ಗೆಲುವಿಗೆ ನೂರೆಂಟು ಮಾತಾಪಿತ, ಸೋಲು ಅನಾಥ !

ಗೆಲುವಿಗೆ ನೂರೆಂಟು ಮಾತಾಪಿತ, ಸೋಲು ಅನಾಥ !

ಈ ಮಾನವ ಬದುಕಿನಲ್ಲಿ ಪ್ರತಿಯೊಂದು ಸೋಲು ಗೆಲುವುಗಳು ನಿಭಾಯಿಸುವ ಆಳವಾದ ಪಾತ್ರಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಪರಿಮಾಣ ಚಿಕ್ಕದಿರಲಿ ದೊಡ್ಡದಿರಲಿ, ಬೀರುವ ಪರಿಣಾಮದ ಗಾತ್ರವನ್ನು ಪರಿಗಣಿಸಿದರೆ ಇದನ್ನು ಹಾಗೆ ಬಂದು ಹೀಗೆ ಹೋಗುವ ಮಾಮೂಲಿ ಗಿರಾಕಿ ಎಂದು ನಿರ್ಲಕ್ಷಿಸುವಂತಿಲ್ಲ. ಅದರಲ್ಲೂ ಈ ಸೋಲು ಗೆಲುವಿನ ವಿಸ್ತಾರ ವ್ಯಾಪ್ತಿ ವೈಯಕ್ತಿಕ ಮಟ್ಟವನ್ನು ಮೀರಿದ ಜಾಗತಿಕ ಸ್ತರದ್ದಾಗಿಬಿಟ್ಟರಂತೂ ಮಾತಾಡುವ ಹಾಗೆ ಇಲ್ಲ - ಅದರ ಫಲಿತ ಹಿಡಿಸುವ ಸಮೂಹ ಸನ್ನಿಯಿಂದ ಯಾರೂ ಪಾರಾಗಲೇ ಸಾಧ್ಯವಿರದಂತಹ ವಾತಾವರಣ ಸೃಷ್ಟಿಯಾಗಿಸಿಬಿಡುತ್ತದೆ. ಗೆಲುವಾದರೆ ಹರ್ಷೋಲ್ಲಾಸ-ಹಮ್ಮುಗಳ ವಿಜಯೋತ್ಸಾಹದ ಸನ್ನಿಯಾದರೆ, ಸೋಲಾದರೆ ವಿಷಾದ-ಕ್ಲೇಷ-ಯಾತನೆ-ದೂಷಣೆ-ದುಃಖಗಳ ಶವಭಾರದ ಸನ್ನಿ. ಎರಡು ತರದ ಸನ್ನಿಯೂ ಒಪ್ಪಿತ ಸೀಮಾರೇಖಾ ಗಡಿಯ ಮಿತಿಯೊಳಗಿದ್ದರೆ ಸಹನೀಯ ; ಮಿತಿ ಮೀರಿದರೆ ಧ್ವಂಸ-ರಾದ್ದಾಂತಕೆ ಕಾಲೆಳೆಸುವ ಮಹನೀಯ.

