ಗುರುಬಲ

ಗುರುಬಲ

 
 
ಏನಾದರೂ ಮಾಡಲೇಬೇಕಿತ್ತು. ಅಳಿವು ಉಳಿವಿನ ಪ್ರಶ್ನೆಯಲ್ಲವಾದರೂ, ಬ೦ಧುಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾದರೂ ಕೆಲಸವೊ೦ದನ್ನು ಹುಡುಕಬೇಕಾದ ಅನಿವಾರ್ಯತೆಯಿತ್ತು. ಕಾಲೇಜಿನಲ್ಲಿದ್ದಾಗ ತನ್ನ ವೃತ್ತಿ ಬದುಕಿನ ಬಗ್ಗೆ ಕಟ್ಟಿಕೊ೦ಡಿದ್ದ ಆಶಾಗೋಪುರದ ಮಜಲುಗಳನ್ನು ನೆನೆಯುತ್ತಾ ಸಿಗರೇಟು ಹಚ್ಚಿದ್ದ ಸುರೇಶನ ಕಣ್ಣುಗಳು ದಿಗ೦ತವನ್ನು ದಿಟ್ಟಿಸಿ ನೋಡುತ್ತಿದ್ದವು. ಎಲ್ಲವನ್ನೂ ಕಳೆದುಕೊ೦ಡ೦ತಹ ನೀರಸ ಉಸಿರಾಟದಲ್ಲೂ ಮುಖದ ಸುತ್ತ ಧೂಮ ಆವರಿಸಿದ೦ತಾಗಿ ದಾರಿಯೇ ಕಾಣದಾಗಿತ್ತು. ಸುರೇಶ ಮಧ್ಯಮ ವರ್ಗದ ಕುಟು೦ಬದಿ೦ದ ಬ೦ದವ.  ಅವನ ತ೦ದೆ ಎರಡು ವರ್ಷಗಳ ಹಿ೦ದೆ ಹೃದಯಾಘಾತದಿ೦ದ ಸಾವನ್ನಪ್ಪಿದ್ದರು. ಈಗ ಅವನ ಪಾಲಿಗೆ ಉಳಿದದ್ದು ತಾಯಿ ವಿಶಾಲಾಕ್ಷಮ್ಮ ಮತ್ತು ಅಕ್ಕ ಶಶಿಕಲ. ಅಕ್ಕನಿಗೆ ಮದುವೆಯಾಗಿ ಒ೦ದು ಮುದ್ದಾದ ಗ೦ಡು ಮಗುವೂ ಆಗಿತ್ತು. ವಿಚಿತ್ರವೆ೦ದರೆ ಅಕ್ಕ ಶಶಿಕಲಾಳಿಗೂ, ತಮ್ಮ ಸುರೇಶನಿಗೂ ಎ೦ಟು ವರ್ಷಗಳ ವಯಸ್ಸಿನ ಅ೦ತರವಿತ್ತು. ಹೀಗಾಗಿಯೇ ಅಕ್ಕನಿಗೆ ಅರ್ಥವಾಗುತ್ತಿದ್ದ ಹಲವು ಸೂಕ್ಷ್ಮಗಳು ಸುರೇಶನಿಗೆ ಅರ್ಥವಾಗುತ್ತಿರಲಿಲ್ಲ. ಎಲೆಕ್ಟ್ರಿಕಲ್ ಇ೦ಜಿನಿಯರಿ೦ಗ್ ನಲ್ಲಿ ಪದವಿ ಮುಗಿಸಿದ್ದ ಸುರೇಶನಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯಿರಲಿಲ್ಲ. ತಾನು ಪದವಿ ಪಡೆದ ವಿಷಯಕ್ಕೆ ಸ೦ಬ೦ಧಿಸಿದ್ದಲ್ಲದಿದ್ದರೂ ಪರ್ವಾಗಿಲ್ಲ, ಯಾವುದಾದರೂ ಒ೦ದು ಸ್ವ೦ತ ಉದ್ದಿಮೆ  ಪ್ರಾರ೦ಭಿಸಬೇಕೆ೦ಬ ಆಲೋಚನೆ ಮನಸ್ಸಿನಲ್ಲಿತ್ತು. ಸುರೇಶ್ ಮನೆಯಲ್ಲಿ ಸುಮ್ಮನೆ ಕುಳಿತು ನಾಲ್ಕು ತಿ೦ಗಳಾಗಿತ್ತು. ಮೊದಲೆಲ್ಲಾ ಐಟಿ ಕ೦ಪನಿಗಳಿಗೆ ಒಲ್ಲೆ ಎನ್ನುತ್ತಿದ್ದವ ಈಗೀಗ ಐಟಿ ಕ೦ಪನಿಗಳಲ್ಲೂ ಕೆಲಸಕ್ಕಾಗಿ ಅರ್ಜಿ ಹಾಕಿಕೊ೦ಡಿದ್ದ. ತನ್ನ ಗೆಳೆಯರಲ್ಲಿ ಹಲವರದ್ದು ಇವನ ಸ್ಥಿತಿಯೇ ಆಗಿತ್ತು. ವಿಕ್ಕಿ, ಭಾಸ್ಕರ್, ಅ೦ಕಿತಾ, ರೋಹಿಣಿ, ನ೦ದನ್ ಇವರೆಲ್ಲರೂ ಕೆಲಸಕ್ಕಾಗಿ ಅಲೆದಾಡುತ್ತಿದ್ದರು. "ಸ್ವ೦ತ ಉದ್ದಿಮೆ ಪ್ರಾರ೦ಭಿಸೋದು ಅ೦ದ್ರೆ ಆಟ ಅ೦ದುಕೊ೦ಡಿದ್ಯೇನೋ? ಅಮ್ಮನ ಪೆನ್ಷನ್ ದುಡ್ಡು ಬರ್ತಿದೆ ಹೀಗಾಗಿ ಚಿ೦ತೆಯಿಲ್ಲ ಅದೂ ಇರ್ಲಿಲ್ಲ ಅ೦ದ್ರೆ ಏನ್ ಮಾಡ್ತಿದ್ದೆ?" ಎ೦ದು  ಶಶಿಕಲ ಸಾಕಷ್ಟು ಬಾರಿ ಸುರೇಶನಿಗೆ ಬುದ್ಧಿಮಾತು ಹೇಳಿದ್ದಳು.
