ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ

ಬರಹ

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ
ವರ್ಷದ ಮೊದಲವಾರದಲ್ಲಿ ಗೂಗಲ್ ಕಂಪೆನಿಯು ನಕ್ಸಸ್ ಫೋನ್‌ನ್ನು ಬಿಡುಗಡೆ ಮಾಡಿದೆ.ಐಫೋನ್‌ಗೆ ಸ್ಪರ್ಧೆ ಒಡ್ಡಲು ಸಮರ್ಥವೆಂದು ಭಾವಿಸಲಾಗಿರುವ ನಕ್ಸಸ್ ಫೋನ್,ಸುಮಾರು ಹನ್ನೆರಡು ಸೆಂಟಿಮೀಟರ್ ಉದ್ದ,ಆರು ಸೆಂಟಿಮೀಟರ್ ಅಗಲ ಮತ್ತು 1.15ಸೆಂಟಿಮೀಟರ್ ದಪ್ಪವಿದೆ.115ಗ್ರಾಮುಗಳಷ್ಟು ತೂಕವಿರುವ ಈ ಸೆಲ್‌ಪೋನಿನಲ್ಲಿ,ಬ್ಲೂಟೂತ್,ನಿಸ್ತಂತು,ಐದು ಮೆಗಾಪಿಕ್ಸೆಲ್ ಕ್ಯಾಮರಾ,800X480ಸ್ಪಷ್ಟತೆಯ ತೆರೆ,ಹತ್ತು ಗಂಟೆ ಮಾತನಾಡುವಷ್ಟು ಬ್ಯಾಟರಿ ಶಕ್ತಿ ಇವೆಲ್ಲಾ ಇವೆ.ಗೂಗಲ್ ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಬಳಸುವ ನಕ್ಸಸ್ ಪೋನ್‌ನಲ್ಲಿ ಕೀಲಿ ಮಣೆಯು ತೆರೆಯ ಮೇಲೆಯೇ ಕಾಣಿಸುತ್ತದೆ.512ಎಂಬಿ ಸ್ಮರಣಸಾಮರ್ಥ್ಯದ ರಾಂ ಇದೆ.ನಾಲ್ಕು ಜಿಬಿ ಎಸ್ಡಿ ಕಾರ್ಡ್ ಇದೆ.ಸ್ಪರ್ಶ ಸಂವೇದಿ ತೆರೆಯಿದೆ.ಬೆಲೆ ಐನೂರು ಡಾಲರುಗಳಿಗಿಂತ ಹೆಚ್ಚು.ಅದೃಷ್ಟವಶಾತ್ ನಮ್ಮಲ್ಲಿದು ಸದ್ಯ ಲಭ್ಯವಿಲ್ಲ!ಹಾಗಾಗಿ ಇದರ ಆಮಿಷಕ್ಕೆ ಬಿದ್ದು ಕಿಸೆ ಬರಿದಾಗುವ ಅಪಾಯವಿಲ್ಲ.
ಐಫೋನಿಗೆ ಹೋಲಿಸಿದರೆ ಬೆಲೆ ಕಡಿಮೆ,ಯಾವುದೇ ಜಿಎಸೆಂ ಸೇವೆಯನ್ನು ಪಡೆಯಲು ಸಾಧ್ಯವಿದೆ ಎನ್ನುವುದು ನಕ್ಸಸ್ ಫೋನಿನ ಹೆಗ್ಗಳಿಕೆ.ಐಫೋನಿನಲ್ಲಿ ನಿಗದಿತ ಕಂಪೆನಿಯ ಸೇವೆಯನ್ನು ಮಾತ್ರಾ ಪಡೆಯಲು ಸಾಧ್ಯವಿದೆ.ನಕ್ಸಸ್‌ನ ಕ್ಯಾಮರಾವೂ ಹೆಚ್ಚು ಗುಣಮಟ್ತದ್ದು.ಟೈಪಿಂಗ್ ಮಾಡುವಾಗ,ಪದಪೂರ್ತಿ ಸೌಕರ್ಯವನ್ನು ನಕ್ಸಸಿನಲ್ಲಿ ಒದಗಿಸಲಾಗಿದೆ.ನಕ್ಸಸ್ ಫೋನಿನಲ್ಲಿ ಐಫೋನಿಗಿಂತ ಹೆಚ್ಚು ಸ್ಪಷ್ಟ ಚಿತ್ರ ಮತ್ತು ಅಕ್ಷರ ಪ್ರದರ್ಶಿಸಬಲ್ಲ ತೆರೆಯಿದೆ.ಐಫೋನಿಗೆ ಹೋಲಿಸಿದಾಗ,ನಕ್ಸಸ್ ಫೋನಿನಲ್ಲಿ ಬ್ಯಾಟರಿ ಹೆಚ್ಚು ಹೊತ್ತು ಪೋನ್ ಬಳಕೆಗೆ ಆಸ್ಪದ ನೀಡುತ್ತದೆ.
------------------------------------------------------------------------------------------------
ಗೆರೆ-ಬರೆ


ಜಗಜೀವನ್ ಶೆಟ್ಟಿಯವರು ವ್ಯಂಗ್ಯಚಿತ್ರ ಕಲಾವಿದರು,ಜತೆಗೆ "ಉದಯವಾಣಿ", "ತರಂಗ"ವೂ ಸೇರಿದಂತೆ ಹಲವು ಪತ್ರಿಕೆಗಳಿಗೆ ಚಿತ್ರರಚನೆಯನ್ನೂ ಮಾಡಿ ಹೆಸರು ಮಾಡಿದ ಕಲಾವಿದ ಕೂಡಾ.ಇವರ ಮಕ್ಕಳ ಕಲಾಶಾಲೆ "ಗೆರೆ-ಬರೆ" ಉಡುಪಿಯ ಹೊರವಲಯ ಅಂಬಾಗಿಲಿನಲ್ಲಿದೆ.ಈ ಕಲಾಶಾಲೆಯ ಬ್ಲಾಗ್ www.gerebare.blogspot.comನಲ್ಲಿ ಆರಂಭವಾಗಿದೆ.ಈ ಕಲಾಶಾಲೆಯ ಐದನೆ ವರ್ಷಾಚರಣೆಯ ಸ್ಮರಣಾರ್ಥವಾಗಿ,ಕಾರ್ಟೂನ್ ಮತ್ತು ಮಕ್ಕಳು ರಚಿಸಿದ ಪೋಸ್ಟರುಗಳ ಪ್ರದರ್ಶನ ರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯಲಿದೆ.ವಿವರಗಳು ಬ್ಲಾಗ್‌ನಲ್ಲಿವೆ.
ವ್ಯಂಗ್ಯಚಿತ್ರಕಾರ "ಹರಿಣಿ"ಯವರ ಅಂತರ್ಜಾಲ ತಾಣ http://harinigallery.blogspot.comನಲ್ಲಿದೆ. ತರಂಗದಲ್ಲಿ "ಹರಿಣಿ"ಯೆಂಬ ಹೆಸರಿನಲ್ಲಿ ವ್ಯಂಗ್ಯಚಿತ್ರ ರಚಿಸಿ,ಪ್ರಸಿದ್ಧಿಗೆ ಬಂದ ಕಲಾವಿದ ಹರಿಶ್ಚಂದ್ರ ಶೆಟ್ಟಿಯವರು ಮಹಿಳೆಯೆಂದೇ ಜನರು ಭಾವಿಸಿದ್ದರು.ವ್ಯಂಗ್ಯಭಾವಚಿತ್ರ ರಚನೆಯಲ್ಲೂ ಅವರದು ಎತ್ತಿದ ಕೈ.ಅವರ ಇತ್ತೀಚಿನ ವ್ಯಂಗ್ಯಚಿತ್ರಗಳು,ವ್ಯಂಗ್ಯಭಾವಚಿತ್ರಗಳು ಮತ್ತು ಇ-ಪೈಂಟಿಂಗಗಳನ್ನು ಬ್ಲಾಗಿನಲ್ಲಿ ನೋಡಬಹುದು.

