ಗೆಲುವಿನ ದುಃಖ ಮತ್ತು ಸೋಲಿನ ಸುಖ

ಗೆಲುವಿನ ದುಃಖ ಮತ್ತು ಸೋಲಿನ ಸುಖ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಉದಯ ಕುಮಾರ ಇರ್ವತ್ತೂರು
ಪ್ರಕಾಶಕರು
ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು
ಪುಸ್ತಕದ ಬೆಲೆ
ರೂ. 250/-

ತಮ್ಮ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸುವವರು ತೀರಾ ವಿರಳ. ಇದರಿಂದಾಗಿ, ಸಾವಿರಾರು ಸಮರ್ಥ ಅಧಿಕಾರಿಗಳ ಹಾಗೂ ಉನ್ನತ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದವರ ಜೀವನಾನುಭವದ ಪಾಠಗಳು ಮುಂದಿನ ತಲೆಮಾರಿನವರಿಗೆ ಸಿಗದಂತಾಗಿದೆ. ಇದಕ್ಕೆ ಅಪವಾದವೆಂಬಂತೆ, ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರಿನ್ಸಿಪಾಲರಾಗಿ, ಹಲವಾರು ಸವಾಲುಗಳಿದ್ದರೂ ಅವನ್ನೆಲ್ಲ ಎದುರಿಸಿ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ತಮ್ಮ ಅಮೂಲ್ಯ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಇಂತಹ ಬರಹಗಳು ಯಾಕೆ ಬೇಕು? ಎಂಬುದರ ಬಗ್ಗೆ ಮುನ್ನುಡಿಯಲ್ಲಿ ಪುರುಷೋತ್ತಮ ಬಿಳಿಮಲೆ ಅವರು ಬರೆದಿರುವ ಮಾತುಗಳು ಗಮನಾರ್ಹ: “....ಈ ಬಗೆಯ ಬರಹಗಳು ನಮಗೀಗ ಬಹಳ ಅಗತ್ಯ. ಏಕೆಂದರೆ ಇವು ಪರೋಕ್ಷವಾಗಿ ನಮ್ಮ ಶಿಕ್ಷಣ ಕ್ಷೇತ್ರದ ಮೂಲಭೂತ ಅಗತ್ಯಗಳು, ಸೌಲಭ್ಯಗಳ ಪೂರೈಕೆ, ಶೈಕ್ಷಣಿಕ ಬೆಳವಣಿಗೆ, ಜನರ ಜೀವನ ಮಟ್ಟದ ಮೇಲೆ ಅವುಗಳ ಪರಿಣಾಮ ಇತ್ಯಾದಿಗಳ ಬಗ್ಗೆ ನೇರವಾಗಿ ಮತ್ತು ಪರೋಕ್ಷವಾಗಿ ಬೆಳಕು ಚೆಲ್ಲುತ್ತವೆ. ಪ್ರಜಾಸತ್ತಾತ್ಮಕ ಸರಕಾರಗಳು ವಿದ್ಯಾಕ್ಷೇತ್ರದಲ್ಲಿನ ಮಕ್ಕಳ ಕಲಿಕೆ ಮತ್ತು ಆರೋಗ್ಯದ ಉನ್ನತಿಗಾಗಿ ಯಾವ ಸೇವೆಗಳನ್ನು ಪೂರೈಸುತ್ತಿವೆ? ಒಂದು ಸಂಸ್ಥೆಯ ಅಭಿವೃದ್ಧಿಯಲ್ಲಿ ನಾಗರಿಕ ಸಮಾಜದ ಎಷ್ಟು ಜನರು ನಿಜವಾದ ಕಳಕಳಿಯಿಂದ ಭಾಗವಹಿಸುತ್ತಾರೆ? ಸರಕಾರದ ನ್ಯಾಯಪರತೆ ಮತ್ತು ಪೂರೈಕೆಗಳು ಎಷ್ಟು ಸ್ಥಿರವಾಗಿರುತ್ತವೆ? ಆಡಳಿತದ ಆದ್ಯತೆಗಳೇನು? ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ದುಡಿಯುತ್ತಿರುವವರಿಗೆ ಯಾವ ಬಗೆಯ ಮನ್ನಣೆ ಮತ್ತು ಗೌರವಗಳು ದೊರೆಯುತ್ತಿವೆ? ಮೊದಲಾದ ಹತ್ತು ಹಲವು ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾದರೆ ನಮಗೆ “ಗೆಲುವಿನ ದುಃಖ ಮತ್ತು ಸೋಲಿನ ಸುಖ”ಇಂತಹ ಪುಸ್ತಕಗಳು ಬೇಕು.”