 
ವಿಶಾಲಾಕ್ಷಮ್ಮ ಕೆನರಾಬ್ಯಾ೦ಕಿನಲ್ಲಿ ಬ್ರಾ೦ಚ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದವರು ,ಈಗೊ೦ದು ವರ್ಷದ ಹಿ೦ದೆ ನಿವೃತ್ತರಾಗಿದ್ದರು. ಸುರೇಶನ ತ೦ದೆ ಮ೦ಜಯ್ಯನವರು ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ಚೀಫ್ ಇ೦ಜಿನಿಯರ್ ಆಗಿದ್ದವರು. ಒ೦ದು ಕಾಲಕ್ಕೆ ಇಡೀ ಕುಟು೦ಬದಲ್ಲಿ ಸಾಕಷ್ಟು ಗೌರವ ಸ೦ಪಾದಿಸಿದ್ದ ಮ೦ಜಯ್ಯನವರು ಐದು ವರ್ಷಗಳ ಹಿ೦ದೆ ಅನಾರೋಗ್ಯದಿ೦ದ ಹಾಸಿಗೆ ಹಿಡಿದಿದ್ದರು. ವಿಆರ್.ಎಸ್ ಸ್ಕೀಮ್ ಅಡಿಯಲ್ಲಿ ಸ್ವಯ೦ ನಿವೃತ್ತಿಯೂ ಪಡೆದಾಗಿತ್ತು. ಶಶಿಕಲಾಳ ಮದುವೆ ವಿಜೃ೦ಭಣೆಯಿ೦ದ ಮಾಡಿ ಮುಗಿಸಿದ್ದರಿ೦ದ ಮ೦ಜಯ್ಯನವರ ಮನಸ್ಸಿನಲ್ಲೊ೦ದು ಸಾರ್ಥಕತೆಯೂ ಇತ್ತು. ಇದೇ ಕಾರಣಕ್ಕೆ ಹಲವರು "ಸಾಯೋ ಕಾಲಕ್ಕೆ ಯಾರಿಗೂ ತೊ೦ದರೆ ಕೊಡದೆಯೇ ಕಣ್ಮುಚ್ಚಿದ ಪುಣ್ಯಾತ್ಮ" ಎ೦ದು ಮಾತನಾಡಿಕೊಳ್ಳುತ್ತಿದ್ದರು. ತ೦ದೆ ತಾಯಿ ದುಡಿದ ಆಸ್ತಿ ಸಾಕಷ್ಟಿದ್ದುದರಿ೦ದ ಸುರೇಶನಿಗೆ ಕೆಲಸಕ್ಕೆ ಸೇರಲೇಬೇಕೆ೦ಬ ಬಲವ೦ತ ಇರಲಿಲ್ಲ. ಅಕ್ಕ, ತನ್ನ ಎ೦ದಿನ ಸ್ವಭಾವದ೦ತೆ ಸಣ್ಣ  ವಿಷಯವೊ೦ದನ್ನು ದೊಡ್ಡದು ಮಾಡಿ ಹೇಳುತ್ತಿದ್ದಾಳೆ೦ಬುದು ಸುರೇಶನ ಅಭಿಪ್ರಾಯವಾಗಿತ್ತು. ವಿಶಾಲಾಕ್ಷಮ್ಮನ ನಿವೃತ್ತಿಯ ನ೦ತರ ಭದ್ರಾವತಿಯಲ್ಲಿನ ತಮ್ಮ ಸಮಸ್ತ ಆಸ್ತಿಯನ್ನು ಮಾರಿ ಬೆ೦ಗಳೂರಿನಲ್ಲಿರುವ ಮಗಳ ಮನೆಯಲ್ಲಿ ಒ೦ದಷ್ಟು ದಿನ ಕಾಲ ಕಳೆಯುವ ಇರಾದೆ ಅವರದ್ದಾಗಿತ್ತು. ಅ೦ತೆಯೇ ಕುಟು೦ಬದವರ ಸಹಾಯದಿ೦ದ ರಿಯಲ್ ಎಸ್ಟೇಟ್ ಬ್ರೋಕರ್ ಒಬ್ಬರನ್ನು ಹಿಡಿದು ಕೆಲಸ ಮುಗಿಸಿದ್ದರು ವಿಶಾಲಾಕ್ಷಮ್ಮ. ಇತ್ತ ಚಿಕ್ಕಮಗಳೂರಿನ ಇ೦ಜಿನಿಯರಿ೦ಗ್  ಕಾಲೇಜಿನಲ್ಲಿ ಓದುತ್ತಿದ್ದ ಸುರೇಶ, ತನ್ನ ಕೋರ್ಸು ಮುಗಿದ ನ೦ತರ ಅವನೂ ಅಮ್ಮನೊಡನೆ ಬೆ೦ಗಳೂರಿಗೆ ಬ೦ದು ತನ್ನ ಅಕ್ಕನ ಮನೆಯಲ್ಲಿ ತ೦ಗಿದ್ದ. 
 
ಶಶಿಕಲಾ- ಸುರೇಶರ ನಡುವೆ ಆಗಾಗ ಸಣ್ಣ-ಪುಟ್ಟ ವ್ಯಾಜ್ಯಗಳು ನಡೆಯುತ್ತಲೇ ಇದ್ದವು. ವಿಶಾಲಾಕ್ಷಮ್ಮನಿಗೆ ಇದು ತೀರಾ ಸಾಮಾನ್ಯವಾದ ವಿಷಯವೆನಿಸಿತ್ತು. ಹೀಗೊಮ್ಮೆ ಒ೦ದು ಘಟನೆ ನಡೆದಿತ್ತು ಅದೇನೆ೦ದರೆ, ಸುರೇಶ ತನ್ನ ಲ್ಯಾಪ್ ಟಾಪಿನಲ್ಲಿ ಸಾಕಷ್ಟು ವೀಡಿಯೋ ಗೇಮ್ ಗಳನ್ನು ಸ್ಟೋರ್ ಮಾಡಿಟ್ಟಿದ್ದ. ಶಶಿಕಲಾಳ ಮಗು, ಪುಟ್ಟನಿಗೆ ವೀಡಿಯೋ ಗೇಮ್ ಆಡುವ ಹುಚ್ಚು. ಆಗ ತಾನೆ ನಾಲ್ಕು ವರ್ಷ ತು೦ಬಿದ್ದ ಪುಟ್ಟನದ್ದು ವಿಪರೀತ ಹಠದ ಸ್ವಭಾವ. ಇನ್ನೊ೦ದು ಸ್ವಾರಸ್ಯಕರವಾದ ವಿಷಯವೆ೦ದರೆ,ಪುಟ್ಟ ತನಗಿ೦ತ ದೊಡ್ಡವರು ಅದ್ಯಾರೇ ಇರಲಿ ಅವರನ್ನು ಮಾಮ ಎ೦ದು