ಗುರುಗಳ ಗುರು ನಾರಾಯಣ
*ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*"
ಗುರುಗಳ ಗುರು ನಾರಾಯಣ" , ಪೇರೂರು ಜಾರು ಅವರು ತನ್ನದೇ ಆದ ನೂತನ ಅಯ್ನಿಲೆ ಬಂಧ ಛಂದಸ್ಸಿನಲ್ಲಿ ರಚಿಸಿದ ಮಹಾ ಕಾವ್ಯ. ಲೇಖಕರದ್ದೇ ಆದ "ತೂಟೆ ಪ್ರಕಟನಾಲಯ" , ಅಂಗಡಿ ಮನೆ, ಪೇರೂರು - 576213, ಉಡುಪಿ ಜಿಲ್ಲೆ" ಕೃತಿಯನ್ನು ಪ್ರಕಾಶಿಸಿದೆ. 2018ರಲ್ಲಿ ಪ್ರಕಟವಾದ 216 + 4 ಪುಟಗಳ ಕೃತಿಯ ಬೆಲೆ 150 ರೂಪಾಯಿ.
"ಗುರುಗಳ ಗುರು ನಾರಾಯಣ"ದಲ್ಲಿ ಕವಿ ಪೇರೂರು ಜಾರು ಅವರ 'ಮೊದಲ ಮಾತು' ಮತ್ತು ಜಾರು ಅವರೇ ಆವಿಷ್ಕರಿಸಿದ ಹೊಸದಾದ "ಅಯ್ನಿಲೆ ಬಂಧ ಛಂದಸ್ಸು" ವಿನಲ್ಲಿ ಈ ಮಹಾಕಾವ್ಯವನ್ನು ಬರೆದಿರುವುದರಿಂದ ಈ ಅಯ್ನಿಲೆ ಬಂಧ ಛಂದಸ್ಸಿನ ಕುರಿತಾದ ವಿವರವಿರುವ 'ಮಹಾ ಕಾವ್ಯ ಬಂಧ" ಇದೆ.
"ಮೊದಲ ಮಾತು" ವಿನಲ್ಲಿ ಪೇರೂರು ಜಾರು ಅವರು ಏನು ಹೇಳಿದ್ದಾರೆಯೋ ಆ ಮಾತುಗಳು ಅತ್ಯಂತ ಮಹತ್ವದವು ಮತ್ತು ಗುರುಗಳ ಗುರು ನಾರಾಯಣರನ್ನು ಅರಿತುಕೊಳ್ಳಲು ಬಹಳ ಮುಖ್ಯ ಭೂಮಿಕೆಯೂ ಆಗಿರುವುದರಿಂದ ಅದನ್ನು ಇಲ್ಲಿ ಪೂರ್ಣವಾಗಿ ಕೊಡುತ್ತಿದ್ದೇನೆ. ಈ ಮಾತಿನ ಬೆಳಕಿನಲ್ಲಿ ನಾರಾಯಣ ಗುರುಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಮಹಾಕಾವ್ಯವನ್ನು ಓದುವುದು ಬಹಳ ಮುಖ್ಯ.
"ಗುರು ನಾಯಣರು ಸಂತ ಸುಧಾರಕರು. ಸಮಾಜಮುಖಿ ಚಿಂತಕರು. ಮಾನವೀಯತೆಯ ಸಾಕಾರ ಮೂರ್ತಿಯಾದ ಅವರು ಜೀವೋನ್ಮುಖಿ ಜನ ಬದುಕಿಗೆ ಅರ್ಥವಿತ್ತವರು. ಶೋಷಿತರ ಉದ್ಧಾರಕ್ಕೆ , ಮೂಢನಂಬಿಕೆ ತೊರೆಯಲು , ಕಲಿಕೆಯ ಮೂಲಕ ಆತ್ಮೋನ್ನತಿಗೆ ದಾರಿ ಮಾಡಿದವರು.
