ಗೂಢಚಾರಿ - ಒಂದು ನೆನಪು

ಗೂಢಚಾರಿ - ಒಂದು ನೆನಪು

’ನನ್ನೆದುರು ಸಂಭಾವಿತರ ಹಾಗೆ ಇದ್ದು,ಕ್ಲಾಸಿನಲ್ಲಿ ನಾನಿಲ್ಲದಾಗ ಅಥವಾ ನನ್ನ ಬೆನ್ನ ಹಿಂದೆ ನೀವು ತುಂಟಾಟವಾಡಿದರೆ ನನಗೆ ಗೊತ್ತಾಗುವುದಿಲ್ಲ ಎಂದುಕೊಳ್ಳಬೇಡಿ.ನನಗೆ ಎಲ್ಲವೂ ಗೊತ್ತಾಗುತ್ತದೆ ನಿಮ್ಮ ನಡುವೆಯೇ ನಾನು ಗೂಢಚಾರಿಗಳನ್ನು ನೇಮಿಸಿಟ್ಟಿದ್ದೇನೆ’ಎಂದಿದ್ದರು ಕನ್ನಡ ಶಿಕ್ಷಕರು.ಸುಮ್ಮನೇ ಅವರ ಮಾತುಗಳನ್ನು ಕೇಳುತ್ತ ಕುಳಿತಿದ್ದ ನಾವುಗಳು ಅವರನ್ನೇ ಪಿಳಿಪಿಳಿ ನೋಡಲಾರಂಭಿಸಿದ್ದೆವು.ಗೂಢಚಾರಿಗಳಾ..? ಅಂದರೆ ಡಿಟೆಕ್ಟಿವ್‌ಗಳು..! ತರಗತಿಯಲ್ಲಿ ಗೂಢಚಾರಿಗಳು ..!! ಏನಿದರ ಅರ್ಥವೆನ್ನುತ್ತ ನಾವುಗಳು ತಲೆ ಕೆಡಿಸಿಕೊಳ್ಳುವಷ್ಟರಲ್ಲಿ ಮಾತು ಮುಂದುವರೆಸಿದ್ದರು ಗುರುಗಳು.’ಗೂಢಚಾರಿಗಳು ಅಂದ್ರೆ ಒಂಥರಾ ಸಿಕ್ರೆಟ್ ಏಜೆಂಟುಗಳು.ನಿಮ್ಮ ಕ್ಲಾಸ್ ಲೀಡರ್ ಹೇಗೋ ಅವರೂ ಹಾಗೆ. ನಿಮ್ಮೆಲ್ಲರ ವರ್ತನೆಯನ್ನು ಗಮನಿಸ್ತಾ ಇರ್ತಾರೆ ಅವರುಗಳು.ಕ್ಲಾಸ್ ಲೀಡರ್ ಯಾರೆನ್ನುವುದು ನಿಮಗೆ ಗೊತ್ತಿರುತ್ತದೆ.ಆದರೆ ಈ ಗೂಢಚಾರಿಗಳು ಯಾರೆನ್ನುವುದು ನಿಮಗೆ ಯಾರಿಗೂ ಗೊತ್ತಿರುವುದಿಲ್ಲ.ಅವರು ಕ್ಲಾಸ್ ಮಾನಿಟರ್‌ಗಳಿಗಿಂತ ಪ್ರಭಾವಶಾಲಿಗಳು.ನಿಮ್ಮ ಮಾನಿಟರ್‌ನೂ ಸೇರಿಸಿಕೊಂಡು ಎಲ್ಲರ ವರ್ತನೆ ಬಗ್ಗೆ ನನಗೆ ಹೇಳ್ತಾ ಇರ್ತಾರೆ.ನಿಮ್ಮ ತುಂಟಾಟಗಳ ಬಗ್ಗೆ,ವರ್ತನೆಯ ಬಗ್ಗೆ ಎಲ್ಲವೂ ನನಗೆ ತಲುಪಿಬಿಡುತ್ತೆ..’ಎಂದಿದ್ದ ಗುರುಗಳ ಮಾತಿಗೆ ಸಣ್ಣಗೆ ನಕ್ಕಿದ್ದೆವು ನಾವಿಬ್ಬರು ಗೆಳೆಯರು
 