-------------------------------------------------------------------------------------------
ಐಟಿ ರೋಗ ಓಡಿಸಲು ಟ್ಯಾಬ್ಲೆಟ್‌ಗಳು!
ಈ ವರ್ಷದ ಬಳಕೆದಾರರ ಇಲೆಕ್ಟ್ರಾನಿಕ್ಸ್ ಪ್ರದರ್ಶನ (ಸಿಇಎಸ್)ನಲ್ಲಿ ಕಂಪೆನಿಗಳು ತಮ್ಮ ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿದುವು.ಡೆಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳು ತಮ್ಮ ಟ್ಯಾಬ್ಲೆಟ್ ಸಾಧನವನ್ನು ಪ್ರದರ್ಶಿಸಿದುವು.ಈ ಸಾದನವು ಅತ್ತ ನೆಟ್‌ಬುಕ್ ಮತ್ತು ಇತ್ತ ಸ್ಮಾರ್ಟ್ ಫೋನ್ ನಡುವಣ ಸಾಧನವಾಗಿದೆ.ಇದು ಕೈಯಲ್ಲಿ ಹಿಡಿಯಲು ಸುಲಭವಾದ ಸುಮಾರು ಐದಿಂಚು ಅಳತೆಯದ್ದಾಗಿವೆ.ಮೈಕ್ರೋಸಾಫ್ಟ್ ಕಂಪೆನಿಯ ಟ್ಯಾಬ್ಲೆಟ್,ಹ್ಯುಲೆಟ್ ಪ್ಯಕಾರ್ಡ್ ಕಂಪೆನಿಯು ತಯಾರಿಸಿದ ಉತ್ಪನ್ನವಾಗಿದ್ದು,ವಿಂಡೋಸ್ 7 ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಬಳಸಿದೆ.ಅತ್ತ ಆಪಲ್ ಕಂಪೆನಿಯೂ ಐಸ್ಲೇಟ್ ಎನ್ನುವ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಯಿತು.ಐಫೋನ್ ನಂತರ ಐಸ್ಲೇಟ್ ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು,ಐಫೋನ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಗೆದ್ದಂತೆ,ಟ್ಯಾಬ್ಲೆಟ್ ಸಾಧನದ ಮಾರುಕಟ್ಟೆಯಲ್ಲಿ ಐಸ್ಲೇಟ್ ಯಶಸ್ಸು ಗಳಿಸಬಹುದೆಂದು ತಜ್ಞರ ಅಭಿಮತ.ಹಾಗಾಗಿ ಡೆಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳೂ ತಮ್ಮ ಸಾಧನಗಳಿಗೂ ಸ್ಲೇಟ್ ಎಂದು ಹೆಸರಿಸಿದ್ದುವು.ಆದರೆ ಅವುಗಳು ಜನರ ಮನಸ್ಸು ಸೂರೆಯನ್ನೇನೂ ಮಾಡಲಿಲ್ಲ.ಐಸ್ಲೇಟ್ ಬಿಡುಗಡೆಗೆ ಸವಾಲೆಸೆಯಲು ಒಂದು ಉತ್ಪನ್ನವನ್ನು ಗಡಿಬಿಡಿಯಲ್ಲಿ ಪ್ರದರ್ಶಿಸಿದ್ದು ಸ್ಪಷ್ಟವಾಗಿತ್ತು.