ಗುರುಗಳ ಗುರು , ಜನಗುರು , ಲೋಕ ವಂದಿತ ನಾರಾಯಣ ಗುರುಗಳನ್ನು ಸ್ವಾಮೀಜಿಯೆನ್ನುವುದು , ಹಿಂದೂ ಸ್ವಾಮೀಜಿಯೆನ್ನುವುದು ಅವರ ವ್ಯಕ್ತಿತ್ವಕ್ಕೆ ಹೊಂದುವ ನುಡಿಗಳಲ್ಲ. ನಾರಾಯಣ ಗುರುಗಳು ಮೊದಲು ಸಮಾಜ ಸುಧಾರಕರು , ಮಾರ್ಗದರ್ಶಿ ಗುರುಗಳು ; ಅನಂತರ ಅವರು ಹಿಂದೂವು ನಿಜ ; ಸ್ವಾಮೀಜಿಯೂ ಸತ್ಯ. ಸ್ಪಷ್ಟವಾಗಿ ಹೇಳಬೇಕೆಂದರೆ ನಾರಾಯಣರು ಬಂಡಾಯಗಾರ.
ಸಂತರಾಗಿ, ಕವಿಯಾಗಿ, ಶಿಕ್ಷಣವೇತ್ತರಾಗಿ, ದೇವಾಲಯ ಸುಧಾರಕರಾಗಿಯೂ ಅವರು ಬಂಡಾಯಗಾರರಾಗಿದ್ದಾರೆ. ಹಿಂದೂ ಧರ್ಮವನ್ನು ಹಾಳು ಮಾಡುತ್ತಿದ್ದಾರೆ ಎಂದು ಮೇಲ್ಜಾತಿ ಹಿಂದೂ ಜನರು ಹದಿನೇಳು ವರುಷ ಕಾಲ ನಾರಾಯಣ ಗುರುಗಳನ್ನು ಕೋರ್ಟಿಗೆ ಅಲೆದಾಡಿಸಿದ್ದರು. ಮೂಢನಂಬಿಕೆಗಳ ವಿರುದ್ಧ ಹೋರಾಟ, ಅನಿಷ್ಟ ವಿಚಾರಗಳ ವಿರುದ್ಧ ವಿಪ್ಲವ, ಎಲ್ಲ ಜಾತಿ ಜನರ ಒಳಿತಿಗಾಗಿ ತುಡಿತ, ಜನಪರ ಹೋರಾಟವೇ ಗುರುಗಳ ಮನೋಭೂಮಿಕೆಯಾಗಿತ್ತು.
ಜೀವನವಿಡೀ ಬಿಳಿಯ ಬಟ್ಟೆಯುಡುತ್ತಿದ್ದ ನಾರಾಯಣ ಗುರುಗಳಿಗೆ ಕೇಸರಿ ಉಡುಗೆ ನೀಡುವುದು ಅವರ ವ್ಯಕ್ತಿತ್ವಕ್ಕೆ ಅಪಮಾನವಾಗಿದೆ. ಶಿವಗಿರಿ ಯಾತ್ರೆಗೆ ಹಳದಿ ಶಾಲು ಗುರುತು ಸೂಚಿಸಿದ್ದವರು ಗುರು ನಾರಾಯಣರು ನಿಜ. ಆ ಶಾಲಿನ ಹೊರತಾಗಿ ಅವರ ಎಲ್ಲ ಉಡುಗೆ ಹಳದಿಯೆನ್ನುವುದು ಕೂಡ ನಿಜವಲ್ಲ!