ಆಗಷ್ಟೇ ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲು ಮೆಟ್ಟಲೇರಿದ್ದ ದಿನಗಳವು.ಪ್ರೌಢಶಾಲೆಯನ್ನು ಸೇರಿ ಮೂರನೆಯ ದಿನಕ್ಕೆಲ್ಲ ಶಿಕ್ಷಕರು ಈ ಕತೆಯನ್ನು ಹೇಳಿದ್ದರು.ಹದಿಹರೆಯದ ಹೊಸ್ತಿಲಲ್ಲಿ ನಿಂತವರು ನಾವುಗಳು.ದೊಡ್ಡವರಾಗಿಬಿಟ್ಟಿದ್ದೇವೆನ್ನುವ ಸಣ್ಣ  ಗತ್ತು ನಮ್ಮಲ್ಲಿ.ಕನ್ನಡ ಮಾಸ್ತರ್ ಮಾತುಗಳನ್ನು ಕೇಳಿ ನಿಜಕ್ಕೂ ನಗು ಬಂದಿತ್ತು ನಮಗೆ.ಇದ್ಯಾವುದೋ ಜೇಮ್ಸ್ ಬಾಂಡ್ ಸಿನಿಮಾದ ಕತೆ ಹೇಳ್ತಿದ್ದಾರೆ ಸರ್,ಗೂಢಚಾರಿಯಂತೆ,ಅವನು ನಮ್ಮನ್ನೆಲ್ಲ ಗಮನಿಸೋದಂತೆ ಎಂಬ ಸಣ್ಣ ಗುಸುಗುಸು ನಮ್ಮನಮ್ಮಲ್ಲಿಯೇ.ಅಷ್ಟರಲ್ಲಿ ಪಕ್ಕದಲ್ಲಿ ಕೂತಿದ್ದ ಕೃಷ್ಣಾ ನನ್ನನ್ನು ಕೇಳಿದ್ದ.’ಆಯ್ತು ಮಾರಾಯಾ..ಗೂಢಚಾರಿ ನಮ್ಮನ್ನೆಲ್ಲ ಗಮನಿಸ್ತಾ ಇರ್ತಾನೆ ಅನ್ಕೊಳ್ಳೋಣ.ಆದರೆ ಅವನ ಉಡಾಳತನದ ಬಗ್ಗೆ ಹೇಳೋರು ಯಾರು ಶಿಕ್ಷಕರಿಗೆ..’? ಎಂಬ ಅವನ ಪ್ರಶ್ನೆ ನಿಜಕ್ಕೂ ತರ್ಕಬದ್ದವಾಗಿತ್ತು.ಹೀಗೆ ಏನೇನೋ ಗೊಣಗಿಕೊಳ್ಳುವಷ್ಟರಲ್ಲಿ ಮತ್ತೆ ಮಾತನಾಡಿದ್ದರು ನಮ್ಮ ಕ್ಲಾಸ್ ಟೀಚರ್.’ ಈ ವರ್ಷದಲ್ಲಿ ಇನ್ನೂ ಗೂಢಚಾರಿಗಳನ್ನು ನೇಮಿಸಿಲ್ಲ.ಆದರೆ ನಾಳೆ ನಾಡಿದ್ದರಲ್ಲಿ ನೇಮಿಸಿಬಿಡ್ತೀನಿ.