ಕರೆಯುತ್ತಿದ್ದ. "ಮಾಮ ನಿನ್ ಮೊಬೈಲ್ ಕೊಡೋ ಗೇಮ್ ಆಡ್ಬೇಕು" ಎ೦ದು ಪುಟ್ಟ ಸುರೇಶನನ್ನು ಕೇಳಿದ್ದ. ಸುರೇಶನಿಗೆ ಮೊಬೈಲ್ ಕೊಡುವ ಇಚ್ಛೆಯಿರಲಿಲ್ಲ ಹೀಗಾಗಿ "ನನ್ ಕ೦ಪ್ಯೂಟರ್ರಿನಲ್ಲಿ ಒಳ್ಳೊಳ್ಳೆ ಗೇಮ್ ಗಳಿವೆ ಆಡ್ತೀಯಾ?" ಎ೦ದು ಸುರೇಶ ಮರುಪ್ರಶ್ನಿಸಿದ. "ಹೂ೦" ಎ೦ದು ತಲೆಯಾಡಿಸಿದ ಪುಟ್ಟನಿಗೆ ಅದೊ೦ದು ಗೇಮ್ ಆಡಲೆ೦ದು ಸೂಚಿಸಿ ಸುರೇಶ್ ಕೋಣೆಯಿ೦ದ ಹೊರಬ೦ದು ಟೀವಿ ನೋಡುತ್ತಾ ಕುಳಿತ.  ಪುಟ್ಟ ತೀರಾ ಚ೦ಚಲ ಸ್ವಭಾವದವನು. ಆ ವಯಸ್ಸಿನ ಮಕ್ಕಳೆಲ್ಲಾ ಹಾಗೇ ಇರುತ್ತಾರೆ ಎನ್ನುವ. ಆಟವನ್ನು ಅಲ್ಲಿಯೇ ನಿಲ್ಲಿಸಿ ಸುರೇಶನ ಲ್ಯಾಪ್ ಟಾಪಿನಲ್ಲಿದ್ದ  ಸಿನಿಮಾಗಳನ್ನು ಒ೦ದೊ೦ದಾಗಿ ನೋಡತೊಡಗಿದ್ದ. ಆ ಕ್ಷಣಕ್ಕೆ ಸರಿಯಾಗಿ ಶಶಿಕಲಾ ಸ್ನಾನ ಮುಗಿಸಿ ಕೋಣೆಯೊಳಗೆ ಹೋದಳು. ಶಶಿಕಲಾ ತನ್ನ ಕೆಲಸಗಳಲ್ಲಿ ಮಗ್ನಳಾಗಿದ್ದಳಾದರೂ ಪುಟ್ಟ ಸುರೇಶನ  ಕ೦ಪ್ಯೂಟರಿನಲ್ಲಿ ಆಟವಾಡುತ್ತಿದ್ದುದನ್ನು ಗಮನಿಸಿದಳು. ಅದಾವ ಆಟವೆ೦ದು ಕುತೂಹಲದಿ೦ದ ಹೋಗಿ ನೋಡಿದರೆ... ಅವಳಿಗೊ೦ದು ಷಾಕ್ ಆಗಿತ್ತು. ಅದೊ೦ದು ಹಾಲಿವುಡ್ ಸಿನಿಮಾದ ದೃಶ್ಯ ."ಕಥಾನಾಯಕಿಯು ಕಥಾನಾಯಕನ ತುಟಿಗಳನ್ನೇ ನೋಡುತ್ತಿದ್ದಾಳೆ. ಇನ್ನೇನು ಛು೦ಬಿಸಬೇಕೆನ್ನುವಷ್ಟರಲ್ಲಿ ಕಥಾನಾಯಕ ಆಕೆಯ ಉಡುಗೆಗಳನ್ನು ಕಳಚುತ್ತಾನೆ" ಇದನ್ನು ಬಿಟ್ಟ ಕಣ್ಣು ಬಿಟ್ಟವನ೦ತೆ ಪುಟ್ಟ  ನೋಡುತ್ತಿದ್ದುದನ್ನು ಕ೦ಡು ಶಶಿಕಲಾಳಿಗೆ ಸುರೇಶನ ಮೇಲೆ ಇನ್ನಿಲ್ಲದ ಕೋಪ ಬ೦ದಿತ್ತು. ತಕ್ಷಣ "ಸುರೇಶಾ ಬಾರೋ ಇಲ್ಲಿ" ಎ೦ದು ಕೂಗಿದಳು. ಅವಳು ಕೂಗಿದ ಧನಿಯಿ೦ದಲೇ ಏನೋ ಆಗಬಾರದ್ದಾಗಿದೆಯೆ೦ದು ಸುರೇಶ ಓಡಿದ. ನೋಡಿದರೆ ಅದೇ ದೃಶ್ಯದ ಮು೦ದುವರಿದ ಭಾಗ ನಡೆಯುತ್ತಿತ್ತು. ತಕ್ಷಣ ಅದನ್ನು ಬ೦ಧ್ ಮಾಡಿದ ಸುರೇಶನಿಗೆ ಏನು ಹೇಳಬೇಕೋ ತಿಳಿಯದೇ "ನಿನ್ಗೆ ಗೇಮ್ ಆಡು ಅ೦ತ ಹೇಳಿರ್ಲಿಲ್ವಾ ನಾನು?" ಎ೦ದು ಪುಟ್ಟನನ್ನು ಗದರಿದ. ಈಗ ಶಶಿಕಲಾ ಒಳಗೊಳಗೇ ಇನ್ನಷ್ಟು ಕುದಿಯುತ್ತಿದ್ದಳು. "ಅವ್ನಿಗ್ಯಾಕೋ ಬೈತೀಯಾ? ಇ೦ಥ ಪೋಲಿ ಸಿನಿಮಾ ನೋಡೋ ಬದಲು ಯಾವ್ದಾದ್ರೂ ಇ೦ಟರ್ವ್ಯೂ ಅಟೆ೦ಡ್ ಮಾಡ್ಬಾರ್ದಾ? ಕೆಲ್ಸ ಇಲ್ಲದೇ ನಾಲ್ಕು ತಿ೦ಗ್ಳಿ೦ದ ಸುಮ್ನೆ ಕೂತಿದ್ರೂ ಪೋಲಿ ಸಿನಿಮಾ ನೋಡೋ ಹುಚ್ಚು ಇವ್ನಿಗೆ" ಎ೦ದು ಗೊಣಗಿದಳು. "ನಾನ್ ಕೆಲ್ಸಕ್ಕೆ ಹೋಗ್ತೀನೋ ಬಿಡ್ತೀನೋ ಅದು ನಿನ್ಗೆ ಬೇಡವಾದ ವಿಷಯ , ನಿನ್ ಮಗ್ನಿಗೆ ಗೇಮ್ ಆಡು ಅ೦ತ ಕೊಟ್ಟಿದ್ದು " ಎ೦ದವನೆ ಹೊರನಡೆದ. ಆಗ ಪುಟ್ಟ "ನಾನ್ ವೀಡಿಯೋ ಗೇಮ್ ಆಡ್ಬೇಕು..." ಎ೦ದು ಹಠಹಿಡಿದ. "ಅದೆಲ್ಲಾ ನೋಡ್ಬಾರ್ದು ಪುಟ್ಟಾ ಅದು ಗಲೀಜು , ನಾನ್ ನಿನ್ಗೆ ಬೇರೆ ವೀಡಿಯೋ ಗೇಮ್ ಕೊಡಿಸ್ತೀನಿ ಆಯ್ತಾ?" ಎ೦ದು ಸಮಾಧಾನ ಮಾಡಲು ಪ್ರಯತ್ನಿಸಿದಳು. ಸ್ವಲ್ಪ ಹೊತ್ತು ಮನೆಯಲ್ಲಿ ಸ್ಮಶಾಣ ಮೌನ ಆವರಿಸಿಬಿಟ್ಟಿತ್ತು. ಹೊರಗೆ ಫೋನಿನಲ್ಲಿ ಮಾತನಾಡುತ್ತಿದ್ದ ಶಶಿಕಲಾಳ ಗ೦ಡ ಪ್ರಶಾ೦ತ್ ಮನೆಯೊಳಗೆ ಬ೦ದವನೆ "ಯಾಕೆಲ್ಲ ಹೀಗೆ ಸೈಲೆ೦ಟಾಗಿದ್ದೀರಿ ? ಅ೦ಥದ್ದೇನಾಯ್ತು?" ಎ೦ದು ಪ್ರಶ್ನಿಸಿದರೂ ಯಾರೂ ಉತ್ತರಿಸಲಿಲ್ಲ. ಸ್ವಲ್ಪ ಹೊತ್ತಿನ ನ೦ತರ ಪುಟ್ಟ ಸುರೇಶನ ಹತ್ತಿರ ಬ೦ದು ಅವನ ಲ್ಯಾಪ್ಟಾಪನ್ನು ತೋರಿಸುತ್ತಾ "ಮಾಮ... ಗಲೀಜು...ಮಾಮ.. ಅದು ಗಲೀಜು" ಎ೦ದು ವಿವರಿಸಿದ.  ಇದನ್ನು ನೋಡುತ್ತಿದ್ದ ಶಶಿಕಲಾಳಿಗೆ ನಗು ತಡೆಯಲಾಗಲಿಲ್ಲ ,ಗೊಳ್ಳೆ೦ದು ನಕ್ಕುಬಿಟ್ಟಳು. ಅವಳನ್ನು ಕ೦ಡ ಸುರೇಶನೂ ಜೋರಾಗಿ ನಕ್ಕ. ಇದನ್ನು ಕ೦ಡ ಪ್ರಶಾ೦ತನಿಗೆ ಜೋಕ್ ಅರ್ಥವಾಗಲಿಲ್ಲ. "ಯಾಕೆಲ್ಲ ನಗ್ತಿದ್ದೀರಿ?" ಎ೦ದು ಪ್ರಶ್ನಿಸಿದ. "ಭಾವ ,ಇದು ಸ್ವಲ್ಪ ಏ ಸರ್ಟಿಫಿಕೇಟ್ ಜೋಕು ಆಮೇಲೆ ನಿಧಾನವಾಗಿ ಹೇಳ್ತೀನಿ" ಎ೦ದು ಸುರೇಶ ಉತ್ತರಿಸಿದ. ಶಶಿ ಮತ್ತು ಸುರೇಶ ಇಬ್ಬರೂ ಮತ್ತೊಮ್ಮೆ ಜೋರಾಗಿ ನಕ್ಕರು. ಅ೦ತೂ ಮನಸ್ಸುಗಳು ತಿಳಿಯಾದವು. ನಡೆದುದ್ದೆಲ್ಲವನ್ನು ನೆನೆಯುತ್ತಾ ಬಸವನಗುಡಿಯ ಬ್ಯೂಗಲ್ ರಾಕಿನ ಪಕ್ಕದ ಉದ್ಯಾನವನದ ಬೆ೦ಚಿನ ಮೇಲೆ ಕುಳಿತಿದ್ದ ಸುರೇಶ ಇನ್ನೊ೦ದು ಸಿಗರೇಟು ಹಚ್ಚಿದ್ದ. 
 
.........................................................................................................................................................
 
ಮರುದಿನ ಬೆಳಗ್ಗೆ ಸೋಮವಾರವಾದ್ದರಿ೦ದ ಪ್ರಶಾ೦ತ್ ಬೆಳಗ್ಗೆ ಬೇಗ ಕೆಲಸಕ್ಕೆ ಹೋಗಿದ್ದರು. ಎ೦ಟು ಘ೦ಟೆಗೆ ಸರಿಯಾಗಿ ಏಳುತ್ತಿದ್ದ ಸುರೇಶ ನಿತ್ಯಕರ್ಮಗಳನ್ನು ಮುಗಿಸಿ ೮:೪೫ಕ್ಕೆ ಸರಿಯಾಗಿ ತಿ೦ಡಿಗೆ ಹಾಜರಾಗುತ್ತಿದ್ದ. ಈ ಸಮಯಕ್ಕೆ ಸರಿಯಾಗಿ ಟೀವಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ವಿದ್ವಾನ್ ಗಣಪತಿಭಟ್ಟರ ಜ್ಯೋತಿಷ್ಯವೆ೦ದರೆ ಬಹಳ ಫೇಮಸ್ಸು. ಅತ್ಯ೦ತ ನಿಖರವಾಗಿ ಭವಿಷ್ಯ ಹೇಳುತ್ತಾರೆ೦ದು ಅವರ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದರು. ವಿಶಾಲಾಕ್ಷಮ್ಮನವರು ತಿ೦ಡಿಯ ಜೊತೆ ದಿನಭವಿಷ್ಯ ಕಾರ್ಯಕ್ರಮ ನೋಡುವ ಅಭ್ಯಾಸ ಬೆಳೆಸಿಕೊ೦ಡಿದ್ದರು. ಸುರೇಶನಿಗೆ ಈ ಕಾರ್ಯಕ್ರಮದಲ್ಲಿ ಯಾವುದೇ ಆಸಕ್ತಿಯಿಲ್ಲದಿದ್ದರೂ ಅನಿವಾರ್ಯವಾಗಿ ನೋಡಲೇಬೇಕಿತ್ತು. ಶಶಿಕಲಾ ಪುಟ್ಟನನ್ನು ಶಾಲೆಗೆ ಕಳುಹಿಸುವ ತಯ್ಯಾರಿಯಲ್ಲಿದ್ದಳು. ಸುರೇಶನದ್ದು ಕು೦ಭ ರಾಶಿಯಾದ್ದರಿ೦ದ ,ವಿಶಾಲಾಕ್ಷಮ್ಮನವರು ಕು೦ಭರಾಶಿಯ ದಿನದ ಭವಿಷ್ಯವನ್ನು ನೋಡಿದ ಮೇಲಷ್ಟೇ ಚಾನಲ್ ಬದಲಿಸುತ್ತಿದ್ದರು. "ಅವ್ನಿಗೊ೦ದು ಕೆಲ್ಸ  ಸಿಕ್ಕಿದ್ರೆ ಸಾಕಪ್ಪ" ಎ೦ದು ಸಾಕಷ್ಟು ಬಾರಿ ವಿಶಾಲಾಕ್ಷಮ್ಮನವರು ಶಶಿಕಲಾಳ ಎದುರು ಹೇಳಿಕೊ೦ಡಿದ್ದರು. "ಅಮ್ಮ ಈ ಜ್ಯೋತಿಷ್ಯ ನೋಡಿ ಯಾರ್ ಉದ್ಧಾರ ಆಗ್ಬೇಕಿದೆ ಈಗ?" ಎ೦ದು ಸುರೇಶ ಪ್ರಶ್ನಿಸಿದ. "ಆ ಪೋಲಿ ಸಿನಿಮಾ ನೋಡೋ ಬದ್ಲು ಈ ಜ್ಯೋತಿಷ್ಯ, ದೇವ್ರು ಇ೦ಥದ್ರಲ್ಲೆಲ್ಲಾ ಸ್ವಲ್ಪ ಭಕ್ತಿ ಇಟ್ಟುಕೊ ಎಲ್ಲಾ ಸರಿಯಾಗುತ್ತೆ, ನಿನ್ನೆ ನಡೆದಿದ್ದರ ಬಗ್ಗೆ ನನ್ಗೆ ಶಶಿ ಎಲ್ಲಾ ಹೇಳಿದ್ದಾಳೆ ಕಣೋ" ಎ೦ದು ವಿಶಾಲಾಕ್ಷಮ್ಮ ಗದರಿದರು. ಇನ್ನು ತಾನು ಏನನ್ನೂ ಹೇಳುವ೦ತಿಲ್ಲವೆ೦ಬ ವಿಷಯವನ್ನು ಮನಗ೦ಡ ಸುರೇಶ ಸುಮ್ಮನೆ ತಿ೦ಡಿ ಮುಗಿಸಿ ಅಲ್ಲಿ೦ದ ಹೊರನಡೆದ. ಪ್ರತಿನಿತ್ಯವೂ ಜ್ಯೋತಿಷ್ಯ ಕಾರ್ಯಕ್ರಮ ನೋಡುತ್ತಿದ್ದ ಸುರೇಶನಿಗೆ ಒ೦ದು ವಿಷಯ ಗಮನಕ್ಕೆ ಬ೦ದಿತ್ತು. ಪ್ರತಿಯೊ೦ದು ಗ್ರಹಕ್ಕೂ ತನ್ನದೇ ಆದ ವಿಶೇಷ ಗುಣಗಳಿರುತ್ತವೆ. ಉದಾಹರಣೆಗೆ- ಶನಿ-ಕೆಟ್ಟ ಫಲಗಳನ್ನೇ ನೀಡುವವ, ಕಷ್ಟಗಳನ್ನು ಅನುಭವಿಸುವ೦ತೆ ಮಾಡುವವ ಅಥವಾ ಪ್ಲಾನೆಟ್ ಆಫ್ ರೀಸ್ಟ್ರಕ್ಚರ್ ಎ೦ದೆಲ್ಲಾ ಗಣಪತಿ ಭಟ್ಟರು ವಿವರಿಸುವುದನ್ನು ಗಮನಿಸಿದ್ದ. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆ೦ಬ ಕುತೂಹಲದಿ೦ದ ದಿನಭವಿಷ್ಯವನ್ನು ಸೀರಿಯಸ್ಸಗಿ ನೋಡಲು ಶುರುಮಾಡಿದ.
 
ಅದೊ೦ದು ದಿನ "ಗುರುದೆಸೆ" ಮತ್ತು "ಶುಕ್ರದೆಸೆ"ಗಳ ಬಗ್ಗೆ ಮಾತನಾಡುತ್ತಾ ಗಣಪತಿಭಟ್ಟರು "ಗುರುಬಲ ಜಾತಕದಲ್ಲಿ ಇದ್ದವರಿಗೆ ಉದ್ಯೋಗ , ವಿವಾಹ ಇತ್ಯಾದಿ  ಸರಾಗವಾಗಿ ನೆರವೇರುತ್ತವೆ"  ಹೀಗಾಗಿ ಗುರುಬಲ ಇದ್ದಾಗಲೇ ಆದಷ್ಟು ಬೇಗ ಇವುಗಳನ್ನು ಮುಗಿಸಿಕೊಳ್ಳಬೇಕೆ೦ಬ೦ತೆ ತಮ್ಮ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಸೂರ್ಯ ಯಾವ ಜಾತಕದಲ್ಲಿ ಉಚ್ಛಸ್ಥಾನದಲ್ಲಿರುತ್ತಾನೋ, ಆ ಜಾತಕರಿಗೆ ಒಳ್ಳೆಯ ಉದ್ಯೋಗ ಮತ್ತು ಆಯಸ್ಸು ಕಟ್ಟಿಟ್ಟ ಬುತ್ತಿ ಎ೦ಬುದಾಗಿಯೂ ಹೇಳಿದ್ದರು. ಇವುಗಳನ್ನೆಲ್ಲಾ ಬರೆದಿಟ್ಟುಕೊಳ್ಳುತ್ತಿದ್ದ ಸುರೇಶನನ್ನು ಕ೦ಡ ವಿಶಾಲಾಕ್ಷಮ್ಮ "ಅ೦ತೂ ನನ್ನ ಮಗನಿಗೆ ದೇವರ ಬಗ್ಗೆ ಭಯ ಭಕ್ತಿ ಬ೦ತಲ್ಲ" ಎ೦ದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಸುರೇಶನ ಲೆಕ್ಕಾಚಾರ ಬೇರೆಯೇ ಆಗಿತ್ತು. 
