ಗುರುದೇವೋ ಭವ

ಗುರುದೇವೋ ಭವ

ಮನೋಹರ್ ಸರಕಾರಿ ಪ್ರೌಢಶಾಲೆಯೊಂದರ ಶಿಕ್ಷಕ. ಎರಡು ವರ್ಷಗಳ ಹಿಂದೆ ತನ್ನ ಶಿಷ್ಯನಾಗಿದ್ದ ವಿನಯ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ವಿಷಯ ತಿಳಿದ ಮನೋಹರ್ ಆತನನ್ನು ನೋಡಿ ಬರಲು ಆಸ್ಪತ್ರೆಗೆ ಹೊರಟಿದ್ದರು. ಆಸ್ಪತ್ರೆ ತಲುಪಿ ವಿನಯ್ ಮಲಗಿದ್ದ ವಾರ್ಡ್ ಗೆ ಬಂದಾಗ ಮನೋಹರ್ ಬೆಚ್ಚಿಬಿದ್ದಿದ್ದರು...!! ಅಂದು ಸುಂದರ ಮೈಕಟ್ಟು ಹೊಂದಿದ್ದ ವಿನಯ್ ಇಂದು ಗುರುತು ಹಚ್ಚಲಾಗದ ಸ್ಥಿತಿಯಲ್ಲಿ ಮಲಗಿದ್ದ. ಕೃಶವಾಗಿದ್ದ ಆತ ಮನೋಹರ್ ಮೇಸ್ಟರನ್ನು ಕಾಣುತ್ತಿದ್ದಂತೆ ಕಣ್ಣುಗಳನ್ನು ತೆರೆದು ಮೇಸ್ಟ್ರನ್ನೇ ದಿಟ್ಟಿಸಿ ನೋಡುತ್ತಿದ್ದ ಆತನ ಕಣ್ಣುಗಳಲ್ಲಿ ಕಣ್ಣೀರು ಜಿನುಗುತ್ತಿತ್ತು. ಕೃತಕ ಆಕ್ಸಿಜನ್ ಇರುವುದರಿಂದ ಆತ ಮಾತಾಡಲು ಅಶಕ್ತನಾಗಿದ್ದ.

ಆಸ್ಪತ್ರೆಯ ವಾರ್ಡ್ ನಲ್ಲಿ ಮಲಗಿದ್ದ ವಿನಯ್ ನ ಎರಡೂ ಮೂತ್ರಪಿಂಡಗಳು ನಿಷ್ಕ್ರೀಯವಾಗಿದೆ. ವೈದ್ಯರಿಗೆ ಅದರ ಕಾರಣ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹದಿನೆಂಟರ ಹರೆಯದ ಆತ ಬದುಕುವ ಭರವಸೆಯನ್ನು ವೈದ್ಯರು ನೀಡಿಲ್ಲ. ಅಮ್ಮ ಆತನ ಪಕ್ಕದಲ್ಲೇ ಕುಳಿತು ಕಣ್ಣೀರಿಡುವ ದೃಶ್ಯ ಯಾವುದೇ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಮನೋಹರ್ ಸರ್ ಹೆಚ್ಚು ಹೊತ್ತು ನಿಲ್ಲದೆ, ವಿನಯ್ ಅಮ್ಮನಿಗೆ ಹತ್ತು ಸಾವಿರ ಕೈಗಿತ್ತು ಹೊರಟರು.

