ಗುರು ಗ್ರಹದ ಕುರಿತು ಪುಟ್ಟ ಮಾಹಿತಿ

ಗುರು ಗ್ರಹದ ಕುರಿತು ಪುಟ್ಟ ಮಾಹಿತಿ

ಗುರು (ಬ್ರಹಸ್ಪತಿ) ಗ್ರಹನು ಧನು ಮತ್ತು ಮೀನರಾಶಿಗಳ ಅಧಿಪತಿಯಾಗಿದ್ದು ಕರ್ಕ, ಮಕರ ರಾಶಿಗಳು ಕ್ರಮವಾಗಿ ಅವನ ಉಚ್ಚ ಮತ್ತು ನೀಚ ಕ್ಷೇತ್ರಗಳಾಗಿರುತ್ತವೆ. ಧನುವು ಮೂಲ ತ್ರಿಕೋಣ ರಾಶಿಯಾಗಿರುತ್ತದೆ. ಗುರು ಜ್ಯೋತಿಷ್ಯದಲ್ಲಿ ಪುರುಷ ಗ್ರಹ. ಗುರುವು ನೈಸರ್ಗಿಕವಾಗಿ ಶುಭ ಗ್ರಹನಾಗ್ರುತ್ತಾನೆ. ಗುರುವು ಆಕಾಶ ತತ್ವಕ್ಕೆ ಅಭಿಮಾನಿ ಮತ್ತು ವಾತ-ಕಫ ದೋಷಗಳ ಕಾರಕನಾಗಿದ್ದಾನೆ. 

ರವಿ-ಚಂದ್ರ-ಮಂಗಳರು ಮಿತ್ರ ಗ್ರಹರಾಗಿರುತ್ತಾರೆ, ಬುಧ-ಶುಕ್ರರು ಶತ್ರುಗ್ರಹಗಳಾಗಿದ್ದಾರೆ ಮತ್ತು ಶನಿ-ರಾಹುಗಳು ತಟಸ್ಥರಾಗಿರುತ್ತಾರೆ. ಬೃಹತ್ಪರಾಶರಿಯಲ್ಲಿ ಗುರುವಿನ ಸ್ವರೂಪವನ್ನು ಈ ರೀತಿ ವರ್ಣಿಸಿರುತ್ತಾರೆ.

 *ಬ್ರಹದ್‍ಗಾತ್ರೋ ಗುರುಶ್ಚೈವ ಪಿಂಗಲೋ ಮೂರ್ದಜೇಕ್ಷಣೈಃ |* *ಕಫಪ್ರಕೃತಿಕೋ ಧಿಮಾನ್ ಸರ್ವಶಾಸ್ತ್ರವಿಶಾರದಃ || (ಬೃ-ಪ-ಹೋ ೦೩-೨೮)* 

ಅಂದರೇ.ಬೃಹತ್ತಾದ ದೇಹ, ಹಳದಿ ಬಣ್ಣದ ನೇತ್ರಗಳು ಮತ್ತು ಕೇಶಗಳುಳ್ಳ, ಕಫಪ್ರಕೃತಿಯುಳ್ಳವನೂ, ಸರ್ವಶಾಸ್ತ್ರಗಳನ್ನು ಬಲ್ಲವನೂ, ಬುದ್ಧಿವಂತನಾದವನು ಇವು ಗುರುವಿನ ಲಕ್ಷಣ.

 ಫಲದೀಪಿಕಾ ಮಂತ್ರೇಶ್ವರರ ಪ್ರಕಾರ..

*ಪೀತದ್ಯುತಿಃ ಪಿಂಗಕಚೇಕ್ಷಣಃ ಸ್ಯಾತ್ ಪೀನೋನ್ನತೋರಾಚ್ಚ ಬೃಹಶ್ಚರೀರಃ | ಕಫಾತ್ಮಕಃ ಶ್ರೇಷ್ಠಮತಿಃ ಸುರೇಢ್ಯಃ ಸಿಂಹಾಬ್ಜನಾದಶ್ಚ ವಸುಪ್ರಧಾನಃ || (ಫ-ದೀ ೦೨-೧೨)*

