ಗೃಹ ಪ್ರವೇಶ

ಗೃಹ ಪ್ರವೇಶ

ಬರಹ

DSC09355ಬೆಂಗಳೂರಿನ ಖ್ಯಾತ ಬಡಾವಣೆಯಲ್ಲಿ ಹೊಸದಾಗಿ ತಲೆ ಎತ್ತಿ ನಿಂತ ಮೂರಂತಸ್ಥಿನ ಭವ್ಯ ಬಂಗಲೆ. ಮನೆಯೆದುರಿನ ರಸ್ತೆಯಲ್ಲಿ ಶಾಮಿಯಾನ ಹಾಕಿಸಿ, ಸುಮಾರು ೨೦೦ ಜನ ಒಮ್ಮೆಲೇ ಕುಳಿತು ಊಟ ಮಾಡುವಷ್ಟು ಮೇಜು ಕುರ್ಚಿಗಳನ್ನಿರಿಸಿ, ಪಕ್ಕದಲ್ಲಿಯೇ ಅಡುಗೆಗಾಗಿ ತಾತ್ಕಾಲಿಕ ಏರ್ಪಾಡು ಮಾಡಲಾಗಿತ್ತು. ಮಗನ ಮನೆಯ ಗೃಹ ಪ್ರವೇಶವಾದ್ದರಿಂದ ರಾಯರು ಗೆಲುವಿನಿಂದಲೇ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದರು. ಬಂದವರಿಗೆ ನೀರು, ಕಾಪಿ, ಮಾತುಗಳಿಂದ ಉಪಚರಿಸಿ, ಮಗ ಕಟ್ಟಿಸಿದ್ದ ಮನೆಯ ಅಂಚಂಚನ್ನು ಹುಮ್ಮಸ್ಸಿನಿಂದ ತೋರಿಸಿ, ಅವರಾಡಿದ ಮೆಚ್ಚುಗೆಯ ಮಾತುಗಳಿಂದ ಪುಳಕಿತರಾಗಿದ್ದರು.

ಬಡತನದಲ್ಲಿ ಬೆಳೆದು, ವಿದ್ಯೆಯನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಬಂದು ಕೆಲಸ ಹುಡುಕುತ್ತಿರಬೇಕಾದರೆ ಅವರಿಗೆ ಸಿಕ್ಕಿದ್ದು ಬ್ಯಾಟರ್ ಫ್ಯಾಕ್ಟರಿಯಲ್ಲೊಂದು ಸಣ್ಣ ಕೆಲಸ. ತೀರಾ ಸಿರಿತನ ಅಲ್ಲದ್ದಿದ್ದರೂ ಇನ್ನೊಬ್ಬರ ಮುಂದೆ ಕೈಚಾಚಿ ಬದುಕಬೇಕಿಲ್ಲದಿದ್ದ ಪರಿಸ್ಥಿತಿಯಲ್ಲಿ, ತಮ್ಮ ಊರಿನ ಒಬ್ಬ ಕನ್ಯೆಯನ್ನೇ ವಿವಾಹವಾಗಿ ಸುಖವಾಗಿಯೇ ಇದ್ದರು. ಒಂದೆರಡು ವರ್ಷಗಳೊಳಗಾಗಿ ಗಂಡು ಮಗುವನ್ನು ಹೆತ್ತು, ಆ ಮಗುವಿನಲ್ಲಿ ತಮ್ಮ ಸುಖ ಕಾಣಲು ಮೊದಲುಗೊಂಡರು. ಸಂಸಾರಕ್ಕೆ ಹೊಸಬ್ಬನ ಆಗಮನದಿಂದ ಮನೆಯ ಅವಶ್ಯಕತೆ ಹೆಚ್ಚಿ ರಾಯರು ಫ್ಯಾಕ್ಟರಿಯಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಿ ಇನ್ನಷ್ಟು ಹಣ ಹೊಂದಿಸಬೇಕಾದ ಪರಿಸ್ಥಿತಿ ಬಂದಿತ್ತು. ಎಡ ಬಿಡದ ದುಡಿತ, ಬ್ಯಾಟರಿ ಆಸಿಡ್ಗಳೊಂದಿಗಿನ ನಂಟು ರಾಯರ ಆರೋಗ್ಯವನ್ನು ದಿನೇ ದಿನೇ ಹದಗೆಡಿಸುತ್ತಿತ್ತು. ಮಡದಿ ಬಂದಾಗಿನಿಂದ ಆಕೆಗೊಂದು ಹೊಸ ಬಟ್ಟೆ, ಆಭರಣ, ಅಪೂರ್ವಕ್ಕೊಮ್ಮೆಯಾದರೂ ತಿರುಗಾಟ ಮೊದಲಾದ ಸೌಲಭ್ಯ ಒದಗಿಸಲಾರದೇ ರಾಯರು ಖಿನ್ನರಾಗಿದ್ದರು.

ರಾಯರ ಮಡದಿಯೇನೂ ಅನುಕೂಲವಂತರ ಮನೆಯಲ್ಲಿ ಬೆಳೆದ ಹುಡುಗಿಯಲ್ಲ. ಬೆಂಗಳೂರಿಗೆ ಬಂದ ಹೊಸತರಲ್ಲಿ ಪತಿಯ ಸಹವಾಸ, ಪೇಟೆಯ ಸೊಬಗು ಮೆಚ್ಚಿಕೊಂಡೂ ಇದ್ದಳು. ದಿನಕಳೆದಂತೆ ಅಕ್ಕ ಪಕ್ಕದ ಮನೆಯವರ ಸಿರಿತನ ಸೊಬಗನ್ನು ನೋಡಿ ಆಸೆಗೊಂಡು, ಪತಿಯೊಡನೆ ಈ ವಿಷಯವನ್ನು ಹಂಚಿಕೊಂಡಿದ್ದೂ ಉಂಟು. ಇದ್ದೊಬ್ಬ ಮಗುವಿಗೆ ಒಂದೆಳೆ ಚಿನ್ನದ ಸರ ಹಾಕಲೂ ಗತಿಯಿಲ್ಲವೆಂದು ಒಮ್ಮೊಮ್ಮೆ ಕೊರಗುತ್ತಿದ್ದುದೂ ಉಂಟು. ಮಡದಿ ಪರರ ಐಶ್ವರ್ಯದ ಮಾತನೆತ್ತುವಾಗಲೆಲ್ಲಾ ರಾಯರಿಗೆ ತನಗಿದನ್ನೆಲ್ಲಾ ಒದಗಿಸಲಾಗದಲ್ಲ ಎಂಬ ಅಪರಾಧ ಭಾವನೆ ಮೂಡುತ್ತಿತ್ತು. ಈ ಭಾವನೆ ಆಳವಾಗಿ ಮನಸ್ಸನ್ನು ಹೊಕ್ಕು ರಾಯರಿಗೆ ಮಡದಿಯ ಬಳಿ ಮಾತನಾಡುವುದು ಕಷ್ಟವಾಗತೊಡಗಿತು, ತಮ್ಮ ಕೆಲಸದ ಅವಧಿಯನ್ನು ಹೆಚ್ಚಿಸಿಕೊಂಡು ಮನೆಯಲ್ಲಿ ಮಡದಿಯೊಡನಿರಬಹುದಾದ ಅವಧಿಯನ್ನು ಕಡಿಮೆ ಮಾಡಿಕೊಂಡರು. ಮಡದಿ ಗಂಡನನ್ನು ಚುಚ್ಚುವ ಉದ್ದೇಶದಿಂದ ಈ ಮಾತನ್ನು ಆಡಿದವಳಲ್ಲ, ಆದರೂ ಆಕೆ "ನಾನು ಕೇವಲ ಇವನ್ನಷ್ಟೆ ನಿಮ್ಮಿಂದ ಬಯಸಿದ್ದಲ್ಲ ಎಂದು ಹೇಳಬಹುದಿತ್ತು", ಹೇಳಲಿಲ್ಲ. ರಾಯರಿಗೆ ಸಿರಿ ಸಂಪತ್ತು ಒದಗಿಸುವ ಸೌಭಾಗ್ಯ ಇಲ್ಲವಾದರೂ ಮಾತಿನಿಂದ ಮಡದಿಯನ್ನು ಸಂತೈಸಬಹುದಿತ್ತು, ಸಂತೈಸಲಿಲ್ಲ.