-------------------------------------------------------------------------------------
ನಿಸ್ತಂತು ಹಾಟ್‌ಸ್ಪಾಟ್ ಸೃಷ್ಟಿಸಬಲ್ಲ ಸ್ಮಾರ್ಟ್‌ಫೋನ್ ಬಂದಿದೆ
ಪಾಮ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಬಹಳಷ್ಟು ಜನಪ್ರಿಯ.ಸಿಇಎಸ್ ಪ್ರದರ್ಶನದಲ್ಲಿ ಇದು ತನ್ನೆರಡು ಸ್ಮಾರ್ಟ್‌ಪೋನ್‌ಗಳ ಹೊಸ ನಮೂನೆಗಳನ್ನು ಪ್ರದರ್ಶಿಸಿತು.ಪಾಮ್ ಪ್ರಿ ಮತ್ತು ಪಿಕ್ಸಿ ಎನ್ನುವ ಸ್ಮಾರ್ಟ್‌ಪೋನ್‌ಗಳೀಗ ವಿಡಿಯೋ ರೆಕಾರ್ಡಿಂಗ್ ಮತ್ತು ನಿಸ್ತಂತು ಹಾಟ್‌ಸ್ಪಾಟುಗಳನ್ನು ಸೃಷ್ಟಿಸುವ ಸಾಮರ್ಥ್ಯದೊಂದಿಗೆ ಲಭ್ಯವಾಗಿವೆ.ಈ ರೀತಿ ಹಾಟ್‌ಸ್ಪಾಟ್ ಸೃಷ್ಟಿಸಿದರೆ,ಸೆಲ್‌ಫೋನ್ ಮೂಲಕ,ನಿಸ್ತಂತು ಸೌಕರ್ಯ ಇಲ್ಲದಲ್ಲೂ ಆ ಸವಲತ್ತನ್ನು ಲಭ್ಯವಾಗಿಸಬಹುದು.ಸ್ಮಾರ್ಟ್ ಫೋನ್ ಮೂಲಕ ಇತರ ಐದು ಸಾಧನಗಳಲ್ಲಿ ಅಂತರ್ಜಾಲ ಜಾಲಾಡಬಹುದು.ಆ ಸಾಧನಗಳಲ್ಲಿ ನಿಸ್ತಂತು ಕಾರ್ಡ್‌ಗಳಿರಬೇಕು.ಈಗಿನ ಲ್ಯಾಪ್‌ಟಾಪ್,ನೆಟ್‌ಬುಕ್‌ಗಳಲ್ಲಿ ಆ ಸವಲತ್ತು ಬಂದೇ ಬರುತ್ತದೆ.ಆದರೆ ಪಾಮ್ ಸಾಧನವು ವೆರಿಜೋನ್ ಮೊಬೈಲ್ ಜಾಲದಲ್ಲಿ ಮಾತ್ರಾ ಕೆಲಸ ಮಾಡಬಲ್ಲುದು.ಆ ಸೇವೆ ಅಮೆರಿಕಾದಲ್ಲಿ ಲಭ್ಯವಿದೆ.ಸ್ಮಾರ್ಟ್‌ಪೋನ್‌ನಲ್ಲಿ ಬಳಸಲು ಸುಮಾರು ಒಂದು ಸಾವಿರ ತಂತ್ರಾಂಶಗಳು ಲಭ್ಯವಿವೆ.ಈ ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಂಡರೆ ಹೆಚ್ಚಿನ ಸೌಕರ್ಯಗಳು ಲಭ್ಯವಾಗುತ್ತವೆ.