ಅಂದರೇ...ಗುರುವು ಹಳದಿ ಬಣ್ಣದ ಕಾಂತಿಯುತ ಶರೀರ ಉಳ್ಳವನು ನೀಲಿ ಮತ್ತು ಹಳದಿ ಮಿಶ್ರಿತ ಬಣ್ಣದ ಕಣ್ಣು ಮತ್ತು ಕೂದಲು ಉಳ್ಳವನು, ಸ್ಥೂಲ ಮತ್ತು ಎತ್ತರವಾದ ದೊಡ್ಡ ಗಾತ್ರದ ಶರೀರ ಉಳ್ಳವನು, ಕಫ ಪ್ರಕೃತಿಯವನು, ಶ್ರೇಷ್ಟವಾದ ಬುದ್ಧಿ ಉಳ್ಳವನು, ಸಿಂಹದ ಘರ್ಜನೆಯಂತೆ ಸ್ವರ ಉಳ್ಳವನು, ಧನಕಾರಕನು, ಮಂತ್ರಿಯು ಆಗಿರುತ್ತಾನೆ. 

ಹಾಗಾಗಿ..ಗುರು ಶಬ್ದದ ಅರ್ಥವೇ ದೊಡ್ಡಗಾತ್ರದವನು, ಭಾರವಾದಂತವನು ಎಂಬುದಾಗಿದೆ. 

*ಫಲದೀಪಿಕಾ ಮತದಂತೆ ಗುರುವಿನಿಂದ ಚಿಂತಿಸಬೇಕಾದ ವಿಷಯಗಳು – ಜ್ಞಾನಂ ಸದ್ಗುಣಮಾತ್ಮಜಂ ಚ ಸಚಿವಂ ಸ್ವಾಚಾರಮಾಚಾರ್ಯಕಮ್ ಮಾಹಾತ್ಮ್ಯಂ ಶ್ರುತಿಶಾಸ್ತ್ರಧೀಸ್ಮೃತಿಮತಿಂ ಸರ್ವೋನ್ನತಿಂ ಸದ್ಗತಿಮ್ | ದೇವಬ್ರಾಹ್ಮಣಭಕ್ತಿಮಧ್ವರತಪಃ ಶ್ರದ್ಧಾಶ್ಚ ಕೋಶಸ್ಥಲಂ ವೌದುಷ್ಯಂ ವಿಜಿತೇಂದಿಯಂ ಧನಸುಖಂ ಸಂಮಾನಮೀಢ್ಯಾದ್ದಯಾಮ್ || (ಫ-ದೀ ೦೨-೦೫)*

ಅಂದರೆ... ಜ್ಞಾನ, ಸದ್ಗುಣ, ಮಕ್ಕಳು, ಮಂತ್ರಿ, ಸದಾಚಾರ, ವಿದ್ಯಾದಾರ, ಮಹತ್ವ, ವೇದ, ಶಾಸ್ತ್ರ ಮತ್ತು ಸ್ಮೃತಿ ಇತ್ಯಾದಿಗಳ ಜ್ಞಾನ, ಸಕಲ ವಿಚಾರಗಳಲ್ಲಿ ಅಭಿವೃದ್ಧಿ, ಸದ್ಗತಿ, ದೇವ-ಬ್ರಾಹ್ಮಣರಲ್ಲಿ ಭಕ್ತಿ, ತ್ಯಾಗ, ತಪಸ್ಸು, ಶ್ರದ್ಧೆ, ಕೋಶಾಗಾರ, ವಿದ್ವತ್ತು, ಜಿತೇಂದ್ರಿಯ, ಪತಿ, ಸುಖ, ಸನ್ಮಾನ, ಪ್ರಶಂಸೆ, ದಯೆ ಮೊದಲಾದ ವಿಚಾರ ಗುರುವಿನಿಂದ ಚಿಂತಿಸಬೇಕು. ಗೋಚಾರವನ್ನು ಚಂದ್ರರಾಶಿ ಅಥವಾ ಜನ್ಮರಾಶಿಯಿಂದ ತಿಳಿಯಬೇಕು. 