ಹೀಗಿರುತ್ತ ಮಗ ಬೆಳೆದು ಶಾಲೆಗೆ ಹೋಗಿ ಬರುತ್ತ, ವಿದ್ಯಾಭ್ಯಾಸದಲ್ಲೂ, ಪಠ್ಯೇತರ ಚಟುವಟಿಕೆಗಳಲ್ಲೂ ಮೊದಲಿಗನಾಗಿ ಬೆಳೆಯತೊಡಗಿದ. ರಾಯರ ಸಹವಾಸ ಕಡಿಮೆಯಾದ ಮಡದಿಗೆ ಮಗ ಸ್ನೇಹಿತನಾಗಿ, ತಂದೆಯ ಸ್ನೇಹ ಕಡಿಮೆಯಾದ ಮಗನಿಗೆ ತಾಯಿ ಸರ್ವಸ್ವವಾದರು. ಗಂಡನ ಅಪರಾಧ ಭಾವವನ್ನು ತನ್ನ ಮೇಲೆ ತೋರಿಸುತ್ತಿರು ಅಸಡ್ಡೆಯೆಂದೇ ತಿಳಿದು, ರಾಯರ ಮೇಲೆ ಮಡದಿಗೆ ತಿರಸ್ಕಾರ ಭಾವನೆ ಮೂಡಲು ಆರಂಭವಾಯಿತು, ಮಗನಲ್ಲಿಯೂ ತಂದೆಯ ಬಗ್ಗೆ ಇದೇ ಭಾವನೆಯನ್ನು ಮೂಡುವಂತೆ ಮಾಡಿದಳು. ಪದೇ ಪದೇ ಕಾಯಿಲೆಯ ನೆಪ ಹೇಳಿ ಮನೆವಾರ್ತೆ, ಹೊರಗಡೆ ಕೆಲಸ ಎರಡು ರಾಯರ ಮೇಲೆ ಬೀಳುವಂತೆ ಮಾಡಿ ಅವರ ಗಮನ ತನ್ನ ಮೇಲೆ ಹರಿಯುವಂತೆ ಮಾಡುತ್ತಿದ್ದಳು. ಓದುವ ಮಗನಾದ್ದರಿಂದ, ಇಂತಹ ಸಂದರ್ಭಗಳಲ್ಲಿ ಮನೆಯ ಕೆಲಸಗಳು ರಾಯರ ಪಾಲಾಗುತ್ತಿತ್ತು. ಇಂತಹ ವಾತಾವರಣದಲ್ಲೇ ಛಲದಿಂದ ಪದವಿ ಪೂರ್ವ ವ್ಯಾಸಂಗ ಮುಗಿಸಿದ ಮಗ, ಮುಂದಿನ ವ್ಯಾಸಂಗಕ್ಕಾಗಿ ಇಂಜಿನಿಯರಿಂಗ್ ಆಯ್ದು ಕೊಂಡನು. ತನ್ನ ನಿರ್ಧಾರವನ್ನು ತಾಯಿಗೆ ತಿಳಿಸಿ ಆಕೆಯ ಆಶೀರ್ವಾದ ಪಡೆದನಾದರೂ, ಏನೂ ಪ್ರಯೋಜನವಾಗಲಾರದೆಂದು ತಂದೆಗೆ ತಿಳಿಸುವ ಕೆಲಸ ಮಾಡಲಿಲ್ಲ. ಹಣಕಾಸಿಗಾಗಿ ವಿದ್ಯಾರ್ಥಿ ವೇತನ, ತಾಯಿಯ ಕಡೆಯವರ ಸಹಾಯದಿಂದ ಬ್ಯಾಂಕಿನಲ್ಲಿ ಸಾಲವನ್ನು ಪಡೆದನು. ಈ ವಿಷಯ ಮೂರನೇ ವ್ಯಕ್ತಿಯಿಂದ ತಿಳಿದ ರಾಯರಿಗೆ ಮಗನೂ ತಮ್ಮನ್ನು ಅಸಡ್ಡೆಯಿಂದ ನೋಡುತ್ತಿರುವನಲ್ಲ ಎಂದು ಬೇಸರವಾಯಿತು.