ವಿನಯ್ ನ ಮನೆಯವರು ಸ್ಥಿತಿವಂತರೇನೂ ಆಗಿರಲಿಲ್ಲ. ಅಪ್ಪ ಕೂಲಿ ಮಾಡಿ ಒಂದಷ್ಟು ಸಂಪಾದಿಸುತ್ತಿದ್ದರೆ, ಅಮ್ಮ ಊರಿನ ಗೌಡರ ತೋಟದಲ್ಲಿ ಕೆಲಸ ಮಾಡಿ ಸಂಸಾರ ಸರಿದೂಗಿಸುತ್ತಿದ್ದಳು. ವಿನಯ್ ತಂಗಿ ರೇಷ್ಮಾ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ವಿನಯ್ ನ ಕಲಿಕೆಗೆ ನೆರವಾಗುತ್ತಿದ್ದಳು. ವಿನಯ್ ಈಗಷ್ಟೆ ಪದವಿ ಪೂರ್ವ ವಿದ್ಯಾಭ್ಯಾಸ ಮುಗಿಸಿ ಮುಂದೆ ಡಿಪ್ಲೋಮಾ ಮಾಡುವುದರಲ್ಲಿದ್ದ. ಆಗ ಇದಕ್ಕಿದ್ದಂತೆ ತೀವ್ರ ಹೊಟ್ಟೆನೋವು ಭಾಧಿಸಿದೆ. ಸ್ಥಳೀಯ ವೈದ್ಯರು ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ್ದೂ ಆಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನೋವು ತೀವ್ರಗೊಂಡಾಗ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಯಿತು. ಪರೀಕ್ಷೆ ಮಾಡಿದಾಗ ವಿನಯ್ ನ ಎರಡೂ ಕಿಡ್ನಿಗಳು ಸಂಪೂರ್ಣ ಹಾಳಾಗಿತ್ತು. ಒಂದೆರಡು ವಾರ ಐಸಿಯು ನಲ್ಲಿದ್ದ ಆತನನ್ನು ವಾರ್ಡ್ ಗೆ ಶಿಪ್ಟ್ ಮಾಡಲಾಗಿತ್ತು. ಚಿಕಿತ್ಸೆಯ ವೆಚ್ಚವನ್ನು ಭರಿಸಲು ಅಪ್ಪ ಅಮ್ಮನಿಗೆ ಸಾಧ್ಯವಿರಲಿಲ್ಲ. ಸಾಧ್ಯವಿರುವ ಕಡೆ ಸಾಲ ಮಾಡಿ ಆಸ್ಪತ್ರೆ ಖರ್ಚು ಭರಿಸಿದ್ದರು. ಹಾಗಾಗಿ ಆತನನ್ನು ವಾರ್ಡ್ ಗೆ ಶಿಪ್ಟ್ ಮಾಡಲಾಗಿತ್ತು.

ಆಸ್ಪತ್ರೆಯಿಂದ ಬಸ್ಸು ಹತ್ತಿ ಹಿಂತಿರುಗುತ್ತಿದ್ದ ಮನೋಹರ್ ಗೆ ಎರಡು ವರ್ಷ ಹಿಂದಿನ ಕಹಿ ಘಟನೆ ಕಣ್ಣ ಮುಂದೆ ಸುಳಿಯ ತೊಡಗಿತು. "ಗುರು ದೇವೋಭವ" ಅದೆಷ್ಟು ಅರ್ಥಪೂರ್ಣವಾಗಿದೆ ಎಂದು ಯೋಚಿಸತೊಡಗಿದರು. ವಿನಯ್ ಅನಾರೋಗ್ಯಕ್ಕೆ ವೈದ್ಯರಿಗೆ ಪತ್ತೆ ಮಾಡಲು ಸಾಧ್ಯವಾಗದ ಕಾರಣವೊಂದು ಅವರಿಗೆ ತಿಳಿದಿತ್ತು. ಎರಡು ವರ್ಷದ ಹಿಂದೆ ವಿನಯ್ ಹೋಂ ವರ್ಕ್ ಮಾಡಿಲ್ಲವೆಂದು ಮನೋಹರ್ ಒಂದೇಟು ಬಿಗಿದಿದ್ದರು. 

