ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಎಂಟನೇ ಕ್ರಾಸ್ ರಾಯರ ಮಠದ ಗೇಟಿನ ಬಳಿ ಸ್ಕೂಟರ್ ನಿಲ್ಲಿಸಿಕೊಂಡಿದ್ದ ಹಿರಿಯರೊಬ್ಬರು ಗೇಟಿನತ್ತಲೇ ನೋಡುತ್ತಿದ್ದರು. ಹಿಂದಿನಿಂದ ಒಬ್ಬಾಕೆ (ಅವರ ಮನೆಯವರು ಅಂತ ನಂತರ ತಿಳೀತು) ಬಂದಾಗ ...
"ಎಲ್ಲಿ ಹೊರಟು ಹೋಗಿದ್ಯಮ್ಮಾ? ಆಗ್ಲಿಂದ ನಾನು ಕಾಯ್ತಿದ್ದೀನಿ?"
"ಮಠಕ್ಕೆ ಹೋಗಿದ್ದೆ ನಮಸ್ಕಾರ ಹಾಕಿಕೊಂಡು ಬರೋಕ್ಕೆ ಅಂದ ಮೇಲೆ ಮಠಕ್ಕೆ ಹೋಗಿದ್ದೆ ಅಂತ ತಾನೇ?"
"ಮಠ ಬಾಗಿಲು ಹಾಕಿ ಹತ್ತು ನಿಮಿಷ ಆಯ್ತು"
"ನಾನು ಆ ಗೇಟ್’ನ ಹತ್ತಿರ ಕಾಯ್ತಿದ್ದೆ. ಅಲ್ಲಿಗೇ ಬರೋದ್ ತಾನೇ ಸ್ಕೂಟರ್ ತೊಗೊಂಡು?"
"ಈ ಗೇಟ್’ನಿಂದ ಹೋದ ಮೇಲೆ ಇಲ್ಲಿಂದ ತಾನೇ ಬರಬೇಕು?"
"ಮಠದಿಂದ ಹೊರಗೆ ಬಂದ ಮೇಲೆ ಆ ಗೇಟ್ ತಾನೇ ಹತ್ತಿರಾ ಇರೋದು?"
"ನೀನು ಹೋದ ಕಡೆ ಎಲ್ಲ ಸ್ಕೂಟರ್ ಓಡಿಸಿಕೊಂಡೋ / ನೂಕಿಕೊಂಡೋ ಬರೋಕ್ಕೆ ಆಗಲ್ಲ ನನಗೆ. ಒಂದು ಬೀದಿ ಒನ್-ವೇ ಇದ್ರೆ ಇನ್ನೊಂದರಲ್ಲಿ ದನ ಅಡ್ಡ ನಿಂತಿರುತ್ತೆ. ನೀನೇ ತಿಳ್ಕೋಬೇಕು ... ಅದು ಹೋಗ್ಲಿ, ಅಲ್ಲಿ ನಿಂತಿದ್ದೀನಿ ಅಂತ ಒಂದು ಫೋನ್ ಮಾಡಬಾರದಾ?"
"ಮಠಕ್ಕೆ ಬರೋವಾಗ್ಲೂ ಕೈಲಿ ಚಿಟಿಕೆ ಥರಾ ಅದನ್ಯಾಕೆ ತರಲಿ? ಗಲಾಟೆಯೇ ಇಲ್ದಿರೋ ಮನೆಯಲ್ಲೇ ಅಡುಗೇ ಮನೆಯಿಂದ ಕರೆದಿದ್ದು ಹಾಲ್’ನಲ್ಲಿ ಕೂತಿದ್ದಾಗ ನಿಮಗೆ ಕೇಳಿಸೋಲ್ಲ. ಇನ್ನು ಈ ಬೀದೀಲಿ ಫೋನ್ ಮಾಡಿದಾಗ ಕೇಳಿಸುತ್ಯೇ?"