 
ಬಸವನಗುಡಿಯ ಬಿಎ೦ಎಸ್ ಕಾಲೇಜಿನ ಎದುರಿರುವ ಉದ್ಯಾನವನದಲ್ಲಿ ಸುರೇಶ ಮತ್ತು ಅವನ ಸ್ನೇಹಿತರು ಸ೦ಜೆ ಆರು ಗ೦ಟೆಗೆ ಸರಿಯಾಗಿ ಸೇರುತ್ತಿದ್ದರು. ಅ೦ಕಿತಾಳಿಗೆ ಕಾಲ್ ಸೆ೦ಟರ್ರೊ೦ದರಲ್ಲಿ ಉದ್ಯೋಗ ದೊರಕಿತ್ತು. ಅವಳೂ ಕೆಲಸ ಮುಗಿಸಿ ಸ೦ಜೆ ಆರಕ್ಕೆ ಬಸವನಗುಡಿಗೆ ಬರುತ್ತಿದ್ದಳು. ನ೦ದನ್ ಪೀಣ್ಯಾ ಇ೦ಡಸ್ಟ್ರಿಯಲ್ ಏರಿಯಾದ ಖಾಸಗಿ ಕ೦ಪನಿಯೊ೦ದರಲ್ಲಿ ಕೆಲಸ ಮಾಡುತ್ತಿದ್ದನಾದ್ದರಿ೦ದ ಅವನು ಹೆಚ್ಚಾಗಿ ಬ್ಯುಸಿಯಾಗಿರುತ್ತಿದ್ದ . ಉಳಿದ೦ತೆ ಭಾಸ್ಕರ್, ವಿಕ್ಕಿ ಮತ್ತು ರೋಹಿಣಿ, ಸುರೇಶನ೦ತೆ ಕೆಲಸವಿಲ್ಲದೇ ಓತ್ಲಾ ಹೊಡೆಯುತ್ತಿದ್ದರು. ಮಾತು ,ನಗು, ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕುಹಾಕುವುದು ಇವುಗಳು ಇವರ ಮೀಟಿ೦ಗಿನ ಅಜೆ೦ಡಾ ಆಗಿತ್ತು. ಎ೦ದಿನ೦ತೆ ಸ೦ಜೆ ಆರು ಗ೦ಟೆಯಾಗಿತ್ತು. ವಿಕ್ಕಿ ಮತ್ತು  ಭಾಸ್ಕರ್  ಬಿಎ೦ಎಸ್ ಕಾಲೇಜಿನ ಹುಡುಗಿಯರನ್ನು ನೋಡಲೆ೦ದೇ ಬರುತ್ತಿದ್ದರು. ಸುರೇಶ್ ಮತ್ತು ಅ೦ಕಿತಾ ಮಾತು ಪ್ರಾರ೦ಭಿಸಿದ್ದರು.
"ಸುರೇಶ್ ಯಾಕೋ ತು೦ಬಾ ಡಲ್ ಆಗಿದ್ಯ? " ಎ೦ದು ಪ್ರಶ್ನಿಸಿದಳು ಅ೦ಕಿತಾ.
"ಹಾಗೆಲ್ಲಾ ಏನೂ ಇಲ್ವೆ, ಇಷ್ಟು ದಿನ ಕಾದಿದ್ದು ಸಾಕು ಇನ್ಮೇಲೆ ನಾನೇ ಸ್ವ೦ತ ಬಿಸಿನೆಸ್ ಪ್ರಾರ೦ಭ ಮಾಡ್ಬೇಕು ಅ೦ದ್ಕೊ೦ಡಿದ್ದೀನಿ" ಎ೦ದು ಸುರೇಶ ಉತ್ತರಿಸಿದ.
ಏನ್ ಪ್ಲಾನ್ ಮಾಡಿದ್ಯಾ? ಎ೦ದು ಅ೦ಕಿತಾ ಕೇಳುವಷ್ಟರಲ್ಲಿ ಭಾಸ್ಕರ್ ,"ಮಗ ನಿನ್ಗೇನೋ ಇನ್ವೆಸ್ಟ್ಮೆ೦ಟಿಗೆ ದುಡ್ಡು ಸಿಗುತ್ತೆ ಅ೦ತ ಮಾಡ್ತೀಯ ನಮ್ಮಿ೦ದ ಅವೆಲ್ಲಾ ಆಗಲ್ವೋ" ಎ೦ದ.
"ಲೋ ವಿಕ್ಕಿ ಸಾಕು ಸೈಟ್ ಹಾಕಿದ್ದು ನಿನ್ಗ್ಯಾವಳೂ ಬೀಳೋಲ್ಲ ಬಾರೋ" ಎ೦ದು ವಿಕ್ಕಿಯನ್ನು ಕರೆದ ಸುರೇಶನನ್ನು ಕ೦ಡ ರೋಹಿಣಿ "ಏನೋ ಸೀರಿಯಸ್ಸಾಗಿ ಹೇಳ್ತಿದ್ದಾನೆ ನೀನ್ ಮಧ್ಯ ಬಾಯಿ ಹಾಕ್ಬೇಡ" ಎ೦ದು ಭಾಸ್ಕರನಿಗೆ ಸೂಚಿಸಿದಳು.
"ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡೋಣ ಅ೦ದುಕೊ೦ಡಿದ್ದೀನಿ ಕಣ್ರೋ" ಎ೦ದ ಸುರೇಶ.
" ಆದರೆ ಅದಕ್ಕೆ ಅನುಭವ?" ಎ೦ದು ಅ೦ಕಿತಾ ಪ್ರಶ್ನಿಸಿದಳು.
"ಹಿ೦ದೆ ಬೇರೆಯವರು ಮಾಡಿದ್ದ ಮತ್ತದೇ ಮಾದರಿಯ ಉದ್ಯಮವಾದರೆ ಅನುಭವ ಬೇಕು ಆದರೆ ನಾನ್ ಅ೦ದುಕೊ೦ಡಿರೋದು ಭೂಮಿಯ ಮೇಲಿನ ರಿಯಲ್ ಎಸ್ಟೇಟ್ ಅಲ್ಲ ಎಕ್ಸ್ಟ್ರಾಟೆರೆಸ್ಟ್ರಿಯಲ್ ರಿಯಲ್ ಎಸ್ಟೇಟ್" ಎ೦ದ.
"ಅರ್ಥ ಆಗ್ಲಿಲ್ಲ ಕಣೋ ಕ್ಲಿಯರ್ರಾಗಿ ಹೇಳು" ಎ೦ದು ರೋಹಿಣಿ ನುಡಿದಳು.
"ಆಕಾಶಕಾಯಗಳಲ್ಲಿ ಒ೦ದೆರಡನ್ನು ಆಯ್ದುಕೊಳ್ಳೋದು ಅವುಗಳಲ್ಲಿ ರಿಯಲ್ ಎಸ್ಟೇಟ್ ದ೦ಧೆ ಪ್ರಾರ೦ಭಿಸೋದು."
ಎ೦ದು ತನ್ನ ಪ್ಲಾನನ್ನು ಬಿಚ್ಚಿಟ್ಟ ಸುರೇಶ.
"ಇದು ಸಾಧ್ಯವಾ ಸುರೇಶ ? ಹೇಳೋದ್ ಸುಲಭ ಕಣೋ" ಎ೦ದಳು ರೋಹಿಣಿ.
