ಗುಲಾಬಿ ಕಬ್ಬಕ್ಕಿ ಕಥೆ

ಗುಲಾಬಿ ಕಬ್ಬಕ್ಕಿ ಕಥೆ

ಒಗಟಿನ ಜೊತೆ ಹಕ್ಕಿ ಕಥೆಗೆ ಸ್ವಾಗತ...

ಚಳಿಗಾಲದಲಿ ನಾ ವಲಸೆ ಬರುವೆ

ಬೇಸಗೆಯಲಿ ನಾ ತವರಿಗೆ ಹೋಗುವೆ

ಸದಾ ನಾನು ಗುಂಪಾಗಿರುವೆ

ಹಣ್ಣು, ಕೀಟ ಎಲ್ಲವೂ ತಿನ್ನುವೆ

ಗುಲಾಬಿ ಮತ್ತು ಕಪ್ಪನೆ ಬಣ್ಣ

ಮೈನಾ ಹಕ್ಕಿಯ ಸಂಬಂಧಿಯಣ್ಣ

ಹೇಳಬಲ್ಲಿರಾ ನಾನ್ಯಾವ ಹಕ್ಕಿ..?

ಕಳೆದ ವಾರ ಫೆಬ್ರವರಿ 16ನೇ ತಾರೀಖಿನಿಂದ 19ನೇ ತಾರೀಖಿನವರೆಗೆ ಜಗತ್ತಿನಾದ್ಯಂತ ಬ್ಯಾಕ್ ಯಾರ್ಡ್ ಬರ್ಡ್ ಕೌಂಟ್ ನಿಮ್ಮ ಹಿತ್ತಲಿನಲ್ಲಿ ಪಕ್ಷಿ ವೀಕ್ಷಣೆ ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ನಡೆಯಿತು. ಇದರ ಜೊತೆ ಜೊತೆಗೆ ಶಾಲಾ ಕಾಲೇಜುಗಳ ಆವರಣದಲ್ಲೇ ಪಕ್ಷಿ ವೀಕ್ಷಣೆ ಮಾಡಿ ಅಲ್ಲಿ ಯಾವೆಲ್ಲ ಹಕ್ಕಿಗಳು ಕಾಣಿಸುತ್ತವೆ ಎಂಬ ಮಾಹಿತಿಯನ್ನು ದಾಖಲಿಸುವ ಒಂದು ವಿಶಿಷ್ಟವಾದ ಕಾರ್ಯಕ್ರಮ ಕೂಡಾ ನಡೆಯಿತು. ಭಾನುವಾರ 18 ರಂದು ನಮ್ಮ ಮಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಮತ್ತು ಪಕ್ಷಿ ವೀಕ್ಷಕರಾದ ಕೆಲವರು ಸೇರಿಕೊಂಡು ವಿಶಾಲವಾದ ಆ ಸಂಸ್ಥೆಯ ಆವರಣದಲ್ಲಿ ಮತ್ತು ಆಸುಪಾಸಿನಲ್ಲಿ ಪಕ್ಷಿ ವೀಕ್ಷಣೆ ಮಾಡಿದ್ವಿ. ಸುರತ್ಕಲ್ ನ ಬಳಿ ಇರುವ ಈ ಕಾಲೇಜಿನ ಆವರಣ ಸುಮಾರು 100 ಎಕರೆಗೂ ಮೀರಿದ ದೊಡ್ಡ ಪ್ರದೇಶ.  ಭಾನುವಾರ ಈ ಪಕ್ಷಿ ವೀಕ್ಷಣೆಯಲ್ಲಿ ನಾನೂ ಭಾಗವಹಿಸಿದ್ದೆ.

