ಗೆದ್ದವರ ಘನತೆ ಸೋತವರ ಅಪ್ಪುಗೆಯಲ್ಲಿ....

ಗೆದ್ದವರ ಘನತೆ ಸೋತವರ ಅಪ್ಪುಗೆಯಲ್ಲಿ....

ಮಾನವಿಯ ಮೌಲ್ಯಗಳು ಎಂಬುದು ಮತ್ತು ನೈತಿಕತೆಯ ನಿಜವಾದ ಅರ್ಥ ಇದೇ ಆಗಿದೆ.

ಪರಿವರ್ತನೆಯ ದಾರಿಯಲ್ಲಿ ಒಂದು ಘಟನೆ.....

ಮೊನ್ನೆ 30/12/2020 ಇಡೀ ರಾಜ್ಯದಲ್ಲಿ ಗ್ರಾಮ ಪಂಚಾಯತಿ  ಚುನಾವಣೆಯ ಎಣಿಕೆ ನಡೆದು ಫಲಿತಾಂಶ ಪ್ರಕಟವಾಯಿತು. ಅಂದು ನಾನು ಸಿಂದಗಿ ತಾಲ್ಲೂಕಿನಲ್ಲಿದ್ದೆ. ಅನಿರೀಕ್ಷಿತವಾಗಿ ಸುಮಾರು 4 ಗಂಟೆಯ ಸಮಯದಲ್ಲಿ ಎಣಿಕೆ ಕೇಂದ್ರದ ಎದುರು ಹಾದು ಹೋಗಬೇಕಾಯಿತು. ಅಲ್ಲಿನ ಜನರ ಗುಂಪನ್ನು ಫೇಸ್ ಬುಕ್ ಲೈವ್ ಮಾಡಿದೆ. ಆಗ ಮಾತನಾಡುತ್ತಾ, ಗೆದ್ದವರ ಅತಿರೇಕದ ಸಂಭ್ರಮ ಸೋತವರಲ್ಲಿ ಅಸೂಯೆ ಮತ್ತು ದ್ವೇಷ ಸೃಷ್ಟಿಸುತ್ತದೆ. ‌ಸ್ಪರ್ಧೆ ನಡೆಯುವುದೇ ಬಹುತೇಕ ಅದೇ ಊರಿನ ಗೆಳೆಯರು, ಸಂಬಂಧಿಗಳು, ಪರಿಚಿತರ ನಡುವೆ. ಅಲ್ಲದೆ  ಚುನಾವಣೆಯ ಗೆಲುವೇ ಒಂದು ಸಾಧನೆಯಲ್ಲ ಅದು ಸಮಾಜ ಸೇವೆಗೆ ದೊರಕಿದ ಒಂದು ಮಾರ್ಗ. ಗೆದ್ದವರು ಹೆಚ್ಚು ಸಂಭ್ರಮಿಸದೆ ಸೋತವರನ್ನು ಪ್ರೀತಿಯಿಂದ ಆಲಂಗಿಸಿ ಅವರನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಯಾವುದೇ ಕ್ರೀಡೆಯಲ್ಲಿ ಸಹ ಗೆದ್ದವರು ಸೋತವರಿಗೆ ಹಸ್ತಲಾಘವ ಮಾಡುವುದು ಮತ್ತು ಕೆಲವೊಮ್ಮೆ ಆಲಂಗಿಸಿ ಕೊಳ್ಳುವುದು ಇರುತ್ತದೆ. ಆ ರೀತಿಯ ಸ್ಪರ್ಧಾ ಮನೋಭಾವ ಇರಬೇಕು ಎಂದು ಹೇಳಿದೆ.