ಒಬ್ಬನೇ ಇರ್ತಾನೆ ಗೂಢಚಾರಿ ಅಂದ್ಕೊಬೇಡಿ,ಒಟ್ಟು ನಾಲ್ಕು ಜನ ಒಂದು ಕ್ಲಾಸಿಗೆ.ಅದೂ ಒಬ್ಬೊಬ್ಬರನ್ನ ಒಂದೊಂದು ಸಮಯದಲ್ಲಿ.ಒಬ್ಬ ಗೂಢಚಾರಿಗೆ ಇನ್ನೊಬ್ಬ ಗೂಢಚಾರಿ ಯಾರೆನ್ನುವುದು ಗೊತ್ತಿರುವುದಿಲ್ಲ.ಎಷ್ಟೋ ಸಲ ಒಬ್ಬ ಗೂಢಚಾರಿ ಇನ್ನೊಬ್ಬ ಗೂಢಚಾರಿಯ ಬಗ್ಗೆಯೇ ಕಂಪ್ಲೆಂಟು ಹೇಳಿರ್ತಾನೆ.ಹಾಗಾಗಿ ಗೂಢಚಾರಿಯೂ ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ಎಂದ ಶಿಕ್ಷಕರ ಮಾತಿಗೆ ಸಣ್ಣಗೆ ನಡುಗಿದ್ದ ಕೃಷ್ಣಾ.ತಾನು ಆಗಷ್ಟೇ ಹೇಳಿದ್ದ ಮಾತು ಶಿಕ್ಷಕರಿಗೆ ಕೇಳಿಬಿಡ್ತಾ ಎನ್ನುವ ಭಯ ಅವನಿಗೆ.ಆದರೂ ಇದೆಲ್ಲ ವಿದ್ಯಾರ್ಥಿಗಳನ್ನು ಬೆದರಿಸುವುದಕ್ಕಾಗಿ ಶಿಕ್ಷಕರು ಕಟ್ಟಿದ ಕತೆಯೆನ್ನುವುದು ನಮ್ಮ ಭಾವವಾಗಿತ್ತು.
 
ನಮ್ಮ ಹಾಗೊಂದು ಭಾವ ಮೂಡಿದ ದಿನದಿಂದ ಸರಿಯಾಗಿ ಹದಿನೈದನೇ ದಿನಕ್ಕೆ ಕೃಷ್ಣಾ ಶಿಕ್ಷಕರ ಕೈಯಲ್ಲಿ ಒದೆ ತಿಂದಿದ್ದ.ಒಂದು ಮಧ್ಯಾಹ್ನದ ತರಗತಿಯಲ್ಲು ಹುಣಸೇ ಹಣ್ಣು ತಿಂದವನು ಅದರ ಬೀಜ,ಸಿಪ್ಪೆಗಳನ್ನು ಕ್ಲಾಸಿನಲ್ಲಿಯೇ ಬಿಸುಟುಹೋಗಿದ್ದನಂತೆ.ಅದು ಅವನೇ ಎನ್ನುವುದು ಅವನ ಹೊರತಾಗಿ ಇನ್ಯಾರಿಗೂ ಗೊತ್ತಿರಲಿಲ್ಲ.ಆದರೆ ಅದನ್ನು ಶಿಕ್ಷಕರಿಗೆ ಸುದ್ದಿ ಮುಟ್ಟಿಸಿದ್ದು ಗೂಢಚಾರಿಗಳು.ಆಗ ನಲುಗಿಹೋಗಿದ್ದ ಕೃಷ್ಣಾ.’ಲೇ ಗುರ‍್ಯಾ ...ಗೂಢಚಾರಿಗಳೂ ಖರೇನೇ ಅದಾರಲೇ..ನಾ ತಿಂದಿದ್ದು ಯಾರಿಗೂ ಗೊತ್ತಿರಲಿಲ್ಲ..