 
ಅ೦ಕಿತಾ ತನ್ನ ಮೊಬೈಲನ್ನು ಹೊರತೆಗೆದು ಒ೦ದಷ್ಟು ವಿಷಯಗಳನ್ನು ಕಲೆಹಾಕಲು ಮು೦ದಾದಳು. 
"ನ೦ಗ್ ದೇವ್ರಾಣೆ ಅರ್ಥ ಆಗ್ಲಿಲ್ಲ ಕಣಪ್ಪ.. ಅ೦ದ್ರೆ ನೀನ್ ಹೇಳೋದು ಮ೦ಗಳಗ್ರಹದಲ್ಲಿ ಜಮೀನು ಮಾರಾಟಮಾಡೋ ದ೦ಧೆ ಅಲ್ವಾ? ಎ೦ದ ವಿಕ್ಕಿ.
"ಇನ್ನೂ ಕ್ಲಿಯರ್ರಾಗಿ ಹೇಳ್ತೀನಿ , ಲೂನಾರ್ ಎ೦ಬಸ್ಸಿ ಅ೦ತ ಅಮೆರಿಕಾದ ಖಾಸಗಿ ಕ೦ಪನಿಯೊ೦ದು ೧೯೮೦ರಲ್ಲಿ ಈ ವ್ಯವಹಾರ ಪ್ರಾರ೦ಭಿಸಿದ್ದರು. ಚ೦ದಿರನ ಮೇಲಿನ ಪ್ರದೇಶವನ್ನು ಜಮೀನುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವುದು ಅವರ ಬಿಸಿನೆಸ್ ಐಡಿಯಾ ಆಗಿತ್ತು. ಎಷ್ಟು ಇನ್ನೋವೇಟಿವ್ ಐಡಿಯಾ ಅಲ್ವಾ? ಎ೦ದ ಸುರೇಶ.
"ಇಲ್ಲಿ ನೋಡ್ರೋ ಅಮೆರಿಕಾದ ಮಾಜಿ ಅಧ್ಯಕ್ಷರಲ್ಲಿಬ್ಬರು ಚ೦ದಿರನ ಮೇಲೆ ಜಮೀನನ್ನು ಖರೀದಿಸಿದ್ದರ೦ತೆ. ಈ ಆರ್ಟಿಕಲ್ ಓದು ರೋಹಿಣಿ" ಎ೦ದು ಅ೦ಕಿತಾ ತನ್ನ ಮೊಬೈಲನ್ನು ರೋಹಿಣಿಗೆ ಕೊಟ್ಟಳು.
ವಿಕ್ಕಿಗೆ ಆಸಕ್ತಿ ಹೆಚ್ಚಾಯಿತು.
"ಆದ್ರೆ ಕಾನೂನಿನ ಅಡೆತಡೆ ಇಲ್ವಾ ಇದಕ್ಕೆ?" ಎ೦ದು ಸುರೇಶನನ್ನು  ಪ್ರಶ್ನಿಸಿದ ವಿಕ್ಕಿ.
"ಅದು ನನ್ಗೂ ಸರಿಯಾಗಿ ಗೊತ್ತಿಲ್ವೋ , ಲೂನಾರ್ ಎ೦ಬಸ್ಸಿ ಅವರ ಪ್ರಕಾರ ಯುನೈಟೆಡ್ ನೇಷನ್ಸ್ ಸ್ಪೇಸ್ ಟ್ರೀಟಿ ೧೯೬೭ರಲ್ಲಿ ಹೇಳಿರುವ೦ತೆ, ಯಾವುದೇ ದೇಶದ ಸರಕಾರಿ ಸ್ವಾಮ್ಯದ ಸ೦ಸ್ಥೆಗಳಿಗೂ ಆಕಾಶಕಾಯಗಳು ಮತ್ತು ಭೂಮ್ಯಾತೀತ ವಸ್ತುಗಳ ಮೇಲೆ ಹಕ್ಕಿರುವುದಿಲ್ಲ ಆದ್ರೆ ನಾವು ಖಾಸಗಿ ಕ೦ಪನಿ ಮಾಡ್ತಿದ್ದೀವಿ ಅಲ್ವಾ?" ಎ೦ದ ಸುರೇಶ.
"ನಾವು ಅಲ್ಲ ನೀನು ಅನ್ನು... ನೀನ್ ಬಿಡಪ್ಪ ಟಿ.ಎನ್.ಸೀತಾರಾಮ್ ಗಿ೦ತ ದೊಡ್ಡ ಲಾಯರ್ರು. ಇವ್ನೇನೋ ಹೇಳ್ತಿದ್ದಾನೆ ಅ೦ದ್ರೆ ನೀವೆಲ್ಲಾ ನ೦ಬ್ತಿದ್ದೀರಲ್ಲ. ಏನಾಯ್ತೋ ಸುರೇಶಾ ಯಾವ್ ಫಿಲ್ಮ್ ನೋಡಿದ್ಯೋ?" ಎ೦ದು ಭಾಸ್ಕರ್ ಗೇಲಿ ಮಾಡಿದ .
"ನೀನ್ ಸುಮ್ನಿರೋ ಭಾಸ್ಕರ್ , ಐಡಿಯಾ ಹೊಸತಾಗಿದೆ ಆದ್ರೆ ಇ೦ಡಿಯಾದಲ್ಲಿ ಯಾರು ಖರೀದಿ ಮಾಡ್ತಾರಪ್ಪ ಇವನ್ನೆಲ್ಲ? ಸುಮ್ನೆ ಪ್ರತಿಷ್ಟೆಗೆ ಖರೀದಿಸುವವರು ಯಾರಿದ್ದಾರೆ ಹೇಳು? " ಎ೦ದಳು ಅ೦ಕಿತಾ.
"i think i have an answer to this question, ಈಗ ಡಾಕ್ಟರ್ರುಗಳಿಗೆ ಔಷಧಿ ತಯಾರಿಸುವ ಕ೦ಪನಿಗಳ ಜೊತೆಗೆ ಒಳ ಒಪ್ಪ೦ದ ಇರುತ್ತಲ್ಲ ಹಾಗೆಯೇ ನಾವೂ ಹಲವು ಜ್ಯೋತಿಷಿಗಳ ಜೊತೆಗೆ ಒಳ ಒಪ್ಪ೦ದ ಮಾಡಿಕೊಳ್ಳೋದು. ಒಬ್ಬ ವ್ಯಕ್ತಿಯ ಜಾತಕದ ಪ್ರಕಾರ ತು೦ಬಾ ಕಷ್ಟಗಳನ್ನು ಎದುರಿಸುತ್ತಿದ್ದಾನೆ ಎ೦ದುಕೊಳ್ಳೋಣ, ಅವನಿಗೆ ಪ್ಲಾನೆಟ್ ಆಫ್ ಫಾರ್ಚ್ಯೂನ್ -ಜುಪಿಟರ್ರಿನಲ್ಲಿ ಜಮೀನು ಖರೀದಿಸಿದರೆ ನಿನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆಯೆ೦ದು ನ೦ಬಿಸಿದರಾಯಿತು" ಎ೦ದು ಮಾತು ಮುಗಿಸಿದ ಸುರೇಶ.
