ಗೆಳೆತನದ ಘನತೆ ಕಾಪಾಡೋಣ....!
ಚುನಾವಣೆಯ ಸಮೀಪದಲ್ಲಿ ನಮ್ಮ ಜವಾಬ್ದಾರಿ ಏನು ? ಮುಖ್ಯವಾಗಿ ಸೋಷಿಯಲ್ ಮೀಡಿಯಗಳಲ್ಲಿ ಆಕ್ಟೀವ್ ಅಗಿರುವವರಿಗಾಗಿ.. ಮೊದಲಿಗೆ ಈ ಟಿವಿ ಮಾಧ್ಯಮಗಳ TRP ಪ್ರೇರಿತ ವಿವೇಚನಾರಹಿತ ಪ್ರಚೋದಾತ್ಮಕ ಹೇಳಿಕೆಗಳನ್ನು ನಿರ್ಲಕ್ಷಿಸೋಣ. ಕುರುಕ್ಷೇತ್ರ - ಅಖಾಡ - ಯುದ್ಧ - ಪ್ರತೀಕಾರ ಮುಂತಾದ ಮನ ಕೆರಳಿಸುವ ಕಾರ್ಯಕ್ರಮಗಳನ್ನು ಹಾಸ್ಯಾಸ್ಪದವಾಗಿ ನೋಡೋಣ.
ಹೌದು, ಇದು ಪ್ರಜಾಪ್ರಭುತ್ವ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶ ನಿಜ. ಹಾಗಂತ ಹುಚ್ಚುಚ್ಚಾಗಿ ಅವಶ್ಯಕತೆ ಇಲ್ಲದಿದ್ದರೂ ಚರ್ಚೆಯ ನೆಪದಲ್ಲಿ ಕೆಟ್ಟದಾಗಿ ಪ್ರತಿಕ್ರಿಯಿಸುವುದು ಬೇಡ. ನಾವೆಲ್ಲರೂ ಸ್ನೇಹಿತರು. ಯಾವುದೋ ಒಂದು ಪಕ್ಷದ ಬಗ್ಗೆ ಒಲವಿರಬಹುದು. ಅದರ ಅರ್ಥ ನಾವು ಅದನ್ನು ದೊಡ್ಡ ಗಂಟಲಿನಲ್ಲಿ ಕೂಗಾಡಿ ಈಗಿರುವ ನಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಮಾಡಿಕೊಳ್ಳುವುದು ಬೇಡ. ಈ ಪಕ್ಷ ಬಂದರೆ ಹಾಗೆ, ಆ ಪಕ್ಷ ಬಂದರೆ ಹೀಗೆ, ಎಂದು ನಮ್ಮೊಳಗೆ ಕಚ್ಚಾಡುವುದು ಬೇಡ. ಅಂತಹ ಕ್ರಾಂತಿಕಾರಿ ಬದಲಾವಣೆ ಈ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ.
ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ತುಂಬಾ ಸಂತೋಷ. ಆದರೆ ಸಭ್ಯತೆಯ ಗೆರೆ ದಾಟದೆ, ನಾವೇ ಸರಿ ಎಂದು ಹಠ ಮಾಡದೆ ದುರಹಂಕಾರ ಪ್ರದರ್ಶಿಸದೆ ನಮ್ಮ ಅಭಿಪ್ರಾಯ ಒಪ್ಪಲೇ ಬೇಕು ಎಂದು ಒತ್ತಡ ಹೇರದೆ ನಗುನಗುತ್ತಾ ಪ್ರತಿಕ್ರಿಯಿಸಿ. ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟೋ ಸಾಹಿತ್ಯಿಕ ಸಾಂಸ್ಕೃತಿಕ ಸಾಮಾಜಿಕ, ಕೌಟುಂಬಿಕ, ಹಳೆಯ ಸ್ನೇಹಿತರ, ತಮ್ಮ ಊರಿನವರ, ಹೊರಗಿನ ನಾನಾ ಗುಂಪುಗಳಿವೆ. ಈ ಚುನಾವಣಾ ಸಮಯದಲ್ಲಿ ಕೇವಲ ಯಾರೋ ಸ್ವಾರ್ಥಿಗಳ ರಾಜಕೀಯ ದಾಳಗಳಾಗುವುದು ಬೇಡ.
ಟಿವಿಗಳಲ್ಲಿ ಅಜನ್ಮ ಶತೃಗಳಂತೆ ಜಗಳವಾಡುವ ನಾಯಕರು ಕಾರ್ಯಕ್ರಮ ಮುಗಿದ ನಂತರ ನಿರೂಪಕನನ್ನೂ ಕರೆದುಕೊಂಡು ರಾತ್ರಿ ಊಟಕ್ಕೆ ಹೋಗುವುದು ಬಹಳಷ್ಟು ಇದೆ. ಸೀರೆ ಪಂಚೆ ಮಿಕ್ಸಿ ಕುಕ್ಕರ್ ದುಡ್ಡು ಬಾಡು ಬಾರುಗಳಿಗಿರುವ ಓಟಿನ ಶಕ್ತಿ, ಸುಳ್ಳು ಮತ್ತು ಆಕರ್ಷಕ ಮಾತುಗಳಿಗಿರುವ ಓಟು ಸೆಳೆಯುವ ಆಕರ್ಷಣೆ ಖಂಡಿತ ನಮ್ಮ ಅಭಿಪ್ರಾಯಗಳಿಗೆ ಇಲ್ಲ.
