ಗೂಗಲ್ ದೃಶ್ಯ ಶೋಧ

ಗೂಗಲ್ ದೃಶ್ಯ ಶೋಧ

ಬರಹ

ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ


"ಬರಹ" ಮತ್ತು "ನುಡಿ" ಪದಸಂಸ್ಕಾರಕಗಳು ಕನ್ನಡ ಲಿಪಿಯಲ್ಲಿ ಪದಸಂಸ್ಕಾರಕಗಳಾಗಿ ಬಳಕೆಯಲ್ಲಿರುವ ತಂತ್ರಾಂಶಗಳು.ಯುವತಂತ್ರಜ್ಞ ಲೋಹಿತ್ ಡಿ ಶಿವಮೂರ್ತಿಯವರು "ಲೋಹಿತಂತ್ರಾಂಶ" ಎನ್ನುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.ಹೊಸ ತಂತ್ರಾಂಶವು ಯುನಿಕೋಡ್ ಶಿಷ್ಟಾಚಾರದ ಪ್ರಕಾರ ಕಡತವನ್ನುಳಿಸಲು ಸಹಾಯ ಮಾಡುತ್ತದೆ.ಬರಹ ಅಥವಾ ನುಡಿಯಲ್ಲಿಯೂ ತೆರೆಯುವಂತೆಯೂ ಕಡತವನ್ನುಳಿಸಬಹುದು.ಅವುಗಳಲ್ಲಿ ರಚಿಸಿದ ಕಡತಗಳನ್ನೂ ಲೋಹಿತಂತ್ರಾಂಶ ತೆರೆಯುತ್ತದೆ.ಸದ್ಯ ವಿಂಡೋಸ್ ಕಾರ್ಯನಿರ್ವಹಣಾ ವ್ಯವಸ್ಥೆಯ ತಂತ್ರಾಂಶ ಸಿದ್ಧವಾಗಿದೆ.ಲಿನಕ್ಸಿನಲ್ಲಿಯೂ ಬಳಸಲಾಗುವಂತೆ ತಂತ್ರಾಂಶ ಸಿದ್ಧಪಡಿಸುವುದು ಅವರ ಯೋಜನೆ.ಕಡತಗಳನ್ನು ಉಳಿಸುವಾಗ,ಪಿಡಿಎಫ್ ಆಗಿಯೂ ಉಳಿಸಲು ಬರುತ್ತದೆ.ಪದವನ್ನು ಟೈಪಿಸುವಾಗ ಪದದ ಒಂದೆರಡು ಅಕ್ಷರ ಟೈಪಿಸಿದೊಡನೆ,ಅವುಗಳಿಂದ ಆರಂಭವಾಗುವ ಪದಗಳ ಪಟ್ಟಿಯನ್ನು ಪ್ರದರ್ಶಿಸುವ ಸೌಕರ್ಯ, ಈ ತಂತ್ರಾಂಶದ ಧನಾತ್ಮಕ ಅಂಶ.ಚಿತ್ರಗಳನ್ನು ಮತ್ತು ಕೋಷ್ಟಕಗಳನ್ನು ಪುಟಕ್ಕೆ ಸೇರಿಸುವ ಸೌಲಭ್ಯವಿದೆ.ಬರಹ ಮಾದರಿಯ ಲಿಪ್ಯಂತರಣ ವಿಧಾನ ಅಥವಾ ಕಗಪ ಕೀಲಿ ಮಣೆಯ ವಿನ್ಯಾಸ ಎರಡನ್ನೂ ಟೈಪಿಸುವಾಗ ಬಳಸಲು ಬರುತ್ತದೆ.ಲೋಹಿತಂತ್ರಾಂಶದಲ್ಲಿ ಪದವನ್ನು ಹುಡುಕಿ,ಅದನ್ನು ಬದಲಿಸಲೂ ಅವಕಾಶ ನೀಡಲಾಗಿದೆ.
--------------------------------------------------------------------
ಗೂಗಲ್ ದೃಶ್ಯ ಶೋಧ