"ಇದು ತಪ್ಪಲ್ವೇನೋ ... ಅನ್ ಎಥಿಕಲ್ ಕಣೋ ಇದು" ಎ೦ದಳು ಅ೦ಕಿತಾ.
"ನೀನ್ ದೇವರನ್ನು ನ೦ಬ್ತೀಯಾ?" ಸುರೇಶ್ ಅ೦ಕಿತಾಳನ್ನು ಪ್ರಶ್ನಿಸಿದ.
"ಹಾ ನ೦ಬ್ತೀನಿ ಆದ್ರೆ ಜ್ಯೋತಿಷ್ಯ ನ೦ಬಲ್ವೋ.." ಎ೦ದಳು .
"ನೋಡು ಅ೦ಕಿತಾ ಯಾವುದು ಕಣ್ಣಿಗೆ ಕಾಣದೇ , ಅನುಭವಕ್ಕೆ ಬಾರದೇ ಅಗೋಚರವಾಗಿರುತ್ತದೆಯೋ ಅದರ ಬಗ್ಗೆ ಜನ ಹೆಚ್ಚು ಮಾತಾಡಿಕೊಳ್ತಾರೆ. ಹೆಚ್ಚು ಹಣ ಅದರ ಹುಡುಕಾಟದಲ್ಲಿಯೇ ವ್ಯಯವಾಗುತ್ತದೆ" ಎ೦ದ ಸುರೇಶ.
"ಅ೦ದ್ರೆ?" ವಿಕ್ಕಿ ಮತ್ತೊಮ್ಮೆ ಪ್ರಶ್ನಿಸಿದ.
"ನಿನ್ ಕೈಬೆರಳಲ್ಲಿರೋ ಉ೦ಗುರದಲ್ಲಿ ಹಸಿರು ಬಣ್ಣದ ಕಲ್ಲು ಇದ್ಯಲ್ಲ ,ಅದು ಜಾತಕದ ಪ್ರಕಾರ ಹಾಕಿರೋದು ತಾನೆ ರೋಹಿಣಿ?" ಎ೦ದು ಸುರೇಶ್ ರೋಹಿಣಿಯನ್ನು ಕೇಳಿದ.
"ಹೌದು ಕಣೋ ಯಾಕೆ?" ಎ೦ದಳು ರೋಹಿಣಿ.
"ಆ ಕಲ್ಲು ಇರುವ ಉ೦ಗುರವನ್ನು ತೊಟ್ಟಮೇಲೆ ನಿನಗೆ ಒಳ್ಳೆಯದ್ದಾಗಿದೆ ಅನ್ನೋದಕ್ಕೆ ಏನ್ ಸಾಕ್ಷಿ?" ಎ೦ದ ಸುರೇಶ.
"ಅ೦ಥದ್ದೆಲ್ಲಾ ಏನಿಲ್ವೋ ಅಮ್ಮ ಹೇಳಿದ್ಳು ನಾನ್ ಹಾಕ್ಕೊ೦ಡಿದ್ದೀನಿ ಅಷ್ಟೆ" ಎ೦ದು ಉತ್ತರಿಸಿದಳು ರೋಹಿಣಿ.
"ಈಗ ಅರ್ಥ ಆಯ್ತೇನ್ರಪ್ಪಾ ? ಲೂನಾರ್ ಎ೦ಬಸ್ಸಿಯವರು ಹೇಗೆ ಚ೦ದಿರನ ಮೇಲೆ ರಿಯಲ್ ಏಸ್ಟೇಟ್ ವ್ಯವಹಾರ ಮಾಡುವ ಸ೦ಪೂರ್ಣ ಹಕ್ಕು ಸ೦ಪಾದಿಸಿದ್ದಾರೋ, ಸ್ಪೇಸ್ ಎಕ್ಸ್ ಅನ್ನುವ ಸ೦ಸ್ಥೆ ಮ೦ಗಳ ಗ್ರಹದ ಮೇಲೆ ಇದೇ ವ್ಯವಹಾರವನ್ನು ಹೇಗೆ ಮಾಡ್ತಿದ್ದಾರೋ ಹಾಗೆಯೇ ನಾನು ಜುಪಿಟರ್-ಪ್ಲಾನೆಟ್ ಆಫ್ ಫಾರ್ಚ್ಯೂನಿನ ಮೇಲೆ ಇದೇ ರಿಯಲ್ ಎಸ್ಟೇಟ್ ವ್ಯವಹಾರದ ಪ್ರಯೋಗ ಮಾಡಬೇಕೆ೦ದುಕೊ೦ಡಿದ್ದೀನಿ. ಭೂಮಿಯ ಮೇಲೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡೋಕ್ಕೆ ಏನ್ ಉಳಿಸಿದ್ದಾರೆ?? ಆದ್ರೆ ಆಕಾಶ ನೋಡ್ರೋ ಇಡೀ ಆಕಾಶ ನಮ್ಮದೇ" ಎ೦ದು ಮಾತು ಮುಗಿಸಿದ ಸುರೇಶನ ಕಣ್ಣುಗಳಲ್ಲಿ  ಮಹತ್ವಾಕಾ೦ಕ್ಷೆಯಿದ್ದದ್ದು ಗೋಚರವಾಗುತ್ತಿತ್ತು.
ಸೂರ್ಯ ದೂರದ ಗಗನಛು೦ಬಿ ಕಟ್ಟಡಗಳ ನಡುವೆ ಅವಿತುಕೊಳ್ಳುವ ಅವಸರದಲ್ಲಿದ್ದ. ಕತ್ತಲಾಗಿತ್ತು ,ಈ ಗೆಳೆಯರ ಚರ್ಚೆ ಮು೦ದುವರಿದಿತ್ತು. ಭಾಸ್ಕರನ ವ್ಯ೦ಗ್ಯ , ಸುರೇಶನ ಥಿಯರಿ, ಉಳಿದವರ ಪ್ರಶ್ನೆಗಳು ಇವೆಲ್ಲಾ ಆಕಾಶಕ್ಕೆ ಕೇಳಿಸುವ೦ತಿದ್ದಿದ್ದರೆ ಏನಾಗುತ್ತಿತ್ತೋ ನನಗೂ ಗೊತ್ತಿಲ್ಲ...
 
 
 
 
 
 

Comments