ಅದನ್ನು ಅಂದೇ ಲೈವ್ ನಲ್ಲಿ ನೋಡಿದ ಮತ್ತು ಅದೇ ಸಂದರ್ಭದಲ್ಲಿ ಜೇವರ್ಗಿ ಬಳಿಯ ಒಂದು ಗ್ರಾಮದಲ್ಲಿ ತನ್ನ ತಂದೆ ವಿಜಯ ಸಾಧಿಸಿದ ನಂತರ ಶರಣು ಎಂಬ ನನ್ನ ಜೊತೆ ಪಾದಯಾತ್ರೆಯಲ್ಲಿ ಆಗಾಗ ಕಾಲ್ನಡಿಗೆಯಲ್ಲಿ ಜೊತೆಯಾಗುವ ಯುವಕ ಸೋತವರ ಮನೆಗೆ ತನ್ನ ತಂದೆಯನ್ನು ಕರೆದುಕೊಂಡು ಹೋಗಿ ಅವರುಗಳಿಗೆ ಶಾಲು ಮತ್ತು ಹಾರ ಹಾಕಿ ಸನ್ಮಾನಿಸಿ ಸೌಹಾರ್ದತೆ ತೋರಿದ ವಿಷಯವನ್ನು ಮತ್ತು ಆ ನನ್ನ ಫೇಸ್ ಬುಕ್ ಲೈವ್ ದೃಶ್ಯ ನೀಡಿದ ಸ್ಪೂರ್ತಿಯನ್ನು ಖುದ್ದು ನನ್ನ ಬಳಿ ದೂರವಾಣಿಯಲ್ಲಿ ಹೇಳಿದರು.

ಮನುಷ್ಯತ್ವದ ಘನತೆಯನ್ನು ಯಾವುದೇ ವಿಷಯ ಸಂದರ್ಭ ಆಗಿರಲಿ ಅದನ್ನು ಎತ್ತಿಹಿಡಿಯುವ ಜವಾಬ್ದಾರಿ ನಮ್ಮೆಲ್ಲರದು ಆಗಿರುತ್ತದೆ. ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಬರಾಕ್ ಒಬಾಮ ತನ್ನ ಪ್ರತಿಸ್ಪರ್ಧಿ ಆಗಿದ್ದ ಹಿಲರಿ ಕ್ಲಿಂಟನ್ ಅವರು ಸೋತ ನಂತರ ಅವರನ್ನೇ ವಿದೇಶಾಂಗ ಮಂತ್ರಿ ಮಾಡಿದರು. ಸಂಸ್ಕೃತಿ, ಧರ್ಮ, ಒಳ್ಳೆಯತನ ಎಲ್ಲವೂ ಕೇವಲ ಬೋಧನೆಯಾಗಬಾರದು ಅದು ನಮ್ಮ ನಡವಳಿಕೆಯಾಗಬೇಕು. 

ಅರೆ, ಸೋಲು ಗೆಲುವು ಶಾಶ್ವತವಲ್ಲ ಅದು ಸದಾ ಬದಲಾಗುವ ಸಾಧ್ಯತೆ ಇರುತ್ತದೆ. ಇಂದು ನಾವು ಗೆದ್ದಿರಬಹುದು ನಾಳೆ ಸೋಲಬಹುದು ಮತ್ತು ಆ ಸೋಲು ಬೇರೆ ರೂಪದಲ್ಲಿ ಸಹ ಬರಬಹುದು ಎಂಬ ಸಾಮಾನ್ಯ ಜ್ಞಾನ ಸಹ ಇಲ್ಲವಾದರೆ ಹೇಗೆ? ಆದ್ದರಿಂದ ಪ್ರಬುದ್ಧ ಮನಸ್ಸುಗಳ ಗೆಳೆಯರೆ, ಒಂದು ವೇಳೆ ನಿಮ್ಮ ಸುತ್ತ ಮುತ್ತ ಮತ್ತು ನಿಮ್ಮ ನಿಯಂತ್ರಣದಲ್ಲಿ ಈ ರೀತಿಯ ಸನ್ನಿವೇಶ ಇದ್ದರೆ ದಯವಿಟ್ಟು ಮಾನವೀಯತೆಯ ಘನತೆಯನ್ನು ಕಾಪಾಡಿ ಎಂದು ಮನವಿ ಮಾಡಿಕೊಳ್ಳುತ್ತಾ..........

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.......

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