ನಿಂಗೂ ಹೇಳಿರಲಿಲ್ಲ.ಸರ್ ಗೆ ಹೆಂಗ್ ಗೊತ್ತಾಯ್ತ್..’?ಎಂದ ಕೃಷ್ಣಾನ ಮಾತುಗಳು ತರಗತಿಯಲ್ಲಿ ಗೂಢಚಾರಿಗಳ ಇರುವಿಕೆಯನ್ನು ಮೊದಲ ಬಾರಿ ಧೃಢಿಕರಿಸಿದ್ದವು.ಕೃಷ್ಣಾ ಗೂಢಚಾರಿಗಳ ಬಗ್ಗೆ ಚಿಂತಿಸುತಿದ್ದರೆ,ಪಕ್ಕದಲ್ಲಿಯೇ ಕೂತು ನನಗೆ ಕೊಡದೇ ಹುಣಸೆಹಣ್ಣು ತಿಂದಿದ್ದ ಅವನಿಗೆ ಒದೆ ಬಿದ್ದು ತಕ್ಕ ಶಾಸ್ತಿಯಾಯ್ತೆಂದು ನಾನು ಗಹಗಹಿಸಿದ್ದೆ.ಮುಂದೆ ತರಗತಿಯ ಎಲ್ಲ ಹುಡುಗರೂ ಬಹಳ ಎಚ್ಚರಿಕೆಯಿಂದಿರಲಾರಂಭಿಸಿದ್ದರು.ವಿದ್ಯಾರ್ಥಿಗಳ ನಡುವೆಯೇ ಒಬ್ಬ ಗೂಢಚಾರಿ ಎನ್ನುವ ಭಾವವೇ ಸಕತ್ ಥ್ರಿಲ್ಲಿಂಗ್ ಎಲ್ಲರಿಗೂ.ಒಂದಷ್ಟು ಜನ ಗೂಢಚಾರಿಗಳು ಯಾರಿರಬಹುದೆನ್ನುವ ಲೆಕ್ಕಾಚಾರಕ್ಕೆ ಬಿದ್ದುಬಿಟ್ಟರು.ಒಟ್ಟು ನಾಲ್ಕು ಜನ.ಅಂದರೆ ಇಬ್ಬರು ಹುಡುಗರು,ಇಬ್ಬರು ಹುಡುಗಿಯರು ಎನ್ನುವ ಲೆಕ್ಕಚಾರ ವಿಜಯನದ್ದು.ಹುಡುಗಿಯರು ಪತ್ತೆದಾರಿಕೆ ಮಾಡುವಷ್ಟು ಬುದ್ದಿವಂತರಲ್ಲ,ಹಾಗಾಗಿ ನಾಲ್ವರೂ ಹುಡುಗರೇ ಎನ್ನುವುದು ಸಂತೋಷನ ಲೆಕ್ಕಾಚಾರ.ಅವರು ಬುದ್ದಿವಂತ ಹುಡುಗರೇ ಆಗಿರಬೇಕೆಂದೇನೂ ಇಲ್ಲ,ಸಾಧಾರಣ ಬುದ್ದಿವಂತಿಕೆಯ ಹುಡುಗರೂ ಆಗಿರಬಹುದು ಏಕೆಂದರೆ ಅವರ ಮೇಲೆ ಅನುಮಾನ ಬಾರದು ಯಾರಿಗೂ ಎನ್ನುವುದು ಮಂಜುನಾಥನ ಲೆಕ್ಕಾಚಾರ.ಹೀಗೆ ಒಬ್ಬೊಬ್ಬರದ್ದೂ ಒಂದೊಂದು ತರ್ಕ.ಎಲ್ಲ ಹುಡುಗರಿಗೂ ಎಲ್ಲ ಹುಡುಗರ ಮೇಲೆ ಪರಸ್ಪರ ಅನುಮಾನ.
