ಗೃಹಲಕ್ಷ್ಮಿ ಅನುಷ್ಟಾನ ಗೊಂದಲ ಬೇಡ

ಗೃಹಲಕ್ಷ್ಮಿ ಅನುಷ್ಟಾನ ಗೊಂದಲ ಬೇಡ

ರಾಜ್ಯ ಸರಕಾರವು ತನ್ನ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾಗಿದ್ದ ‘ಗೃಹಲಕ್ಷ್ಮಿ' ಯೋಜನೆಗೆ ಜುಲೈ ೧೯ರಂದು ಚಾಲನೆ ನೀಡುವುದಾಗಿ ಘೋಷಿಸಿದೆ. ಅದೇ ದಿನ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯೂ ಆರಂಭವಾಗಲಿದೆ. ಪ್ರತೀ ಕುಟುಂಬದ ಯಜಮಾನಿಗೆ ಮಾಸಿಕ ೨೦೦೦ ರೂ.ನೀಡುವ ಯೋಜನೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಸ್ತುವಾರಿಯಲ್ಲಿ ಜಾರಿಯಾಗಲಿದೆ. ಯೋಜನೆ ಅನುಷ್ಟಾನದಲ್ಲಿ ಕೊಂಚವೂ ಲೋಪವಾಗದಂತೆ ನೋಡಿಕೊಳ್ಳಲು ಸರಕಾರ ಸಾಕಷ್ಟು ಮುಂಜಾಗ್ರತೆ ವಹಿಸಿರುವುದು ಶ್ಲಾಘನೀಯ. ರಾಜ್ಯದಲ್ಲಿ ಹೇಗಿದ್ದರೂ ಪಡಿತರ ಚೀಟಿ ಜತೆ ಆಧಾರ್ ಜೋಡಣೆಯಾಗಿದೆ. ಬಹುತೇಕರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಜೊತೆ ಜೋಡಣೆಯಾಗಿದೆ. ಹೀಗಾಗಿ ಒಂದು ಹಂತದ ಡೇಟಾ ಸರಕಾರದ ಬಳಿ ಲಭ್ಯವಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಫಲಾನುಭವಿ ಯಾವ ದಿನ, ಯಾವ ಸಮಯಕ್ಕೆ ಸಮೀಪದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು ಎನ್ನುವುದನ್ನು ಇಲಾಖೆಯೇ ನಿಗದಿಪಡಿಸಲಿದೆ ಮತ್ತು ಸಂಬಂಧಿಸಿದ ಫಲಾನುಭವಿ ಮೊಬೈಲ್ ಗೆ ಈ ಕುರಿತ ಸಂದೇಶ ರವಾನೆಯಾಗಲಿದೆ. ಗ್ರಾಮಗಳಲ್ಲಿ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ, ಪಟ್ಟಣಗಳಲ್ಲಿ ಕರ್ನಾಟಕ ಒನ್, ಬೆಂಗಳೂರು ಒನ್ ಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ನಿಗದಿತ ದಿನಾಂಕದಂದು ನಿಗದಿತ ಸಮಯಕ್ಕೆ ಭೇಟಿ ನೀಡಲು ಸಾಧ್ಯವಾಗದೇ ಇದ್ದರೆ, ಸಂಜೆ ೫ ರಿಂದ ೭ ಗಂಟೆ ಅವಧಿಯಲ್ಲಿ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಲೂ ಅವಕಾಶ ಕಲ್ಪಿಸಲಾಗಿದೆ. ಯೋಜನೆ ಜಾರಿಗೊಳಿಸಲು ತರಾತುರಿ ಮಾಡದೇ ಸರಕಾರ ಅಗತ್ಯ ಸಿದ್ಧತೆ ಮಾಡಿಕೊಂಡ ಬಳಿಕವೇ ದಿನಾಂಕ ಘೋಷಿಸಿದೆ. ಆಧಾರ್ ಗೆ ಜೋಡಣೆಯಾದ ಬ್ಯಾಂಕ್ ಖಾತೆ ಬದಲು ಬೇರೆ ಖಾತೆಗೆ ಹಣ ಜಮಾ ಆಗಬೇಕೆಂದು  ಫಲಾನುಭವಿ ಬಯಸಿದ್ದಲ್ಲಿ ಅದನ್ನೂ ಅನುವು ಮಾಡಿಕೊಡಲಾಗಿದೆ. 

ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ' ಯೋಜನೆಯನ್ನು ಸರಕಾರ ತುಸು ತರಾತುರಿಯಲ್ಲಿ ಜಾರಿಗೊಳಿಸಿತ್ತು. ಆ ವೇಳೆ ಅನೇಕ ಗೊಂದಲಗಳು ಉಂಟಾಗಿದ್ದವು. ಇಂಧನ ಇಲಾಖೆ ಹಂತಹಂತವಾಗಿ ಅವುಗಳನ್ನೆಲ್ಲವನ್ನೂ ಬಗೆಹರಿಸಿದೆ. ಆ ಯೋಜನೆ ಅನುಷ್ಟಾನದ ವೇಳೆ ಉಂಟಾಗಿದ್ದ ಸಮಸ್ಯೆಗಳಿಂದ ಸರಕಾರ ಪಾಠ ಕಲಿತುಕೊಂಡಿದೆ ಎನ್ನುವುದು ಸ್ಪಷ್ಟ. ಹೀಗಾಗಿಯೇ ‘ಗೃಹಲಕ್ಷ್ಮಿ' ವಿಚಾರದಲ್ಲಿ ಎಚ್ಚರಿಕೆ ವಹಿಸಿದೆ. ಆನ್ ಲೈನ್ ಅಥವಾ ಆಪ್ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಿದ್ದರೆ ಸರಕಾರದ ಹೊರೆಯೇ ಕಡಿಮೆ ಆಗುತ್ತಿತ್ತು. ಯೋಜನೆ ಜಾರಿಗಾಗಿ ಸರಕಾರದ ಮಟ್ಟದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಹಾಗೆಯೇ ಜನರು ಕೂಡ ಏಕಾಏಕಿ ನೋಂದಣಿಗೆ ಮುಗಿಬೀಳದೇ, ತಮ್ಮ ಸರದಿಗಾಗಿ ಕಾಯಬೇಕು. ನೋಂದಣಿಗೆ ಕಾಲಮಿತಿ ವಿಧಿಸಿಲ್ಲ. ಹೀಗಾಗಿ ಯಾವಾಗ ಬೇಕಾದರೂ ನೋಂದಣಿ ಮಾಡಿಸಿಕೊಳ್ಳುವ ಅವಕಾಶವಂತೂ ಇದ್ದೇ ಇದೆ. 

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೭-೦೭-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