ಗೆಲುವಿನ ಹುಡುಕಾಟ

ಗೆಲುವಿನ ಹುಡುಕಾಟ

ಪರೀಕ್ಷೆ.. ಪರೀಕ್ಷೆ.. ಪರೀಕ್ಷೆ... ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಮಾರ್ಚ್ ತಿಂಗಳು ಎಂದರೆ ಪರೀಕ್ಷೆಯ ಒತ್ತಡ. ವಿದ್ಯಾರ್ಥಿಗಳನ್ನು ಓದಿಸಿ ಪಾಸು ಮಾಡಿಸಲು ಶಿಕ್ಷಕರಿಗೆ ಒತ್ತಡವಾದರೆ, ಮಕ್ಕಳನ್ನು ಮನೆಯಲ್ಲಿ ಮೊಬೈಲು, ಟಿ ವಿ ಯಿಂದ ದೂರವಿರಿಸಿ ಒಳ್ಳೆಯ ಮಾರ್ಕ್ಸ್ ಪಡೆಯುವಂತಾಗಲು ಪೋಷಕರಿಗೆ ಒತ್ತಡ. ಇದರ ನಡುವೆ ಒಂದಷ್ಟು ವಿದ್ಯಾರ್ಥಿಗಳಿಗೆ ಇಷ್ಟು ಓದಬೇಕಲ್ಲ, ಇನ್ನೂ ಓದಬೇಕಲ್ಲ ಎನ್ನುವ ಒತ್ತಡ. ಒಟ್ಟಿನಲ್ಲಿ ಪರೀಕ್ಷೆ ಹಾಗೂ ಒತ್ತಡಗಳ ನಡುವೆ ಕೆಲವು ವಿದ್ಯಾರ್ಥಿಗಳು ಅನುಭವಿಸುವ ವಿಭಿನ್ನವಾದ ಒತ್ತಡದ ಒಂದು ಘಟನೆಯನ್ನು ಇಲ್ಲಿ ಹೇಳುತ್ತಿದ್ದೇನೆ.... 