-----------------------------------------------------------
ಕಂಪ್ಯೂಟರ್ ಕಂಪೆನಿ ಜತೆ ಸೇರಿ ಕಾರು ತಯಾರಿ
ಫೋರ್ಡ್ ಕಾರು ಅದೆಷ್ಟು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸುತ್ತದೆ ಎಂದರೆ,ಸಿಂಕ್ ಎನ್ನುವ ಫೋರ್ಡ್ ಕಾರನ್ನು ಮೈಕ್ರೋಸಾಪ್ಟ್ ಜತೆ ಸಹಭಾಗಿತ್ವದಲ್ಲಿ ತಯಾರಿಸುತ್ತದೆ. ಈ ಸಹಕಾರ ಎರಡು ವರ್ಷಗಳ ಹಳೆಯದ್ದು.ಈ ವರ್ಷದ ಇಲೆಕ್ಟ್ರಾನಿಕ್ಸ್ ವಸ್ತುಗಳ ಪ್ರದರ್ಶನದಲ್ಲಿ ಕಾರು ತಯಾರಕರೂ ಭಾಗವಹಿಸಿದ್ದರು.ಫೋರ್ಡ್ ಕಾರಿನಲ್ಲೂ,ಈಗ ಅಂತರ್ಜಾಲ ಜಾಲಾಡುವ ಸೌಕರ್ಯ ಒದಗಿಸಲಾಗಿದೆ.ಅಮೆರಿಕಾದಲ್ಲಿ ಜನರು ಮೊಬೈಲ್ ಮೂಲಕ ಅಂತರ್ಜಾಲ ಸೌಕರ್ಯ ಪಡೆಯುವುದರಿಂದ,ಅದನ್ನು ಬಳಸಿ,ಕಾರಿನ ಡ್ಯಾಶ್‌ಬೋರ್ಡನ್ನು ತೆರೆಯಂತೆ ಬಳಸಲು ಅವಕಾಶ ನೀಡಲಾಗಿದೆ.ಕಾರು ಚಲನೆಯಲ್ಲಿರುವಾಗ,ಈ ಸೌಕರ್ಯ ಸಿಗದ ಹಾಗೆ ಮಾಡಿ,ಕಾರನ್ನು ಸುರಕ್ಷಿತಗೊಳಿಸಲಾಗಿದೆ.ಆದರೂ,ಕಾರು ಚಾಲನೆಯಲ್ಲಿರುವಾಗ,ಟ್ರಾಫಿಕ್ ಬಗೆಗಿನ ಮಾಹಿತಿ,ಹವಾಮಾನ ಬಗೆಗಿನ ತಾಜ ಮಾಹಿತಿ,ಬಿಸಿಬಿಸಿ ಸುದ್ದಿಗಳು ಡ್ಯಾಶ್‌ಬೋರ್ಡಿನಲ್ಲಿ ಕಾಣಿಸಿಕೊಂಡು,ಚಾಲಕರ ಗಮನ ಬೇರೆಡೆ ಸೆಳೆಯುತ್ತವೆ ಎಂದು ದೂರುವವರಿದ್ದಾರೆ.
---------------------------------------------------------------------------------
ಡೊಕಾಮಿಕ್ಸ್
ಟಾಟಾ ಡೊಕೊಮೋ ಕಂಪೆನಿಯ ಜಿಎಸೆಂ ಸೆಲ್‌ಪೋನ್ ಸೇವೆ ಪಡೆದವರಿಗೆ,ತಮ್ಮ ಮೊಬೈಲ್ ಪೋನ್‌ಗಳಲ್ಲಿ ಕಾಮಿಕ್ಸ್ ನೋಡಬಹುದು.ಒಂದೊಂದು ಕಾಮಿಕ್ಸ್ ನೋಡಿದಾಗ,ಹದಿನೈದು ರುಪಾಯಿ ತೆರಬೇಕಾಗುತ್ತದೆ.ಸೆಲ್‌ಪೋನ್‌ನ ಮೂಲಕ ಅಂತರ್ಜಾಲ ತಾಣವೊಂದರಿಂದ ಕಾಮಿಕ್ಸಿನ ಚಿತ್ರಗಳನ್ನು ಇಳಿಸಿಕೊಳ್ಳಬೇಕಾಗುತ್ತದೆ.ವಿಶೇಷ ಪರಿಣಾಮಗಳು ಸಿಗಲು ತಂತ್ರಾಂಶವೊಂದನ್ನು ಹ್ಯಾಂಡ್‌ಸೆಟ್‌ನಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ.ಮೊದಲಾಗಿ ಜಪಾನ್‌ನ ಪ್ರಸಿದ್ಧ ಕಾಮಿಕ್ಸ್ ಸರಣಿಗಳಾದ ಮಾರ್ವೆಲ್ ಮತ್ತು ಮಂಗಾ ಕಾಮಿಕ್ಸ್‌ಗಳು ಲಭ್ಯವಿವೆ.
