ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!

ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!

ಬರಹ


    ಅಂತರ್ಜಾಲತಾಣವೊಂದಕ್ಕೆ ಭೇಟಿಯಿತ್ತಾಗ,ಅದರ ಮೂಲಕ ಬಳಕೆದಾರನ ಕಂಪ್ಯೂಟರಿನಲ್ಲಿ ವೈರಸ್,ಮಾಹಿತಿ ಕದಿಯುವ ತಂತ್ರಾಂಶ ಇಂತವೇನಾದರೂ ಅನುಸ್ಥಾಪಿತವಾದರೆ,ಅಥವಾ ಹೀಗೆ ಮಾಡುವ ಇನ್ಯಾವುದಾದರೂ ಅಂತರ್ಜಾಲತಾಣದ ಕೊಂಡಿಯನ್ನು ಹೊಂದಿದ್ದರೆ,ಅಂತಹ ತಾಣವನ್ನು "ಅಪಾಯಕಾರಿ" ತಾಣ ಎಂದು ಪರಿಗಣಿಸಲಾಗುತ್ತದೆ.stopbadware.org ಎನ್ನುವ ಸಂಸ್ಥೆ ಗೂಗಲ್ ಕಂಪೆನಿ,ಹಲವಾರು ಶೈಕ್ಷಣಿಕ ಸಂಸ್ಥೆಗಳ ಜತೆ ಸೇರಿ ಇಂತಹ ಅಪಾಯಕಾರಿ ಅಂತರ್ಜಾಲ ತಾಣಗಳನ್ನು ಗುರುತಿಸಿ ಪಟ್ಟಿ ಮಾಡುವ ಕಾರ್ಯವನ್ನು ಮಾಡುತ್ತಿದೆ.ಆದರೆ ಆಘಾತಕಾರಿ ವಿಷಯವೆಂದರೆ ಗೂಗಲ್ ಜಾಲತಾಣವೇ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದೆ.ಇದಕ್ಕೆ ಮುಖ್ಯ ಕಾರಣವೆಂದರೆ ಗೂಗಲ್ ಒದಗಿಸುತ್ತಿರುವ ಬ್ಲಾಗ್ ಬರವಣಿಗೆಗೆ ಅವಕಾಶ ನೀಡುವ blogger.com ತಾಣ.ಇಲ್ಲಿ ಯಾರೂ ಕೂಡಾ ತಮ್ಮ ಬರವಣಿಗೆಗಳನ್ನು ಪ್ರಸ್ತುತ ಪಡಿಸಬಹುದು.ಇಲ್ಲಿನ ಬ್ಲಾಗುಗಳಲ್ಲಿ ಇನ್ನಿತರ ಯಾವುದೇ ಅಂತರ್ಜಾಲ ತಾಣದ ಕೊಂಡಿಗಳನ್ನು ಒದಗಿಸಲು ಮುಕ್ತ ಅವಕಾಶ ಇದೆ.ಆದುದರಿಂದ ಇಲ್ಲಿ ಬ್ಲಾಗು ಬರೆಯುತ್ತಿರುವವರು ನೀಡುತ್ತಿರುವ ಕೊಂಡಿಗಳು ಸೋಂಕು ಹಬ್ಬುವ ತಾಣಗಳದ್ದೂ ಇರಬಹುದು.ಹೀಗಾಗಿ ಗೂಗಲ್ ಅಪಾಯಕಾರಿ ತಾಣ ಎಂದು ಪರಿಗಣಿತವಾಗಿದೆ! ಗೂಗಲ್ ತನ್ನ ಶೋಧ ಸೇವೆಗೆ ಒಟ್ಟು ಮಾಡಿದ ಮಾಹಿತಿಯನ್ನಾಧರಿಸಿ,ಈ ಹಣೆ ಪಟ್ಟಿ ನೀಡಿದ ಕಾರಣ ಗೂಗಲ್ ಇಕ್ಕಟಿನಲ್ಲಿ ಸಿಕ್ಕಿ ಕೊಂಡಿರುವುದು ಸ್ಪಷ್ಟ.ಈ ಹಣೆಪಟ್ಟಿ ಅದಕ್ಕೆ ಬೇಡವಾಗಿದ್ದರೂ ಅದರಿಂದ ಕಳಚಿಕೊಳ್ಳುವುದು ಸುಲಭವಲ್ಲ.