ನಮ್ಮ ಶಾಲೆಯ ಓರ್ವ ಹತ್ತನೇ ತರಗತಿಯ ವಿದ್ಯಾರ್ಥಿ ಎರಡು ಮೂರು ದಿನಗಳಿಂದ ಶಾಲೆಗೆ ಗೈರು ಹಾಜರಿಯಾಗಿದ್ದ. ಎರಡು ದಿನಗಳಿಂದ ಶಾಲೆಗೆ ಬರದ ವಿದ್ಯಾರ್ಥಿಯ ಮನೆಗೆ ತರಗತಿ ಶಿಕ್ಷಕರು ಫೋನ್ ಮಾಡಿದರೆ ಅದು ನಾಟ್ ರೀಚೇಬಲ್ ಬರ್ತಿತ್ತು. ವಿದ್ಯಾರ್ಥಿ ರಜೆ ಮಾಡಿದ ಮೂರನೇ ದಿನ ನಮ್ಮ ಶಾಲೆಯ ಪಕ್ಕದ ಪೇಟೆಯಿಂದ ಒಂದು ಫೋನ್ ಕಾಲ್ ಬಂದಿತ್ತು. ಫೋನ್ ಸ್ವೀಕರಿಸಿದಾಗ... ಆ ಕಡೆಯಿಂದ ಹೋಂ ಗಾರ್ಡ್ ಮೇಡಂ ಒಬ್ಬರು ಮಾತನಾಡಿದರು. "ಅಹಮ್ಮದ್ (ಹೆಸರು ಬದಲಾಯಿಸಲಾಗಿದೆ) ಎನ್ನುವವ ನಿಮ್ಮ ಶಾಲೆಯ ವಿದ್ಯಾರ್ಥಿಯೇ" ಎಂದು ಕೇಳಿದರು. ಸ್ವಲ್ಪ ಹೊತ್ತು ಯೋಚಿಸಿ ನಂತರ ನೆನಪಾಗಿ ಹೌದೆಂದು ನಾನು ಹೇಳಿದೆ. ಆಗ ಅವರು, "ಈಗ ಅವನು ನನ್ನ ಪಕ್ಕದಲ್ಲಿ ಇದ್ದಾನೆ. ಕಳೆದ ಎರಡು ದಿನಗಳಿಂದ ಇಲ್ಲಿಗೆ ಬರ್ತಾ ಇದ್ದ. ಇವತ್ತೂ ಬಂದ. ಸಂದೇಹದಲ್ಲಿ ಅವನನ್ನು ಕಂಡು ಮಾತನಾಡಿಸಿದೆ. ಮೊದಲಿಗೆ ಏನೇನೋ ಹೇಳಿದ... ನಂತರ ಬ್ಯಾಗ್ ತೆಗೆದು ನೋಡುವಾಗ ನಿಮ್ಮ ಶಾಲೆ ಐಡಿ ಮತ್ತು ನಿಮ್ಮ ಫೋನ್ ನಂಬರ್ ಸಿಕ್ಕಿತು ಹಾಗೆ ಫೋನ್ ಮಾಡಿದೆ" ಎಂದರು. ನಂತರ ನಾನು ವಿದ್ಯಾರ್ಥಿ ಜೊತೆ ಫೋನ್ ಕೊಡಲು ಕೇಳಿದೆ. ವಿದ್ಯಾರ್ಥಿಯಲ್ಲಿ ನಯವಾಗಿ ಕೇಳಿದೆ... "ಕಳೆದ ಎರಡು ದಿನದಿಂದ ನಿನ್ನ ಮನೆಗೆ ಫೋನ್ ಮಾಡ್ತಾ ಇದ್ರು ಫೋನ್ ನಾಟ್ ರೀಚಬಲ್ ಬರ್ತಾ ಇತ್ತಲ್ಲ... ಯಾಕೆ..?" ಎಂದೆ ಸ್ವಲ್ಪ ಹೊತ್ತು ಸುಮ್ಮನಿದ್ದ ಅವನು ನಂತರ ಭಯದಿಂದ, "ಸಾರ್ ಶಾಲೆಯ ಫೋನು ಮನೆಗೆ ಬರಬಾರದು ಎಂದು ಶಾಲೆಯ ಮತ್ತು ಕ್ಲಾಸ್ ಟೀಚರ್ ನಂಬರನ್ನು ನಾನು ಬ್ಲಾಕ್ ಮಾಡಿದ್ದೇನೆ" ಎಂದ. ಆಗ ನನಗೆ ಅರ್ಥವಾಯಿತು ನಮ್ಮ ಫೋನ್ ಯಾಕೆ ಅವನಿಗೆ ರೀಚ್ ಆಗುತ್ತಿರಲಿಲ್ಲ ಎಂದು. ನಂತರ ಜೋರು ಮಾಡಿ ಕೇಳಿದೆ... "ಯಾಕೆ ನೀನು ಶಾಲೆಗೆ ಬರ್ತಾ ಇಲ್ಲ, ಅಲ್ಲಿ ಏನು ಮಾಡ್ತಾ ಇದ್ದೀಯಾ...?" ಆವಾಗ ಹೋಂ ಗಾರ್ಡ್ ಮೇಡಮ್ಮನ್ನು ಕಂಡು ಭಯಗೊಂಡಿದ್ದ ಅವನು ಅಳುತ್ತಾ ನನ್ನಲ್ಲಿ, "ಸರ್ ನನಗೆ ಎಷ್ಟು ಕಲಿತರೂ ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ನಾನು ಓದಿದ ಸ್ವಲ್ಪ ಹೊತ್ತಿನಲ್ಲಿ ಮರೆತು ಹೋಗುತ್ತದೆ. ನನಗೆ ಶಾಲೆಗೆ ಬಂದರೆ ಮಾಸ್ಟ್ರು ಎಷ್ಟು ಹೇಳಿಕೊಟ್ಟರೂ ಬರುವುದಿಲ್ಲ ಎನ್ನುತ್ತಾರೆ. ಮನೆಗೆ ಹೋದರೆ ಅಪ್ಪ ಅಮ್ಮ ನೀನು ಏನೇನು ಕಲಿಯುವುದಿಲ್ಲ ಎಂದು ಬಯ್ಯುತ್ತಾರೆ. ನನಗೆ ಇದೆಲ್ಲ ಸಹಿಸಲು ಆಗದೆ ಶಾಲೆ ತಪ್ಪಿಸಿ ಹೀಗೆ ಪೇಟೆಗೆ ಬಂದದ್ದು" ಎಂದು ಹೇಳಿದ. ನಂತರ ಮೇಡಂ ಅವರಲ್ಲಿ ಹುಡುಗನನ್ನು ಜಾಗ್ರತೆಯಾಗಿ ಕುಳ್ಳಿರಿಸಲು ಹೇಳಿದೆವು. ಅವನ ಪೋಷಕರಿಗೆ ಹೇಗೋ ವಿಷಯ ತಿಳಿಸಿ, ಅಧ್ಯಾಪಕರು ಮತ್ತು ಪೋಷಕರು ಪೇಟೆಯಿಂದ ಅವನನ್ನು ಕರೆದುಕೊಂಡು ಬಂದೆವು.