ಒಮ್ಮೆ ಸಂತ ಜಂಗಮರೆನಿಸಿದ ಮೇಲೆ, ಸ್ವಂತ ಆಶ್ರಮ ತೆರೆದ ಮೇಲೆ ಹಣೆಯಲ್ಲಿ ಯಾವುದೇ ಧರ್ಮ ಚಿನ್ಹೆ ಧರಿಸದ ವಿಚಾರವಾದಿ ಗುರುಗಳವರು. ಎಲ್ಲ ಧರ್ಮಗಳನ್ನು ಮೀರಿ ನಿಲ್ಲಬೇಕು ಮನುಷ್ಯತ್ವ ಎನ್ನುತ್ತಿದ್ದವರು. ಮೊದಲು ಮೇಲ್ಜಾತಿಯವರಿಂದ ತೊಂದರೆ ಅನುಭವಿಸಿದ ಗುರುಗಳು ಕೊನೆಯ ದಿನಗಳಲ್ಲಿ ತಮ್ಮ ಶಿಷ್ಯರು, ಆಶ್ರಮವಾಸಿಗಳು ಎನ್ನುವವರಿಂದಾಗಿಯೇ ಕಣ್ಣೀರು ಸುರಿಸುವಂತಾದುದು ವ್ಯವಸ್ಥೆಯ ವ್ಯಂಗ್ಯ. ಯಾವ ವಯ್ದಿಕ ವ್ಯವಸ್ಥೆಯ ವಿರುದ್ಧ ನಾರಾಯಣ ಗುರುಗಳು ಹೋರಾಡಿದ್ದರೋ ಅದನ್ನೇ ಸುತ್ತಲಿನವರು ಹೊದ್ದು ಮಲಗಿದರು.
ತೆರೆದ ಬದುಕನ್ನು ಜನರ ಒಳಿತಿಗಾಗಿ ಸವೆಸಿದ ನಾರಾಯಣ ಗುರುಗಳು ನುಡಿದಂತೆ ನಡೆದ ತತ್ವ ಪ್ರತಿಪಾದಕರು. ಅವರ ಬದುಕನ್ನು ಒರೆಗೆ ಹಚ್ಚಿ ನಿಜದ ನಡೆಯಲ್ಲಿ ಬರೆಯಲಾಗಿದೆ. ಮೂಸೆಯಲ್ಲಿ ಕಾಸಿ ವಿಮರ್ಶಿಸಲು ಎಲ್ಲರೂ ಮುಕ್ತರು." ಹೌದು. ನಾರಾಯಣ ಗುರುಗಳ ಬದುಕನ್ನು ಒರೆಗೆ ಹಚ್ಚಿ ನಿಜದ ನಡೆಯಲ್ಲಿ ಬರೆಯಲು ಹಿರಿಯ ಬರಹಗಾರರಾದ ಪೇರೂರು ಜಾರು ಆಯ್ದುಕೊಂಡದ್ದು ತಾವೇ ಹೊಸದಾಗಿ ಆವಿಷ್ಕರಿಸಿದ "ಅಯ್ನಿಲೆ ಬಂಧ ಛಂದಸ್ಸು" ಅನ್ನು ಎಂಬುದು ವಿಶೇಷ. ಈ ಅಯ್ನಿಲೆ ಬಂಧ ಛಂದಸ್ಸುವಿನ ಬಗ್ಗೆ ಪೇರೂರು ಜಾರು ಈ ಕೆಳಗಿನಂತೆ ಬರೆದಿದ್ದಾರೆ.
"ತುಳುವಿಗೆ ಒಗ್ಗುವ, ನನ್ನದೇ ಆದ ಅಯ್ನಿಲೆ ಬಂಧ ಛಂದಸ್ಸಿನಲ್ಲಿ ಈ ಕಾವ್ಯ ರಚನೆಯಾಗಿದೆ. ಅಷ್ಟಾದಶ ವರ್ಣನೆಗೆ ಆದಿ ಪ್ರಾಸದಲ್ಲಿ ನಾಲ್ಕು ಅಯ್ನಿಲೆಯ ಪಾಣಿಯನ್ನು ವಾಣಿಯಾಗಿ ಇಲ್ಲಿ ಬಳಸಲಾಗಿದೆ.