ಗೂಗಲ್ ಗಾಗಲ್ ಎನ್ನುವುದು ಗೂಗಲ್‌ನ ಆಂಡ್ರಾಯ್ಡ್ ಸೆಲ್‌ಪೋನ್‌ಗಳಲ್ಲಿ ಲಭ್ಯವಿರುವ ಹೊಸ ಸೇವೆ. ಇದುವರೆಗೆ ಪದಪುಂಜಗಳ ಮೂಲಕ ಶೋಧ ನಡೆಸುವುದು ಮಾಮೂಲಿಯಾಗಿತ್ತು.ಈಗ ಚಿತ್ರಗಳ ಮೂಲಕವೂ ಅದನ್ನು ಮಾಡಬಹುದು.ಉದಾಹರಣೆಗೆ ನೀವು ಪೈಂಟಿಂಗ್ ಒಂದರ ಚಿತ್ರವನ್ನು ಮೊಬೈಲಿನಲ್ಲಿ ಸೆರೆಹಿಡಿದು,ಅದು ಯಾವ ಕಲಾವಿದನದ್ದು ಮುಂತಾದ ವಿವರಗಳನ್ನು ಗೂಗಲ್ ಶೋಧದ ಮೂಲಕ ತಿಳಿದುಕೊಳ್ಳಬಹುದು.ಜಿಪಿಎಸ್ ಸೌಲಭ್ಯ ಇರುವ ಮೊಬೈಲಿನಲ್ಲಿ,ನೀವಿರುವ ಸ್ಥಳದ ಲ್ಯಾಂಡ್‌ಮಾರ್ಕ್ ಮೇಲೆ ಮೊಬೈಲ್ ಸಾಧನದ ಕ್ಯಾಮರಾವನ್ನು ಸ್ಥಿರಗೊಳಿಸಿ,ಸ್ಥಳದ ವಿವರ ಪಡೆದುಕೊಳ್ಳಬಹುದು.ಪುಸ್ತಕದ ಮುಖಪುಟ ಸೆರೆಹಿಡಿಯುವ ಮೂಲಕ,ಪುಸ್ತಕದ ವಿವರ ಪಡೆದುಕೊಳ್ಳಬಹುದು.ವಿಸಿಟಿಂಗ್ ಕಾರ್ಡ್ ಚಿತ್ರ ಹಿಡಿದು,ಅದರಲ್ಲಿ ನಮೂದಿಸಿದ ಪೋನ್ ನಂಬರ್ ಹೆಸರನ್ನು ನಿಮ್ಮ ವಿಳಾಸಪುಸ್ತಿಕೆಗೆ ವರ್ಗಾಯಿಸಿಕೊಳ್ಳಬಹುದು!
---------------------------------------------------------------------------------
ಶಶಿತರೂರ್:ಐದುಲಕ್ಷ ಹಿಂಬಾಲಕರು


ಕೇಂದ್ರಸಚಿವ ಶಶಿತರೂರು ಟ್ವಿಟರ್ ಅಂತರ್ಜಾಲ ತಾಣದ ಖಾತೆಯನ್ನು ಹೋಂದಿದ್ದಾರೆ.ಅವರನ್ನೀಗ ಐದುಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಅವರ ಟ್ವಿಟರ್ ಸಂದೇಶದಲ್ಲಿ ಅವರು ಹಿಂಬಾಲಕರಿಗೆ ಕೃತಜ್ಞತೆ ವ್ಯಕ್ತಪಡಿಸಿ,ತನ್ನ ಹಿಂಬಾಲಕರ ಸಂಖ್ಯೆ ಹತ್ತು ಸಾವಿರ ತಲುಪಿದಾಗ ಪತ್ರಿಕೆಗಳು ಅದನ್ನೆ ಸುದ್ದಿ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಟ್ವಿಟರ್ ಬಳಕೆದಾರರು ತಮ್ಮ ಸಂದೇಶಗಳಲ್ಲಿ ಬಳಸುವ ಪದಪುಂಜಗಳು ಸಾಮಾನ್ಯರಿಗೆ ಮೊದಲಿಗೆ ಗಲಿಬಿಲಿ ತರಬಹುದು.ಹಲವಾರು ಪದಗಳು ಟ್ವಿಟರ್ ಮೂಲಕ ಟಂಕಿಸಲ್ಪಟ್ಟಿವೆ.ಇವುಗಳ ಅರ್ಥ ನೋಡಿಕೊಳ್ಳಬೇಕೆಂದರೆ ಆನ್‌ಲೈನ್ ನಿಘಂಟೂ ಕೂಡಾ ಲಭ್ಯವಿದೆ.http://www.webopedia.com/quick_ref/Twitter_Dictionary_Guide.asp ಇಲ್ಲಿ ಅಂತಹ ನಿಘಂಟು ಲಭ್ಯ.ಟ್ವೀಪಲ್,ರಿಟ್ವೀಟ್,ಟ್ವೀಟ್ ಮುಂತಾದ ಪದಗಳನ್ನಿಲ್ಲಿಕಾಣಬಹುದು.ಹೊಸ ಪದಗಳನ್ನು ಸೇರಿಸುವ ಸೌಕರ್ಯವೂ ಇದೆ.
ಅಂದಹಾಗೆ ಟ್ವಿಟರ್ ಅಂತರ್ಜಾಲ ತಾಣವನ್ನು ವಶಕ್ಕೆ ತೆಗೆದುಕೊಳ್ಳಲು ಹಲವಾರು ಪ್ರಯತ್ನಗಳು ಆಗುತ್ತಿರುತ್ತವೆ.ಮೊನ್ನೆ ಶುಕ್ರವಾರ ಅಂತಹ ಪ್ರಯತ್ನವೊಂದು ಆಗಿತ್ತು.ಡಿಎನ್‌ಎಸ್ ಹ್ಯಾಕ್ ಮೂಲಕ ಈ ದಾಳಿ ಆಗಿತ್ತು ಎನ್ನುವ ಊಹೆ ಇದೆ.ಟ್ವಿಟರ್ ಸೇವೆ ಪಡೆಯಲು ಅದರ ವಿಳಾಸವನ್ನು ಟೈಪಿಸಿದರೆ,ಈ ತಾಣವು ಇರಾನಿ ಸೈಬರ್ ಸೈನ್ಯದ ವಶದಲ್ಲಿದೆ ಎಂದು ಘೋಷಿಸುವ ಪುಟ ಸಿಗುತ್ತಿತ್ತು.
----------------------------------------------------------------------------
ಯಕ್ಷಮಾತು