“ಆಕೃತಿ ಆಶಯ ಪಬ್ಲಿಕೇಷನ್ಸಿ”ನ ಕಲ್ಲೂರು ನಾಗೇಶ್ ಅವರು ಪುಸ್ತಕದ ಬಗ್ಗೆ ಬಗೆದಿರುವ ಮಾತುಗಳೂ ಮುಖ್ಯವಾಗುತ್ತವೆ: “…. ಸುಮ್ಮನೆ ಕೂತವನು ಎಡವುದುಂಟೇ? ಓಡಾಡಿದವನಿಗಾದರೋ ಹೇಳಿಕೊಳ್ಳಲು ಎಡವಿ ಬಿದ್ದೆದ್ದ ಸುಖದುಃಖಗಳುಂಟು. ಸ್ವಂತಕ್ಕಾಗಿಯಾಗಲೀ, ಸಮಾಜಕ್ಕಾಗಿಯಾಗಲೀ ತಮ್ಮ ವೃತ್ತಿ-ಪ್ರವೃತ್ತಿಗಳಲ್ಲಿ ಅಪಾರ ದುಡಿಮೆ ಮಾಡಿದವರಿಗೆ ಹೇಳಿಕೊಳ್ಳಲು ತುಂಬಾ ವಿಷಯಗಳಿರುತ್ತವೆ. ಕೆಲವರಿಗೆ ಹೇಳಿಕೊಳ್ಳಲು ಆಗದು. ಇನ್ನು ಕೆಲವರಿಗೆ ಹೇಳಿಕೊಳ್ಳಬೇಕೆನಿಸುತ್ತದೆ.. ಡಾ.ಉದಯ ಕುಮಾರ್ ಇರ್ವತ್ತೂರು ಅವರು ಹೇಳಿಕೊಳ್ಳುವುದನ್ನು ಇಲ್ಲಿ ಅಕ್ಷರರೂಪದಲ್ಲಿ ನಿವೇದಿಸಿಕೊಂಡಿದ್ದಾರೆ. ಇದು ನಮಗೆ ಕಥನವಾಗಿಯೂ ಅನುಭವ ನೀಡಬಹುದು, ಮಾದರಿಯಾಗಿಯೂ ಮಾರ್ಗದರ್ಶಕವಾಗಬಹುದು….”

ಲೇಖಕರಾದ ಡಾ. ಉದಯ ಕುಮಾರ್ ಇರ್ವತ್ತೂರು ಅವರು ಪುಸ್ತಕದ ಉದ್ದೇಶ ಮತ್ತು ಆಶಯದ ಬಗ್ಗೆ ಬರೆದಿರುವ ಮಾತುಗಳನ್ನು ಗಮನಿಸಲೇ ಬೇಕಾಗುತ್ತದೆ: “ನಮಗಿರುವ ತಿಳಿವಿನ ಮಿತಿಯಿಂದಾಗಿ ಇಡೀ ಪರಿಸ್ಥಿತಿಯ ಒಂದು ಅಂಶವನ್ನು ಮಾತ್ರ ಗ್ರಹಿಸುವ ನಾವು ವಾಸ್ತವದಿಂದ ಬಹಳ ದೂರ ಉಳಿದು ನೆರಳಿನೊಂದಿಗೆ ಗುದ್ದಾಡುತ್ತಾ ಎಲ್ಲೋ ಕಳೆದು ಹೋಗುತ್ತೇವೆ. ಇಂತಹ ಬಹುತೇಕ ಸಂದರ್ಭಗಳಲ್ಲಿ ವೈಯುಕ್ತಿಕವಾಗಿ ನಮಗಾಗುವ ಲಾಭ ನಷ್ಟಗಳ ಕುರಿತ ಆಲೋಚನೆಗಳ ಆಚೆಗೆ, ನಮ್ಮ ಕಣ್ಣೆದುರಿಗೆ ಇರುವ ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ಒಂದು ವ್ಯವಸ್ಥೆ ಅಥವಾ ವಿನ್ಯಾಸವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಇಲ್ಲ. ನಮ್ಮ ಅನುಭವಕ್ಕೆ ಬರುವ ಲಾಭ, ನಷ್ಟಗಳನ್ನು ಸೃಷ್ಟಿಸುವ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಿನ್ಯಾಸದ ಕುರಿತು ನಮಗೆ ಸರಿಯಾದ ತಿಳುವಳಿಕೆ ಇದ್ದಾಗ ಸಮಸ್ಯೆಯ ಮೂಲ ಎಲ್ಲಿದೆ ಮತ್ತು ಅದಕ್ಕೊಂದು ಪರಿಹಾರವನ್ನು ಎಲ್ಲಿ ಹೇಗೆ ಹುಡುಕಬೇಕೆನ್ನುವುದು ಅರ್ಥವಾಗಬಹುದಾಗಿದೆ. ಇದೊಂದು ಬಹಳ ಸಂಕೀರ್ಣವಾದ ವಿಚಾರ.

… ನಮ್ಮಂತಹ ಕೆಲವರು ವ್ಯವಸ್ಥೆಯಲ್ಲಿರುವ ಗೊಂದಲಗಳ ಮಧ್ಯೆಯೇ ಸಮಾನ ಮನಸ್ಕರ ಸಹಕಾರ ಪಡೆದು, ಇದ್ದಬದ್ದ ಸವಲತ್ತುಗಳನ್ನು ದುಡಿಸಿಕೊಂಡು, ಜನರನ್ನು, ಸಂಸ್ಥೆಗಳನ್ನು ಮುನ್ನಡೆಸಲು ಸಣ್ಣ ಪ್ರಯತ್ನ ಮಾಡಿದ್ದೇವೆ. ಇಂತಹ ಪ್ರಯತ್ನಗಳ ಅನುಭವ ಬದುಕಿನ ದಾರಿ ಸವೆಸಲು, ಗೊಂದಲ ನಿವಾರಿಸಲು ಸಹಕಾರಿಯಾಗಿದೆ. ಕೆಲವೊಮ್ಮೆ ನಮ್ಮಲ್ಲಿರುವ ಅನುಭವ ಆಲೋಚನೆಗಳು ಮಿಕ್ಕುಳಿದವರಿಗೂ ತಲುಪಿದರೆ ಉಪಯುಕ್ತವಾಗಬಹುದೇನೋ ಅನಿಸುತ್ತದೆ. ನನ್ನ ಯೋಚನೆ, ಮಾತು ನಿಮ್ಮ ಮೌನವನ್ನು ಮುರಿದು ಕತೆಗಳಾಗಿ, ಪ್ರತಿ ಮಾತುಗಳಾಗಿ ಬದಲಾಯಿಸಿ ಸಂವಾದ, ಸಂಚಲನೆಗೆ ಮುನ್ನುಡಿಯಾಗಬಹುದು. ಅಧ್ಯಯನ, ಅನುಭವ ಮತ್ತು ನಮ್ಮ ಪರಂಪರೆಯ ಕುರಿತ ತಿಳುವಳಿಕೆಯಿಂದ ಇದು ನಾನು ಕಲಿತ ಪಾಠ ಕೂಡಾ. ಒಬ್ಬ ಸಾಮಾನ್ಯ ಪ್ರಜೆಯಾಗಿ, ಉಪನ್ಯಾಸಕನಾಗಿ, ಕಾಲೇಜು ಪ್ರಾಂಶುಪಾಲನಾಗಿ ನಾನು ಗಳಿಸಿದ ಅನುಭವದ ಬೀಜಗಳನ್ನು ಬದುಕಿನ ಬಯಲಲ್ಲಿ ಬಿತ್ತಿ ಬಿಡಬೇಕೆನ್ನುವ ಹುರುಪಿನಿಂದ, ಈ ಹೊತ್ತಗೆ ರೂಪುಗೊಂಡಿದೆ. ಅನುಭವದ ಕೆಲವು ಬೀಜಗಳಾದರೂ ಮೊಳೆತು ಮರವಾಗಬಹುದು, ಹಸಿರಿನ ಉಸಿರಾಗಬಹುದು ಎನ್ನುವ ಭವಿಷ್ಯದ ಭರವಸೆಯೇ “ಗೆಲುವಿನ ದುಃಖ ಮತ್ತು ಸೋಲಿನ ಸುಖ”.

ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯನ್ನು ಸ್ವೀಕರಿಸುವ ಸಮಯದಲ್ಲೇ “ನಮ್ಮ ಕಾಲೇಜಿನಲ್ಲಿರುವ ಕುಂದುಕೊರತೆಗಳನ್ನು ಸರಿಪಡಿಸಿ, ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಅಗತ್ಯ ತುಂಬಾ ಇತ್ತು” ಎಂಬುದನ್ನು ಡಾ. ಉದಯ ಕುಮಾರ್ ಮನಗಂಡಿದ್ದರು. ತನ್ನ ಐದು ವರುಷಗಳ ಪ್ರಿನ್ಸಿಪಾಲ್ ಅಧಿಕಾರಾವಧಿಯಲ್ಲಿ ಅವರು ಹಲವಾರು ಕುಂದುಕೊರತೆಗಳನ್ನು ಸರಿಪಡಿಸಲು ಮತ್ತು ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಶಕ್ತರಾದದ್ದು ದೊಡ್ಡ ಸಾಧನೆ. ಉದಾಹರಣೆಗೆ: ಕಾಲೇಜಿನ ಪ್ರವೇಶಾತಿಯಲ್ಲಿ ಪಾರದರ್ಶಕತೆ ತಂದದ್ದು, ಕಸ ವಿಲೇವಾರಿ ವ್ಯವಸ್ಥೆಯಿಂದ ಶುರು ಮಾಡಿ ಕ್ಯಾಂಪಸ್ಸಿನ ಸ್ವಚ್ಛತೆ ಸುಧಾರಿಸಿದ್ದು, ತರಗತಿಗಳು ಸರಿಯಾಗಿ ನಡೆಯುವ ಕುರಿತು ವಿಶೇಷ ಗಮನ ಹರಿಸಿದ್ದು, ಕ್ಯಾಂಪಸ್ಸಿನಲ್ಲಿ ಹಸಿರು ಹೆಚ್ಚಿಸಲು “ಬನಸಿರಿ” ಕಾರ್ಯಕ್ರಮ ಮಾಡಿದ್ದು, ಸಮವಸ್ತ್ರ ಸಮಸ್ಯೆ ನಿವಾರಿಸಿದ್ದು, ವಿದ್ಯಾರ್ಥಿ ಸಂಘದ ಚುನಾವಣೆಗೆ ಶಿಸ್ತಿನ ಚೌಕಟ್ಟು ರೂಪಿಸಿದ್ದು, ಕಾಲೇಜಿನ “ವಿಷನ್ - 2030” ತಯಾರಿಸಿದ್ದು, ನ್ಯಾಕ್ ಮೌಲ್ಯಾಂಕನ ತಂಡವನ್ನು ನಿರ್ವಹಿಸಿ ಕಾಲೇಜಿನ ಮೌಲ್ಯಾಂಕನ ಹೆಚ್ಚಿಸಿದ್ದು, “ರಾಷ್ಟ್ರೀಯ ಸೇವಾ ಯೋಜನೆ” ಸಮರ್ಪಕವಾಗಿ ನಿರ್ವಹಿಸಿದ್ದು, ಬೇರೆ ಬೇರೆ ಮೂಲಗಳಿಂದ (ಯುಜಿಸಿ ಸಹಿತ) ಕಾಲೇಜಿಗೆ ಲಕ್ಷಗಟ್ಟಲೆ ರೂಪಾಯಿ ಅನುದಾನ ತಂದದ್ದು, ಪತ್ರಿಕೋದ್ಯಮವೂ ಸೇರಿದಂತೆ ಇತರ ಕೆಲವು ವಿಭಾಗಗಳಿಗೆ ಕಾಯಕಲ್ಪ ನೀಡಿದ್ದು, ಕರ್ನಾಟಕ ಬ್ಯಾಂಕ್ ಬಯಲು ರಂಗಮಂದಿರ ನಿರ್ಮಾಣ ಯೋಜನೆ ಕಾರ್ಯಗತಗೊಳಿಸಿದ್ದು - ಹಲವಾರು