ಮಗ, ತಂದೆಯ ನೆರವು ಪಡೆಯದೆ, ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ, ಕೈತುಂಬಾ ಸಂಬಳ ಬರುವ ಕೆಲಸವೊಂದನ್ನು ಗಿಟ್ಟಿಸಿಕೊಂಡನು. ಮೊದಲ ಸಂಬಳವನ್ನು ತಂದು ತಾಯಿಯ ಕೈಗೆ ಕೊಟ್ಟಾಗ ಆಕೆ ತಾನೇ ದುಡಿದದ್ದೇನೋ ಎನ್ನುವಷ್ಟು ಸಂಭ್ರಮಿಸಿದಳು. ಪತಿ ವರ್ಷ ಪೂರ್ತಿ ದುಡಿದರೂ ಹೊಂದಿಸಲಾರದ ಹಣವನ್ನು ಮಗ ಒಂದೇ ತಿಂಗಳಲ್ಲಿ ದುಡಿದಿದ್ದನು. ರಾಯರು ಮನೆಗೆ ಬಂದೊಡನೆ ಹಣವನ್ನು ಅವರಿಗೆ ತೋರಿಸುತ್ತಾ, ಇನ್ನಾದರೂ ಉತ್ತಮ ಮನೆಯೊಂದನ್ನು ಬಾಡಿಗೆಗೆ ಕೊಂಡು ಅದರಲ್ಲಿ ಸುಖವಾಗಿರಬಹುದೆಂದು ಅರುಹಿದಳು. ತಾನು ಇದುವರೆಗೆ ಅದುಮಿಟ್ಟ ಆಸೆಯನ್ನು ಮಗನ ಸಂಪಾದನೆಯಲ್ಲಿ ಕಾಣತೊಡಗಿದಳು. ಪತಿ ಮನೆಯ ಖರ್ಚಿಗಿರಲೆಂದು ತಂದುಕೊಡುತ್ತಿದ್ದ ಹಣವನ್ನು ಮಗನ ಸಂಪಾದನೆಯೆದುರು ತುಲನೆ ಮಾಡಿ, "ಈ ಹಣ ಹೀಗೆಯೇ ಕೂಡಿಸಿಟ್ಟರೆ, ಮುಂದೆ ಮಗ ಕಟ್ಟಲಿರುವ ಮನೆಯ ಗೃಹ ಪ್ರವೇಶಕ್ಕೆ ಅಕ್ಕಿಯನ್ನು ಕೊಳ್ಳಲು ಉಪಯೋಗವಾಗುತ್ತದೆ. ನಾಲ್ಕು ಜನರಿಗೆ ಅನ್ನ ಹಾಕಿದ ಪುಣ್ಯವಾದರೂ ನಿಮಗಿರಲಿ" ಎಂದು ಮಗನೆದುರು ರಾಯರನ್ನು ಹಂಗಿಸುತ್ತಿದ್ದಳು.