ಜಿಟಿಎನ್:ಸಾವಿನಲ್ಲೂ ವೈಜ್ಞಾನಿಕ ಮನೋಭಾವgtn
    ಕನ್ನಡದಲ್ಲಿ ವೈಜ್ಞಾನಿಕ ಬರವಣಿಗೆಗೆ ಹೆಸರಾಗಿದ್ದ ಜಿ ಟಿ ನಾರಾಯಣರಾವ್ ಅವರು ವೈಜ್ಞಾನಿಕ ಮನೋಭಾವವನ್ನೂ ಹೊಂದಿದ್ದರು ಎನ್ನುವುದು ಅವರ ಮರಣಾನಂತರವೂ ಸ್ಪಷ್ಟವಾಯಿತು.ಅವರ ಮರಣಾನಂತರ ಅವರ ದೇಹವನ್ನು ಅವರಿಚ್ಛೆಯಂತೆ ಮೈಸೂರು ವೈದ್ಯಕೀಯ ಕಾಲೇಜಿಗೆ ಬಿಟ್ಟುಕೊಡಲಾಯಿತು.ತಮ್ಮ ಶರೀರ ಸಂಶೋಧನೆಗೆ,ಕಲಿಕೆಗೆ ಬಳಕೆಯಾಗಬೇಕು ಎನ್ನುವ ಇಚ್ಛೆ ಅದೆಷ್ಟು ಉದಾತ್ತವಾದುದು ಅಲ್ಲವೇ?ನಮ್ಮ ಹಲವಾರು ವಿಜ್ಞಾನಿಗಳು ವೈಜ್ಞಾನಿಕ ಸಂಶೋಧನೆಗಳನ್ನು ಮಾಡುತ್ತಿದ್ದರೂ,ಮೂಢ ನಂಬಿಕೆಗಳಿಗೆ ಬಲಿಯಾಗಿ,ಹಾಸ್ಯಾಸ್ಪದರಾಗಿರುವುದು ಕಂಡು ಬರುತ್ತದೆ.ಬಾಹ್ಯಾಕಾಶ ವಾಹನಗಳನ್ನು ಉಡಾಯಿಸಲು "ಮುಹೂರ್ತ" ನೋಡುವಂತಹ ವಿಜ್ಞಾನಿಗಳು,ತಮ್ಮ ಸಂಶೋಧನಾಲಯ,ಮನೆಗಳ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಂತ್ರಜ್ಞರಿಗೆ ಹೋಲಿಸಿದಾಗ ಜಿಟಿಎನ್ ಬಗ್ಗೆ ಗೌರವ ಮೂಡದಿದ್ದೀತೇ?
ಬ್ರಾಡ್‍ಬ್ಯಾಂಡ್ ಸೇವೆ ಇನ್ನೂ ಅಗ್ಗ
    ಬ್ರಾಡ್‌ಬ್ಯಾಂಡ್ ಸೇವೆ ಜನರಿಗೆ ಲಭ್ಯವಿದ್ದರೂ,ಅದನ್ನು ಬಳಸುವಲ್ಲಿ ಸೇವೆಯು ದುಬಾರಿಯಾಗಿರುವುದೇ ಅಡ್ಡಿಯಾಗಿದೆ.ದೂರವಾಣಿ ಮೂಲಕ ಡಯಲ್-ಅಪ್ ಅಂತರ್ಜಾಲ ಸಂಪರ್ಕ ಹೊಂದಿದವರು,ಬ್ರಾಡ್‌ಬ್ಯಾಂಡ್ ಸೇವೆ ಪಡೆದರೆ ದೂರವಾಣಿ ಬಿಲ್ಲು ಕಡಿಮೆ ಎಂದರೂ ನೂರಿಪ್ಪತ್ತೈದು ರುಪಾಯಿ ಏರುತ್ತದೆ.ಇನ್ನು ಅಧಿಕ ಡೌನ್‌ಲೋಡ್ ಸೌಕರ್ಯ ಬೇಕಿದ್ದರೆ ಇನ್ನೂರೈವತ್ತು ರುಪಾಯಿಗಳಿಂದ ಒಂಭೈನೂರು ರುಪಾಯಿಗಳ ವರೆಗೆ ತೆರಬೇಕು.ಈಗ ಬಿ ಎಸ್ ಎನ್ ಎಲ್ ಅಂತರ್ಜಾಲ ಸಂಪರ್ಕಕ್ಕೆ ಕಂಪ್ಯೂಟರ್ ಅಥವ ಲ್ಯಾಪ್‌ಟಾಪ್ ಒದಗಿಸಿ,ಬ್ರಾಡ್‌ಬ್ಯಾಂಡ್ ಸೇವೆಯನ್ನು ಶೇಕಡಾ ಇಪ್ಪತ್ತರಷ್ಟು ಅಗ್ಗವಾಗಿಸಲು ಕ್ರಮ ಕೈಗೊಂಡಿದೆ. ಎಚ್ ಸಿ ಎಲ್ ಕಂಪೆನಿಯ ಜತೆಗಿನ ಒಪ್ಪಂದದ ಮೂಲಕ ಗ್ರಾಹಕರಿಗೆ ಆಕರ್ಷಕ ದರಗಳಲ್ಲಿ ಯಂತ್ರಾಂಶ ಒದಗಿಸಲದು ಒಪ್ಪಂದ ಮಾಡಿಕೊಂಡಿದೆ.