ನಮ್ಮ ಗುಂಪು ಪಕ್ಷಿಗಳ ವೀಕ್ಷಣೆ ಮಾಡುತ್ತಾ ebird app ನಲ್ಲಿ ದಾಖಲೆ ಮಾಡುತ್ತಾ, ಹೊಸಬರಿಗೆ ಅವುಗಳ ಪರಿಚಯ ಮಾಡುತ್ತಾ ಹೋಗುತ್ತಿದ್ದೆವು. ಒಂದು ದೊಡ್ಡ ಆಲದ ಮರದ ಮೇಲೆ ಹಲವಾರು ಹಕ್ಕಿಗಳು ಓಡಾಡುತ್ತಿರುವುದು ನಮಗೆ ಕಂಡಿತು. ನಮ್ಮ ಬೈನಾಕ್ಯುಲರ್ ಮೂಲಕ ಅದನ್ನು ನೋಡಿದಾಗ ಕಪ್ಪು ಬಣ್ಣದ ತಲೆ, ಕಪ್ಪು ಬಣ್ಣದ ರೆಕ್ಕೆ, ಬಾಲದಲ್ಲೂ ಒಂದಷ್ಟು ಕಪ್ಪು ಬಣ್ಣ, ಹೊಟ್ಟೆ ಎದೆ ಬೆನ್ನಿನ ಭಾಗವೆಲ್ಲ ತಿಳಿ ಗುಲಾಬಿ ಬಣ್ಣದ ಸುಮಾರು ಮೈನ ಹಕ್ಕಿಯ ಗಾತ್ರದ ಹಲವಾರು ಹಕ್ಕಿಗಳು ಅಲ್ಲಿದ್ದವು.  ಅವುಗಳ ಜೊತೆಗೆ ಅದೇ ಗಾತ್ರದ ಕಂದು ಕಂದು ಬಣ್ಣದ ಹಕ್ಕಿಗಳು ಸಹ ಇದ್ದವು. ಆಲದ ಮರದ ಹಣ್ಣುಗಳನ್ನು ತಿನ್ನುತ್ತಾ  ಮರದ ಮೇಲೆಲ್ಲಾ ಓಡಾಟ ಮಾಡುತ್ತಿದ್ದವು. Rosy starling ಎಂದು ಗುಂಪಿನಲ್ಲಿದ್ದ ಯಾರೋ ಹೇಳಿದರು. ಕೆಲವರು ತಕ್ಷಣ ಗೂಗಲ್ನಲ್ಲಿ ಹುಡುಕಿ ಹೌದು ಇದೇ ಹಕ್ಕಿ ಅಲ್ವಾ ಎಂದು ಫೋಟೋ ತೋರಿಸಿದರು. ಎಲ್ಲರೂ ಬೈನಾಕುಲರ್ ಮೂಲಕ ಅವುಗಳನ್ನು ನೋಡಿ ಖುಷಿ ಪಟ್ಟೆವು.

Rosy Starling ಹಕ್ಕಿಗಳು ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಬೇಸಗೆಯಲ್ಲಿ ಮತ್ತೆ ಉತ್ತರ ಭಾರತ ಮತ್ತು ಇನ್ನೂ ಉತ್ತರದ ಮಂಗೋಲಿಯಾ, ಕಿರ್ಗಿಸ್ತಾನ, ತುರ್ಕಮೆನಿಸ್ತಾನ್ ಕಡೆ ಮರಳಿ ಹೋಗುತ್ತವೆ. ಕೆಲವು ಕಡೆ ಇವು ದೊಡ್ಡ ಗುಂಪುಗಳಲ್ಲಿ ಹಾರಿದರೆ ಆಕಾಶದಲ್ಲಿ ಮೋಡವೇ ಓಡಾಡಿದಂತೆ ಕಾಣುತ್ತವೆ.  ಮೇ ನಿಂದ ಜುಲೈ ತಿಂಗಳ ನಡುವೆ ಇವುಗಳು ಸಂತಾನಾಭಿವೃದ್ಧಿ ಮಾಡುತ್ತವೆಯಂತೆ. ಸದಾ ಗುಂಪಾಗಿ ಓಡಾಡುವ ಈ ಹಕ್ಕಿಗಳು ಕೀಟಗಳು ಮತ್ತು ಹಣ್ಣುಗಳು ಎರಡನ್ನೂ ತಿನ್ನುತ್ತವೆ. ಕೆಲವು ದೇಶಗಳಲ್ಲಿ ಕೀಟಗಳ ನಿಯಂತ್ರಣ ‌ಮಾಡಲು ಇವುಗಳನ್ನು ಬಳಸುತ್ತಾರಂತೆ.  ಚಳಿಗಾಲ ಇನ್ನೇನು ಮುಗಿಯುತ್ತಾ ಇದೆ. ಈ ಹಕ್ಕಿ ಇನ್ನು ತನ್ನ ತವರಿಗೆ ಹೊರಡುವ ತಯಾರಿಯಲ್ಲಿ ಇರಬಹುದು. ಗಮನಿಸ್ತೀರಲ್ಲ.

ಕನ್ನಡದ ಹೆಸರು: ಗುಲಾಬಿ ಕಬ್ಬಕ್ಕಿ

ಇಂಗ್ಲೀಷ್ ಹೆಸರು: Rosy Starling

ವೈಜ್ಞಾನಿಕ ಹೆಸರು: Pastor roseus

ಚಿತ್ರ ಕೃಪೆ :  ಬಸವರಾಜ್ ಓಂಕಾರಪ್ಪ

ಬರಹ: ಅರವಿಂದ ಕುಡ್ಲ, ಬಂಟ್ವಾಳ