ಗುರು ತೋರುವ ಮಾರ್ಗ

Submitted by Vibha vishwanath on Wed, 09/05/2018 - 22:38

ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ  ನಡೆಸಿ ತಮ್ಮ ಮಕ್ಕಳಂತೆಯೇ ಭಾವಿಸುತ್ತಾ ಶಿಕ್ಷಿಸಿ,ಕ್ಷಮಿಸಿ ಮುನ್ನಡೆಸುವ ಶಿಕ್ಷಕರೂ ಇದ್ಡಾರೆ. ಒಂದಕ್ಷರ ಕಲಿಸಿದವರೂ ಗುರುಗಳೇ.. ಕೆಲವರು ವಿದ್ಯೆಯೇ ಕಲಿಯದೆ ಜೀವನದ ಪಾಠ ಕಲಿಸುತ್ತಾರೆ. ಅಂತಹವರೂ ಗುರುಗಳೇ. ಪರೋಕ್ಷವಾಗಿ, ಅಪರೋಕ್ಷವಾಗಿ ಪಾಠ ಕಲಿಸುವ ಎಲ್ಲರೂ ಗುರುಗಳೇ. 
 
ಅಪ್ಪ-ಅಮ್ಮ ಮೊದಲ ಗುರುಗಳಾದರೆ, ಉಳಿದವರು ಹಂತ-ಹಂತವಾಗಿ ಜೀವನದ ಪಾಠ ಕಲಿಸುವವರು.ಒಂದರ್ಥದಲ್ಲಿ ಜೀವನವೂ ಗುರುವೇ. ಪಾಠದ ಜೊತೆಗೆ ಪೂರಕ ವಿಷಯ, ನೀತಿ ಕಥೆಗಳನ್ನು ಹೇಳುವ ಗುರುಗಳು ಇದ್ದ ಹಾಗೆಯೇ ಪಾಠಕ್ಕಷ್ಟೇ ಸೀಮಿತಗೊಳಿಸುವ ಗುರುಗಳೂ ಇದ್ದಾರೆ. ಮನೆಮಕ್ಕಳಂತೆ ಭಾವಿಸುವ ಗುರುಗಳಿದ್ದಂತೆಯೇ, ದರ್ಪ ತೋರಿ ದೂರ ಇಡುವ ಗುರುಗಳೂ ಇದ್ದಾರೆ. ಯಾವ ದುರುದ್ದೇಶ, ದುರಾಲೋಚನೆಯೇ ಇಲ್ಲದೆ ವರ್ತಿಸುವ ಗುರುಗಳಿದ್ದಂತೆಯೇ, ಪೂರ್ವಾಗ್ರಹ ಪೀಡಿತರಂತೆ ವರ್ತಿಸುವ ಗುರುಗಳೂ ಇದ್ದಾರೆ. ಪ್ರಾಜೆಕ್ಟ್ ಸಮಯದಲ್ಲಿ ತಾವೇ ಎಲ್ಲಾ ಸಹಾಯ ಮಾಡಿದರೂ ಹೆಸರೇಳಲು ಇಚ್ಚಿಸದ ಗುರುಗಳಿದ್ದಂತೆ ನಮ್ಮ ಪ್ರಾಜೆಕ್ಟ್ ಅನ್ನು ನಮಗೇ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ಪ್ರಕಟಿಸಿಕೊಂಡಿರುವ ಗುರುಗಳೂ ಇದ್ದಾರೆ. ವಿದ್ಯಾರ್ಥಿಗಳ ಜೊತೆ ಭೇದ-ಭಾವವಿಲ್ಲದೆ ಬೆರೆಯುವ ಗುರುಗಳಿದ್ದಂತೆ, ಹಣಕ್ಕೆ ಬೆಲೆ ಕೊಟ್ಟು ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುವ ಗುರುಗಳೂ ಇದ್ದಾರೆ. ತಾನು ಪ್ರಿನ್ಸಿಪಾಲ್ ಎಂಬ ದರ್ಪವನ್ನು ತೋರಿಸದೇ ನಮ್ಮೊಡನೆ ನೆಲದಲ್ಲಿ ಕುಳಿತು ಹರಟುವ, ನಮ್ಮೊಡನೆಯೇ ಊಟ ಮಾಡುವ, ಶ್ರಮದಾನದಲ್ಲಿ ಭಾಗಿಯಾಗುವ ಗುರುಗಳಿದ್ದಂತೆ ತಾನು ಪ್ರಿನ್ಸಿಪಾಲ್ ತಾನು ಬರುತ್ತಿದ್ದರೆ ದೂರ ನಿಲ್ಲಬೇಕು, ತನಗಾಗಿ ಘಂಟೆಗಟ್ಟಲೆ ಕಾಯಬೇಕು ಎಂಬಂತೆ ವರ್ತಿಸುವ ಶಿಕ್ಷಕರೂ ಇದ್ದಾರೆ.ತನ್ನ ಹೆಸರು ಸ್ಪೂರ್ತಿ ನೀಡಿದ ಪಟ್ಟಿಯಲ್ಲಿರಬೇಕು ಎಂದು ಬಯಸುವ ಗುರುಗಳಿದ್ದಂತೆಯೇ ಪ್ರತಿಫಲ ಬಯಸದ ಗುರುಗಳೂ ಇದ್ದಾರೆ.
 
