ಗೆಲುವ ಕನ್ನಡ ನಾಡು

ಗೆಲುವ ಕನ್ನಡ ನಾಡು

ಕವನ

ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು

ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು

ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು

ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II ಪ II

 

ರಾಜರಾವೇಶದಿಂ ಆಳಿ ಬೆಳಸಿದ ನಾಡು

ರಾರಾಜಿಸುವ ಕನ್ನಂಬಾಡಿ ಕಟ್ಟೆಯ ನೋಡು

ಪಂಪ ರನ್ನ ಜನ್ನರ ಜಾಡು ಹಿಡಿದಿಹರ ಬೀಡು

ಜ್ಞಾನಪೀಠದ ದಿಗ್ಗಜರ ಸಾಹಿತ್ಯ ವೈಖರಿಯ ಗೂಡು II ೧ II

 

ವಿಶ್ವೇಶರಯ್ಯ ಯಾಜ್ಞವಲ್ಕ ಮಿತಾಕ್ಷರರು ಉತ್ತಿಹ ಬೀಡು

ಸಾಲುಮರದ ತಿಮ್ಮಕ್ಕನ ಕಾರುಣ್ಯದಿಂದುಳಿದಿಹ ಕಾಡು

ಕೃಷ್ಣೆ ತುಂಗೆ ಕಾವೇರಿ ಹರಿದುಣಿಸಿ ಬೆಳಸಿಹ ಫಲ ಬೀಡು

ವಿದ್ವತ್ಮಣಿಗಳ ಗಣಕಾಧಿಪತಿಗಳ ವಿಜ್ಞಾನಿಗಳ ಕಲೆವೀಡು II ೨ II

 

ಆಚಾರ್ಯರು ದಾಸರು ವಚನಕಾರರು ಜನಪದರುಗಳ ಘನ ಬೀಡು

ಶಾಂತತೆಯ ಕೂಟ ಕಾಂತಿಯುತ ನೋಟ ಮೈಗೂಡಿಹ ತಾಯ್ನಾಡು

ಕನ್ನಡದ ನಿಲುಮೆ ಜನರ ಒಲುಮೆ ಕಿರುಭಾರತವನಾಗಿಸಿದೆ ಈ ಸೂಡು

ಪ್ರಖ್ಯಾತವಾಗಲಿ ಓಜೆಯಿಂ ತೇಜದಿಂ ಶ್ರೀಗಂಧದ ಹೃದಯದ ನಾಡು II ೩ II

-ಡಾ. ಪ್ರಭಾಕರ್ ಬೆಳವಾಡಿ

(ಹುಯಿಲಗೋಳು ನಾರಾಯಣರಾಯರ ಸನ್ನಿಧಿಯಲ್ಲಿ)

 

ಚಿತ್ರ್