ಗೆಳತಿ ಹೇಗೆ ಬರಲಿ?

ಗೆಳತಿ ಹೇಗೆ ಬರಲಿ?

ಕವನ

ಬೆನ್ನಿಗಂಟಿದ ಕರುಳ ಹಿಡಿದು

ಸರಸಕೆ ಬಾರೆ ಎಂದರೆ

ಹೇಗೆ ಬರಲಿ ನನ್ನೊಡತಿ ?

ಒಪ್ಪತ್ತು ಗಂಜಿಯೂಟದಲ್ಲಿ

ದಿನಕಳೆವ ನನಗೆ

ಸರಸ ಎನ್ನುವ ಪದದ

ಅರ್ಥವೇ ಮರೆತು ಹೋಗಿದೆ

ನಿಮ್ಮಮ್ಮ ನಮ್ಮಮ್ಮ

ಕಲಿಸಿದ ಶಿಕ್ಷಣ ಈ ಬಾರಿ

ಉಪಯೋಗಕ್ಕೆ ಬಾರದಾಯಿತು

ಮಹಾ ರೋಗದ ಹಿಂದೆಯೇ

ಹಾರಿ ಹೋಯಿತು

ಗೆಳತಿ ಹೇಗೆ ಬರಲಿ ನಿನ್ನ ಬಳಿ

ಸರಸದ ಮಾತ ಹೇಗೆ ಆಡಲಿ ! 

 

ನಮ್ಮ ಉಸಿರಿಗೆ ಉಸಿರು

ಕೊಡುತ್ತೇನೆ ಎಂದವರ

ಮಾತ ನಂಬಿ

ಮಾಡಿದ ಸಾಲ ಬೆಟ್ಟದಷ್ಟಾಯಿತು

ಅಂದು ನಮ್ಮ ವಿದ್ಯೆಯ ಬಳಸಿ

ಕೋಟಿ ಕೋಟೆ ಕಟ್ಟಿದವರು

ಇಂದು ನಾವು ಸೋತಾಗ

ಬೆನ್ನೆಲುಬು ಆಗಲೇ ಇಲ್ಲ

ಇಂದು ಕೂಲಿ ಮಾಡಿದವನೂ

ಮೂರು ಹೊತ್ತು ಉಣ್ಣುತ್ತಿದ್ದಾನೆ

ಆದರೆ ಅದೇ 

ರಾಜಕೀಯ ಕೃಪಾಶ್ರಯದಲ್ಲಿ,

ಅನುದಾನವಿಲ್ಲದ ಶಾಲೆಯಲ್ಲಿಯ

ಬೋಧಕರ ಬೋಧಕೇತರರಿಗೆ

ಏನು ಕೊಟ್ಟಿದೆಯೆಂದರೆ ?

ಕಾಶಿಗೆ ಹೋಗಲು ಚೊಂಬು ಕೊಟ್ಟಿದೆ

ಗೆಳತಿ ಹೇಗೆ ಬರಲಿ ನಿನ್ನ ಬಳಿ

ಸರಸದ ಮಾತ ಹೇಗೆ ಆಡಲಿ ! 

 

ಇಷ್ಟೆಲ್ಲವಾಗುವ ಸಮಯಕ್ಕೆ 

ಕೆ ಇ ಬಿಯವರಿಂದ ಬಂದ

ಕರೆಂಟ್ ಬಿಲ್ಲನ್ನು ನೋಡುವಾಗ

ಹೃದಯಸ್ಥಂಭನವಾಗುವುದೊಂದೇ ಬಾಕಿ

ಜೊತೆಗೆ ಬಾಡಿಗೆದಾರನ ಕಿರಿ ಕಿರಿ

ಕುಡಿಯಲು ಹಾಲಿಲ್ಲ

ಅಕ್ಕಿ ತಂದು ಗಂಜಿ ಬೇಯಿಸೋಣವೆಂದರೆ 

ನಾವು ಯಾವ ಕಾರ್ಡಿಗೂ ಅರ್ಹರಲ್ಲ

ಕೋಟಿ ಮನೆಯವರೆಲ್ಲರಿಗೂ

ಬಿ ಪಿ ಎಲ್ಲ್ ಕಾರ್ಡು ಇರ ಬೇಕಾದರೆ 

ನಮಗೆ ಎ ಪಿ ಎಲ್ ಕಾರ್ಡೂ ಇಲ್ಲ

ಇದ್ದ ಎ ಪಿ ಎಲ್ಲ್ ಕಾರ್ಡು ಕ್ಯಾನ್ಸಲ್

ಅವರ ತಪ್ಪಿಗೆ ನಾವು ಬಲಿಪಶು

ಇದೆಂತಹ ವಿಪರ್ಯಾಸ 

ಇದೆಂತಹ ಪ್ರಜಾಸತ್ತೆ  ನಾಚಿಗೆಯಾಗಬೇಕು

ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆಗೆ

ಗೆಳತಿ ಹೇಗೆ ಬರಲಿ ನಿನ್ನ ಬಳಿ

ಸರಸದ ಮಾತ ಹೇಗೆ ಆಡಲಿ !

 

ಮನುಷ್ಯ ಸಮನ್ವಯತೆ ವರ್ಗ ಸಮನ್ವಯತೆ

ಉದ್ಯೋಗ ಸಮನ್ವಯತೆ ಆರ್ಥಿಕ ಸಮನ್ವಯತೆ

ಇಲ್ಲದ ಈ ದೇಶದ ಅರ್ಥ ವ್ಯವಸ್ಥೆಯೊಳಗೆ

ನಮ್ಮಂಥವರು ಬದುಕುವುದಾದರೂ ಹೇಗೆ

ಅರ್ಥವಾಗದವರ ಜೊತೆ ಇರುವಾಗ

ಸಾಲಸೋಲವ ಮಾಡಿ ಕಲಿಯುವ ಬದಲು

ಏನೂ ಅರಿಯದವರಂತೆ ಕೂಲಿ ಮಾಡುವುದೇ

ಈಗಿನ ವ್ಯವಸ್ಥೆಯಲ್ಲಿ ಒಳ್ಳೆಯದು 

ಮರದಡಿಯಲ್ಲಿ ಚಾಪೆ ಹಾಸಿ ಮಲಗಿದರೂ

ಯಾರೂ ಕೇಳಲಾರರು 

ಆದರೆ ಕಲಿತ ನಾವು ಹಾಗಲ್ಲ

ಎಲ್ಲರೂ ಕೇಳುವವರೆ ಒಬ್ಬರನ್ನು ಬಿಟ್ಟು

ನಮ್ಮನ್ನು ಎಲ್ಲಾ ಸಂದರ್ಭದಲ್ಲೂ

ನೋಡಿಕೊಳ್ಳುತ್ತೇವೆಯೆಂದು

ಸಾರ್ವಜನಿಕವಾಗಿ ಫೋಸು ಕೊಡುವ

ಸರಕಾರಗಳು ಆಡಳಿತ ವರ್ಗಗಳು

ಗೆಳತಿ ಹೇಗೆ ಬರಲಿ ನಿನ್ನ ಬಳಿ

ಸರಸದ ಮಾತ ಹೇಗೆ ಆಡಲಿ ! 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್