"ಒಂದು ಹೇಳಿದ್ರೆ ನಾಲ್ಕು ಹೇಳ್ತೀ"
"ಸರಿ, ಸರಿ ನಡೀರಿ .... ನಿಧಾನ ....
{ರಾಯರು ನಿಧಾನಕ್ಕೆ ಓಡಿಸಿಕೊಂಡು ಹೋಗುತ್ತ ಏನೋ ಗೊಣಗುತ್ತ ಸಾಗುತ್ತಾರೆ}
"ನನ್ ಬೈದುಕೊಂಡು ಓಡಿಸಬೇಡಿ .. ಗಾಡಿ ಓಡಿಸಿಕೊಂಡು ನಿಮ್ಮಷ್ಟಕ್ಕೆ ನೀವೇ ಮಾತಾಡಿಕೊಂಡು ಹೋಗಬೇಡಿ ಅಂತ ಎಷ್ಟು ಸಾರಿ ಹೇಳಿದ್ದೀನಿ"
"ಅಯ್ಯೋ! ಇಲ್ವೇ ಮಾರಾಯ್ತೀ ..."
"ತಲೆ ಅಲ್ಲಾಡಿಸಿಕೊಂಡು ಗಾಡಿ ಓಡಿಸ್ತಿದ್ರೆ ನನಗೆ ಗೊತ್ತಾಗೋಲ್ವೇ? ಅಯ್ಯೋ, ಮುಂದೆ ನೋಡಿಕೊಂಡು ಓಡಿಸಿ ... ಆ ವಯಸ್ಸಾದೋರಿಗೆ ಗುದ್ದು ಬಿಡ್ತಿದ್ರೀ ಈಗ. ನಿಮಗೋ ಕಣ್ ಕಾಣೋಲ್ಲ ನೆಟ್ಟಗೆ"
"ಕಣ್ಣು ನಿನಗೆ ಕಾಣಲ್ಲ ಅನ್ನು. ಕನ್ನಡಕ ಹಾಕ್ಕೊಂಡ್ ಬಾ ಅಂದ್ರೆ ಏನೋ ಬಿಗುಮಾನ. ಆ ವಯಸ್ಸಾದೋರು ಬೇರೇ ಯಾರೂ ಅಲ್ಲ. ನಿನ್ ತಂಗಿ ಸರೋಜ. ಗಾಡಿ ನಿಲ್ಲಿಸ್ಲಾ?"
"ತೊಗೊಂಡ್ ಬಂದಿರೋದು ನಿಂತರೆ ಮುಂದಕ್ ಹೋಗದೇ ಇರೋ ಸ್ಕೂಟರ್ರು. ಇಲ್ಲಿ ನಿಲ್ಲಿಸಿ ಅವಳನ್ನು ಹತ್ತಿಸಿಕೊಂಡು ಏನು ಮುಂದೆ ನಿಲ್ಲಿಸ್ಕೊಳ್ತೀರಾ? ಸುಮ್ನೆ ನಡೀರಿ. ಎಲ್ ಹೋಗ್ತಾಳೆ? ಪ್ರವಚನಕ್ಕೆ ಹೋಗಿ ಬರ್ತೀನಿ ಅಂತ ಬಂದ್ಳು. ಪ್ರವಚನ ಮಾಡಿದವರೂ ಮನೆಗೆ ಹೋಗಿ ಊಟ ಮಾಡಿ ಮಲಗಿರ್ತಾರೆ. ಇವ್ಳು ಈಗ ಬರ್ತಿದ್ದಾಳೆ"
"ಏನು ಕೆಲಸವೋ ಏನೋ ಬಿಡು" ...
ಧುಡುಮ್!
"ಏನು? ಇದ್ದೀಯೋ? ಬಿದ್ಯೋ?"
"ಅಯ್ಯೋ !!"