 
ಗೂಢಚಾರರು ಯಾರೆನ್ನುವುದನ್ನು ತಿಳಿದುಕೂಳ್ಳಲು ಅದೆಷ್ಟು ಹರಸಾಹಸ ಪಟ್ಟುಬಿಟ್ಟೆವು ನಾವು.ಹೊತ್ತಲ್ಲದ ಹೊತ್ತಿಲ್ಲಿ ತರಗತಿಗಳು ನಡೆಯುವ ಕನ್ನಡ ಶಿಕ್ಷಕರಿಂದ ಯಾರಿಗಾದರೂ ಕರೆ ಬಂದರೆ ಸಾಕು,ಎಲ್ಲರೂ ಆ  ಹುಡುಗನತ್ತ ತಿರುಗಿ ನೋಡುತ್ತಿದ್ದೆವು.ಬಹುಶ; ಅವನೂ ಒಬ್ಬ ಗೂಢಚಾರಿಯಿರಬಹುದೇನೋ ಎನ್ನುವ ಅನುಮಾನ ನಮಗೆ.ವಿಪರ್ಯಾಸವೆಂದರೆ ಹಾಗೆ ಹೆಚ್ಚು ಕರೆ ಬಂದವರ ಪೈಕಿ ಸ್ನೇಹಿತ ಕೃಷ್ಣಾ  ಪ್ರಮುಖ.ಹಾಗಾಗಿ ನಾಲ್ಕು ಗೂಢಚಾರಿಗಳ ಪೈಕಿ ಅವನೂ ಒಬ್ಬ ಎನ್ನುವುದು ನಮ್ಮೆಲ್ಲರ ಊಹೆಯಾಗಿತ್ತು.ಅದೊಮ್ಮೆ ತರಗತಿ ಮುಗಿದಾಗ  ಅವನ ಕಾಲರು ಹಿಡಿದು ’ಲೇ,,ನೀನೂ ಒಬ್ಬ ಗೂಢಾಚಾರಿ ಅಲ್ಲೇನು..’? ಎಂದಾಗ ಕೋಪಿಸಿಕೊಂಡು ನಮ್ಮನ್ನೇ ಹೊಡೆಯಲು ಬಂದಿದ್ದ ಕೃಷ್ಣ.’ಅಲ್ಲಲೇ ಮಂಗ್ಯಾನ ಮಕ್ಳಾ..ಗೂಢಾಚಾರಿಗಳ ಕೈಯಾಗ್ ಸಿಕ್ಕು ಮೊದಲು ಹೊಡ್ತಾ ತಿಂದವನೇ ನಾ ಅದೀನಿ..ನಾನ ಗೂಢಚಾರಿ ಅಂತಿರಲ್ರೇ ’ಎಂದಾಗ ಅವನ ತರ್ಕವೂ ನಮಗೆ ಸರಿಯೆನ್ನಿಸಿತ್ತು.ಆದರೂ ನಮ್ಮ ನಮ್ಮ ಪತ್ತೆದಾರಿಕೆಯನ್ನು ನಾವು ಬಿಡಲಿಲ್ಲ.ಯಾರಾದರೂ ಅವಶ್ಯಕತೆಗಿಂತ ಸ್ಟಾಫ್ ರೂಮಿನತ್ತ ಹೋದರೆ,ಕನ್ನಡ ಶಿಕ್ಷಕರ ಬಳಿ ಮಾತನಾಡುತ್ತಿದ್ದರೆ ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೆವು.ಅವನು ಸ್ಟಾಫ್ ರೂಮಿನಿಂದ ಹೊರಬೀಳುತ್ತಿದ್ದಂತೆಯೇ ಒಮ್ಮೆಲೇ ಅವನ ಹಿಂದಿನಿಂದ ಅವನು ಗಾಬರಿಯಾಗುವಂತೆ,’ಹಲೋ ಮಿಸ್ಟರ್ ಗೂಢಚಾರಿ’ಎಂದುಬಿಡುತ್ತಿದ್ದೇವು.ಆದರೂ ಅದೇಕೋ ಪ್ರತಿಬಾರಿಯೂ ನಮ್ಮಗಳ ಲಾಜಿಕ್ ತಪ್ಪುತ್ತಿತ್ತು.ನಮ್ಮ ಕೈಗೆ ಒಬ್ಬ ಗೂಢಚಾರಿಯೂ ಸಿಕ್ಕಿಬೀಳಲಿಲ್ಲ
 