ಮೂರು ಮಾತ್ರೆಗಳ ನಾಲ್ಕು ಗಣದ ಒಂದು ಸಾಲು, ಅಂಥ ನಾಲ್ಕು ಸಾಲುಗಳಾದ ಮೇಲೆ ಬರುವ ಅಯ್ದನೆಯ ಸಾಲಿನಲ್ಲಿ ಎಂಟು ಮಾತ್ರೆಗಳಿರುವುದೇ ಸುಯಿಂಪು.
ಮೊದಲ ನಾಲ್ಕು ಸಾಲುಗಳ ಪ್ರತಿಯೊಂದು ಸಾಲಿನಲ್ಲೂ ಮೂರು ಮತ್ತು ನಾಲ್ಕು ಮಾತ್ರೆಗಳ ಗಣದ ಹದಿನಾಲ್ಕು ಮಾತ್ರೆಗಳಿದ್ದು , ಅಯ್ದನೆಯ ಸಾಲಿನಲ್ಲಿ ಒಂಬತ್ತು ಮಾತ್ರೆಗಳಿಪ್ಪುದು ಸುಯಿಲ್. ಒಂದು ಸಾಲಿನಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣ. ಇಂಥ ನಾಲ್ಕು ಸಾಲಾದ ಮೇಲೆ ಬರುವ ಅಯ್ದನೇ ಸಾಲಿನಲ್ಲಿ ಹತ್ತು ಮಾತ್ರೆಗಳು ಬಂದಲ್ಲಿ ಅದು ಸುರಲ್. ಪ್ರತಿ ಸಾಲಿನಲ್ಲಿ ಅಯ್ದು ಮಾತ್ರೆಗಳ ನಾಲ್ಕು ಗಣಗಳ ಇಪ್ಪತ್ತು ಮಾತ್ರೆಯ ನಾಲ್ಕು ಸಾಲಾದ ಬಳಿಕದ ಕೊನೆಯ ಸಾಲಿನಲ್ಲಿ ಹನ್ನೆರಡು ಮಾತ್ರೆ ಬರುವುದೇ ಪೂಸರ."
ಈ ಕಾವ್ಯ ಬಂಧದಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳಿವೆ. ಈ ಅಧ್ಯಾಯಗಳನ್ನು ಕವಿ ಇಲ್ಲಿ "ಹದ" ಎಂದು ಕರೆದಿದ್ದಾರೆ. ನಾರಾಯಣ ಗುರುಗಳ ಜನ್ಮ ಕಾಲದಿಂದ ಆರಂಭಿಸಿ ಸಮಾಧಿಯಾಗುವವರೆಗಿನ ಅವರ ಜೀವನ ಸಾಧನೆಗಳನ್ನು , ಬದುಕಿದ್ದ ಅಷ್ಟೂ ಕಾಲ ಶೋಷಿತ ಸಮುದಾಯಗಳ ವಿಮೋಚನೆಗಾಗಿ ಅವರು ಪಟ್ಟ ಕಷ್ಟ - ನಷ್ಟಗಳು, ದುಃಖ - ದುಮ್ಮಾನಗಳನ್ನು, ವಿರೋಧ - ಜನ ಪ್ರೀತಿಯನ್ನು ಕನ್ನಡದ ಸರಳ ಸುಂದರ ಪದಗಳ ಮೂಲಕ ಮನ ಮುಟ್ಟುವಂತೆ, ತಟ್ಟುವಂತೆ ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ ಕವಿ ಪೇರೂರು ಜಾರು.
ಈ ಕಾವ್ಯ ಕೃತಿಯನ್ನು ಓದುವಾಗ ಸಮಾಜ ಸುಧಾರಣೆ ಬಯಸುವ ಜನರ ಮನದಲ್ಲಿ ನಾರಾಯಣ ಗುರುಗಳ ಮೇಲೆ ಅಪಾರ ಅಭಿಮಾನ ಉಂಟಾಗುವುದು ಖಂಡಿತಾ. ಅದೇ ರೀತಿ ಯಥಾಸ್ಥಿತಿ ಬಯಸುವ ಮನಸ್ಸಿನ ಜನರಲ್ಲಿ ಅಸಹನೆಯ ಭಾವ ಮೂಡಿದರೂ ಆಶ್ಚರ್ಯವಿಲ್ಲ. ನಾರಾಯಣ ಗುರುಗಳನ್ನು ಆರಾಧಿಸುವ ಇಂದಿನ ಜನರೂ ಸಹ ಗುರುಗಳ ನಿಜವಾದ ಆಶಯಗಳನ್ನು, ಸದುದ್ಧೇಶಗಳನ್ನು ಇನ್ನೂ ಕೂಡಾ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಅಂಶ ಮತ್ತು ಕೇವಲ ಢಾಳಾಗಿಯಷ್ಟೇ ಗುರುಗಳನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ ಎಂಬುವುದು ಇದನ್ನೋದುವಾಗ ಸ್ಪಷ್ಟವಾಗುತ್ತದೆ.
ನಾರಾಯಣ ಗುರುಗಳು ಹುಟ್ಟಿದ್ದಾದರೂ ಎಂಥ ಜನರಿರುವ ನಾಡಲ್ಲಿ ? ಎಂಥ ಮನುಷ್ಯರ ನಡುವೆ ? ಹೀಗಿದ್ದರೂ ಅವರು ಬದುಕಿ ತೋರಿಸಿದ ರೀತಿ ನೀತಿಗಳೇನು ? ಅದು ಹೀಗಿದೆ:
ಕೇರಳ ನಾಡಲಿ ಜಾತೀಯತೆಯದು |
ಪರವರ ತೀಯರ ಹಿಂದುಳಿದ ಜನರ |
ನರಕದಲಿರಿಸಿದ ಮೇಲ್ಜಾತಿ ಜನರ |
ಕ್ರೂರತೆ ಎದುರಿಸಿ ದೀನಗೆ ಬದುಕಿದ |
ವರಗುರು ನಾರಾಯಣ ||
ಎಷ್ಟೊಂದು ಸರಳ, ಸುಂದರ, ಸತ್ಯದ ಚುಟುಕು ಚುರುಕಿನ ಕಾವ್ಯ ಬಂಧ.
ನಾರಾಯಣ ಗುರುಗಳು ತಾಯಿಯೊಂದಿಗಿದ್ದಾಗ ಇಂಥ ಪ್ರಸಂಗಗಳು ಸಾಮಾನ್ಯವಾಗಿತ್ತು. ಅದೆಂಥ ಪ್ರಸಂಗವೆಂದು ನೋಡಿ:
ಒಡನೆ ಮಗನನ್ನೆಳೆದು ಹಿಮ್ಮರೆ |
ಗಿಡದ ಬೆಂಗಡೆ ಅಡಗಿ ಕುಳಿತರೊ |
ದಡುಗ ಡೊಳ್ಳಿನ ಹಿಂಡು ಹಾರುವ |
ನಡೆದು ಬಂದರು ದಾಟಿ ಪೋದರು |
ಕಡೆಗೆ ಇವರು ಹೊರಕೆ ||
ಇಂಥ ಅಮಾನವೀಯ ಪ್ರಸಂಗಗಳನ್ನು ನೋಡಿ ನೋಡಿ, ಅನುಭವಿಸಿ, ಅನುಭವಿಸಿ ನಾರಾಯಣ ಗುರುಗಳ ನಿಷ್ಕಲ್ಮಷ ಮನಸ್ಸು ಎಷ್ಟು ವಿಶಾಲ ದೃಷ್ಟಿಯಿಂದ ಯೋಚಿಸುತ್ತಿತ್ತೆಂದರೆ, ಈ ದೃಷ್ಟಿಕೋನವೇ, ಮಾನವೀಯ ತುಡಿತದ ಉತ್ತುಂಗತೆಯೇ ನಾರಾಯಣರನ್ನು ನಿಜ ಜಗದ್ಗುರುವನ್ನಾಗಿಸಿತು.