"ನಿಜಕ್ಕೂ ಬಿದ್ ಹೋದ್ಯಾ? ಹಿಂದುಗಡೆ ಕೂತ್ಕೊಂಡಾಗ ಗಟ್ಟಿಯಾಗಿ ಗಾಡಿ ಹಿಡ್ಕೋ ಅಂತ ಹೇಳಿದ್ರೆ ಕೇಳೋಲ್ಲ. ಕೈಬಾಯಿ ತಿರುಗಿಸಿಕೊಂಡು ಮಾತಾಡ್ತಿದ್ರೆ ಮೈಮೇಲೆ ಅರಿವೆ ಇರೋಲ್ಲ! ಜೊತೆಗೆ ನನಗೇ ಹೇಳೋದು ... " {ಧಡ ಧಡ ಗಾಡಿ ಸ್ಟ್ಯಾಂಡ್ ಹಾಕಿ ಧಾವಿಸಿ ಬಂದರು}
"ನನಗೆ ಅರಿವು ಇರಿಲಿ ... ಧಡಬಡ ಮಾಡ್ಕೊಂಡ್ ಬರ್ತಿದ್ದೀರಾ ... ನಿಮ್ ಅರಿವೆ ಬಿಚ್ಚಿ ಹೋಗ್ತಿದೆ. ಮೊದಲು ಅದನ್ನ ಕಟ್ಟಿಕೊಳ್ಳಿ ... ಪಂಚೆ ತುದಿ ಕಾಲಿಗೆ ಸಿಕ್ಕು ಬಿದ್ರೆ ನಿಮಗೇನಾದ್ರೂ ಆದೀತು ... "
"ನನಗೆ ಉಪದೇಶ ಆಮೇಲೆ ಆಗಲಿ .. ಸ್ವಲ್ಪ ಸುಮ್ಮನೆ ಇದ್ದು ಸುಧಾರಿಸಿಕೋ ... ಆಯಾಸ ಮಾಡ್ಕೋಬೇಡಾ"
"ಅಯ್ಯೋ, ಮೈಕೈ ಎಲ್ಲ ನೋಯ್ತಿದೆ ... ಏನೂ ಮುರಿದಿಲ್ಲ ಅನ್ನಿಸುತ್ತೆ ಸದ್ಯ ..."
"ನಮಸ್ಕಾರ ಹಾಕೊಂಡ್ ಬಂದಿದ್ದಿ ... ಅದಕ್ಕೇ ಏನೂ ಆಗಿಲ್ಲ. ಉಪ್ಪಿನ ಮೂಟೆ ಹಾಗೆ ಕುಸಿದಿದ್ದೀಯಾ ಅಷ್ಟೇ. ನಿಧಾನಕ್ಕೆ ನನ್ನ ಕುತ್ತಿಗೆ ಸುತ್ತ ಕೈ ಹಾಕಿ ಎದ್ದು ನಿಂತ್ಕೋ ... ಹುಷಾರು"
"ಹಾ! ಹುಷಾರು ... ನನ್ ಭಾರಕ್ಕೆ ನೀವು ಕುಸಿದೀರಾ "
"ಆಹಾ .. ಏನು ವೈಭೋಗ ನೋಡು ... ಈ ವಯಸ್ಸಲ್ಲಿ ಬೀದಿ ಮಧ್ಯೆ ನಮ್ ರೋಮಾನ್ಸು ..."
"ನಿಮ್ ತಲೆ ... ನಿಲ್ಲೋಕ್ಕೇ ಆಗ್ತಿಲ್ಲ ಅಂದ್ರೆ ರೋಮಾನ್ಸ್ ಅಂತೆ ... ಕೈ ಕೈ ಹಿಡ್ಕೊಂಡ್ ಮರ ಸುತ್ತೋಕ್ಕೆ ಮರ ಎಲ್ಲಿದೆ? ಪಾರ್ಥೇನಿಯಮ್ ಗಿಡದ ಸುತ್ತಲೇ ಒಂದು ಸುತ್ತು ಹಾಕಬೇಕು ಅಷ್ಟೇ!"