*ಸರ್ವೇಷು ಲಗ್ನೇಷ್ವಪಿ ಸತ್ಸು ಚಂದ್ರಲಗ್ನಂ ಪ್ರಧಾನಂ ಖಲು ಗೋಚರೇಷು | ತಸ್ಮಾತ್ತದೃಕ್ಷಾದಪಿ ವರ್ತಮಾನಗ್ರಹೇಂದ್ರಚಾರೈಃ ಕಥಯೇತ್ಫಲಾನಿ || (ಫ-ದೀ, ಗೋಚರಫಲಾಧ್ಯಾಯ-೦೧)* 

ಹಾಗಾಗಿ....ಗೋಚಾರದ ಫಲಗಳನ್ನು ತಿಳಿಯಲು ಎಲ್ಲ ಲಗ್ನಗಳಲ್ಲಿ ಚಂದ್ರಲಗ್ನವೇ ಪ್ರಧಾನ ಆಗಿರುತ್ತದೆ. ಆದ್ದರಿಂದ ತಾತ್ಕಾಲಿಕ ಗ್ರಹರ ಸಂಚಾರದ ಫಲಾಫಲ ತಿಳಿಯಲು ಚಂದ್ರನಿಂದ (ಜನ್ಮರಾಶಿ) ಆ ಗ್ರಹಸ್ಥಿತ ರಾಶಿಗಳನ್ನು ಪರಿಗಣಿಸಬೇಕು. 

ಇನ್ನು ಕೆಲವರು ಮುವತ್ತು ವಯಸ್ಸಿನ ವರೆಗೆ ಆಯಾ ಜಾತಕದ ಲಗ್ನದಿಂದಲೇ ನಿರ್ಣಯಿಸಬೇಕು ಎನ್ನುತ್ತಾರೆ ಹಾಗಾಗಿ ಅದು ಅವರವರ ಮಂಥನ ಹಾಗೂ ತರ್ಕಕ್ಕೆ ಬಿಟ್ಟ ವಿಚಾರ....

*ಗುರುಗ್ರಹದ ಗೋಚಾರ ಫಲ*

 *ಸ್ವಾಯಧರ್ಮತನಯಾಸ್ತಸಂಸ್ಥಿತೋ ನಾಕನಾಯಕ ಪುರೋಹಿತಃ ಶುಭಃ | ರಿಃಫರಂಧ್ರಖಜಲತ್ರಿಗೈರ್ಯದಾ ವಿದ್ಯತೇ ಗಗನಚಾರಿಭಿರ್ನ ಹಿ || (ಫ-ದೀ, ಗೋಚರಫಲಾಧ್ಯಾಯ-೦೭)* 

*ಜನ್ಮರಾಶಿಯಿಂದ ಗುರುವು ಶುಭಫಲ ನೀಡುವ ಸ್ಥಾನಗಳು 2-5-7-9-11 ಹಾಗಾಗಿ ಬ್ರಹಸ್ಪತಿಯು ಜನ್ಮರಾಶಿಯಿಂದ 2-5-7-9-11 ನೇಯವನಾಗಿ ಸಂಚಾರ ಮಾಡುತ್ತಿರುವಾಗ ಶುಭನಾಗಿರುತ್ತಾನೆ* ಇದೇ ರೀತಿ ಜನ್ಮರಾಶಿಯಿಂದ 4-6-8-12 ನೇಯವನಾಗಿ ಗುರುಗೋಚಾರವಾಗಲು ಅಶುಭ ಫಲವನ್ನು ಕೊಡುತ್ತಾನೆ.

ಬರೀ ಗ್ರಹದ ಗೋಚಾರ ಫಲವನ್ನು ಮಾತ್ರ ಪೂರ್ಣವಾಗಿ ಪರಿಗಣಿಸಬಾರದು ಏಕೆಂದರೆ...ಯಾವುದೇ ಗ್ರಹ ಗೋಚಾರದಲ್ಲಿ ಅಶುಭನಾಗಿ ಜಾತಕುಂಡಲಿಯಲ್ಲಿ ಶುಭನಾಗಿದ್ದಲ್ಲಿ ಅಶುಭ ಗೋಚಾರ ಫಲ ಕಡಿಮೆಯಾಗಿರುತ್ತದೆ. ಹಾಗಾಗಿ ಕೇವಲ ಗೋಚಾರವೊಂದೇ ಫಲ ನಿರ್ಣಾಯಕವಲ್ಲ. ಹಾಗಾಗಿ ಭಯಪಡುವ ಅಗತ್ಯವಿಲ್ಲ.

(ಸಾರ ಸಂಗ್ರಹಿತ)

ಚಿತ್ರ: ವಿಜಯ ಕರ್ನಾಟಕ ಜಾಲ ತಾಣದ ಕೃಪೆ