ಆಲ್ಲಿ ಬಾನಲಿ ಹಕ್ಕಿ ಹಾರುವ |
ವಲ್ಲ ಯಾವುದೆ ಭೇದವೆಣಿಸದೆ|
ಇಲ್ಲಿ ಮರದಲಿ ಒಟ್ಟಿಗಿರುವವು |
ಕ್ಷುಲ್ಲ ಜನರಿಗೇನು ||
ಇತ್ತ ತೋಡಲಿ ಅತ್ತ ಕಡಲಲಿ|
ಮತ್ತೆ ನದಿ ಕೆರೆಯಲ್ಲಿ ಮೀನ್ಗಳು|
ಉತ್ತಮದ ಬದುಕನ್ನು ಹಂಚಿವೆ|
ಅತ್ತ ನೀರ್ಪಕ್ಕಿಗಳು ಒಟ್ಟಿಗೆ|
ಸುತ್ತು ಬಾಳುತಿಹವು||
ಅಲ್ಲಿ ಗದ್ದೆಲಿ ಎಲ್ಲ ಜಾತಿಯ|
ರೆಲ್ಲ ದುಡಿವರು ಸೇರಿ ಕೆಸರಲಿ|
ಇಲ್ಲಿ ಏತಕೆ ಜಾತಿ ಎನುವರು|
ಕಲಿತ ಧರ್ಮಕೆ ದೂರ ಎನುವರು|
ಕುಲದ ನೆಲೆ ಏನು||
ಗುರು ನಾರಾಯಣರ ದೃಷ್ಟಿ, ಕವಿ ಪೇರೂರು ಜಾರು ಅವರ ಸೃಷ್ಟಿ ಯಾರಿಗಾದರೂ ಇಷ್ಟವಾಗದೆ ಇರಲು ಸಾಧ್ಯವೇ ? ಗುರುಗಳ ಇಂಥ ಮೇರು ದೃಷ್ಟಿ ಅವರ ಬದುಕಿನುದ್ದಕ್ಕೂ ಸಮಾಜ ಸುಧಾರಣೆಯ ಪ್ರತೀ ಹೆಜ್ಜೆಯಲ್ಲಿಯೂ ದೃಢವಾಗಿ ಕಂಡು ಬರುವುದು ಮತ್ತು ಕವಿಯ ಭವ್ಯವೂ ದಿವ್ಯವೂ ಆದ ಶೈಲಿಯ ಕಾವ್ಯ ಸೃಷ್ಟಿ ಓದುಗನಲ್ಲಿ ಆಪ್ತತೆಯನ್ನು ಹುಟ್ಟಿಸುವಲ್ಲಿ ಪೂರ್ಣ ಯಶಸ್ವಿಯಾಗುತ್ತದೆ.
ಗುರು ನಾರಾಯಣರು ಮಹಾ ಬಂಡಾಯಗಾರರಾಗಿದ್ದರು ಎನ್ನುವುದಕ್ಕೆ ಅವರ ಬದುಕು ಮತ್ತು ವಿಚಾರಗಳೇ ಸಾಕ್ಷಿ. ಮದುವೆಯಾಗುವ ಸಮಯ ಗಂಡು ಹೆಣ್ಣಿಗೆ ಕಟ್ಟುವ ತಾಳಿಯ ಬಗ್ಗೆ ಗುರುಗಳ ನಿಲುವು ಹೀಗಿದೆ:
ಗಂಡಿಗಿಲ್ಲವು ಗುರುತು ಯಾವುದು|
ಅಂಡಲೆಯಬಹುದೆಲ್ಲ ಊರಲಿ|
ಹೆಂಡತಿಗೆ ತಾಳಿಯದು ಸಂಕಲೆ|
ದುಡಿವ ಗಾಣಕೆ ನಂಬಿಕೆಯ ಬರೆ|
ನುಡಿದರಾಗ ನಾಣು||
ಭಕ್ತಿಯ ಹೆಸರಲ್ಲಿ ಶೋಷಿತ ಜನರನ್ನು ಶಕ್ತರಾಗದಂತೆ ಮಾಡಲಾಗಿದೆ ಎಂಬ ಗುರುಗಳ ಪ್ರಬುದ್ಧ ವೈಚಾರಿಕ ನಿಲುವನ್ನು ಕವಿ ಈ ಕೆಳಗಿನಂತೆ ಓದುಗರಿಗೆ ಕಟ್ಟಿ ಕೊಟ್ಟಿದ್ದಾರೆ.