ಇವರೆಲ್ಲ ನಾನು ನೋಡಿದ, ನಾನು ಪಾಠ ಹೇಳಿಸಿಕೊಂಡ ಗುರುಗಳೇ. ಇಬ್ಬರೂ ಗುರುಗಳೇ ಒಬ್ಬರಿಂದ ನಾವು ಹೇಗೆ ಬದುಕಬೇಕು ಎಂಬ ಪಾಠ ಕಲಿತರೆ, ಮತ್ತೊಬ್ಬರಿಂದ ನಾವು ಹೇಗೆ ಬದುಕಬಾರದು ಎಂಬ ಪಾಠ ಕಲಿಯುತ್ತೇವೆ. ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳಿ ಕಲಿಯುವುದಕ್ಕಿಂತ, ನೋಡಿ ಕಲಿಯುವುದೇ ಹೆಚ್ಚು.ಬದಲಾದರೂ, ಬದಲಾಗದಿದ್ದರೂ ಅವರೆಲ್ಲಾ ನನ್ನ ಗುರುಗಳೇ. ಅವರಿಗೆ ಮರು ನುಡಿಯುವುದಿಲ್ಲ. ಏಕೆಂದರೆ, ವಿದ್ಯೆಯಿಂದ ವಿನಯ ಎಂಬ ಸಂಸ್ಕಾರವನ್ನು ನನ್ನ ಹಲವು ಗುರುಗಳು ಕಲಿಸಿದ್ದಾರೆ.
 
ಇಂದು ಶಿಕ್ಷಕರ ದಿನ. ಈ ಪಟ್ಟಿಯಲ್ಲಿದ್ದ ಹಲವು ಗುರುಗಳಿಗೆ ಇಂದು "ಶಿಕ್ಷಕರ ದಿನಾಚರಣೆ"ಯ ಶುಭಾಶಯ ಕೋರಿದಾಗ ನೀಡಿದ ಪ್ರತಿಕ್ರಿಯೆ ನಿಜಕ್ಕೂ ಖುಷಿ ತಂದಿತು. ಎಲ್ಲರೂ ಖುಷಿಯಿಂದ ಥ್ಯಾಂಕ್ಸ್ ಎಂದರು. ಕೆಲವರು ಅದರ ಜೊತೆಗೆ "ಆಲ್ ದಿ ಬೆಸ್ಟ್","ಹೋಪ್ ಯು ಆರ್ ಡೂಯಿಂಗ್ ವೆಲ್" ಎಂದರು. ಎಲ್ಲದಕ್ಕಿಂತ ವಿಶೇಷ "ಗಾಡ್ ಬ್ಲೆಸ್ ಯು" ಎಂದರು. ದೇವರು ಆಶೀರ್ವಾದ ಮಾಡಿ ಹರಸುತ್ತಾನೆಯೋ ಇಲ್ಲವೋ ಗೊತ್ತಿಲ್ಲ. ಗುರುಗಳಂತೂ ಹರಸಿದರು. ಅಷ್ಟಲ್ಲದೇ ಹೇಳಿದ್ದಾರೆಯೇ "ಹರ ಮುನಿದರೂ ಗುರು ಕಾಯುವನು" ಎಂದು. ಸರಿ ದಾರಿ ತೋರಿದ, ತೋರುತ್ತಿರುವ,ತೋರುವ ಗುರುಗಳ ಕೃಪೆ ಹೀಗೇ ಇರಲಿ.
 
~ವಿಭಾ ವಿಶ್ವನಾಥ್