ಸೋಲು ಗೆಲುವೆನ್ನುವುದು ಒಂದೆ ನಾಣ್ಯದ ಎರಡು ಬದಿಗಳೆ ಆದರೂ, ಅದೆ ನಾಣ್ಯದ ಹಾಗೆ ವಿರುದ್ಧ ಮುಖ ಹಾಕಿಕೊಂಡು ಪರಸ್ಪರ ಮುಖ ನೋಡದೆ, ಮೂತಿ ತಿರುಗಿಸಿಕೊಂಡು ನಿಂತ ಎದುರಾಳಿಗಳು. ಶತಕ್ಕೆ ಪ್ರತಿಶತ ವಿರುದ್ಧಾರ್ಥಕ ಭಾವೋನ್ಮಾದಕತೆಗೆ ಕಾರಣವಾಗುವ ಈ ಎರಡು ಪ್ರತಿದ್ವಂದ್ವಿಗಳು ತಮ್ಮ ತಮ್ಮ ಆವರಣದ ಮಿತಿಯೊಳಗೆ ಹೆಚ್ಚು ಕಡಿಮೆ ಒಂದೇ ರೀತಿಯ ಸಮಾನ ಅಂತಃಕರಣದಿಂದ ಪ್ರೇರಿತವಾದ ಅಂಶಗಳನ್ನೊಳಗೊಂಡಿರುವುದು ಒಂದು ರೀತಿಯ ಸೋಜಿಗ. ಆದರೆ ಈ ಸೋಜಿಗದ ಅಂಶಗಳು ಸಹಜವಾಗಿಯೆ ತಂತಮ್ಮ ಮೂಲ ಸಿದ್ದಾಂತದ ಬದ್ದತೆಗೆ ಪೂರಕವಾಗಿರುವ ಕಾರಣ ತಮ್ಮ ನಡುವಿನ ಪರ್ಯಾಯವಾಗುತ್ತವೆಯೆ ಹೊರತು ಪೂರಕವಾಗುವುದಿಲ್ಲ. ಸರಳವಾಗಿ ಉದಾಹರಣೆಗೆ ಹೇಳುವುದಾದರೆ ಗೆಲುವಿನ ಅಂತಃಕರಣ ಹರ್ಷವನ್ನುಕ್ಕಿಸಿದರೆ, ಸೋಲಿನ ಅಂತಃಕರಣ ದುಃಖವನ್ನು ಪ್ರಚೋದಿಸುವ ಹಾಗೆ. ಹರ್ಷ-ದುಃಖಗಳೆರಡನ್ನು ಅತಿರೇಖದಾಚೆಗೆಳೆದಾಗ, ಎರಡರ ಶಕ್ತಿಯ ಉನ್ಮಾದವೂ ದಮನಕಾರಕವೆ; ಹಾಗೆಯೆ ಎರಡರ ಸಮೂಹ ಪ್ರಭಾವ ಸಹ. ಗೆಲುವು ಒಂದು ಗುಂಪು, ತಂಡ, ರಾಜ್ಯ, ರಾಷ್ಟ್ರದ ಮನಸ್ಥೈರ್ಯವನ್ನೆ ಮೇಲೆತ್ತಿ, ಹೆಮ್ಮೆಯಿಂದ ತಲೆಯೆತ್ತಿ ನಿಲ್ಲಿಸುವ ಎದೆಗಾರಿಕೆಗೆ ನಾಂದಿಯಾದರೆ, ಅದೆ ಸೋಲು ಇಡಿ ಸಮಷ್ಟಿಯ ಸಮಗ್ರತೆಗೆ ಕಿಚ್ಚನಿಟ್ಟಂತೆ ಕುಗ್ಗಿಸಿ, ಕೃಶವಾಗಿಸಿ ಆತ್ಮಸ್ಥೈರ್ಯವನ್ನೆಲ್ಲ ಕೆದಕಿ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿಬಿಡಬಹುದು. ವೈಯಕ್ತಿಕ ಸ್ತರದಿಂದಾಚೆಗೂ ಪ್ರಭಾವ ಬೀರುವ ಇವೆರಡರ ಸಮಾನ ಸ್ವಭಾವದಿಂದಲೊ ಏನೊ - ಎರಡೂ ತಾವುಂಟು ಮಾಡುವ ಪರಿಣಾಮದಲ್ಲಿ ನಿಸ್ಸೀಮ ಪಂಡಿತರೆ - ತಮ್ಮ ತಮ್ಮ ಪ್ರಭಾ ವಲಯಗಳಲ್ಲಿ. 