"ಮಾತನಾಡುವ" ಗ್ರಂಥಾಲಯ
ದೃಷ್ಟಿದೋಷದಿಂದ ಓದಲು ಆಗದವರಿಗೂ,ಜ್ಞಾನ ಸಂಪಾದನೆಗೆ ಅವಕಾಶ ನೀಡುವ ಗ್ರಂಥಾಲಯವು ಕೊಯಂಬತ್ತೂರಿನಲ್ಲಿ ಆರಂಭವಾಗಿದೆ.ಭಾರತಿಯಾರ್ ವಿಶ್ವವಿದ್ಯಾಲಯ ಮತ್ತು ಲಯನ್ಸ್ ಕ್ಲಬ್ ಜತೆಗೂಡಿ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.ಇಲ್ಲಿ ವಿವಿಧ ವಿಷಯಗಳ ಬಗ್ಗೆ ಆಡಿಯೋ ಸಿಡಿ ಮತ್ತು ಕ್ಯಾಸೆಟುಗಳು ಲಭ್ಯವಿವೆ. ಗ್ರಂಥಾಲಯಕ್ಕೆ ಬಂದವರು ಅವುಗಳನ್ನು ಆಲಿಸಲು ಇಲ್ಲೊ ಸೌಲಭ್ಯ ಒದಗಿಸಲಾಗಿದೆ.ದೃಷ್ಟಿಯಿಲ್ಲವೆಂಬ ಕಾರಣಕ್ಕೆ ಓದಲಾಗದವರಿಗೆ, ಆಲಿಸುವ ಮೂಲಕ ಅಧ್ಯಯನದ ಅವಕಾಶ ಒದಗಿಸಿರುವ ಗ್ರಂಥಾಲಯ ಹಲವಾರನ್ನು ಆಕರ್ಷಿಸುತ್ತಿದೆ.
ಪುರದಾರದಾಸರ ಬಗ್ಗೆ ಅಂತರ್ಜಾಲತಾಣ
    ಕನ್ನಡದ ಜನಪ್ರಿಯ ಜಾಲತಾಣ ಸಂಪದ ಇನ್ನೂ ವಿಶಾಲವಾಗಿದೆ.ಹರಿದಾಸ ಸಂಪದ ಪುಟವೂ ಇಘ http://haridasa.in/ನಲ್ಲಿ ಲಭ್ಯವಾಗಿದೆ.ಸಂಪದದ ಹರಿಪ್ರಸಾದ್ ನಾಡಿಗ್ ಅವರು ಒಂದು ದಿನ ಪುರಂದರರ ರಚನೆಯ ಬಗ್ಗೆ ಮಾತನಾಡುತ್ತಿರುವಾಗ,ವಿದ್ಯಾಭೂಷಣರು ಹಾಡಿದ ಪುರಂದರರ ರಚನೆಯ ಸಾಹಿತ್ಯ ನೆನಪಿಗೆ ಬರದೆ ಬೇಸರಿಸಿದರಂತೆ. ಹಂಸಾನಂದಿ ಎಂಬ ಸಂಪದಿಗ ಸಾಹಿತ್ಯವನ್ನು ತಕ್ಷಣ ಒದಗಿಸಿದರಂತೆ.ಹಂಸಾನಂದಿಯವರ ಆಸಕ್ತಿ ನೋಡಿ,ಅವರ ಪುರಂದರ ಪ್ರೇಮದ ಬಗ್ಗೆ ಗೌರವ ಮೂಡಿ,ಸಂಪದದ ಈ ಸೋದರಿ ತಾಣ ಆರಂಭವಾಗಲಿದೆ.ಹಂಸಾನಂದಿಯವರದೇ ನೇತೃತ್ವ ಇದಕ್ಕಿದೆ.ಪುರಂದರರ ರಚನೆಗಳು http://purandara.wordpress.com ಇಲ್ಲಿಯೂ ಲಭ್ಯವಿವೆ.

ashokworld

udayavani
(ಇ-ಲೋಕ-82)(7/7/2008)*ಅಶೋಕ್‍ಕುಮಾರ್ ಎ