ಆದರೆ ತರಗತಿಯ ಎಲ್ಲ ವಿದ್ಯಮಾನಗಳೂ ಶಿಕ್ಷಕರಿಗೆ ಗೊತ್ತಾಗುತ್ತಿದ್ದರಿಂದ ಗೂಢಚಾರಿಗಳು ಖಚಿತವಾಗಿಯೂ ಇದ್ದಾರೆನ್ನುವ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ.ಅದರಲ್ಲೂ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡುತ್ತ ,’ಬಹಳ ಆಯ್ತು ನಿನ್ನ ಆಟ.ಗೂಢಚಾರಿಗಳು ನಿನ್ನ ಬಗ್ಗೆ ತುಂಬ ಹೇಳಿದ್ದಾರೆ’ಎನ್ನುವ ದಾಟಿಯಲ್ಲೇ ಶಿಕ್ಷಕರು ಮಾತನಾಡುವಾಗ ಎಲ್ಲರಿಗೂ ಸಣ್ಣ ಕಂಪನ.ಹುಡುಗರು ನೋಟ್ ಬುಕ್ ಚೆಕ್ ಮಾಡಿಸಿಕೊಳ್ಳದೇ ಇರುವುದು,ಕಾಪಿ ಹೊಡೆಯುವುದು,ತರಗತಿ ನಡೆಯುವಾಗ ಏನನ್ನೋ ತಿನ್ನುವುದು ಇಂಥಹ ಮಹಾ ರಹಸ್ಯಗಳೆಲ್ಲವೂ ಶಿಕ್ಷಕರಿಗೆ ಗೊತ್ತಾಗಿಬಿಡುತ್ತಿದ್ದರಿಂದ ಶಾಲೆಯ ಆವರಣದೊಳಕ್ಕೆ ನಮ್ಮ ತುಂಟಾಟಗಳು ಬಹಳ ಕಡಿಮೆಯೇ ಎನ್ನಬಹುದು.ಅದೆಷ್ಟೇ ನಿರಾಕರಿಸಿದರೂ ಕೃಷ್ಣಾ ಸಹ ಒಬ್ಬ ಗೂಢಚಾರಿಯೇ ಎನ್ನುವುದು ಅನೇಕರ ಅಭಿಪ್ರಾಯವಾಗಿತ್ತು.ಏನೇ ಹರಸಾಹಸಪಟ್ಟರೂ ಗೂಢಚಾರಿ ಯಾರು ಎನ್ನುವುದನ್ನು ನಮಗೆ ಕಂಡುಕೊಳ್ಳಲಾಗಲಿಲ್ಲ.ಅಷ್ಟರಲ್ಲಿ ನನ್ನ ಹೆತ್ತವರಿಗೆ ಯಲ್ಲಾಪುರಕ್ಕೆ ವರ್ಗಾವಣೆಯಾಗಿದ್ದರಿಂದ ನನ್ನ ಕುತೂಹಲ ಕೊನೆಯವರೆಗೂ ಹಾಗೆ ಉಳಿದುಕೊಂಡು ಬಿಟ್ಟಿತು.
 
ಕೃಷ್ಣಾ ಸಹ ಒಬ್ಬ ಗೂಢಚಾರಿ ಇದ್ದಿರಬಹುದೇನೋ ಎನ್ನುವ ಅನುಮಾನವನ್ನು ಲೆಕ್ಕಕ್ಕಿಟ್ಟುಕೊಂಡರೂ,ಉಳಿದ ಇಬ್ಬರೂ ಯಾರೆನ್ನುವುದು ನನಗೆ ಇವತ್ತಿಗೂ ಗೊತ್ತಿಲ್ಲ.ಒಟ್ಟು ನಾಲ್ಕರಲ್ಲಿ ಕೃಷ್ಣಾ ಒಬ್ಬನಾದರೇ ಇನ್ನೂ ಮೂವರ ಬಗ್ಗೆ ಮಾಹಿತಿ ಬೇಕಲ್ಲ ಎನ್ನುತ್ತಿರೇನೋ ..ಇಲ್ಲ ಇಲ್ಲ..ಬೇಕಿರುವುದು ಇನ್ನು ಇಬ್ಬರ ಬಗ್ಗೆ ಮಾತ್ರ.
 
ಏಕೆಂದರೆ ನಾಲ್ಕು ಜನರ ಪೈಕಿ  ಒಬ್ಬ ಗೂಢಚಾರಿ ನಾನೇ ಆಗಿದ್ದೆ....!!