ಆದರೆ ಸಾರ್ವಜನಿಕ ದೃಷ್ಟಿಯಲ್ಲಿನ ಸಾರ್ವತ್ರಿಕ ಸತ್ಯವೆಂದರೆ ಗೆಲುವಿಗೆ ನೂರೆಂಟು ಮಾತಪಿತ , ಸೋಲು ಮಾತ್ರ ಸದಾ ಅನಾಥ. ಈ ಕಾರಣದಿಂದಲೆ ಏನೊ ಎಲ್ಲರ ಗಮನ ಗೆಲುವಿನ ಮೇಲೆ. ಆ ಆಸೆಯ ಪರಾಕಾಷ್ಟೆ, ಒತ್ತಾಸೆಗಳು ಅದೆಷ್ಟು ತೀವ್ರವೆಂದರೆ - ಆ ತೀವ್ರತೆಯೆ ಭರಿಸಲಾಗದ ಒತ್ತಡವಾಗಿ ಮಾರ್ಪಟ್ಟು ಸುಲಭದಲ್ಲಿ ಗೆಲ್ಲಬಲ್ಲ ಮನಸತ್ವಕ್ಕೂ ಅನುಮಾನ, ಸಂಶಯಗಳ ಧೂಳೆಬ್ಬಿಸಿ ಬಿಡುವಷ್ಟು. ಅದನ್ನು ನಿಭಾಯಿಸಿ ಬಂದವ ಗೆಲುವನಪ್ಪಿದರೆ, ನಿಭಾಯಿಸಲಾಗದವ ಸೋಲಿನ ಸುಳಿಯಲ್ಲಿ. ಅದಕ್ಕೆ ಸೋಲು ಗೆಲುವಿನ ವ್ಯಾಪಾರ ಬಂದಾಗ ತಂಡದ ಮನಸತ್ವ ಬಲು ಮುಖ್ಯ ಅಂಶ. ಹಾಗೆಯೆ ಸೋಲಿನ ಭೀತಿಯನ್ನು ಸಮರ್ಥವಾಗಿ ನಿರ್ವಹಿಸಲು ಬಿಸಿ ರಕ್ತದ ಹುರುಪಿನಷ್ಟೆ , ಅನುಭವದ ಸಹಯೋಗವು ಅಷ್ಟೆ ಮುಖ್ಯ. ಈ ಹಳೆಬೇರು ಹೊಸಚಿಗುರಿನ ಸಾಂಗತ್ಯಕ್ಕೆ ಸರಿ ನೀರೆರೆದು ಪೋಷಿಸಿ ಅದಕ್ಕೆ ಸಮಯ ಪ್ರಜ್ಞೆ, ಸಹಕಾರಿ ಮನೋಭಾವ ಮತ್ತಿತರ ಮೃದು ಗುಣಗಳ ಲೇಪನವಾದರೆ ಗೆಲುವು ಅಷ್ಟರಮಟ್ಟಿಗೆ ಹತ್ತಿರ. 

ಹೀಗೆ ಎಲ್ಲಾ ಸರಿಯಾಗಿದ್ದೂ, ಗೆದ್ದೆ ಗೆಲ್ಲುವೆವೆಂದು ಹೇಳಲು ಬಾರದ ಒಂದು ಅಂಶವೂ ಸೇರಿಕೊಂಡು ಪ್ರಭಾವ ಬೀರುತ್ತದೆ - 'ಅದೃಷ್ಟ'ವೆಂದು ಅದರ ಹೆಸರು. ಎಲ್ಲಾ ನೆಟ್ಟಗಿದ್ದೂ ಇದೊಂದು ಕೈ ಕೊಟ್ಟರೆ ಎಲ್ಲವೂ ನೀರಿಗೆ ಮಾಡಿದ ಹೋಮದಂತಾಗಬಹುದು. ಆದರೆ ಇಲ್ಲಿ ಕನಿಷ್ಠ ಸಮಧಾನವಾದರೂ ಇರುತ್ತದೆ - ಸೋಲಿಗೆ ದೌರ್ಬಲ್ಯ, ಶಕ್ತಿ ಹೀನತೆ ಕಾರಣವಾಗಲಿಲ್ಲ ಎಂದು. ಅದೇನೆ ಇದ್ದರೂ ಇತಿಹಾಸದ ಕಣ್ಣಲ್ಲಿ ಸೋಲು ಗೆಲುವುಗಳು ತಮಗನಿಸಿದ ರೀತಿಯಲ್ಲಿ ದಾಖಲಾಗುವುದು ಖಚಿತ. ಅದರೆಲ್ಲಾ ಭಾವೋನ್ಮೇಷಗಳಿಗಿರುವ ಏಕೈಕ ಮದ್ದೆಂದರೆ ಕಾಲ. ಕೆಲವು ನೆನಪುಗಳು ಕಾಲಾತೀತವಾಗಿ ಸಿಹಿಯಾಗಿಯೊ, ಕಹಿಯಾಗಿಯೊ ಕಾಡುವುದಾದರೂ, ಕಹಿಯ ಸ್ಮರಣ ಶಕ್ತಿಗೆ ಬಲ ಹೆಚ್ಚು. ಅದಕ್ಕೆಂದೆ ಅಂತಹದ್ದನೆಲ್ಲ ನಿಭಾಯಿಸಲೆ ನಮ್ಮ ಹಿರಿಯರು ಕರ್ಮ ಸಿದ್ದಾಂತದ ದಾರಿ ತೋರಿಸಿರಬೇಕು - 'ನಿನ್ನ ಕರ್ಮ ನೀ ಮಾಡು, ಫಲಾಫಲ ನನಗೆ ಬಿಡು', 'ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸು' - ಎಂಬಿತ್ಯಾದಿ ನೀತಿ ಸೂಕ್ತಿಗಳಲ್ಲಿ. 