"ನಿಧಾನಕ್ಕೆ ಮನೆಗೆ ನಡಿ. ತುಳಸೀಕಟ್ಟೆಗೆ ಸುತ್ತು ಹಾಕೋಣ ಪುಣ್ಯವಾದ್ರೂ ಬರುತ್ತೆ. ಅದು ಸರೀ, ಈ ಸ್ಕೂಟರ್ ಹೇಗೆ ತೊಗೊಂಡ್ ಹೋಗೋದು?"
"ನಿಮ್ ಸ್ಕೂಟರ್’ಗೆ ನಿಮ್ ಅರ್ಧದಷ್ಟು ವಯಸ್ಸಾಗಿದೆ. ಇಲ್ಲೇ ಇಟ್ರೂ ಯಾರೂ ಮುಟ್ಟೋಲ್ಲ ! ಇಲ್ಲೇ ಸ್ವಲ್ಪ ಆ ಕಡೆ ಇಟ್ಟು ಲಾಕ್ ಮಾಡಿ. ರಾಮನಾಥ ಹನ್ನೆರಡು ಘಂಟೆ ರಾತ್ರಿಗೆ ಬಂದು ತೊಗೊಂಡ್ ಬರ್ತಾನೆ"
"ಯಾರೂ ನೋಡ್ದೇ ಇರೋ ಟೈಮಿಗೆ ಬಂದು ತೊಗೊಂಡ್ ಬರೋಷ್ಟು ಕೆಟ್ಟದಾಗಿದ್ಯೇ ಗಾಡಿ?"
"ಮೊದಲು ನಡೀರಿ ... ಸರೋಜ ನೋಡಿದ್ರೆ ಸುಮ್ನೆ ಬೀದಿಗೆಲ್ಲ ಸಾರ್ತಾಳೆ ..."
"ಸರಿ ... ನಡಿ ... ನಡೆ ಮುಂದೆ ನಡೆ ಮುಂದೆ ಕುಂಟ್ಕೊಂಡ್ ನಡೆ ಮುಂದೆ ..."
{ಮಠದ ಬಳಿ ಸ್ಕೂಟರ್ ಹಿಡ್ಕೊಂಡ್ ನಿಂತಿದ್ದ ಹಿರಿಯರನ್ನು ನೋಡಿದ್ದು, ಎಷ್ಟು ಹೊತ್ತಿಂದ ಕಾಯ್ತಿದ್ದೆ ಎಲ್ಲಿ ಹೋಗಿದ್ದೀ ಅನ್ನೋದಷ್ಟು ಬಿಟ್ರೆ ಮಿಕ್ಕಿದ್ದೆಲ್ಲ ನನ್ನ ಒಗ್ಗರಣೆ ...}
Comments
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಸಕ್ಕತ್ ಹಾಸ್ಯದ ಪಂಚ್ ಗಳು ಸಾರ್ !
In reply to ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ... by partha1059
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಧನ್ಯವಾದಗಳು ಪಾರ್ಥರೇ !
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಭಲ್ಲೆ ಅವರೇ -ಒಳ್ಳೆ ಮನೋರಂಜನಾತ್ಮಕ -ಕಾಲ್ಪನಿಕ ಬರಹ ....!! ಆದ್ರೆ ಅಚ್ಚರಿ ಅಂದ್ರೆ : ಸಿನೆಮಾಗಳಲ್ಲಿ -ಈ ಚಿತ್ರ ಯಾವುದೇ ವ್ಯಕ್ತಿ -ವಿಷ್ಯ ವಸ್ತುಗಳಿಗೆ ಸಂಬಂದಿಸಿಲ್ಲ -ಹಾಗೇನಾದರೂ ಒಂದೊಮ್ಮೆ ಅನ್ನಿಸಿದರೆ ಅದು ಕೇವಲ ಕಾಕತಾಳೀಯ ಎಂಬಂತೆ ಇದರ ಶೀರ್ಷಿಕೆ -ಪಾತ್ರಗಳು ಥಟ್ಟನೆ ನಮ್ಮ ಗಣೇಶ್ ಅಣ್ಣಾ ಅವರನ್ನೇ ಯಾಕೆ ನೆನಪಿಸುತ್ತಿವೆ ...!!