ಮದುವೆಯ ವಯಸ್ಸಿಗೆ ಬಂದ ಮಗನಿಗೆ ಸಿರಿವಂತ ಕುಟುಂಬದಿಂದ ಕನ್ಯೆಯನ್ನು ತರುವ ಆಸೆ ರಾಯರ ಮಡದಿಗಿತ್ತು. ವಿದ್ಯಾವಂತನಾದ, ಕೈತುಂಬಾ ಸಂಬಳ ಬರುವ ಹುಡುಗನಿಗೆ ಸಿರಿವಂತ ಮಾವ ದೊರಕುವುದು ದುರ್ಲಭವಾಗಲಿಲ್ಲ. ಸಿರಿವಂತರೊಬ್ಬರು ತಮ್ಮ ಮಗಳೊಂದಿಗೆ ಮದುವೆ ಮಾಡಿಸಿಕೊಟ್ಟು, ಅಳಿಯನಿಗೆ ಬೆಂಗಳೂರಿನಲ್ಲೇ ಒಂದು ನಿವೇಶನವನ್ನು ಉಡುಗೊರೆಯಾಗಿ ಕೊಟ್ಟು ಹರಸಿದರು. ಮಗ, ಮಡದಿಯ ವರ್ತನೆಯಿಂದಾಗಿ ಮನೆಗೆ ಬಂದ ಸೊಸೆಗೂ ಮಾವನ ಮೇಲೆ "ಭೂಮಿಗೆ ಭಾರ, ಕೂಳಿಗೆ ದಂಡ" ಎಂಬ ತಾತ್ಸಾರ ಭಾವನೆ ಬೆಳೆಯಿತು. ಮದುವೆಯಾಗಿ ಎರಡು ವರ್ಷಗಳಲ್ಲಿ ಮಗುವನ್ನು ಹೆತ್ತು, ಮಗುವಿನ ವಸ್ತ್ರ ಪಾನಾದಿ ಕೆಲಸಗಳಿಗೆಲ್ಲಾ ಮಾವನನ್ನು ಉಪಯೋಗಿಸತೊಡಗಿದಳು. ಮಗನ ವೈಭೋಗ ಕಂಡು ಇನ್ನಷ್ಟು ಕುಗ್ಗಿದ ರಾಯರು ಮನೆ ಕೆಲಸಗಳನ್ನೆಲ್ಲಾ ಎದುರು ಮಾತನಾಡದೇ ಮಾಡುತ್ತಿದ್ದರು.

ಐದಾರು ವರ್ಷಗಳಿಂದ ದುಡಿದು, ಕೈಯಲ್ಲೊಂದಿಷ್ಟು ಕಾಸು ಮಾಡಿಕೊಂಡ ರಾಯರ ಮಗ, ಮಾವ ಕೊಟ್ಟ ನಿವೇಶನವೊಂದರಲ್ಲಿ ಭರ್ಜರಿಯಾಗಿ ಮನೆ ಕಟ್ಟಿಸುವ ಸಂಕಲ್ಪ ಹಾಕಿಕೊಂಡ. ಬ್ಯಾಂಕಿನಿಂದ ಇನ್ನಷ್ಟು ಹಣದ ನೆರವನ್ನು ಪಡೆದು, ತನಗೆ ಬೇಕಾದಂತಹ ಮೂರಂತಸ್ತಿನ ಮನೆಯ ನೀಲನಕ್ಷೆ ಮಿತ್ರರ ನೆರವಿನಿಂದ ಮಾಡಿಸಿ, ಕಂಟ್ರಾಕ್ಟರೊಬ್ಬರಿಗೆ ಗುತ್ತಿಗೆ ಕೊಟ್ಟ. ಸುಮಾರು ಒಂದು ವರ್ಷಗಳೊಳಗೆಲ್ಲಾ ತನ್ನ ಅಸ್ತಿತ್ವವನ್ನು ಒಂದು ಮೈಲಿ ದೂರದಿಂದಲೇ ಗುರುತಿಸುವಂತಹ ಭವ್ಯ ಬಂಗಲೆಯ ಮಾಲೀಕನಾಗಿ ಸ್ನೇಹಿತ ಬಂಧುಗಳಿಗೆ ಗೃಹ ಪ್ರವೇಶದ ಆಮಂತ್ರಣ ಪತ್ರವನ್ನು ಕಳುಹಿಸಿದ್ದ. ಬಂಧು ಮಿತ್ರರಿಗೆ ಕೊಡಬೇಕಾದ ಉಡುಗೊರೆ ಸಂಗ್ರಹಿಸಿ, ಪುರೋಹಿತರು, ಅಡುಗೆಯವರನ್ನು