ಮುಕ್ತಿ ಎಲ್ಲಿದೆ ಸತ್ತ ಬಳಿಕವೆ|
ಭಕ್ತಿ ಎಲ್ಲಿದೆ ಮರೆಯ ಮೋಸವೆ|
ಶಕ್ತಿ ಇಲ್ಲದ ಜನರ ಬದುಕನು|
ಭಕ್ತಿಯಲಿ ಮುಳುಗಿಸಲೊ ಅವರಿಗೆ|
ಶಕ್ತ ಬದುಕು ಎಂತು||
ಅವರ ಭಕ್ತಿಯ ವಿಪ್ರ ನೆಕ್ಕುವ|
ಅವರ ಹೊಟ್ಟೆಯೊ ಬೆನ್ನಿಗಿಳಿದಿದೆ|
ಅವರು ಧರ್ಮದ ಚಟ್ನಿ ಆಗಿಹ|
ರವಭಕುತಿ ಪಥ ನಡೆದ ಮೋಸವು|
ಅವರ ಕಯ್ಗೆಟುಕದೆ||
ನಿಲುವು ಕೆಲವರಿಗೆ ಖಾರವಾಗಿದೆ ಅನಿಸಿದರೂ, ಬಡ ವರ್ಗದವರಿಗೆ ಸಂಬಂಧಿಸಿ ಇವರ ನಿಜ ಬದುಕಿನ ನಗ್ನ ಸತ್ಯದ ಅನಾವರಣ ಎನ್ನಬಹುದು.
ಧರ್ಮ ಮತ್ತು ಬಣ್ಣದ ಬಗ್ಗೆ ಗುರು ನಾರಾಯಣರು ಚಟ್ಟಾಂಬಿಯವರೊಂದಿಗೆ ನಡೆಸುವ ಸಂವಾದದ ಒಂದು ಸಣ್ಣ ಝಲಕ್ ಹೀಗಿದೆ:
ಧರ್ಮವೆಂದರೆ ಬದುಕು ನಡೆಸಲು|
ಧರ್ಮ ಬದುಕನು ನಡೆಸೆ ಬಿಡಿರಯ್|
ಧರ್ಮಕೇ ತೊಂದರೆಯ ನೀಡದೆ|
ಕರ್ಮ ದಾರಿಲಿ ಧರ್ಮ ನೋಡಿರಿ|
ಸರಿಯೇ ಚಟ್ಟಾಂಬಿ||
ತೂತು ಮಡಕೆಗೆ ತೇಪೆ ಹಾಕುವ|
ಕೂತು ತಲೆಯಲಿ ಬುರುಡೆ ಬಿಡುವಾ|
ಪೀತ ಕಾವಿಲಿ ಮೋಸ ಮಾಡುವ|
ಮುತ್ತು ಬದುಕನು ಮರೆಲಿ ಮುಗಿಸುವ|
ಮಾತು ಧರ್ಮ ನಾಣು||
ಬಿಳಿಯ ಬಟ್ಟೆಲೆ ಸಾಮಿಯಾಗುವೆ|
ಬಿಳಿಯ ಮನಸದು ಬಿಳಿಯ ಅರಿವದು|
ಒಳ್ಳಿತಕ್ಕದು ಕಾವಿಯಲ್ಲವು|
ಕೊಳೆತು ಹೋಗಿಹ ಜನರ ಬದುಕನು|
ಬೆಳಕ ಮಡಿಯ ಮಾಳ್ಪೆ||