-------------------------------------------------------------------------------------

ಇ-ರೀಡರ್‌ಗಳು
ಅಂತರ್ಜಾಲದಿಂದ ಇಳಿಸಿಕೊಂಡ ಪತ್ರಿಕೆಗಳ ಅಥವಾ ಮ್ಯಾಗಜೀನ್‌ಗಳ ಪುಟಗಳನ್ನು ಕೈಯಲ್ಲಿ ಹಿಡಿದು ಓದಲು ಅನುಕೂಲ ಒದಗಿಸುವ ಇ-ರೀಡರುಗಳ ಹಲವು ಅವತರಣಿಕೆಗಳು ಸಿಇಎಸ್ ಪ್ರದರ್ಶನದಲ್ಲಿದ್ದುವು.ಇವೆಲ್ಲವೂ ಬಣ್ಣದ ಚಿತ್ರ ಪ್ರದರ್ಶಿಸಬಲ್ಲ ತೆರೆಗಳನ್ನು ಹೊಂದಿ,ಅತ್ಯಂತ ಸ್ಪಷ್ಟವಾಗಿ ಪುಟವನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿವೆ.ಪ್ಲಾಸ್ಟಿಕ್ ಲಾಜಿಕ್ ಕಂಪೆನಿಯ ಕ್ಯೂ,ಸ್ಕಿಫ್ ಮತ್ತು ಎಂಟೂರೇಜ್ ಕಂಪೆನಿಯ ಎಜ್ ಇ-ರೀಡರುಗಳ ಬಗ್ಗೆ ಪ್ರಮುಖವಾದುವು.ಇವುಗಳೆಲ್ಲಾ ನಲುವತ್ತು ಸಾವಿರದಿಂದ ಐವತ್ತು ಸಾವಿರದ ಬೆಲೆಗೆ ಲಭ್ಯವಾಗುವ ಅಂದಾಜು ಇದೆ.ಪತ್ರಿಕೆ ಮತ್ತು ನಿಯತಕಾಲಿಕಗಳ ಪುಟಗಳನ್ನು ಇಳಿಸಿಕೊಂಡು,ಪತ್ರಿಕೆ ಮತ್ತು ಮ್ಯಾಗಜೀನ್‌ಗಳನ್ನು ಕೈಯಲ್ಲಿ ಹಿಡಿದು ಓದುವ ಅನುಭವ ಕೊಡುವುದಕ್ಕೆ ಇ-ರೀಡರುಗಳು ಬಳಕೆಯಾಗುತ್ತವೆ.ಪತ್ರಿಕೆಗಳನ್ನು ಮುದ್ರಿಸುವ ಅಗತ್ಯವನ್ನು ತಪ್ಪಿಸಿ,ಬೇಕಾದಲ್ಲಿಗೆ ಒಯ್ಯುವ ಸೌಕರ್ಯವನ್ನಿವು ಒದಗಿಸುತ್ತವೆ.ಕಡಿಮೆ ಬ್ಯಾಟರಿ ಶಕ್ತಿ ವ್ಯಯಿಸುವಂತೆ ಇವನ್ನು ತಯಾರಿಸಲಾಗಿದೆ.ಜತೆಗೆ ಬಿದ್ದರೂ ಒಡೆಯದ ಹಾಗೆ ಇರಲು ಪ್ಲಾಸ್ಟಿಕ್,ಸ್ಟೀಲ್ ಹಾಳೆಗಳನ್ನು ಬಳಸಿ,ಇವನ್ನು ತಯಾರಿಸಲಾಗಿದೆ.ನಿಸ್ತಂತು ಜಾಲ,ಅಥವಾ ತಂತಿಯ ಮೂಲಕ ಇವನ್ನು ಅಂತರ್ಜಾಲ ಸಂಪರ್ಕಕ್ಕೆ ತರಬಹುದು.

udayavani