ಅಂದು ಶನಿವಾರವಾಗಿತ್ತು. ಮರುದಿನ ವಿನಯ್ ನ ಮೂವರು ಸ್ನೇಹಿತರು ಬಂದು "ವಿನಯ್ ಗೆ ಅನಾರೋಗ್ಯ ಸರಿಯಿಲ್ಲ ಬನ್ನಿ ನೋಡಿ ಬರುವ" ಎಂದು ಮನೋಹರ್ ನ್ನು ಕರೆದುಕೊಂಡು ಹೋಗಿದ್ದರು. ಅವರು ಅದ್ಯಾರದೋ ರೂಮಿಗೆ ಮೇಷ್ಟ್ರನ್ನು ಕರೆತಂದಿದ್ದರು. ರೂಮಿನೊಳಗಿದ್ದ ವಿನಯ್ ಮನೋಹರ್ ನ್ನು ಬರಮಾಡಿ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಕೇಳಿಕೊಂಡ. ಮನೋಹರ್ ಸರ್ ವಿನಯ್ ನ ಆರೋಗ್ಯ ವಿಚಾರಿಸುತ್ತಿದ್ದಂತೆ ಆತನ ಮೂವರು ಸ್ನೇಹಿತರು ಒಂದು ಹಗ್ಗದಿಂದ ಮನೋಹರ್ ನ್ನು ಕಟ್ಟಿ ಹಾಕಿದ್ದರು. ತನಗೆ ಹಿಂದಿನ ದಿನ ಏಟು ಬಿಗಿದಿದ್ದ ಮೇಷ್ಟ್ರ್ ಗೆ ಬುದ್ಧಿ ಕಲಿಸಲು ತನ್ನ ಸ್ನೇಹಿತರೊಂದಿಗೆ ವಿನಯ್ 'ಮಾಸ್ಟರ್ ಪ್ಲಾನ್' ಮಾಡಿದ್ದ. ಅಲ್ಲಾಡದಂತೆ ಕಟ್ಟಿಹಾಕಲ್ಪಟ್ಟ ಮನೋಹರ್ ಅದೆಷ್ಟು ಬೇಡಿಕೊಂಡರೂ ಅವರು ಬಿಡಿಸಲು ತಯಾರಿರಲಿಲ್ಲ. ಮೇಷ್ಟ್ರ ಎದುರಿಗೆ ಒಂದು ಪಾತ್ರೆ ಇಟ್ಟ ವಿನಯ್ ಅವರ ಮುಂದೆನೇ ಅದಕ್ಕೆ ಮೂತ್ರ ಹೊಯ್ದ. ನಂತರ ಆ ಪಾತ್ರೆಯಲ್ಲಿರುವ ಮೂತ್ರವನ್ನು ಕುಡಿಯುವಂತೆ ಬಲವಂತ ಮಾಡಿದ್ದ. ಉಳಿದಿಬ್ಬರು ಮೇಷ್ಟ್ರನ್ನು ಗಟ್ಟಿಯಾಗಿ ಹಿಡಿದಿದ್ದರೆ, ಇನ್ನೊಬ್ಬ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ.

ಮನೋಹರ್ ಅಸಹಾಯಕರಾಗಿದ್ದರು. ಅವರ ಮುಂದೆ ಯಮದೂತರಂತೆ ನಾಲ್ವರು ನಿಂತಿದ್ದರು. ಭಯಭೀತರಾದ ಮನೋಹರ್ ದಾರಿ ಕಾಣದೆ ಆ ಪಾತ್ರೆಯನ್ನು ಖಾಲಿ ಮಾಡಿದ್ದರು. ನಂತರ ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿ ಅವರ ಹಗ್ಗ ಬಿಚ್ಚಿ ಕಳುಹಿಸಿದ್ದರು. ಇಷ್ಟೆಲ್ಲಾ ನಡೆದಿದ್ದರೂ ಮನೋಹರ್ ಈ ಬಗ್ಗೆ ಯಾರಲ್ಲೂ ಹೇಳಿರಲಿಲ್ಲ. ಬಸ್ಸು ಕಂಡೆಕ್ಟರ್ ತಾನು ಇಳಿಯುವ ಸ್ಥಳದ ಹೆಸರು ಕೂಗುತ್ತಿದ್ದಂತೆ ವಾಸ್ತವಕ್ಕೆ ಮರಳಿದ ಮನೋಹರ್ ಭಾರವಾದ ಹೃದಯದೊಂದಿಗೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದರು. 

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