http://www.yakshamatu.blogspot.com/ ಎನ್ನುವುದು ಯಕ್ಷಗಾನದ ಬಗ್ಗೆ ಮೀಸಲಾಗಿಸಿದ ಕನ್ನಡ ಬ್ಲಾಗ್.ನಾ.ಕಾರಂತ ಪೆರಾಜೆಯವರ ಈ ಬ್ಲಾಗು,ಯಕ್ಷಗಾನ ಕಲಾವಿದರ ಬಗ್ಗೆ,ಯಕ್ಷಗಾನ ಕಲೆಯ ಬಗ್ಗೆ ಬರಹಗಳನ್ನು ಹೊಂದಿದೆ.ಸುಮಾರು ಐದುವರ್ಷಗಳ ಕಾಲ ನಾ ಕಾರಂತ ಪೆರಾಜೆಯವರು ಯಕ್ಷಗಾನದ ನಂಟನ್ನು ಸ್ವತ: ಹೊಂದಿದ್ದವರು.ಸದ್ಯ "ಅಡಿಕೆ ಪತ್ರಿಕೆ"ಯ ಸಹಾಯಕ ಸಂಪಾದಕ.http://hasirumatu.blogspot.com/ ಇವರ ಇನ್ನೊಂದು ಬ್ಲಾಗ್.ಇದು ಕೃಷಿ ಮತ್ತು ಪರಿಸರದ ಬಗೆಗಿನ ಬ್ಲಾಗ್ ಎನ್ನುವುದು ಹೆಸರೇ ಸೂಚಿಸುತ್ತದೆ ಅಲ್ಲವೇ?