ವರುಷಗಳಿಂದ ಪರಿಹಾರವಾಗದಿದ್ದ ಇವನ್ನೆಲ್ಲ ಪರಿಹರಿಸಿದ್ದು ನಿಜಕ್ಕೂ ಅಮೋಘ ಸಾಧನೆ. ಜೊತೆಗೆ ಕಾಲೇಜಿನ “150ನೇ  ವರುಷದ ಸಂಭ್ರಮಾಚರಣೆ” ನಡೆಸಿದ್ದು ಮತ್ತು 1,800 ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡುವ “ಒಂದು ಹೊತ್ತು ಕೈ ತುತ್ತು” ಯೋಜನೆ ಜ್ಯಾರಿಗೊಳಿಸಿದ್ದು - ಇವೆರಡು ಸಾಧನೆಗಳಂತೂ ಕಾಲೇಜಿನ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ದಾಖಲಾದ ಮಹತ್ಸಾಧನೆಗಳು. ಕೆಲವು ಕಾರ್ಯಕ್ರಮಗಳು/ ಯೋಜನೆಗಳಿಗಾಗಿ ಪ್ರಾಂಶುಪಾಲರಾದ ಡಾ. ಉದಯ ಕುಮಾರ ಮತ್ತು ಅಲ್ಲೇ ಉಪನ್ಯಾಸಕಿಯಾಗಿದ್ದ ಪತ್ನಿ ಡಾ. ರಾಜಲಕ್ಷ್ಮಿ ಇಬ್ಬರು ತಮ್ಮ ಕೈಯಿಂದ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ.

ವಿಶ್ವವಿದ್ಯಾಲಯ ಕಾಲೇಜಿನ ಘನತೆ ಹೆಚ್ಚಿಸಲಿಕ್ಕಾಗಿ ಪ್ರಾಮಾಣಿಕವಾಗಿ ಇಷ್ಟೆಲ್ಲ ಮಾಡಿದ ಡಾ. ಉದಯ ಕುಮಾರ್ ಇರ್ವತ್ತೂರು ಅವರನ್ನು ಅವರ ಸೇವಾವಧಿಯ ಕೊನೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಘನತೆಯಿಂದ ನಡೆಸಿಕೊಳ್ಳಲಿಲ್ಲ ಎಂಬುದು ವಿಷಾದನೀಯ. ಆದರೂ ಆಗಿನ ನೋವಿನ ಅನುಭವವನ್ನೂ ಅವರು ಘನತೆಯ ಭಾಷೆಯಲ್ಲೇ ದಾಖಲಿಸಿದ್ದಾರೆ.

ತಮ್ಮ ವೃತ್ತಿ ಜೀವನದ ಅನುಭವಗಳನ್ನು ಮುಂದಿನ ತಲೆಮಾರಿಗಾಗಿ ಮತ್ತು ಸಮಾಜದ ಒಳಿತಿಗಾಗಿ ಹೇಗೆ ದಾಖಲಿಸಬಹುದು ಎಂಬುದಕ್ಕೆ ಒಂದು ಉತ್ತಮ ಮಾದರಿಯಾಗಿದೆ ಈ ಹೊತ್ತಗೆ. ಶಿಕ್ಷಣಕ್ಷೇತ್ರದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಇರುವವರು ಮತ್ತು ಯಾವುದೇ ಕಾಲೇಜಿನ ಪ್ರಿನ್ಸಿಪಾಲ್ ಆಗಬೇಕೆಂದು ಕನಸು ಕಾಣುವವರು ಓದಲೇ ಬೇಕಾದ ಪುಸ್ತಕ ಇದು.