ನೇಮಿಸಿ ಸಕುಟುಂಬವಾಗಿ ಗೃಹ ಪ್ರವೇಶದ ಹಿಂದಿನ ಸಂಜೆ ಹೊಸ ಮನೆಯತ್ತ ಪಾದ ಬೆಳೆಸಿದನು. ಮಗನ ವ್ಯವಹಾರದಲ್ಲಿ ಇದುವರೆಗೂ ತಲೆ ಹಾಕದ ರಾಯರಿಗೆ, ಮಗ ಕಟ್ಟಿಸಿದ ಬಂಗಲೆಯನ್ನು ನೋಡಿ ಮನದುಂಬಿ ಬಂತು. ಕಾರಿನಲ್ಲಿ ತುಂಬಿ ತಂದಿದ್ದ ಪೂಜಾ ಸಾಮಗ್ರಿ, ಮನೆಯ ಆಭರಣ,ಉಡುಗೊರೆಗಳನ್ನು ರಾಯರು ಹೊತ್ತು ಹೊಸ ಮನೆಯ ಕಪಾಟಿನಲ್ಲಿ ಭದ್ರವಾಗಿರಿಸಿ, ಬೀಗದ ಕೈ ಹಿಡಿದು ಹೊರ ಬಂದರು. ಬಂದಿದ್ದ ನಂಟರೆದುರಿಗೇ ಮಗನ ಆಣತಿಯಂತೆ ಬೀಗದ ಕೈಯನ್ನು ಸೊಸೆಗೆ ಹಸ್ತಾಂತರಿಸಿ, ತಾವು ಬಂಧು ಮಿತ್ರರನ್ನು ಎದುರುಗೊಳ್ಳಲು ನಿಂತರು. ಪುರೋಹಿತರು ಬಂದು ಗಣಹೋಮ, ಇನ್ನಿತರ ಪೂಜಾ ವಿಧಿಗಳನ್ನು ನೆರವೇರಿಸಿ ವಾಸ್ತು ಹೋಮಕ್ಕೆ ಅಣಿಯಾದರು. ಮಗ ಸೊಸೆಯೊಡನೆ, ತಾನೂ ತನ್ನ ಮಡದಿಯೂ ವಾಸ್ತು ಹೋಮಕ್ಕೆ ಕುಳಿತು ಕೊಳ್ಳಬೇಕೆಂಬ ಅವರ ಹಂಬಲ ಮಡದಿಯ "ಮನೆ ಕಟ್ಟಿಸಿದವರಿಗೆ ಮಾತ್ರ ಅಲ್ಲಿ ಕುಳಿತುಕೊಳ್ಳುವ ಯೋಗ್ಯತೆ" ಎಂಬ ಚುಚ್ಚು ಮಾತಿನಿಂದ ಕೊನರಿತು. ಅವಮಾನಿತರಂತೆ ಕೋಣೆಯ ಮೂಲೆಯಲ್ಲಿ ಸ್ಥಳವನ್ನಾಯ್ದುಕೊಂಡು ಹೋಮಕ್ಕೆ ಹಾಕಿದ ಸೌದೆ, ಸಮಿತ್ತು, ತುಪ್ಪಗಳಿಂದ ಹೊಮ್ಮುತ್ತಿರುವ ಧೂಮವನ್ನು ನೋಡುತ್ತಾ ಕುಳಿತಿದ್ದರು. ಹೋಮ ಕುಂಡ ನಿಧಾನಕ್ಕೆ ಕಾವೇರಿಸಿಕೊಳ್ಳುತ್ತಾ, ಧೂಮ ಬಿಡುತ್ತ, ನೆರೆತವರ ಕಂಗಳನ್ನು ಕೆಂಪಾಗಿಸಿ, ಕೋಣೆಯನ್ನೆಲ್ಲಾ ಆವರಿಸುತ್ತಿತ್ತು. ಉಸಿರು ಗಟ್ಟಿ, ಜೀವ ಹಿಂಡಿದಂತಾಗಿ ಕ್ಷೀಣ ಸ್ವರದಲ್ಲಿ ವಿಕಾರವಾಗಿ ಅರಚಿಕೊಂಡು ರಾಯರು ಕುಸಿದರು. ನೆರೆತ ಜನ ದೇಹದ ಬಳಿ ಸಾರಿ ನೋಡಿದಾಗ ರಾಯರ ಉಸಿರು ನಿಂತಿತ್ತು ಮತ್ತು ಹೋಮದ ಧೂಮ ಅವರ ಸಾವಿಗೆ ನೆಪ ಮಾತ್ರವಾಗಿತ್ತು.