ಹಿರಿಯ ಪತ್ರಕರ್ತ, ಲೇಖಕ, ಕವಿ, ನಾಟಕಕಾರ ಹೀಗೆ ಎಲ್ಲವೂ ಆಗಿರುವ ಬಹುಮುಖ ಸಾಧಕ ಪೇರೂರು ಜಾರು ಕನ್ನಡ ಓದುಗರಿಗೆ ಮಹತ್ತರವಾದುದನ್ನು ನೀಡಿದ್ದಾರೆ. ಅತ್ಯಂತ ಮಹತ್ವಪೂರ್ಣವಾದ ಗುರು ಕಾಣಿಕೆಯನ್ನೂ ಸಲ್ಲಿಸಿದ್ದಾರೆ. ನಾರಾಯಣ ಗುರುಗಳ ಮೇಲೆ ನಾರಾಯಣ ಗುರುಗಳ ಶಿಷ್ಯರಾದ ಸ್ವಾಮೀ ಧರ್ಮತೀರ್ಥರು, ಲೇಖಕರಾದ ರವಿ ರಾ. ಅಂಚನ್ ಹೀಗೆ ಕೆಲವೇ ಕೆಲವು ಮಂದಿ ಬರಹಗಾರರು ಮಾತ್ರ ಗುರುಗಳ ನಿಜದ ಬದುಕನ್ನು ತೆರೆದಿಟ್ಟಿದ್ದರು. ಇದೀಗ ಜಾರು ಅವರ ಈ ಕಾವ್ಯ ಕೃತಿ ಸಮರ್ಥವಾಗಿಯೇ ಗುರುಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ಕೆಲಸ ಮಾಡಿದೆ. ಪೇರೂರು ಜಾರು ಅವರು ಈ ಅಗತ್ಯದ್ದೂ, ಅಮೂಲ್ಯವಾದ್ದೂ ಆಗಿರುವ ಈ ಕೃತಿಯನ್ನು ನೀಡುವ ಮೂಲಕ ಶೋಷಿತ ಸಮುದಾಯಕ್ಕೆ ಮಹದುಪಕಾರವನ್ನು ಮಾಡಿದ್ದಾರೆ. ಜಾರು ಅವರ ಈ ಕೃತಿಯನ್ನು ಮುಖ್ಯವಾಗಿ ತುಳುನಾಡಿನ ಜನರು ನಾ ಮುಂದು ತಾ ಮುಂದು ಎಂಬಂತೆ ಮನೆ ಮನೆಗೆ ಬರಮಾಡಿಕೊಳ್ಳುವಂತಾದರೆ ಅದು ನಾರಾಯಣ ಗುರುಗಳಿಗೆ ಸಲ್ಲಿಸುವ ಗೌರವವಾಗುತ್ತದೆ.
ಕನ್ನಡದಲ್ಲಿರುವ ಇದೇ ಕೃತಿಯನ್ನು ಜಾರು ಅವರೇ ಸ್ವತಹಾ ತುಳು ಭಾಷೆಗೂ ಅನುವಾದಿಸಿ ಎರಡನ್ನೂ ಜೊತೆಯಾಗಿ ಪ್ರಕಟಿಸಿ ಓದುಗ ಲೋಕಕ್ಕೆ ಸಮರ್ಪಣೆ ಮಾಡಿರುವುದು ಬಹು ದೊಡ್ಡ ಕೊಡುಗೆಯೇ ಆಗಿದೆ.
ನಾರಾಯಣ ಗುರು ಎಂಬ ಅರಿವಿನ ಕಡೆಗೆ ನಾವು ಪ್ರಯಾಣಿಸಬೇಕು ಎಂದಿದ್ದಲ್ಲಿ , "ಗುರುಗಳ ಗುರು ನಾರಾಯಣ" ಕಾವ್ಯ ಕೃತಿಯ ಬೆಳಕನ್ನು ನಾವು ಹೊಂದಿರಲೇಬೇಕಾದುದು ಅನಿವಾರ್ಯ.
~ ಶ್ರೀರಾಮ ದಿವಾಣ