"ಮರ ಎಲ್ಲಿದೆ? ಪಾರ್ಥೇನಿಯಮ್ ಗಿಡದ ಸುತ್ತಲೇ ಒಂದು ಸುತ್ತು ಹಾಕಬೇಕು ಅಷ್ಟೇ!"
ಬರಹದಲ್ಲಿನ ಹಲ ಸಾಲುಗಳು ವಸ್ತು ಸ್ಥಿತಿಗೆ ಹಿಡಿದ ಕನ್ನಡಿ ...
ನನ್ನಿ
ಶುಭವಾಗಲಿ
\|/
In reply to ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ... by venkatb83
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಭಾಳಾ ಖುಷಿಯಾಯ್ತು ನಿಮ್ಮನ್ನು ಮತ್ತೆ ಇಲ್ಲಿ ಕಂಡು ...
ಎಷ್ಟೇ ಕಿತ್ಲಾಡಿದರೂ ಕಷ್ಟದಲ್ಲಿ ಒಬ್ಬರಿಗೊಬ್ಬರು ಇರುತ್ತಿದ್ದರು ... ಸಂಸಾರ ಸಾಗುತ್ತಿತ್ತು ... ಇಂದಿನವರಿಗೆ ಈ ಸೈರಣೆ ಇಲ್ಲ ... ನಮ್ಮಿಬ್ಬರಲ್ಲಿ common taste ಇಲ್ಲ ಅಂದುಬಿಡುತ್ತಾರೆ !
In reply to ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ... by bhalle
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಅಯ್ಯೋ! ಪಾಪ ! ನಾನು ನನ್ನ ಅಮ್ಮನನ್ನ ಬೀಳಿಸಿದ್ದೆ ... ಗಾಂಧಿಬಜಾರ್'ನಲ್ಲಿ .. ಪುಣ್ಯಕ್ಕೆ ಯಾವ ಗಾಡಿ ಬರುತ್ತಿರಲಿಲ್ಲ !
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
:) ನನ್ನ ಪತ್ನಿಯನ್ನು ಮೂರು ಸಲ ಬೀಳಿಸಿದ್ದೆ. ಈಗ 5 ವರ್ಷಗಳಾಯಿತು, ಆಕೆ ನನ್ನ ಜೊತೆ ದ್ವಿಚಕ್ರ ವಾಹನ ಏರಿ!!
In reply to ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ... by kavinagaraj
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಅಯ್ಯೋ! ಪಾಪ ! ನಾನು ನನ್ನ ಅಮ್ಮನನ್ನ ಬೀಳಿಸಿದ್ದೆ ... ಗಾಂಧಿಬಜಾರ್'ನಲ್ಲಿ .. ಪುಣ್ಯಕ್ಕೆ ಯಾವ ಗಾಡಿ ಬರುತ್ತಿರಲಿಲ್ಲ !
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
>>>ಮಠದ ಬಳಿ ಸ್ಕೂಟರ್ ಹಿಡ್ಕೊಂಡ್ ನಿಂತಿದ್ದ ಹಿರಿಯರನ್ನು ನೋಡಿದ್ದು, ಎಷ್ಟು ಹೊತ್ತಿಂದ ಕಾಯ್ತಿದ್ದೆ ಎಲ್ಲಿ ಹೋಗಿದ್ದೀ ಅನ್ನೋದಷ್ಟು ಬಿಟ್ರೆ ಮಿಕ್ಕಿದ್ದೆಲ್ಲ ನನ್ನ ಒಗ್ಗರಣೆ ...