----------------------------------------------------------
ಗೂಗಲ್ ನಕ್ಷೆಯಿಂದ "ಮಾರ್ಗದರ್ಶನ"
ಎರಡು ಸ್ಥಳಗಳ ನಡುವಣ ದಾರಿ ತಿಳಿಸುವಲ್ಲಿ,ಗೂಗಲ್ ಮ್ಯಾಪ್ ಸೇವೆಯು ಇದೀಗ ಹೆಚ್ಚು ಪ್ರಯೋಜನಕಾರಿಯಾಗಿದೆ.ಹಿಂದೆಲ್ಲಾ,ದಿಕ್ಕು ಮತ್ತು ದೂರಗಳ ಮೂಲಕ ಮಾರ್ಗದರ್ಶನ ಸಿಗುತ್ತಿತ್ತು.ಉದಾಹರಣೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಿಲೋಮೀಟರ್ ಸಾಗಿ,ಪೂರ್ವಕ್ಕೆ ಐದು ಕಿಎಲೋಮೀಟರ್ ಮುಂದೆ.. ಹೀಗೆ. ಈಗಾದರೋ ಗೂಗಲ್ ಮ್ಯಾಪಿನಲ್ಲಿ ಎರಡು ಸ್ಥಳಗಳ ನಡುವಣ ದಾರಿ ಕೇಳಿದಾಗ,ಜನರು ಸಾಮಾನ್ಯವಾಗಿ ಬಳಸುವ ಭೂಗುರುತುಗಳ ಮೂಲಕ ಮಾರ್ಗದರ್ಶನ ಸಿಗುತ್ತದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನತ್ತ ಎರಡು ಕಿಮೀ ಮುಂದೆ ಸಾಗಿ,ಪೆಟ್ರೋಲ್ ಬಂಕಿನ ಸಮೀಪ ಎಡಕ್ಕೆ ತಿರುವಿ.. ಹೀಗೆ ಭೂಗುರುತುಗಳ ಮೂಲಕ ಸೂಚನೆಗಳು ಸಿಗುತ್ತವೆ.
------------------------------------------------------------------
2009:ಸ್ಮಾರ್ಟ್ ಫೋನ್ ಗದ್ದಲ
ಮೊಬೈಲ್ ಫೋನ್‌ಗಳು ಜನಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿರುವುದರಿಂದ ಈ ವರ್ಷ ಅವುಗಳ ಮಾರುಕಟ್ಟೆಯಲ್ಲಿ ತುರುಸಿನ ಸ್ಪರ್ಧೆ ಇತ್ತು.ಏಸರ್ ಅಂತಹ ಕಂಪ್ಯೂಟರ್ ಯಂತ್ರಾಂಶಗಳ ಮಾರಾಟಗಾರರೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ.ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್,ಆಂಡ್ರಾಯಿಡ್,ಸಿಂಬಿಯನ್,ಬ್ಲಾಕ್‌ಬೆರಿ,ವಿಂಡೊಸ್ ಹೀಗೆ ಹಲವು ಕಾರ್ಯಾಚರಣಾ ವ್ಯವಸ್ಥೆಗಳು ಲಭ್ಯವಿವೆ.ಗೂಗಲ್ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿರುವ ಲಕ್ಷಣ ಎದ್ದು ಕಾಣುತ್ತಿದೆ.ಐಫೋನ್ ತನ್ನ ಹೊಸ ಮಾದರಿಯನ್ನು ಪರಿಚಯಿಸಿ,ತನ್ನ ಹಿಡಿತವನ್ನು ಬಿಗಿಯಾಗಿಸಿತು.ಸ್ಯಾಮ್‌ಸಂಗ್,ಎಲ್ಜಿಯಂತಹ ಸ್ಮಾರ್ಟ್ ಫೋನ್ ತಯಾರಕರೂ ಗೂಗಲ್ ವ್ಯವಸ್ಥೆಯನ್ನು ಆಧರಿಸಿದ ಮೊಬೈಲ್ ಸಾಧನಗಳನ್ನು ಬಿಡುಗಡೆ ಮಾಡಿರುವುದು ಈ ವರ್ಷದ ಎದ್ದು ಕಾಣುವ ಅಂಶ.
----------------------------------------------------------------------------
ಗೂಗಲ್:ಕನ್ನಡ ಟೈಪಿಂಗ್‍ಗೆ ಸೌಲಭ್ಯ


ಮಿಂಚಂಚೆ,ಅಂತರ್ಜಾಲ ಪುಟ,ಬ್ಲಾಗ್ ಹೀಗೆ ಬೇಕೆಂದಲ್ಲಿ ಕನ್ನಡದಲ್ಲಿ ಟೈಪಿಂಗ್ ಮಾಡಲು ಅನುವು ಮಾಡುವ ಗೂಗಲ್ ಐಎಂಇ(input method) ತಂತ್ರಾಂಶವೀಗ ಲಭ್ಯವಿದೆ.ಇದನ್ನು ಅನುಸ್ಥಾಪಿಸಿದಲ್ಲಿ ಕನ್ನಡ ಟೈಪಿಂಗ್ ಅನ್ನು ಲಿಪ್ಯಂತರಣ ವಿಧಾನದಲ್ಲಿ ಮಾಡಬಹುದು.ಇಂಗ್ಲೀಷಿನಲ್ಲಿ ಕನ್ನಡ ಬರೆದಂತೆ ಟೈಪಿಸಿದರೆ,ಅಕ್ಷರಗಳು ಮೂಡುವುದು ಲಿಪ್ಯಂತರಣ ವಿಧಾನದ ವೈಶಿಷ್ಟ್ಯ.google IME ಎಂದು ಶೋಧಿಸಿದರೆ,ಡೌನ್‌ಲೋಡ್ ಪುಟ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ.


udayavani
*ಅಶೋಕ್‌ಕುಮಾರ್ ಎ