ಸಂಯಮವಿರಲಿ… ಉದ್ವೇಗ ಒಳ್ಳೆಯದಲ್ಲ.. ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಸೂಕ್ಷ್ಮತೆ ಇರಲಿ… ದ್ವೇಷ ಪ್ರತಿಕಾರಗಳು, ಮಾತು ಅಕ್ಷರಗಳಲ್ಲಿ ಮೂಡುವ ಮುನ್ನ ಹಲವಾರು ಬಾರಿ ಯೋಚಿಸಿ. ನಿಂತ ನೆಲದ, ಸುತ್ತಲಿನ ಜನರ ಹಿತಾಸಕ್ತಿ ಮನದಲ್ಲಿರಲಿ. ನಮ್ಮ ಒಟ್ಟು ಪರಿಸ್ಥಿತಿ ಗಮನದಲ್ಲಿರಲಿ. ಸಹನೆಗೂ ಹೇಡಿತನಕ್ಕೂ ಧೈರ್ಯಕ್ಕೂ ನಡುವಿನ ವ್ಯತ್ಯಾಸ ತಿಳಿದಿರಲಿ. ನಮ್ಮ ಸಾಮರ್ಥ್ಯ ಮಿತಿಗಳ ಪುನರಾವಲೋಕನವಾಗಲಿ. ಹಲವಾರು ಸಾಧ್ಯತೆಗಳ ವಿಮರ್ಶೆಯಾಗಲಿ. ಓಟಿನ ಭೇಟೆಯ ಬಗ್ಗೆ ಎಚ್ಚರವಿರಲಿ.
ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗದಿರಲಿ. ಶತ್ರುವಿನ ಕುತಂತ್ರಗಳ ಸಂಪೂರ್ಣ ಮಾಹಿತಿಯಿರಲಿ. ನಮ್ಮ ನಮ್ಮಲ್ಲಿ ಒಗ್ಗಟ್ಟಿರಲಿ. ನಮ್ಮ ಒಳಗಿನ ಆರೋಪ ಪ್ರತ್ಯಾರೋಪಗಳಿಗೆ ಅಲ್ಪ ವಿರಾಮ ನೀಡಿ. ಯುದ್ಧ, ಶಾಂತಿ, ಸಂಧಾನ, ಅವುಗಳ ದೀರ್ಘ ಪರಿಣಾಮದ ಬಗ್ಗೆ ಹಿರಿಯರೊಂದಿಗೆ ಮಾತುಕತೆ ಮಾಡಿ. ಹುಚ್ಚರು, ಉಡಾಫೆಯವರು ಮತ್ತು ಸಾಮಾನ್ಯರ ನಡುವಿನ ಅಂತರದ ತೀರ್ಮಾನ ಯೋಚಿಸಿ ನಿರ್ಧರಿಸಿ.
ಮಾತಿನ ದೇಶಭಕ್ತಿಗೂ, ಮನಸ್ಸಿನ ದೇಶಪ್ರೇಮಕ್ಕೂ, ಹೃದಯದ ದೇಶ ಪ್ರೀತಿಗೂ, ನಡುವಿನ ವ್ಯತ್ಯಾಸದ ಅರಿವಿರಲಿ. ಇರುವವರು ಕಳೆದುಕೊಳ್ಳುವರು, ಇಲ್ಲದವರಿಗೆ ಕಳೆದುಕೊಳ್ಳಲು ಏನೂ ಉಳಿದಿರುವುದಿಲ್ಲ. ಗೆಲುವಿರುವುದು ತಾಳ್ಮೆಯಲ್ಲಿಯೇ ಹೊರತು ಆಕ್ರೋಶದಲ್ಲಿಯಲ್ಲ. ಯಶಸ್ವಿಯಾಗುವುದು ವಿವೇಚನೆಯಿಂದಲೇ ಹೊರತು ಕೋಪದಿಂದಲ್ಲ. ಈ ದೇಶ ಈ ಜನರೊಂದಿಗೆ ಎಲ್ಲಾ ಕಾಲಕ್ಕೂ, ಎಲ್ಲಾ ಸಂಧರ್ಭದಲ್ಲಿಯೂ ನಾವು ನೀವು...
ಆದ್ದರಿಂದ,ದಯವಿಟ್ಟು ಗೆಳೆಯರೆ, ಚುನಾವಣಾ ಕಾರಣದಿಂದ ನಾವುಗಳು ಮನಸ್ತಾಪ ಮಾಡಿಕೊಳ್ಳುವುದು ಬೇಡ. ನಾವೆಲ್ಲರೂ ಸಾಮಾನ್ಯರು. ದ್ವೇಷಕ್ಕಿಂತ ಪ್ರೀತಿ ವಿಶ್ವಾಸವೇ ಮುಖ್ಯ ನೆನಪಿರಲಿ. ಚುನಾವಣೆ ಒಂದು ಗುಪ್ತ ಮತದಾನ. ಒಂದಷ್ಟು ಯೋಚಿಸಿ ಅದರಲ್ಲಿ ಭಾಗವಹಿಸಿ. ಯಾರೋ ಅನಾಗರಿಕರಂತೆ, ಜೈಕಾರದ ಪುಡಾರಿಗಳಂತೆ ವರ್ತಿಸುವುದು ಬೇಡ. ಎಂದಿನಂತೆ ಗೆಳೆತನದ ಘನತೆ ಕಾಪಾಡೋಣ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