-ಇಷ್ಟು ಚೆನ್ನಾಗಿ ಒಗ್ಗರಣೆ ಹಾಕುವವರು, ಸ್ಕೂಟ್ರ‍್ ಹಿಡಿದ ಹಿರಿಯರನ್ನು ಒಮ್ಮೆ ಗಮನಿಸಿ ನೋಡಬೇಕಿತ್ತು. ಕಡೇ ಪಕ್ಷ ಸ್ಕೂಟರ್(ಸಪ್ತಗಿರಿ ಅಂದಾಜು ಮಾಡಿದರು!) ನೋಡುವಾಗಲಾದರೂ ಗೊತ್ತಾಗಬೇಕಿತ್ತು. ಕತೆಯಲ್ಲಿ ಕಡೆಯಲ್ಲಿ ಸ್ವಲ್ಪ ತಿದ್ದುಪಡಿಯಾಗಬೇಕು...
-ಸ್ಕೂಟರ್‌ಗೆ ಲಾಕ್ ಮಾಡಲಾಗುವುದಿಲ್ಲ.ಎಲ್ಲಿ ನಿಂತಿತೋ ಅಲ್ಲೇ ಅದರ ಪಾಡಿಗೆ ಬಿಟ್ಟು ಬರುವೆ. ಟ್ರಾಫಿಕ್ ಪೋಲೀಸರೇ ಚೀತಾದಲ್ಲಿ ಹೊತ್ತು ತಂದು ನಮ್ಮ ಮನೆಗೆ ತಲುಪಿಸುವರು!
In reply to ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ... by ಗಣೇಶ
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಮಿಸ್ ಆಗಿ ಹೋಯ್ತು ನೋಡಿ ಗಣೇಶ್'ಜಿ !!! ರಾಯರ ಮಠದ ಮುಂದೆ ಗಣೇಶರ ದರ್ಶನ ... ಏನ್ ಕಾಂಬಿನೇಷನ್ ಇರ್ತಿತ್ತು ... ಸ್ಕೂಟರ್ ಲಾಕ್ ವಿಚಾರ ಕೂಡ ಒಂದು ಒಗ್ಗರಣೆ (ಅಂದುಕೊಂಡುಬಿಡೋಣ)
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಬಹಳ ದಿನಗಳಾದವು, ಒಂದೊಳ್ಳೆಯ ರೊಮ್ಯಾಂಟಿಕ್ ಕತೆ ಓದದೆ; ಆನ್ ಲೈನಲ್ಲೇನಾದ್ರೂ ಇದೆಯಾ, ನೋಡೋಣಾಂತ ಕುಳಿತೆ. ‘ಸಂಪದ’ವನ್ನ ನೋಡದೆ ಕೊಂಚ ಸಮಯಾನೇ ಆಯ್ತು, ಅಂತಂದುಕೊಳ್ತಾ ಪ್ರವೇಶಿಸಿದೆ. ಕತೆ ಓದಿ ಮುದವಾಯಿತು.
ಅರ್ಥ ತುಂಬಿರುವ ಪ್ರೀತಿ ಹುಟ್ಟೋದು ಅರುವತ್ತರ ನಂತರವೇ ಅಂತ ನನ್ನ ಅನ್ನಿಸಿಕೆ. ಕತೇಲಿ ಪ್ರೀತಿ ತುಂಬಿದ ಹುಸಿ ಮುನಿಸು, ಪರಸ್ಪರ ಕಾಳಜಿ, ಅಣಕು, ಹಾಸ್ಯ, ಅಪಹಾಸ್ಯ, ವಿಡಂಬನೆ, ಮುಂತಾದವೆಲ್ಲವನ್ನೂ ಸೊಗಸಾಗಿ ಅಳವಡಿಸಿದ್ದೀರಿ.
ಧನ್ಯವಾದಗಳು!
ಉ: ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...
ಧನ್ಯವಾದಗಳು ... ಸತ್ಯ ... ಆಗಿನವರು ಏನೇ ಕಿತ್ಲಾಡಿದರೂ ಒಬ್ಬರಿಗೊಬ್ಬರು ಆಸೆರೆಯಾಗಿರುತ್ತಿದ್ದರು. ಈಗಿನವರಿಗೆ ಆ ಸೈರಣಿಗೆ ಇಲ್ಲ.