ಆ ಸೋಲು ಗೆಲುವಿನ ದೊಂಬರಾಟದ ಮನಸತ್ವವನ್ನು ಬಿಂಬಿಸುವ ಒಂದು ಸರಳ ಕವನ ಈ ಕೆಳಗೆ :-)

ಗೆಲುವಿಗೆ ನೂರೆಂಟು ಮಾತಾಪಿತ, ಸೋಲು ಮಾತ್ರ ಅನಾಥ !
____________________________________

ಗೆಲಿಸುವ ತನಕ ಯುವರಾಜ
ಕೆಳಗುರುಳಿಸಿದರೆ ಯಮರಾಜ
ಹಳೆಯ ಗೆಲುವೆಲ್ಲ ಅಸಂಬದ್ಧ
ಹೊಸ ಸೋಲು ಮಾಡಿಸಿ ಶ್ರಾದ್ಧ ||

ಬರಿ ಸೋಲು ಗೆಲುವಿನಾಟವಲ್ಲ
ಇತಿಹಾಸ ಸುಮ್ಮ ಬಿಡುವುದಿಲ್ಲ
ತುಂಡಿದ್ದರು ಸಾರ್ವಜನಿಕ ನೆನಪು 
ಕೊನೆತನಕ ಬಿಡದೆ ಕಾಡುವ ತಪ್ಪು ||

ಅಂಕಿ ಅಂಶ ಲೆಕ್ಕ ಯಾರೂ ಕೇಳರು
ಪರಿಪರಿ ಸರಾಸರಿ ಪರಿಗಣಿಸುವರಾರು
ಮೊದಲಾಡುತ ಈಗಿನ ಲೆಕ್ಕ ಚೊಕ್ಕ
ಕೇಳುತ, ಕಣ್ಮುಚ್ಚಿ ಹಾಲ್ಕುಡಿದಾ ಬೆಕ್ಕ? ||

ಗೆಲುವಿಗೆಲ್ಲ ಮಾತಾಪಿತರು ನೂರು
ಅನಾಥ ಸೋಲಿಗ್ಯಾರೂ ಹೆಗಲಾಗರು
ಸಾಂತ್ವನ ನೀಡುವವರಾರು ಸೋಲಿಗೆ
ಸ್ವಯಂ ಹುಡುಕಿರುವಾಗ ದಾರಿ ರೋಷಕೆ ||

ಹೊಸ ನೀರು ಬಂದು ಹಳತೆಲ್ಲ ಕೆಸರು
ರಾಡಿಯೆಬ್ಬಿಸೊ ಮುನ್ನ ಸರಿ ದಡ ಸೇರು
ಹೊಸ ಚಿಗುರಿಗೆ ಹಳೆ ಬೇರಾಗಿ ಕಲೆತಾಗ
ಸೋಲನು ಗೆಲುವಾಗಿಸೊ ಶ್ರದ್ದೆಗೆ ಜಾಗ ||

ಧನ್ಯವಾದಗಳೊಂದಿಗೆ, 
ನಾಗೇಶ ಮೈಸೂರು