ವಾಸ್ತವವಾಗಿ ನನಗೆ ಆಗ ಅನಿಸಿದ್ದು ಆ ವಿದ್ಯಾರ್ಥಿ ಅನುಭವಿಸುತ್ತಿರುವ ಒತ್ತಡದ ಬಗ್ಗೆ. ಇಲ್ಲಿ ಈ ವಿದ್ಯಾರ್ಥಿಯ ಶಿಕ್ಷಣದ ಆರಂಭದ ಹಂತದ ಎಡವಟ್ಟೋ ಅಥವಾ ನಮ್ಮ ಪಾಠದ ವಿಧಾನಗಳು ವಿದ್ಯಾರ್ಥಿಗೆ ತಲುಪುತ್ತಿಲ್ಲವೋ ಏನೋ, ಅಥವಾ ಶಿಕ್ಷಣದ ಪದ್ಧತಿಯಲ್ಲಿ ಬದಲಾವಣೆಯ ಅಗತ್ಯವಿದೆಯೋ...? ಇಲ್ಲ ಪೋಷಕರ ಆರಂಭಿಕ ನಿರ್ಲಕ್ಷ್ಯವೇ... ಎಂದು. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಇಂತಹ ಸಮಸ್ಯೆಗಳು ಬರಬಹುದು. ಆದರೂ ಮಕ್ಕಳ ಕಲಿಕೆಯ ಆರಂಭಿಕ ಹಂತ ಸಂತೋಷ ದಾಯಕವಾಗಿರಬೇಕು. ಸಾಮಾನ್ಯ ಜ್ಞಾನದ ತಿಳುವಳಿಕೆ ಸಿಗುವಂತಿರಬೇಕು. ಚಿಂತಿಸುವ, ಕಲ್ಪಿಸುವ, ಅನುಭವವದ ವಾತಾವರಣ ನಿರ್ಮಾಣವಾಗಬೇಕು. ಮಕ್ಕಳನ್ನು ಅರ್ಥೈಸುವ ಗುಣ ನಮ್ಮದಾಗಬೇಕು. ಕೈಯ ಎಲ್ಲಾ ಬೆರಳುಗಳು ಒಂದೇ ತೆರನಾಗಿರುವುದಿಲ್ಲವಾದರೂ ಪ್ರತಿ ಬೆರಳಿಗೂ ಅದರದ್ದೇ ಆದ ಕೆಲಸವಿದೆ ಹಾಗೂ ಪ್ರತಿಯೊಂದಕ್ಕೂ ಅದರದ್ದೆ ಆದ ಮಹತ್ವವಿದೆ ಅಲ್ಲವೇ....?

-ಬಾಲಕೃಷ್ಣ ಶೆಟ್ಟಿ ಖಂಡಿಗ, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