಸೀತೆ ಕಟ್ಟು ಹಾಕಿಸಿದ ಪೊಟೋಕ್ಕೆ ನಮಸ್ಕಾರ ಮಾಡಿದರೆ ನಿಮಗೂ ಶುಭವಾಗುತ್ತೆ,. ಆ ದೇವ ಮಂಗಳವನ್ನು ಉಂಟು ಮಾಡುತ್ತಾನೆ,.
ಇದನ್ನು ಜಾಕಿಚಾನ್ ಸ್ವಾಮಿ ಭಾಷೆಯಲ್ಲಿ ಈ ರೀತಿ ಹೇಳಲಾಗುತ್ತದೆ. ಹೀಂಫಾ ಕೂಕೂ ಮನಾಲಿ, ಚಿಂಕಾ ಥಾಯ್ ಗೂಂ ಚೀ, ಕಿಂಪ್ ಕಿಂಪ್ ಫಾ ಕುಯ್ ಚಾಂಗ್ ಅಂದ್ರು ಸ್ವಾಮೀಜಿ, ಏನಲಾ ಇದು ಯಾವುದೋ ಹಂಡೆಯೊಳಗೆ ಕಲ್ಲು ಹಾಕಿದಂಗೆ ಆಯ್ತಲ್ಲಾ ಅಂದ ಸೀನ. ಈ ಎರಡು ಶ್ಲೋಕದ ತಾತ್ಪರ್ಯ ಮುಗಿಯೋ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಮುಂದುಗಡೆ ಇದ್ದೋರೆಲ್ಲಾ ಅಡವಾಗಿ ಹಳಸಿದ್ದು, ಪಳಸಿದ್ದು ತಿಂದು ಬಂದಿದ್ವು. ಒಳ್ಳೆ ಗಾಳಿ ಅಂಗೇ ಮಣ್ಣಿನ ಮೇಲೇನೇ ಮಕ್ಕೊಂಡಿದ್ವು, ಲಿಂಗ ಭೇದವಿಲ್ಲದೆ. ಏ ಥೂ. ಎಬ್ರಿಸಿದರೆ, ಬೆಳಗ್ಗೆ ಆತು ಅಂತ ಪೂರ್ಣಕುಂಭಕ್ಕೆ ತಂದಿದ್ದ ಚೊಂಬನ್ನು ಹಿಡಕಂಡು ಕೆರೆತಾವ ಹೋಗೋವು. ಅಂಗಿತ್ತು ಆಸೀರ್ವಚನ, ಗೌಡಪ್ಪ ಮಾತ್ರ ಕೈ ಮುಕ್ಕಂಡು ಕುಂತ್ಕಂಡಿದ್ದ, ಅವಾಗವಾಗ ಲಟಿಗೆ ತೆಗೆಯೋನು, ಯಾಕ್ರೀ , ಕೈ ಹಿಡ್ಕಂಡೈತೆ ಅನ್ನೋನು. ಕಿಸ್ನ ಅವಾಗವಾಗ 90 ಹಾಕ್ಕಂಡು ಬರೋನು, ಯಾಕಲಾ, ಚೆನ್ನಾಗಿ ಅರ್ಥ ಆಗುತ್ತೆ ಅನ್ನೋನು.
ಇನ್ನು ನಿಂಗನ ಅಂಗಡಿ ಟೀ ಏನಿಲ್ಲಾ ಅಂದ್ರು ಒಂದು 200 ಹೋಗಿತ್ತಂತೆ. ಮಗಾ ಹಳೇ ಡಿಕಾಕ್ಸನ್್ಗೆ ಹಾಲು ಬೆರೆಸೋನು, ಸುಬ್ಬ ಮಾತ್ರ ಷಾಮಿಯಾನ ಕಂಬಕ್ಕೆ ಒರಗಿದ್ದ, ಯಾಕಲಾ, ಲೇ ಇವನನ್ನ ಯಾರಲಾ ಕರೆಸಿದ್ದು ಅಂತಿದ್ದ, ಯಾಕಲೇ, ಇವನ ಹೆಣ ಹಾಕ ಅನ್ನೋನು. ಗುರುಗಳು ಆಸೀರ್ವಚನ ನೀಡಿದರು. ಪರಸಾದ ಕೊಡಕ್ಕೆ ಅಂತ ನೋಡಿದ್ರೆ ಜನಾನೇ ಇಲ್ಲ. ರೀ ಗೌಡಪ್ಪ, ಎಲ್ರೀ ಭಕ್ತಾದಿಗಳು ಅಂದ್ರೆ ನಿಮ್ಮ ಆಸೀರ್ವಚನ ಕೇಳಿ ಜನಕ್ಕೆ ಸಾನೇ ಬುದ್ದಿ ಸಿಕ್ಕೈತೆ, ಇನ್ಯಾಕೆ ಈ ಕಲ್ಲು ಸಕ್ಕರೆ ಅಂದ. ಇನ್ನೂ ಫ್ರೆಂಚ್, ರಸಿಯಾ ಭಾಸೆ ಹೇಳಬೇಕು ಅಂತ ಇದ್ದೆ ಅಂತಿದ್ದಾಗೆನೇ ಮೈಕ್ ಸೆಟ್, ಷಾಮಿಯಾನದೋರಿಂದ ಹಿಡಿದು ಎಲ್ಲಾ ಖಾಲಿಯಾಗಿದ್ರು, ಇಡೀ ಸಭಾ ಮಂಟಪಕ್ಕೆ ಸ್ವಾಮೀಜಿ ಒಬ್ಬರೆ. ಗೌಡನೂ ಪಂಚೆ ಎತ್ಕಂಡು ಚೆರಂಡಿ ಹಾರಿ ಓಡ್ತಾ ಇದ್ದ, ಯಾಕ್ರೀ, ಇವನ ಆಸೀರ್ವಚನಕ್ಕೆ ನನ್ನ ಹಳೇ ಎಕ್ಕಡ ಹಾಕ, ಇನ್ನೊಂದು ಹತ್ತು ನಿಮಿಸ ಅಲ್ಲೇ ಇದ್ರೆ ನಾನು ಪಾಗಲ್ ಆಯ್ತೀನಿ ಅಂತಿದ್ದ, ಕೈ ಅಂಗೇ ಮಡಚಿಕಂಡಿತ್ತು. ಇವನ ಹೆಂಡರು ಬಸಮ್ಮನೂ ಸೀರೆ ಎತ್ಕಂಡು ಗೌಡನ ಹಿಂದೆ ಚೆರಂಡಿ ಜಂಪ್ ಮಾಡ್ತಾ ಇದ್ಲು. ಅಯ್ಯೋ ನಿನ್ ಸ್ವಾಮಿಗೆ ಬೆಂಕಿ ಹಾಕ. ಸ್ವಾಮಿ ಬಂದ ಓಡ್ರೋ ಅಂತಿತ್ತು. ಪಾಪ ಸ್ವಾಮಿ ಅಲ್ಲೇ ಮಕ್ಕಂಡು ಬೆಳಗ್ಗೆ ಎದ್ದು ಮುಂದಿನ ಕಾರ್ಯಕ್ರಮಕ್ಕೆ ಹೋಗೈತೆ. ಅಯ್ಯಯ್ಯಪ್ಪಾ
Comments
ಉ: ಗುರುಗಳ ಆಶೀರ್ವಚನ